ಹುಬ್ಬಳ್ಳಿ: ಹೆಸ್ಕಾಂನ ಹುಬ್ಬಳ್ಳಿ ನಗರ ವಿಭಾಗದ ವ್ಯಾಪ್ತಿಯ ಪಿ.ಬಿ. ರಸ್ತೆ ನ್ಯೂ ಇಂಗ್ಲಿಷ್ ಸ್ಕೂಲ್ ಹಿಂಭಾಗದ ನಗರ ಉಪ ವಿಭಾಗ ನಂ.2ರಲ್ಲಿ ಮಂಗಳವಾರ ನಡೆದ ಗ್ರಾಹಕರ ಕುಂದುಕೊರತೆ ನಿವಾರಣಾ ಸಭೆಯಲ್ಲಿ ಐವರು ಗ್ರಾಹಕರು ವಿದ್ಯುತ್ ಸಮಸ್ಯೆ ಹಾಗೂ ಬಿಲ್ ಗಳಿಗೆ ಸಂಬಂಧಿಸಿ ಪರಿಹಾರ ಒದಗಿಸಬೇಕೆಂದು ಕೋರಿ ಮನವಿ ಸಲ್ಲಿಸಿದರು.
ಸಭೆಯಲ್ಲಿ ಇಬ್ಬರು ಗ್ರಾಹಕರು ವಿದ್ಯುತ್ ಬಿಲ್‌ನಲ್ಲಿ ಹೆಚ್ಚಿಗೆ ಮೊತ್ತ ನಮೂದಿಸಲಾಗಿದೆ ಅದನ್ನು ಪರಿಶೀಲಿಸಿ ಸರಿಪಡಿಸಿ ಕೊಡಬೇಕೆಂದು ಹಾಗೂ ಇನ್ನುಳಿದವರು ರೀಡಿಂಗ್‌ನಲ್ಲಿ ಆದ ತಪ್ಪುಗಳನ್ನು ಸರಿಪಡಿಸಿ ಕೊಡಬೇಕೆಂದು, ಮನೆಯಲ್ಲಿದ್ದರೂ ಡೋರ್ ಲಾಕ್ ಎಂದು ನಮೂದಿಸಿ ಬಿಲ್ ಕೊಟ್ಟಿದ್ದಾರೆ.
ಅದನ್ನು ಸರಿಪಡಿಸಬೇಕೆಂದು ಕೋರಿದರು. ಡಾ|ಪಾಟೀಲ ಎಂಬುವರು ಇಸಿಎಸ್ ವ್ಯವಸ್ಥೆ ಪ್ರಕಾರ ಬಿಲ್ ಪಾವತಿಸುತ್ತಿದ್ದರೂ ಮೀಟರ್ ರೀಡಿಂಗ್‌ಗೆ ಬಂದವರು ಬಿಲ್ ತುಂಬಿಲ್ಲ. ಬಾಕಿ ಹಣವಿದೆ ಎಂದು ಹೇಳಿ ಪ್ಯೂಸ್ ತೆಗೆದುಕೊಂಡು ಹೋಗುತ್ತಿದ್ದಾರೆ. ಇಸಿಎಸ್ ಪ್ರಕಾರ ಬಿಲ್ ತುಂಬಿದರೂ 2-3 ಸಲ ಪ್ಯೂಸ್ ತೆಗೆದುಕೊಂಡು ಹೋಗಿದ್ದಾರೆ.
ಇದನ್ನು ಸಂಸ್ಥೆಯ ಅಧಿಕಾರಿಗಳ ಗಮನಕ್ಕೆ ತಂದರೂ ಸಮಸ್ಯೆ ಬಗೆಹರಿದಿಲ್ಲ. ಹೇಳದೆ ಕೇಳದೆ ಒಮ್ಮೆಲೆ ಪ್ಯೂಸ್ ತೆಗೆದು ವಿದ್ಯುತ್ ಕಡಿತ ಮಾಡಿದರೆ ನಾನು ಆಸ್ಪತ್ರೆ ನಡೆಸುವುದಾದರೂ ಹೇಗೆ, ರೋಗಿಗಳನ್ನು ತಪಾಸಿಸುವುದಾದರೂ ಹೇಗೆ? ಇದನ್ನು ಪರಿಶೀಲಿಸಿ ಸರಿಪಡಿಸಿ ಎಂದು ಮನವಿ ಮಾಡಿದರು.
ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತ ವಸಂತಕುಮಾರ ರಾಠೊಡ ಅವರು ಸಂಬಂಧಪಟ್ಟವರನ್ನು ತಕ್ಷಣ ಕರೆಯಿಸಿ, ಗ್ರಾಹಕರು ಇಸಿಎಸ್ ವ್ಯವಸ್ಥೆಯಡಿ ಬಿಲ್ ಪಾವತಿಸಿದರೂ ಅವರ ವಿದ್ಯುತ್ ಸಂಪರ್ಕ ಏಕೆ ಕಡಿತ ಮಾಡಲಾಗುತ್ತಿದೆ. ಈ ಕುರಿತು ಸಂಬಂಧಿಸಿದ ಮೀಟರ್ ರೀಡಿಂಗ್ ಸಿಬ್ಬಂದಿಗೆ ತಿಳಿಸಿ, ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಿ ಎಂದು ಸೂಚಿಸಿದರು.
ಆಗ ಕಿರಿಯ ಸಹಾಯಕ ಬಸವರಾಜ ಅವರು, ಇಸಿಎಸ್ ವ್ಯವಸ್ಥೆಯಡಿ ಪಾವತಿಯಾದ ಬಿಲ್ ಸಂಸ್ಥೆಯಲ್ಲಿ ತಡವಾಗಿ ದಾಖಲಾಗುತ್ತಿದೆ. ಹೀಗಾಗಿ ಈ ಸಮಸ್ಯೆ ಆಗುತ್ತಿದೆ. ಮೀಟರ್ ರೀಡಿಂಗ್‌ನವರಿಗೆ ಸರಿಯಾಗಿ ದಾಖಲಾತಿಗಳನ್ನು ಪರಿಶೀಲಿಸುವಂತೆ, ವಿದ್ಯುತ್ ಕಡಿತ ಗೊಳಿಸದಂತೆ ತಿಳಿಸಲಾಗುವುದು ಎಂದರು.