Advertisement

ಪಾಕಿಸ್ಥಾನಕ್ಕೆ ಬುದ್ಧಿ ಕಲಿಸಿದ್ದ ಭಾರತದ ಸೇನೆಯ ವಿಜಯಗಾಥೆ ಇಲ್ಲಿದೆ..

11:55 PM Dec 15, 2021 | Team Udayavani |

1971ರ ಬಾಂಗ್ಲಾ ವಿಮೋಚನಾ ಯುದ್ಧದ ವಿಜಯೋತ್ಸವಕ್ಕೆ ಇಂದು 50 ವರ್ಷದ ಸಂಭ್ರಮ. ಈ ನಿಟ್ಟಿನಲ್ಲಿ ಇಡೀ ದೇಶಾದ್ಯಂತ ಸಂಭ್ರಮಾಚರಣೆ ನಡೆಸಲಾಗುತ್ತಿದೆ. ಪಾಕಿಸ್ಥಾನಕ್ಕೆ ಬುದ್ಧಿ ಕಲಿಸಿದ್ದ ಭಾರತದ ಸೇನೆಯ ವಿಜಯಗಾಥೆ ಇಲ್ಲಿದೆ..

Advertisement

1971 ಡಿ.3 ಮಧ್ಯರಾತ್ರಿ..

ಇಡೀ ದೇಶವೇ ಮುಸುಕೆಳೆದುಕೊಂಡು ಮಲಗಿದ್ದ ವೇಳೆ. ಆಗಿನ್ನೂ ಈ ದೃಶ್ಯ ಮಾಧ್ಯಮದ ಅಬ್ಬರವೇನಿರಲಿಲ್ಲ. ಹೀಗಾಗಿ ಅಂದು ಸಂಜೆ ಪಂಜಾಬ್‌ನ ಎರಡು ಸ್ಥಳಗಳಲ್ಲಿ ಪಾಕಿಸ್ಥಾನ ದಾಳಿ ಮಾಡಿದ ವಿಚಾರ ಇನ್ನೂ ಬಹುತೇಕರಿಗೆ ಗೊತ್ತೇ ಇರಲಿಲ್ಲ. ಇಂಥ ಸಂದರ್ಭದಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ರೇಡಿಯೋ ಮೂಲಕ ದೇಶವನ್ನು ಉದ್ದೇಶಿಸಿ ಮಾತನಾಡಿದರು.

“”ನಮ್ಮ ದೇಶ ಮತ್ತು ನಮ್ಮ ಜನರು ಗಂಭೀರವಾದ ಅಪಾಯದ ಕ್ಷಣದಲ್ಲಿದ್ದು, ಇಂಥ ಸಮಯದಲ್ಲಿ ನಾನು ನಿಮ್ಮೊಂದಿಗೆ ಮಾತನಾಡುತ್ತಿದ್ದೇನೆ. ಕೆಲವು ಗಂಟೆಗಳ ಹಿಂದೆ ಸಂಜೆ 5.30ರ ಅನಂತರ ಪಾಕಿಸ್ಥಾನ ನಮ್ಮ ವಿರುದ್ಧ ಪೂರ್ಣ ಪ್ರಮಾಣದ ಯುದ್ಧವನ್ನು ಆರಂಭಿಸಿದೆ.

ಪಾಕಿಸ್ಥಾನದ ವಾಯುಸೇನೆಯು ಏಕಾಏಕಿ ನಮ್ಮ ವಾಯುನೆಲೆಗಳಾದ ಅಮೃತಸರ, ಪಠಾಣ್‌ಕೋಟ್‌, ಶ್ರೀನಗರ, ಆವಂತಿಪುರ, ಉತ್ತರ್ಲಾಯಿ, ಜೋಧ್‌ಪುರ, ಅಂಬಾಲ ಮತ್ತು ಆಗ್ರಾದ ಮೇಲೆ ದಾಳಿ ನಡೆಸಿದೆ. ಜತೆಗೆ ಅವರ ಭೂಸೇನೆಯು ಸೂಲೇಮಾಂಕಿ, ಖೇಮ್‌ಕರನ್‌, ಮೇಲೆ ದಾಳಿ ನಡೆಸಿದೆ.  ಕಳೆದ ಮಾರ್ಚ್‌ನಿಂದಲೂ ಅಂತಾರಾಷ್ಟ್ರೀಯ ಮಟ್ಟದ ಮೇಲೆ ಒತ್ತಡ ಹೇರುತ್ತಲೇ ಬಂದಿದ್ದೇವೆ. ಭಾರತ ಉಪಖಂಡದಲ್ಲಿ ಶಾಂತಿ ನೆಲೆಸಲು ಸಹಾಯ ಮಾಡಬೇಕು ಎಂದು ಕೇಳಿದ್ದೇವೆ. ಪ್ರಜಾಪ್ರಭುತ್ವದ ಅನುಸಾರವಾಗಿ ಮತ ಹಾಕಿದ್ದೇ ಕೆಲವು ಜನರಿಗೆ ಅಪಾಯ ತಂದೊಡ್ಡಿದೆ.

Advertisement

ಇಂದು ಬಾಂಗ್ಲಾದೇಶದ ಸಮರ, ನಮ್ಮ ಸಮರವಾದಂತಾಗಿದೆ. ಇದು ನಮ್ಮ ಮೇಲೆ ಹೇರಲಾಗಿದೆ ಎಂದು ಕೊಂಡಿದ್ದರೂ, ನಮ್ಮ ಸರಕಾರ ಮತ್ತು ಭಾರತದ ಜನ ಕೆಲವೊಂದು ಜವಾಬ್ದಾರಿ ಹೊರಲೇಬೇಕಾಗುತ್ತದೆ. ನಮಗೆ ಸಮರ ಸಾರುವುದನ್ನು ಬಿಟ್ಟು ಬೇರೆ ಮಾರ್ಗ ತಿಳಿಯುತ್ತಿಲ್ಲ. ನಮ್ಮ ಧೈರ್ಯವಂತ ಸೇನಾಧಿಕಾರಿಗಳು ಮತ್ತು ಯೋಧರು ಅವರ ಪೋಸ್ಟ್‌ಗಳಲ್ಲಿ ಸಜ್ಜಾಗಿ ನಿಂತಿದ್ದಾರೆ. ಹೀಗಾಗಿ ಇಡೀ ದೇಶಾದ್ಯಂತ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ. ಎಂಥದ್ದೇ ಸ್ಥಿತಿ ಎದುರಾಗಲಿ ಅದನ್ನು ನಾವು ಎದುರಿಸಲೇಬೇಕಾಗಿದೆ.

ನಾವು ಕೆಲವೊಂದು ದುರ್ದಿನ ಮತ್ತು ತ್ಯಾಗಕ್ಕೂ ಸಜ್ಜಾಗಬೇಕಿದೆ. ನಾವು ಶಾಂತಿ ಬಯಸುವ ಜನರಾಗಿದ್ದರೂ ನಮ್ಮ ಸ್ವಾತಂತ್ರ್ಯವನ್ನು ಬಲಿಕೊಡುವುದಿಲ್ಲ. ಇಂದಿನ ನಮ್ಮ ಹೋರಾಟ ನಮ್ಮ ಭೂಮಿಯನ್ನು ಕಾಯ್ದುಕೊಳ್ಳುವುದು ಅಷ್ಟೇ ಅಲ್ಲ. ದೇಶದ ಭದ್ರತೆಯನ್ನು ಹೆಚ್ಚು ಮಾಡುವಂಥ ಮೂಲ ಸಂದೇಶಗಳು. ಒಗ್ಗಟ್ಟಿನಿಂದ ಈ ಯುದ್ಧ ಎದುರಿಸೋಣ’.

ಇದನ್ನೂ ಓದಿ:ಎನ್‌ಕೌಂಟರ್‌: ಎ+ ಕೆಟಗರಿಯ ಹಿಜ್ಬುಲ್‌ ಉಗ್ರನ ಹತ್ಯೆ

ಕಿರಾತಕ ಪಾಕ್‌

1947ರಲ್ಲಿ ಭಾರತ ಮತ್ತು ಪಾಕಿಸ್ಥಾನ ಇಬ್ಭಾಗವಾದಾಗಿನಿಂದಲೂ ಅದರ ಕಪಿಚೇಷ್ಟೆಗಳು ನಿಂತಿಲ್ಲ. 1948ರಲ್ಲೇ ಭಾರತದ ಜತೆ ಕಾಲು ಕೆರೆದುಕೊಂಡು ಯುದ್ಧಕ್ಕೆ ಬಂದಿದ್ದ ಪಾಕಿಸ್ಥಾನ ಇದಾದ ಬಳಿಕ ಮತ್ತೆ ಮತ್ತೆ ಗಡಿಯುದ್ಧಕ್ಕೂ ಚೇಷ್ಟೆಗಳನ್ನು ಮುಂದುವರಿಸಿಕೊಂಡು ಬಂದಿತ್ತು. ಇದಷ್ಟೇ ಅಲ್ಲ, ದೇಶ ವಿಭಜನೆ ವೇಳೆ ಪಶ್ಚಿಮ ಮತ್ತು ಪೂರ್ವ ಪಾಕಿಸ್ಥಾನವೆಂದು ಭಾರತದ ಆಚೆ ಮತ್ತು ಈಚೆ ದೇಶ ಉದಯಿಸಿತ್ತು. ಆದರೆ ಪಶ್ಚಿಮ ಪಾಕಿಸ್ಥಾನ(ಪಾಕಿಸ್ಥಾನ) ಪೂರ್ವ ಪಾಕಿಸ್ಥಾನ(ಬಾಂಗ್ಲಾ)ದ ಜನರನ್ನು ನಂಬಲೇ ಇಲ್ಲ. ಇವರನ್ನು ದ್ವಿತೀಯ ದರ್ಜೆ ನಾಗರಿಕರಂತೆಯೇ ನೋಡುತ್ತಿತ್ತು. ಆದರೆ ಪೂರ್ವ ಪಾಕಿಸ್ಥಾನದಲ್ಲಿನ ನೈಸರ್ಗಿಕ ಸಂಪತ್ತುಗಳನ್ನು ಮಾತ್ರ ತನ್ನ ಕಡೆಗೆ ಬಾಚಿಕೊಂಡಿತ್ತು.

ಇದಕ್ಕಿಂತ ಹೆಚ್ಚಾಗಿ 1970ರ ಡಿ.6ರಂದು ಪೂರ್ವ ಮತ್ತು ಪಶ್ಚಿಮ ಪಾಕಿಸ್ಥಾನವನ್ನು ಸೇರಿಕೊಂಡಂತೆ ಸಾರ್ವತ್ರಿಕ ಚುನಾವಣೆ ನಡೆದಿತ್ತು. ಪೂರ್ವ ಪಾಕಿಸ್ಥಾನದಲ್ಲಿನ 162 ಸ್ಥಾನಗಳಲ್ಲಿ 160 ಅನ್ನು ಶೇಕ್‌ ಮುಜಿºàರ್‌ ರೆಹಮಾನ್‌ ಅವರ ಅವಾಮಿ ಲೀಗ್‌ ತನ್ನದಾಗಿಸಿಕೊಂಡಿತ್ತು. ಅತ್ತ ಪಶ್ಚಿಮ ಪಾಕಿಸ್ಥಾನದಲ್ಲಿ ಝುಲ್ಫಿಕರ್‌ ಅಲಿ ಭುಟ್ಟೋ ಅವರ ಪಾಕಿಸ್ಥಾನ ಪೀಪಲ್ಸ್‌ ಪಾರ್ಟಿ 138 ಸೀಟುಗಳಲ್ಲಿ 81ರಲ್ಲಿ ಮಾತ್ರ ಗೆದ್ದಿತ್ತು. ಈ ಚುನಾವಣೆಯಲ್ಲಿ ಭಾರೀ ಬಹುಮತ ಪಡೆದಿದ್ದ ಶೇಕ್‌ ಮುಜಿಬುರ್ ರೆಹಮಾನ್‌ ಅವರೇ ಪ್ರಧಾನಿಯಾಗಬೇಕಾಗಿತ್ತು. ಇದಕ್ಕೆ ಬೇಕಾದ ಸಿದ್ಧತೆಯನ್ನೂ ನಡೆಸಿದ್ದರು. ಆದರೆ ಝುಲ್ಫಿಕರ್‌ ಭುಟ್ಟೋ ಅವರು ಸೇನೆಯ ಮನವೊಲಿಕೆ ಮಾಡಿ, ಮುಜಿºàರ್‌ ಅವರಿಗೆ ಪ್ರಧಾನಿ ಪಟ್ಟ ಸಿಗದಂತೆ ನೋಡಿಕೊಂಡರು.

ಇದನ್ನು ವಿರೋಧಿಸಿ ಮುಜಿಬುರ್ ಅವರು ಮಾ.3ರಂದು ಪ್ರತಿಭಟನೆ ಶುರು ಮಾಡಿದರು. ಇದನ್ನು ನಿಲ್ಲಿಸುವ ಸಲುವಾಗಿ ಪಾಕಿಸ್ಥಾನ ಸೇನೆ 170 ಮಂದಿಯನ್ನು ಹತ್ಯೆ ಮಾಡಿತ್ತು. ಇದಾದ ಬಳಿಕ ಮಾ.25ರಂದು ಮುಜಿಬುರ್ ಅವರ ಪಕ್ಷ ಪ್ರತಿಭಟನೆಯನ್ನು ಇನ್ನಷ್ಟು ಚುರುಕುಗೊಳಿಸಿತು. ಇದನ್ನು ಪೂರ್ಣ ಪ್ರಮಾಣದಲ್ಲಿ ತಡೆಯುವ ಸಲುವಾಗಿ ಆಗಿನ ಪಾಕಿಸ್ಥಾನದ ಮಿಲಿಟರಿ ಮುಖ್ಯಸ್ಥ ಯಾಹ್ಯಾ ಖಾನ್‌ ತನ್ನ ಸೇನೆಯನ್ನು ಬಳಸಿಕೊಂಡರು. ಇದಾದ ಮೇಲೆ ನಡೆದದ್ದು ಸಂಪೂರ್ಣ ನರಮೇಧ. ಅಂದರೆ ಸರಿಸುಮಾರು 3 ಲಕ್ಷ ಮಂದಿ ಈ ಸಂಘರ್ಷದಲ್ಲಿ ಹತ್ಯೆಗೀಡಾದರು. ಒಂದು ಕೋಟಿಗೂ ಅಧಿಕ ಮಂದಿ ಭಾರತಕ್ಕೆ ಓಡಿ ಬಂದರು.

ಭಾರತದಿಂದ ಬೆಂಬಲ
ಅವಾಮಿ ಲೀಗ್‌ ಪಕ್ಷ ನಡೆಸುತ್ತಿದ್ದ ಪ್ರತಿಭಟನೆಗೆ ಭಾರತ ಬೆಂಬಲ ನೀಡಿತು. ಅಲ್ಲದೆ ಗಡಿಯಲ್ಲಿ ಬಿಎಸ್‌ಎಫ್ ಅಲ್ಪ ಪ್ರಮಾಣದ ಸಹಾಯವನ್ನಷ್ಟೇ ಮಾಡಿತು. ಇದಕ್ಕೆ ಕಾರಣ, ಪಾಕಿಸ್ಥಾನದ ಆಂತರಿಕ ಘರ್ಷಣೆಯೊಳಗೆ ಮೂಗು ತೂರಿಸಬಾರದು ಎಂಬುದಷ್ಟೇ ಆಗಿತ್ತು.  ಆದರೆ ಪರಿಸ್ಥಿತಿ ಕೈಮೀರಿದ ಕಾರಣದಿಂದಾಗಿ 1971ರ ಎ.29 ಮತ್ತು ಮೇ 15ರಂದು ಭಾರತದ ಈಸ್ಟರ್ನ್ ಕಮಾಂಡ್‌, ಆಪರೇಷನ್‌ ಜಾಕ್‌ಪಾಟ್‌ ಶುರು ಮಾಡಿತು. ಈ ಮೂಲಕ ಬಾಂಗ್ಲಾ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸುತ್ತಿದ್ದವರಿಗೆ ಎಲ್ಲ ರೀತಿಯ ಸಹಾಯ ನೀಡಲಾಯಿತು.

ಯುದ್ಧಕ್ಕೆ ಇದು ಸಕಾಲವಲ್ಲ!
ಪೂರ್ವ ಪಾಕಿಸ್ಥಾನದಲ್ಲಿ ಹಿಂದೂಗಳನ್ನೇ ನೇರವಾಗಿ ಗುರಿಯಾಗಿಸಿಕೊಂಡು ಪಾಕಿಸ್ಥಾನದ ಸೇನೆ ನರಮೇಧ ನಡೆಸುತ್ತಿತ್ತು. ಈ ಬಗ್ಗೆ ಆಗಿನ ಪ್ರಧಾನಿ ಇಂದಿರಾ ಗಾಂಧಿಯವರು ಅಂತಾರಾಷ್ಟ್ರೀಯ ಸಮುದಾಯದ ಗಮನಕ್ಕೆ ತಂದಿದ್ದಲ್ಲದೆ ಅಲ್ಪಸಂಖ್ಯಾಕರ ಮೇಲೆ ನಡೆಯುತ್ತಿದ್ದ ಅನಾಚಾರದ ಬಗ್ಗೆ ಹೇಳಿದ್ದರು. ಆದರೆ ಅಂತಾರಾಷ್ಟ್ರೀಯ ಸಮುದಾಯ ಇದಕ್ಕೆ ಸ್ಪಂದಿಸಲಿಲ್ಲ.

ಹೀಗಾಗಿಯೇ ಎಪ್ರಿಲ್‌ -ಮೇಯಲ್ಲಿ ಭಾರತದ ಆಗಿನಾ ಭೂಸೇನಾ ಮುಖ್ಯಸ್ಥ ಜನರಲ್‌ ಸ್ಯಾಮ್‌ ಮಾಣೆಕ್‌ ಶಾ ಅವರಿಗೆ ಗೆರಿಲ್ಲಾ ಯುದ್ಧಕ್ಕಾಗಿ ಅವಾಮಿ ಲೀಗ್‌ಗೆ ಸಹಕಾರ ಮಾಡುವಂತೆ ಇಂದಿರಾ ಗಾಂಧಿ ಹೇಳಿದ್ದರು. ಅಷ್ಟೇ ಅಲ್ಲ, ಎಪ್ರಿಲ್‌ನಲ್ಲಿಯೇ ಪಾಕಿಸ್ಥಾನದ ವಿರುದ್ಧ ಯುದ್ಧಕ್ಕೆ ತಯಾರಾಗುವಂತೆ ಜ| ಸ್ಯಾಮ್‌ ಮಾಣೆಕ್‌ ಶಾ ಅವರಿಗೆ ಸೂಚಿಸಿದ್ದರು.

ಆದರೆ ಆಗ ಜ| ಮಾಣೆಕ್‌ ಶಾ ಒಪ್ಪಲಿಲ್ಲ. ಇದಕ್ಕೆ ಪ್ರಮುಖ ಕಾರಣ, ಆಗ ಸುರಿಯುತ್ತಿದ್ದ ಮುಂಗಾರು ಮಳೆ ಮತ್ತು ಯುದ್ಧಕ್ಕೆ ಯೋಧರನ್ನು ಸಿದ್ಧಪಡಿಸಲು ಬೇಕಾಗುವ ಸಮಯ. ಜ| ಮಾಣೆಕ್‌ ಶಾ ಅವರ ಈ ಸಲಹೆಯನ್ನು ಇಂದಿರಾ ಗಾಂಧಿ ಒಪ್ಪಿಕೊಂಡರು.

1971 ಡಿ.3
ಪೂರ್ವ ಪಾಕಿಸ್ಥಾನದಲ್ಲಿ ಗೆರಿಲ್ಲಾಗಳ ಕೈ ಮೇಲಾಗುತ್ತಿದ್ದಂತೆ, ಪಾಕಿಸ್ಥಾನ ಸೇನೆ ನಿಜವಾಗಿಯೂ ಅದುರಿತು. ಹೀಗಾಗಿಯೇ ಅದು ಭಾರತದ ಮೇಲೆ ದಾಳಿ ಶುರು ಮಾಡಿತು. 1971ರ ಡಿ.3ರ ಸಂಜೆ ಪಾಕಿಸ್ಥಾನ ವಾಯು ಸೇನೆ ಮತ್ತು ಭೂ ಸೇನೆ ಏಕಾಏಕಿ ಪಂಜಾಬ್‌ ಮತ್ತು ಜಮ್ಮು ಕಾಶ್ಮೀರದ ಕೆಲವೆಡೆ ದಾಳಿ ಶುರು ಮಾಡಿತು. ಅಂದು ರಾತ್ರಿಯೇ ರೇಡಿಯೋ ಮೂಲಕ ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಇಂದಿರಾ ಗಾಂಧಿ ಅವರು ಭಾರತವೂ ಯುದ್ಧಕ್ಕೆ ಸಿದ್ಧವಾಗಿದ್ದು, ತಕ್ಕ ಉತ್ತರ ನೀಡಲಿದೆ ಎಂದು ಘೋಷಿಸಿದ್ದರು.

ಅಂದು ರಾತ್ರಿಯೇ ಪಾಕಿಸ್ಥಾನದ ವಿರುದ್ಧ ಭಾರತೀಯ ವಾಯುಸೇನೆ ಎಲ್ಲ ರೀತಿಯಲ್ಲೂ ದಾಳಿ ಆರಂಭಿಸಿತ್ತು. ಮಾರನೇ ದಿನವಾದ ಡಿ.4 ಮತ್ತು 5 ರಂದು ಭಾರತೀಯ ನೌಕಾಪಡೆ ಕರಾಚಿ ಮೇಲೆ ದಾಳಿ ಮಾಡಿ, ಪಾಕಿಸ್ಥಾನದ ನೌಕಾದಳವನ್ನು ಅಕ್ಷರಶಃ ಹುಟ್ಟಡಗಿಸಿತ್ತು. ಈ ಯುದ್ಧದಲ್ಲಿ ಪಾಕಿಸ್ಥಾನದ 7 ಗನ್‌ ಬೋಟ್‌ಗಳು, ಒಂದು ಮಿನಿ ಸ್ವೀಪರ್ಸ್‌, ಒಂದು ಸಬ್‌ಮೆರಿನ್‌, 2 ಡೆಸ್ಟ್ರಾಯರ್ಸ್‌, 3 ಪೆಟ್ರೋಲ್‌ ಕ್ರಾಫ್ಟ್ ಗಳನ್ನು ನಾಶಪಡಿಸಲಾಯಿತು. ಅಲ್ಲದೆ 1,413 ಪಾಕ್‌ ಸೈನಿಕರನ್ನು ಸೆರೆಹಿಡಿಯಲಾಯಿತು. ಈ ಯುದ್ಧದಲ್ಲಿ ಪಾಕಿಸ್ಥಾನದ ನೌಕಾದಳದ ಅರ್ಧದಷ್ಟು ಶಕ್ತಿಯನ್ನು ಭಾರತ ನಾಶಪಡಿಸಿತ್ತು.

ಈ ಯುದ್ಧದಲ್ಲಿ ಎಲ್ಲದಕ್ಕಿಂತ ಮೊದಲು ದಾಳಿ ಶುರು ಮಾಡಿದ್ದು ಭಾರತೀಯ ವಾಯುಸೇನೆ. ಡಿ.3ರ ರಾತ್ರಿಯೇ ಪಾಕಿಸ್ಥಾನದ ದಾಳಿಗೆ ವಿರುದ್ಧವಾಗಿ ಪ್ರತಿ ಏಟು ನೀಡಿತು. ಭಾರತ 4,000 ಸೋರ್ಟೀಸ್‌ಗಳನ್ನು ಈ ಯುದ್ಧದಲ್ಲಿ ಬಳಸಿಕೊಂಡಿತು. ಪಶ್ಚಿಮ ಮತ್ತು ಪೂರ್ವ ಎರಡೂ ಕಡೆಗಳಲ್ಲಿ ಪಾಕಿಸ್ಥಾನದ ದಾಳಿಯನ್ನು ಸಮರ್ಥವಾಗಿ ಎದುರಿಸಿತು. ಪಾಕಿಸ್ಥಾನದ ಬಳಿ ಇದ್ದ ಬೇರೆ ಬೇರೆ ದೇಶಗಳ ಯುದ್ಧ ವಿಮಾನಗಳನ್ನು ಭಾರತದ ವಾಯುಸೇನಾ ವಿಮಾನಗಳು ನಾಶ ಮಾಡಿದವು. ಅಲ್ಲದೆ ಈ ಯುದ್ಧದಲ್ಲಿ ಪಾಕಿಸ್ಥಾನ 60ರಿಂದ 75 ಯುದ್ಧ ವಿಮಾನಗಳನ್ನು ಕಳೆದುಕೊಂಡಿತು.

ಭೂಸೇನೆಯೂ ಏಕಕಾಲದಲ್ಲಿ ಪೂರ್ವ ಮತ್ತು ಪಶ್ಚಿಮ ಪಾಕಿಸ್ಥಾನದ ಮೇಲೆ ದಾಳಿ ಮಾಡಿತು. ಪೂರ್ವ ಪಾಕಿಸ್ಥಾನ ದಲ್ಲಿ ಢಾಕಾ ವರೆಗೂ ಹೋದ ಭೂಸೇನೆ, ಅಲ್ಲಿನ ಜನರಲ್‌ ಅನ್ನು ಶರಣಾಗುವಂತೆ ಮಾಡಿತು. ಡಿ.16ರಂದು ಪಾಕಿಸ್ಥಾನದ ಈಸ್ಟರ್ನ್ ಕಮಾಂಡ್‌ನ‌ ಕಮಾಂಡರ್‌ ಲೆ| ಜ| ಎಎಕೆ ನಿಯಾಜಿ, ಭಾರತದ ಈಸ್ಟರ್ನ್ ಕಮಾಂಡ್‌ನ‌ ಕಮಾಂಡರ್‌ ಲೆ| ಜ|ಜಗಜಿತ್ ಸಿಂಗ್‌ ಅರೋರಾ ಅವರ ಮುಂದೆ ಶರಣಾದರು.

ಎಲ್ಲ ಸಿಬಂದಿ ಬಿಡುಗಡೆ
ಈ 13 ದಿನಗಳ ಯುದ್ಧದಲ್ಲಿ ಪಾಕಿಸ್ಥಾನದ 90 ಸಾವಿರ ಯೋಧರನ್ನು ಸೆರೆಹಿಡಿಯಲಾಯಿತು. ಬಳಿಕ ಎರಡು ನಡುವೆ ದೇಶಗಳ ಒಪ್ಪಂದವಾಗಿ ಭಾರತ ಈ ಎಲ್ಲರನ್ನೂ ಬಿಡುಗಡೆ ಮಾಡಲು ಒಪ್ಪಿಗೆ ನೀಡಿತು.

Advertisement

Udayavani is now on Telegram. Click here to join our channel and stay updated with the latest news.

Next