ಮುಂಬೈ:ಶ್ವಾನಗಳು ಅತ್ಯಂತ ನಂಬಿಕೆಯ ಪ್ರಾಣಿಯಾಗಿದೆ, ಇದೀಗ ಅದು ಮತ್ತೊಮ್ಮೆ ಸಾಬೀತಾಗಿದೆ. ನೆರೆ ಮನೆಯವರ ಜಗಳದಿಂದಾಗಿ ತನ್ನ ಪ್ರಾಣವನ್ನೇ ಬಲಿಕೊಟ್ಟು ಚೂರಿ ಇರಿತದಿಂದ ಯಜಮಾನನ್ನೇ ರಕ್ಷಿಸಿರುವ ಘಟನೆ ಮುಂಬೈನ ಸೈಯನ್ ನಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.
ಏನಿದು ಘಟನೆ:
ಈ ಘಟನೆ ನಡೆದದ್ದು ಮುಂಬೈನ ಮಕ್ಕಾಡಿವಾಡಾ ಪ್ರದೇಶದ ಸೈಯನ್ ಕೋಲಿವಾಡಾ ಎಂಬಲ್ಲಿ. ಮುಂಬೈ ಮಿರರ್ ವರದಿ ಪ್ರಕಾರ, ಲಕ್ಕಿ ಹಾಗೂ ಶ್ವಾನದ ಒಡತಿ ಸುಮತಿ ದೇವೇಂದ್ರ ಹಾಗೂ ಆಕೆಯ ಸಹೋದರ ಜೊತೆಗೆ ವಾಸವಾಗಿದ್ದರು. ಬೀದಿ ನಾಯಿಯನ್ನು ಸೈಯನ್ ಕೋಲಿವಾಡಾ ನಿವಾಸಿ ಸುಮತಿ ಸಾಕಿಕೊಂಡಿದ್ದರು.
ಇಲ್ಲಿನ ಕೊಳಗೇರಿ ನಿವಾಸಿ ವೆಂಕಟೇಶ್ (23) ಹಾಗೂ ಆತನ ಸಹೋದರನ ಪತ್ನಿ ರೋಸಿ(22ವರ್ಷ) ನಡುವೆ ಜಗಳ ನಡೆದಿತ್ತು. ಜಟಾಪಟಿ ವಿಕೋಪಕ್ಕೆ ತಿರುಗಿದಾಗ ರೋಸಿ ನೆರೆಮನೆ ಸುಮತಿ ಅವರ ಮನೆಯೊಳಕ್ಕೆ ಓಡಿ ಬಂದಿದ್ದಳು.
ಈ ಸಂದರ್ಭದಲ್ಲಿ ವೆಂಕಟೇಶ್ ಚೂರಿ ಹಿಡಿದು ಅವಳನ್ನು ಅಟ್ಟಿಸಿಕೊಂಡು ಸುಮತಿ ಅವರ ಮನೆಯೊಳಕ್ಕೆ ಬಂದಿದ್ದ. ಈ ಸಂದರ್ಭದಲ್ಲಿ ಸುಮತಿ ಮನೆಯಲ್ಲಿ ಒಬ್ಬಂಟಿಯಾಗಿದ್ದು, ನಾಯಿ ಜೊತೆಗಿತ್ತು. ಸಹೋದರ ಕೆಲಸಕ್ಕೆ ಹೋಗಿದ್ದು, ವಾಪಸ್ ಬಂದಿರಲಿಲ್ಲವಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿರುವುದಾಗಿ ವರದಿ ವಿವರಿಸಿದೆ.
ವೆಂಕಟೇಶ ಚೂರಿ ಇರಿಯಲು ಮುಂದಾದ ವೇಳೆ ರೋಸಿ ಅದರಿಂದ ತಪ್ಪಿಸಿಕೊಳ್ಳಲು ಸುಮತಿಯ ಬೆನ್ನ ಹಿಂದೆ ಬಂದು ನಿಂತಿದ್ದಳು. ಆಗ ಅಪಾಯವನ್ನರಿತ ನಾಯಿ ತನ್ನ ಒಡತಿಯ ಪ್ರಾಣ ಕಾಪಾಡಲು ವೆಂಕಟೇಶನ ಮೈಮೇಲೆ ಎರಗಿತ್ತು. ನಾಯಿ ಲಕ್ಕಿ ಆತನ ಹಿಮ್ಮಡಿ ಹಿಡಿದು ಜಗ್ಗಾಡಿತ್ತು. ಆಗ ವೆಂಕಟೇಶ್ ಚೂರಿಯನ್ನು ನಾಯಿಯ ಹೊಟ್ಟೆಗೆ ಇರಿದಿದ್ದ. ನಾಯಿ ಗಂಭೀರವಾಗಿ ಗಾಯಗೊಂಡಿತ್ತು, ಆರೋಪಿ ವೆಂಕಟೇಶ್ ಅಲ್ಲಿಂದ ಕಾಲ್ಕಿತ್ತಿದ್ದ.
ಸುಮತಿ ಕೂಡಲೇ ನಾಯಿಯನ್ನು ಸ್ಥಳೀಯ ಆಸ್ಪತ್ರೆಗೆ ಕೊಂಡೊಯ್ದಿದ್ದರು. ಆದರೆ ಅಷ್ಟರಲ್ಲೇ ಅದರ ಪ್ರಾಣ ಪಕ್ಷ ಹಾರಿ ಹೋಗಿತ್ತು. ಇದೀಗ ನನಗಾಗಿ ನನ್ನ ನಾಯಿ ಪ್ರಾಣವನ್ನೇ ತ್ಯಜಿಸಿದೆ, ಅನಾವಶ್ಯಕವಾಗಿ ನಾಯಿ ಪ್ರಾಣ ತೆಗೆದ ವೆಂಕಟೇಶನಿಗೆ ಶಿಕ್ಷೆ ಆಗಬೇಕು ಎಂಬುದು ಸುಮತಿ ಆಗ್ರಹವಾಗಿದೆ. ಬಳಿಕ ಬಂಧನಕ್ಕೀಡಾದ ವೆಂಕಟೇಶ್, ಜಾಮೀನಿನ ಮೇಲೆ ಹೊರಬಂದಿದ್ದಾನೆ.