ಕರ್ನಾಟಕದ ಚಿಕ್ಕ ಜನವಸತಿ ಪ್ರದೇಶ ಮಣಿಪಾಲ ಈಗ ಜಾಗತಿಕ ಶೈಕ್ಷಣಿಕ ನಗರ. ಇಲ್ಲಿನ ಕಟ್ಟಡಗಳೆಲ್ಲವೂ ಹೊಸ ತಲೆಮಾರಿನವು. ಇಲ್ಲೇ ಪ್ರಾಚೀನ ಪರಂಪರೆ ಸಾರುವ ಹೆರಿಟೇಜ್ ವಿಲೇಜ್ ಮೈದಳೆಯಿತು. ಇದೇಕೆಂದರೆ…
Advertisement
ಶೆಣೈ ಅವರು ಸಿಂಡಿಕೇಟ್ ಬ್ಯಾಂಕ್‌ನಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿದವರು. ಮಣಿಪಾಲಕ್ಕೆ ತಮ್ಮ ನಿವಾಸವನ್ನು 1970ರ ದಶಕದಲ್ಲಿ ಸ್ಥಳಾಂತರಿಸಿದಾಗ ಆಗ ಕಾಂಕ್ರೀಟ್ ಕಟ್ಟಡ ಶುರುವಾಗಿದ್ದ ಕಾಲ. ಸೆಕೆ ತಡೆಯಲಾಗದೆ ಮಣಿಪಾಲದ ಆಸುಪಾಸಿನ ಗ್ರಾಮಾಂತರ ಪ್ರದೇಶಕ್ಕೆ ತೆರಳಿ ಅಲ್ಲಿನ ಮನೆಗಳನ್ನು ಗಮನಿಸಿದರು. ಆಗಲೇ ಶೆಣೈಯವರಿಗೆ ಜ್ಞಾನೋ ದಯವಾಯಿತು. ಮನೆ ಎಂದರೆ ಹೇಗಿರಬೇಕು? ಹಿರಿಯರು ತಂಪಾದ ಮನೆಗಳ ತಂತ್ರಜ್ಞಾನವನ್ನು ಹೇಗೆ ಕಂಡುಹಿಡಿದಿದ್ದರು? ಪುರಾತನ ಕಟ್ಟಡಗಳು ಹೇಗೆ ನಾಶವಾಗುತ್ತಿವೆ? ಆಧುನಿಕ ಶೈಲಿಯ ಕಟ್ಟಡ ಗಳು ಅನಾರೋಗ್ಯಕ್ಕೆ ಹೇಗೆ ಕಾರಣವಾಗುತ್ತಿವೆ ಎಂಬುದನ್ನು ಅರಿತ ಶೆಣೈ ತಮ್ಮ ಕನಸಿನ ಹಸ್ತಶಿಲ್ಪಕ್ಕೆ ಮುಂದಾದರು. ಆರಂಭದಿಂದ ಕೊನೆಯವರೆಗೂ ಅವರು ಮಣಿಪಾಲದ ಪೈ ಬಂಧುಗಳೊಂದಿಗೆ, “ಉದಯವಾಣಿ’ಯೊಂದಿಗೆ ನಿಕಟ ಸಂಪರ್ಕ ಹೊಂದಿ ಸಹಕಾರ ನೀಡುತ್ತಿದ್ದರು. ಹಸ್ತಶಿಲ್ಪ ಟ್ರಸ್ಟ್ ಆರಂಭದಿಂದ ಇತ್ತೀಚಿನವರೆಗೂ ಅಧ್ಯಕ್ಷರಾಗಿ ಟಿ. ಮೋಹನದಾಸ್ ಪೈ ಅವರು ಮಾರ್ಗದರ್ಶನ ನೀಡಿ ದ್ದರು. ಶೆಣೈ ಅವರು ಉಳಿದ ಸಂಘಟನೆಗಳಲ್ಲಿ ಸದಾ ಕಾರ್ಯದರ್ಶಿಗಳಾಗಿದ್ದಂತೆ ಹಸ್ತಶಿಲ್ಪ ಟ್ರಸ್ಟ್‌ನಲ್ಲಿಯೂ ಕಾರ್ಯದರ್ಶಿಗಳಾಗಿ ಹಗಲಿರುಳು ದುಡಿದಿದ್ದರು. ಕೊನೆಯವರೆಗೂ ಅವರು ಬಹು ಸಮಯ ಹೆರಿಟೇಜ್ ವಿಲೇಜ್ ಮನೆಯಲ್ಲಿಯೇ ಇರುತ್ತಿದ್ದರು.
ಮಣಿಪಾಲ ಅನಂತನಗರ ಎಕ್ಸ್‌ಟೆನ್ಶನ್‌ನಲ್ಲಿ ಹಸ್ತಶಿಲ್ಪ ಮನೆಯನ್ನು ಪುರಾತನ ಶೈಲಿಯಲ್ಲಿ 1982ರಲ್ಲಿ ಕಟ್ಟಿದ್ದರು. ಇದಕ್ಕೆ ಉತ್ತಮ ಪ್ರಚಾರ ಸಿಕ್ಕಿತು. ರಾಷ್ಟ್ರಮಟ್ಟದ “ಸುರಭಿ’ ಕಾರ್ಯಕ್ರಮದಲ್ಲಿ ಪ್ರಸಾರವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದರು. ಬಂದವರಿಗೆ ಮನೆಯನ್ನು ತೋರಿಸದೆ ಇರಲು ಶೆಣೈಯವರಿಗೆ ಆಗಲಿಲ್ಲ. ಆಗ ಮನೆಗೆ ಬಂದ ಜಿಲ್ಲಾಧಿಕಾರಿಯವರು ಮಾತನಾಡುವಾಗ ಶೆಣೈ ಯವರು “ಬೇರೆ ಬೇರೆ ಬಿಡಿಭಾಗಗಳಿಂದ ಇದನ್ನು ನಿರ್ಮಿಸಿದ್ದೇನೆ. ಸರಕಾರದಿಂದ ಜಾಗ ಕೊಟ್ಟರೆ ನಾಶ ವಾಗುವ ಇಡೀ ಕಟ್ಟಡಗಳನ್ನೇ ನಿರ್ಮಿಸಬಹುದು’ ಎಂದರು. “ಟ್ರಸ್ಟ್ ರಚಿಸಿ ಅದರ ಮೂಲಕ ನಿರ್ಮಿ ಸುವುದಾದರೆ ಜಾಗ ಕೊಡಬಹುದು’ ಎಂದು ಜಿಲ್ಲಾಧಿ ಕಾರಿಗಳು ಹೇಳಿದಂತೆ ಟ್ರಸ್ಟ್ ರಚಿಸಲಾಯಿತು. ಶೆಣೈ ಯವರು ತಮ್ಮ ಮನೆಯನ್ನೇ ಟ್ರಸ್ಟ್‌ಗೆ ಬಿಟ್ಟು ಕೊಟ್ಟರು. ಅನಂತರ ಈಗಿನ ಹೆರಿಟೇಜ್ ವಿಲೇಜ್ ಜಾಗವನ್ನು ಸರಕಾರ ಮಂಜೂರು ಮಾಡಿತು. ಮನೆಯನ್ನು ಟ್ರಸ್ಟ್‌ಗೆ ಬಿಟ್ಟುಕೊಟ್ಟ ಬಳಿಕ ಶೆಣೈಯವರು ಅನಂತನಗರದಲ್ಲಿ ಬೇರೊಂದು ಮನೆ ಕಟ್ಟಿದರು. 1997ರಲ್ಲಿ ಹೆರಿಟೇಜ್ ವಿಲೇಜ್‌ನಲ್ಲಿ ಹಳೆಯ ಕಟ್ಟಡಗಳನ್ನು ಮರು ಜೋಡಿಸುವ ಕೆಲಸ ಆರಂಭವಾಯಿತು.
Related Articles
Advertisement
ಪ್ರಾಚೀನ ಅನುಭವದ ತಾಣಯಾವುದೇ ಸಮುದಾಯದವರಿರಲಿ, ನಮ್ಮ ಹಿರಿಯರ ಬದುಕು ಹೇಗಿತ್ತು ಎಂದು ಅನುಭವದಿಂದ ತಿಳಿಯಬೇಕಾದರೆ ಆ ಕಾಲದ ರಚನೆಗಳನ್ನು ಕಾಣಲೇಬೇಕು. ಆದರೆ ಅವುಗಳಿಗೆ ಯಾವುದೇ ಮನ್ನಣೆ ನೀಡದೆ ಕೆಡವಿ ಹಾಕುವ ಈ ಕಾಲಘಟ್ಟದಲ್ಲಿ ಮಣಿಪಾಲದ ಹೆರಿಟೇಜ್ ವಿಲೇಜ್‌ನಲ್ಲಿ ಅಂತಹ ಕಟ್ಟಡಗಳನ್ನು ಯಥಾವತ್ತಾಗಿ ನಿರ್ಮಿಸಲಾಗಿದೆ. ಇಲ್ಲಿನ ಹಲವು ಪುರಾತನ ಕಟ್ಟಡಗಳನ್ನು ವೀಕ್ಷಿಸಿದರೆ ನಮ್ಮ ಹಿರಿಯರ ಜೀವನಶೈಲಿ, ಶಿಸ್ತುಬದ್ಧತೆ, ವೈಜ್ಞಾನಿಕ ಅಂಶಗಳನ್ನು ಪ್ರತ್ಯಕ್ಷವಾಗಿ ಗಮನಿಸಬಹುದು.
ಬಾಗಲಕೋಟೆ ಜಿಲ್ಲೆಯ ಮುಧೋಳದ ಅರಮನೆ, ಕೊಪ್ಪಳ ಜಿಲ್ಲೆ ಕುಕನೂರಿನ ಕಮಲ್ ಮಹಲ್, ಬೀದರ್ ಜಿಲ್ಲೆ ಹುಮ್ನಾಬಾದ್‌ನ ಡೆಕ್ಕನಿ ನವಾಬ್ ಮಹಲ್, ಮಂಗಳೂರು ಕ್ರಿಶ್ಚಿಯನ್ ಮನೆ, ರಾಜಾರವಿವರ್ಮರ ಚಿತ್ರ ಗ್ಯಾಲರಿ, ಭೂತದೈವಗಳ ಉರುಗಳಿರುವ ನಂದಿಕೇಶ್ವರ ದೇವಸ್ಥಾನ, ಅದಮಾರು ಸಮೀಪದ ಶಿವಳ್ಳಿ ಬ್ರಾಹ್ಮಣರ ಕುಂಜೂರು ಚೌಕಿ ಮನೆ, ಕೊಡಗಿನ ಹರಿಹರ ಮಂದಿರಗಳು ಈ ಎಂಟು ಕಟ್ಟಡಗಳು ಪೂರ್ಣಗೊಂಡು 2016 ಮೇ ತಿಂಗಳಿನಿಂದ ಸಾರ್ವಜನಿಕ ವೀಕ್ಷಣೆ ತೆರೆದಿವೆ. ಈ ಕಟ್ಟಡಗಳೆಲ್ಲವೂ ಪ್ರಾಚೀನ ವೈಭವವನ್ನು ಸಾರುತ್ತಿವೆ. ಹೆಂಗವಳ್ಳಿ ಮನೆ, ಮಿಯಾರು ಮನೆ, ಭಟ್ಕಳದ ನವಾಯತ್ ಮುಸ್ಲಿಮ್ ಮನೆ, ಹಕೂìರು ಒಳಗಿನ ಮನೆ, ಶೃಂಗೇರಿ ಮನೆ ಸಹಿತ ಒಟ್ಟು 30 ಕಟ್ಟಡಗಳ ಕಲ್ಪನೆ ಇದು. ಮುಂದೆ ಸಾಂಪ್ರದಾಯಿಕ ಮತ್ತು ಜನಪದ ಚಿತ್ರಕಲೆಗಳ ವಸ್ತುಸಂಗ್ರಹಾಲಯ, ನರೇಂದ್ರ ಬಾಬು ಗ್ಯಾಲರಿ, ಸಾಂಪ್ರದಾಯಿಕ ಉಡುಪುಗಳ ವಸ್ತು ಸಂಗ್ರಹಾಲಯ ನಿರ್ಮಿಸುವ ಗುರಿಯನ್ನು ಶೆಣೈ ಹೊಂದಿದ್ದರು. ಒಂದೊಂದು ಮನೆಗೂ ಹತ್ತಾರು ಕಾರ್ಮಿಕರು ವರ್ಷಗಟ್ಟಲೆ ಕೆಲಸ ಮಾಡಿದ್ದಾರೆ. ಹಿಂದೆ ಹೇಗಿತ್ತೋ ಅದೇ ರೀತಿ ಮರು ಜೋಡಿಸಲಾಗಿದೆ. ಸ್ವೀಡನ್, ನಾರ್ವೆ ಮೊದಲಾದ ದೇಶಗಳಿಂದ ಬಂದವರು ಮರುಜೋಡಣೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಪ್ರತಿ ಮನೆಗಳ ಬೃಹತ್ ಗಾತ್ರದ ಕಂಬಗಳು, ತೊಲೆಗಳು, ಬಾಗಿಲುಗಳ ದಾರುಶಿಲ್ಪ ವೈಭವ ಕಣ್ಮನ ಸೆಳೆಯುತ್ತವೆ. ನೂರಾರು ಚಿತ್ರಕಲಾಕೃತಿಗಳು ಗೋಡೆಗಳನ್ನು ಅಂದಗಾಣಿಸಿವೆ. ಲಾಟೀನು, ಏತ ನೀರಾವರಿಯಂತಹ ಲೋಹ, ಮರದ ಸಾಮಗ್ರಿಗಳು ಅಸಂಖ್ಯ ಇವೆ. ಕಣ್ಣಿಗೆ ಬಟ್ಟೆ ಕಟ್ಟಿ ಸುತ್ತಾಡಿದ್ದ ಶೆಣೈ
ದಕ್ಖಣ ನವಾಬರ ಮಹಲ್‌ನ್ನು ಮಣಿಪಾಲಕ್ಕೆ ತಂದ ವಿಜಯನಾಥ ಶೆಣೈಯವರ ಅನುಭವ ರೋಚಕವಾಗಿದೆ. ನವಾಬರ ವಂಶಸ್ಥರಿಗೆ ತಮ್ಮ ವಿಲಾಸೀಜೀವನವನ್ನು ಪೂರೈಸಿಕೊಳ್ಳಲಾಗದ, ಆದರೆ ಅಂತಸ್ತನ್ನು ಬಿಟ್ಟುಕೊಡಲಾಗದ ಹೊತ್ತು. ವಿಜಯನಾಥ ಶೆಣೈಯವರನ್ನು ಹುಮ್ನಾಬಾದ್‌ನಿಂದ ಇಬ್ಬರು ಬೈಕ್‌ನಲ್ಲಿ ಕರೆದೊಯ್ದರು. ಎರಡು ಬೈಕ್‌ಗಳಲ್ಲಿ ಒಂದರಲ್ಲಿ ಶೆಣೈ ಹಿಂದುಗಡೆ ಕುಳಿತಿದ್ದರು. ಯಾವ ದಾರಿಯಲ್ಲಿ ಎಲ್ಲಿಗೆ ಹೋದೆವು ಎಂಬುದು ಗೊತ್ತಾಗಬಾರದೆಂದು ಶೆಣೈಯವರ ಕಣ್ಣಿಗೆ ಕಪ್ಪು$ಬಟ್ಟೆ ಕಟ್ಟಿದ್ದರು. ಕೊನೆಗೂ ಆ ಸ್ಥಳ ಯಾವುದೆಂದು ಗೊತ್ತಾಗಲಿಲ್ಲ. ಮೂರೂವರೆ ತಾಸು ಪ್ರಯಾಣದ ಬಳಿಕ ಬಟ್ಟೆ ಕಳಚಿದಾಗ ಕಂಡದ್ದು ದಾಳಿಂಬೆ, ದ್ರಾಕ್ಷಿ ತೋಟಗಳು. ಮನೆಯೊಳಗೆ ಹೋದಾಗ ಅತ್ಯಾಶ್ಚರ್ಯ ಕಾದಿತ್ತು. ಹಿಂದಿನ ಕಾಲದ ವೈಭವ, ಹಾಳು ಸುರಿಯುವ ಸ್ಥಿತಿ, ಮಾರಾಟ ಮಾಡುವ ಗಳಿಗೆ ಶೆಣೈಯವರಿಗೂ ಆ ಮನೆಯವರಿಗೂ ಬೇಸರ ಮೂಡಿಸಿತು. ಹಳೆ ರಚನೆಗಳ ಸಂರಕ್ಷಣೆಯೇ ಶ್ರದ್ಧಾಂಜಲಿ
ವಿಜಯನಾಥ ಶೆಣೈ ಬ್ಯಾಂಕ್‌ನಲ್ಲಿರುವಾಗಲೇ ದೂರದೂರುಗಳಿಗೆ ಹೋಗಿ ಕೆಡಹುತ್ತಿದ್ದ ಕಟ್ಟಡಗಳ ಮೌಲ್ಯ ತಿಳಿದು ದುಃಖೀಸಿದವರು. ಅಂತಹ ಕಟ್ಟಡಗಳಿಗೆ ಮರುಜೀವ ಕೊಡಿಸುವ ಕೆಲಸವನ್ನು 1997ರಲ್ಲಿ ಹೆರಿಟೇಜ್ ವಿಲೇಜ್ ಮೂಲಕ ಆರಂಭಿಸಿದರು. ಇವರು ಮೊದಲು ಪ್ರಯೋಗಕ್ಕೆ ಒಡ್ಡಿದ್ದು ಸ್ವಂತ ಮನೆ ಹಸ್ತಶಿಲ್ಪವನ್ನೇ. ಯೋಜನೆ ಆರಂಭವಾಗಿ ಎರಡು ದಶಕಗಳ ಬಳಿಕ ಸಾರ್ವಜನಿಕರ ವೀಕ್ಷಣೆಗೆ ಕಳೆದ ವರ್ಷ ಮುಕ್ತಗೊಂಡಿತು. ವೀಕ್ಷಣೆ ಆರಂಭವಾಗಿ ಒಂದು ವರ್ಷದ ತರುವಾಯ ಮಾ. 9ರಂದು ಹೆರಿಟೇಜ್ ವಿಲೇಜ್‌ನ ಉಸಿರು ಎಂಬಂತಿದ್ದ ಶೆಣೈ ಇಹಲೋಕ ತ್ಯಜಿಸಿದ್ದಾರೆ. ಈಗ ನಾವು ಸಾಧ್ಯವಾದಷ್ಟು ಹಳೆಯ ರಚನೆಗಳನ್ನು ಜೀರ್ಣೋದ್ಧಾರಗೊಳಿಸಿ ಅದರ ಪ್ರಾಚೀನತೆಯನ್ನು ಜೀವಂತವಾಗಿಡುವ ಪ್ರಯತ್ನ ಮಾಡುವ ಮೂಲಕ ಶೆಣೈಯವರಿಗೆ ಶ್ರದ್ಧಾಂಜಲಿ ಸಲ್ಲಿಸಬಹುದಾಗಿದೆ. ಹೆರಿಟೇಜ್ ವಿಲೇಜ್ ಭೇಟಿ
ಹೆರಿಟೇಜ್ ವಿಲೇಜ್‌ನಲ್ಲಿ ನಿರ್ಮಿಸಿರುವ ಪುರಾತನ ರಚನೆಗಳ ಸಾರ್ವಜನಿಕ ವೀಕ್ಷಣೆ 2016 ಮೇ ತಿಂಗಳಲ್ಲಿ ಆರಂಭವಾಗಿ ಈಗ ಮುಂದುವರಿಯುತ್ತಿದೆ. ದಿನಕ್ಕೆ ಎರಡು ಅವಧಿ (ಬೆಳಗ್ಗೆ 10ರಿಂದ 12.30 ಗಂಟೆ, ಅಪರಾಹ್ನ 2.30ರಿಂದ 5 ಗಂಟೆ) ಭೇಟಿ ನೀಡಬಹುದು. ಒಂದು ಬಾರಿ 15 ಜನರಿಗೆ ಮಾತ್ರ ಅವಕಾಶವಿದ್ದು 12 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಅವಕಾಶಗಳಿಲ್ಲ. ಟಿಕೆಟ್ ಪ್ರವೇಶ ದರ ಒಬ್ಬರಿಗೆ 500 ರೂ. https://bookmyshow.com/guidedtourofhastashilpaheritagevillage ಈ ಆನ್‌ಲೈನ್ ಮೂಲಕ ಬುಕ್ಕಿಂಗ್ ಮಾಡಬೇಕು. ಇಮೇಲ್ ವಿಳಾಸ: hastashilpatrust@gmail.com ಕುಂಜೂರು ಚೌಕಿ ಮನೆ
ಮುಧೋಳ ಅರಮನೆಯ ಕಟ್ಟಡವನ್ನು ಪುನಃ ನಿರ್ಮಿಸುವಾಗ ರಾಜಮನೆತನದ ಮೇನಕರಾಜೆ ಘೋರ್ಪಡೆ ಮತ್ತು ಗಂಡ ವಿಜಯರಾಜೆ ಅರಸ್ ಭೂಮಿ ಪೂಜೆ ನಡೆಸಿದ್ದರು. ಉದ್ಘಾಟನೆ ವೇಳೆ ಮೇನಕರಾಜೆ ಮತ್ತು ಅವರ ತಾಯಿ ಇಂದಿರಾ ರಾಜೆ
ಘೋರ್ಪಡೆ ಆಗಮಿಸಿದ್ದರು.
ಕೇರಳ ಮೂಲದ ರಾಜಾ
ರವಿವರ್ಮ ಅವರ ಚಿತ್ರ ಗ್ಯಾಲರಿ ಆರಂಭೋತ್ಸವಕ್ಕೆ ಚಾಲನೆ ಕೊಡಲು ಮಣಿಪಾಲಕ್ಕೆ ಮಂಗಳೂರು ಕೋಟೆಕಾರ್‌ನಲ್ಲಿರುವ ಅವರ ಮೊಮ್ಮಗ ರಾಮವರ್ಮ ಶ್ರೀಪತಿ ಪ್ರಸಾದ್ ಅವರು ಆಗಮಿಸಿದ್ದರು. ರವಿವರ್ಮರ ಲಿತೊಸ್ಟೋನ್‌ನಿಂದ ತಯಾರಿಸಿದ ಒಂದು ಚಿತ್ರವನ್ನು ವಿಜಯನಾಥ ಶೆಣೈಯವರೇ ಶ್ರೀಪತಿ ಪ್ರಸಾದರಿಗೆ ಕೊಟ್ಟಿದ್ದರು. ರವಿವರ್ಮರ ಮರಿಮಗಳು ಉಮಾ ವರ್ಮ ಒಮ್ಮೆ ಮಣಿಪಾಲಕ್ಕೆ ಬಂದಿದ್ದರು.
ಕೇರಳ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಾಣಗೊಂಡಿದ್ದ ಅದಮಾರು ಕುಂಜೂರಿನ ಚೌಕಿ ಮನೆಗೆ ಸಂಬಂಧಿಸಿದ ಸುಮಾರು 200 ಮಂದಿ ಹೆರಿಟೇಜ್ ವಿಲೇಜ್‌ಗೆ ಭೇಟಿ ನೀಡಿ ಅಳಿದುಹೋಗುತ್ತಿದ್ದ ತಮ್ಮ ಕುಟುಂಬದ ಪ್ರತಿಷ್ಠಿತ ಸಂಕೇತವನ್ನು ಉಳಿಸಿದ್ದಕ್ಕೆ ಬಹಳ ಸಂತೋಷ ಪಟ್ಟಿದ್ದರು. ಅಮೆರಿಕ, ಕೆನಡಾದಲ್ಲಿದ್ದ ಕೆಲವರು ಹಣಕಾಸು ಸಹಾಯವನ್ನೂ ಮಾಡಿದ್ದರು. ಮಟಪಾಡಿ ಕುಮಾರಸ್ವಾಮಿ
ಚಿತ್ರಗಳು: ಆಸ್ಟ್ರೋ ಮೋಹನ್