ಭಾಗಲ್ಪುರ(ಬಿಹಾರ): ರಾಹುಲ್ ಗಾಂಧಿ ಅವರಿಗೆ ಬಾಂಬ್‌ಗಳನ್ನು ತಯಾರಿಸುತ್ತಿರುವವರು ಬೆಂಬಲಿಸುತ್ತಿದ್ದು, ಅವರು ನಂಬರ್ ಒನ್ ಭಯೋತ್ಪಾದಕ” ಎಂದು ಕೇಂದ್ರ ಸಚಿವ ರವನೀತ್ ಸಿಂಗ್ ಬಿಟ್ಟು ಭಾನುವಾರ(ಸೆ15) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಬಿಹಾರದ ಭಾಗಲ್ಪುರದಲ್ಲಿ ಹೌರಾಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಫ್ಲ್ಯಾಗ್‌ಆಫ್ ಸಮಾರಂಭದಲ್ಲಿ ಭಾಗವಹಿಸಲು ಬಂದಿದ್ದ ರೈಲ್ವೇ ರಾಜ್ಯ ಖಾತೆಯ ಸಚಿವ ಸುದ್ದಿಗಾರರೊಂದಿಗೆ ಮಾತನಾಡಿದರು. ಭಾರತದಲ್ಲಿ ಸಿಖ್ಖರ ಸ್ಥಿತಿಗತಿ ಕುರಿತು ಅಮೆರಿಕದಲ್ಲಿ ನೀಡಿರುವ ಹೇಳಿಕೆಗಳ ಬಗ್ಗೆ ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ರವನೀತ್ ಸಿಂಗ್ ಬಿಟ್ಟು ವಾಗ್ದಾಳಿ ನಡೆಸಿದರು.
“ರಾಹುಲ್ ಗಾಂಧಿ ಅವರು ದೇಶವನ್ನು ವಿಭಜಿಸುವ ಮಾತನಾಡುವ ಪ್ರತ್ಯೇಕತಾವಾದಿಗಳಿಂದ ಬೆಂಬಲವನ್ನು ಪಡೆದಿದ್ದಾರೆ. ಮೋಸ್ಟ್ ವಾಂಟೆಡ್ ವ್ಯಕ್ತಿಗಳು ಸಹ ಸಿಖ್ಖರ ವಿರುದ್ಧ ಮಾಡಿದ ಹೇಳಿಕೆಗಳಿಗಾಗಿ ರಾಹುಲ್ ಗಾಂಧಿಯನ್ನು ಶ್ಲಾಘಿಸುತ್ತಿದ್ದಾರೆ. ಬಾಂಬ್ ತಯಾರಿಕೆಯಲ್ಲಿ ನಿಪುಣರಾಗಿರುವಂತವರು ರಾಹುಲ್ ಗಾಂಧಿಯವರನ್ನು ಬೆಂಬಲಿಸುತ್ತಿರುವಾಗ ಅವರು ದೇಶದ ನಂಬರ್ ಒನ್ ಭಯೋತ್ಪಾದಕ. ಅವರು ಪ್ರತ್ಯೇಕತಾವಾದಿಯಂತೆ ಮಾತನಾಡುತ್ತಿದ್ದಾರೆ. ದೇಶದ ಬಹುದೊಡ್ಡ ಶತ್ರು” ಎಂದು ಬಿಟ್ಟು ಕಿಡಿ ಕಾರಿದರು.
”ರಾಹುಲ್ ಗಾಂಧಿ ಅವರು ಹೆಚ್ಚಿನ ಸಮಯವನ್ನು ದೇಶದ ಹೊರಗೆ ಕಳೆಯುತ್ತಿದ್ದರು. ಅವರ ಸ್ನೇಹಿತರು ಮತ್ತು ಕುಟುಂಬದವರು ಅಲ್ಲಿದ್ದಾರೆ. ಅವರು ತನ್ನ ದೇಶವನ್ನು ಹೆಚ್ಚು ಪ್ರೀತಿಸುವುದಿಲ್ಲ ಎಂದು ನಾನು ಭಾವಿಸುತ್ತೇನೆ ಏಕೆಂದರೆ ಅವನು ವಿದೇಶಕ್ಕೆ ಹೋಗಿ ಭಾರತದ ಬಗ್ಗೆ ನಕಾರಾತ್ಮಕ ಮಾತುಗಳನ್ನು ಆಡುತ್ತಾರೆ. ಅವರು ಹಿಂದೂಸ್ಥಾನಿ ಅಲ್ಲ ಎಂದು ನಾನು ಭಾವಿಸುತ್ತೇನೆ’ ಎಂದು ಬಿಟ್ಟು ಕಿಡಿ ಕಾರಿದರು.
ಕಾಂಗ್ರೆಸ್ ಈ ಹಿಂದೆ ಮುಸ್ಲಿಮರನ್ನು ಬಳಸಲು ಪ್ರಯತ್ನಿಸಿತ್ತು, ಆದರೆ ಅದು ಸಾಧ್ಯವಾಗದ ಕಾರಣ, ಅದು ಈಗ ಸಿಖ್ಖರನ್ನು ವಿಭಜಿಸಲು ಪ್ರಯತ್ನಿಸುತ್ತಿದೆ. ರಾಹುಲ್ ಗಾಂಧಿ ಒಬಿಸಿ ಮತ್ತು ಇತರ ಜಾತಿಗಳ ಬಗ್ಗೆ ಮಾತನಾಡುತ್ತಾರೆ. ಪ್ರತಿಪಕ್ಷದ ನಾಯಕನಾದ ನಂತರವೂ ಚಮ್ಮಾರ, ಬಡಗಿ, ಮೆಕ್ಯಾನಿಕ್ ನ ನೋವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಇದು ತಮಾಷೆ” ಎಂದು ಹೇಳಿದರು.
ಹೇಳಿಕೆಯನ್ನು ಖಂಡಿಸಿರುವ ಕಾಂಗ್ರೆಸ್ ”ರವನೀತ್ ಸಿಂಗ್ ಬಿಟ್ಟು ಪ್ರಜ್ಞಾಶೂನ್ಯ ವ್ಯಕ್ತಿಯಂತೆ ಮಾತನಾಡುತ್ತಿದ್ದಾರೆ” ಎಂದು ತಿರುಗೇಟು ನೀಡಿದೆ.