ರಿಷಭ್ ಶೆಟ್ಟಿ ಹೊಸ ಜಾನರ್ ಪ್ರಯತ್ನಿಸಿದ್ದಾರೆ. ಅದು “ಹೀರೋ’ ಮೂಲಕ. ಈ ಚಿತ್ರದ ಟ್ರೇಲರ್ ಸಂಕ್ರಾಂತಿ ದಿನ ಬಿಡುಗಡೆಯಾಗಿದ್ದು, ಮೆಚ್ಚುಗೆ ವ್ಯಕ್ತವಾಗುತ್ತಿದೆ. ಜೊತೆಗೆ ಹೊಸ ಜಾನರ್ ಪ್ರಯತ್ನಿಸಿದ್ದು, ಕೂಡಾ ಟ್ರೇಲರ್‌ನಲ್ಲಿ ಎದ್ದು ಕಾಣುತ್ತಿದೆ. ಅಷ್ಟಕ್ಕೂ ರಿಷಭ್ ಪ್ರಯತ್ನಿಸಿದ ಜಾನರ್ ಯಾವುದು ಎಂದು ನೀವು ಕೇಳಬಹುದು. ಅದು ಆ್ಯಕ್ಷನ್ ಡ್ರಾಮಾ. ಟ್ರೇಲರ್ ನೋಡಿದವರಿಗೆ ರಕ್ತಸಿಕ್ತ ಹೆಜ್ಜೆ ಗುರುತುಗಳು ಎದ್ದು ಕಾಣುತ್ತವೆ. ಆದರೆ, ಇದು ಟ್ರೇಲರ್, ಸಿನಿಮಾ ಮುಂದೈತೆ!
ಅಂದಹಾಗೆ, ರಿಷಭ್ ತಮ್ಮ “ಹೀರೋ’ ಬಗ್ಗೆ ಮಾತನಾಡಲು ಮಾಧ್ಯಮದ ಮುಂದೆ ಬಂದಿದ್ದರು. ರಿಷಭ್ ಮುಖದಲ್ಲಿ ಖುಷಿ ಎದ್ದು ಕಾಣುತ್ತಿತ್ತು. ಅದಕ್ಕೆ ಕಾರಣ, ಯಾರೂ ಕೆಲಸ ಮಾಡದೇ, ಮನೆಯಲ್ಲಿದ್ದ ಸಮಯದಲ್ಲಿ ರಿಷಭ್ ಧೈರ್ಯ ಮಾಡಿ, ಮಾಡಿದ ಸಿನಿಮಾ “ಹೀರೋ’!
ಹೌದು, “ಹೀರೋ’ ಚಿತ್ರ ತಯಾರಾಗಿದ್ದು ಲಾಕ್‌ಡೌನ್ ಸಮಯದಲ್ಲಿ. ಈ ಬಗ್ಗೆ ಮಾತನಾಡುವ ರಿಷಭ್, “ಲಾಕ್‌ಡೌನ್‌ನಲ್ಲಿ ಎರಡು ತಿಂಗಳು ಊರಲ್ಲಿದ್ದೆ. ಸದಾ ಬಿಝಿಯಾಗಿದ್ದ ನನಗೆ ಕೆಲಸ ಮಾಡದೇ ಕುಳಿತು ಬೇಜಾರಾಗಿತ್ತು. ಎರಡು ತಿಂಗಳ ನಂತರ ಏನಾದರೊಂದು ಮಾಡಲೇಬೇಕೆಂದು ಬೆಂಗಳೂರಿಗೆ ಬಂದೆ. ನನ್ನ ತಂಡದ ಜೊತೆ ಚರ್ಚೆ ಮಾಡುವಾಗ ಈ ಕಥೆ ಹುಟ್ಟಿತು. ಆ ನಂತರ ಕಲಾವಿದರ ಆಯ್ಕೆ. ಎಲ್ಲರಿಗೂ ಕರೆ ಮಾಡಿ, ಫಿಕ್ಸ್ ಮಾಡಿದ್ದಾಯ್ತು, ಜೊತೆಗೆ ಶೂಟಿಂಗ್ ಮುಗಿಯೋವರೆಗೆ ಮನೆ ಕಡೆ ಹೋಗುವಂತಿಲ್ಲ ಎಂದಿದ್ದೂ ಆಯ್ತು. ಕೊನೆಗೆ ಲೊಕೇಶನ್. ಇಡೀ ಸಿನಿಮಾ ಚಿಕ್ಕಮಗಳೂರಿನಲ್ಲಿ ನಡೆದಿದೆ. ನಗರ ಪ್ರದೇಶದಿಂದ ದೂರವಿರುವ 200 ಎಕರೆ ಎಸ್ಟೇಟ್ ಒಳಗಡೆ ಚಿತ್ರೀಕರಣ ಮಾಡಿದೆವು. ಕೇವಲ 24 ಮಂದಿಯ ತಂಡವಷ್ಟೇ ಈ ಸಿನಿಮಾವನ್ನು ಕಟ್ಟಿಕೊಟ್ಟಿದ್ದು. 100 ಜನ ಮಾಡುವ ಕೆಲಸವನ್ನು 24 ಮಂದಿ ಮಾಡಿದ್ದೇವೆ. ಎಲ್ಲರೂ ತುಂಬಾ ಕಷ್ಟಪಟ್ಟಿದ್ದಾರೆ. ಚಿತ್ರೀಕರಣಕ್ಕೆ ಬೇಕಾದ ಪ್ರಾಪರ್ಟಿಯನ್ನು ಪ್ರಮೋದ್ ಶೆಟ್ಟಿ ಹಾಗೂ ಉಗ್ರಂ ಮಂಜು 24 ಗಂಟೆಯಲ್ಲಿ ಜೋಡಿಸಿದರು. ಒಬ್ಬನೇ ಒಬ್ಬ ಲೈಟ್‌ಬಾಯ್ ಇದ್ದ. ಬೆಂಗಳೂರಿನಿಂದ ಏನಾದರೂ ಬೇಕಾದರೆ ಶೈನ್ ಶೆಟ್ಟಿ ಕಳುಹಿಸುತ್ತಿದ್ದರು. ಇದೊಂದು ಅದ್ಭುತ ಅನುಭವ’ ಎಂದರು.
ಇದನ್ನೂ ಓದಿ:ನಿಖೀಲ್ ಬರ್ತ್‌ಡೇಗೆ ಬರಲಿದೆ ‘ರೈಡರ್’ ಟೀಸರ್
ಸಿನಿಮಾದ ಬಗ್ಗೆ ಮಾತನಾಡುವ ರಿಷಭ್, “ನನ್ನ ಜೊತೆ ಸಹಾಯಕ ನಿರ್ದೇಶಕರಾಗಿದ್ದ ಭರತ್ ರಾಜ್ ಈ ಚಿತ್ರದ ನಿರ್ದೇಶಕರು. ಇದೊಂದು ಆ್ಯಕ್ಷನ್ ಡ್ರಾಮಾ. ಟ್ರೇಲರ್‌ನಲ್ಲಿ ನಿಮಗೆ ರಕ್ತ ಕಾಣಬಹುದು. ಆದರೆ, ಇಡೀ ಸಿನಿಮಾ ತುಂಬಾ ಮಜಾವಾಗಿ ಸಾಗುತ್ತದೆ. ಇಲ್ಲಿನ ಯಾವುದೇ ಪಾತ್ರಗಳಿಗೂ ಹೆಸರಿಲ್ಲ’ ಎಂದರು.
ನಿರ್ದೇಶಕ ಭರತ್ ರಾಜ್ ಹೆಚ್ಚು ಮಾತನಾಡಲಿಲ್ಲ. ಚಿತ್ರದಲ್ಲಿ ಗಾನವಿ ಲಕ್ಷ್ಮಣ್ ನಾಯಕಿ. ಸಿನಿಮಾದ ಅನುಭವನ್ನು ಆದ್ಯಾತ್ಮದ ಜೊತೆ ತಳುಕು ಹಾಕಿ ತಮ್ಮದೇ ಶೈಲಿಯಲ್ಲಿ ಹಂಚಿಕೊಂಡರು. ಚಿತ್ರದಲ್ಲಿ ಉಗ್ರಂ ಮಂಜು, ಪ್ರಮೋದ್ ಶೆಟ್ಟಿ ಕೂಡಾ ಪ್ರಮುಖ ಪಾತ್ರ ಮಾಡಿದ್ದಾರೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ, ಅರವಿಂದ್ ಛಾಯಾಗ್ರಹಣವಿದೆ. ಚಿತ್ರ ಫೆಬ್ರವರಿಯಲ್ಲಿ ತೆರೆ ಕಾಣಲಿದೆ.