ಶಿರಸಿ: ಕಳೆದ ವರ್ಷದ ಮುಂಗಾರಿನಲ್ಲಿ ಅತಿ ವೃಷ್ಟಿಯಿಂದ ಮನೆ ಕಳೆದುಕೊಂಡ ಕುಟುಂಬಗಳಿಗೆ ಪುನರ್ ಮನೆ ನಿರ್ಮಾಣಕ್ಕೆ ನೆರವಿಲ್ಲ, ಬೆಳೆ ಹಾನಿಯಾದರೂ ಪರಿಹಾರ ಸಿಕ್ಕಿಲ್ಲ ಎಂಬ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾ ಹಿಂದುಳಿದ ವರ್ಗಗಳ ಸಮಿತಿ ಪ್ರಮುಖ ಎ. ರವೀಂದ್ರ ನಾಯ್ಕ ಶೀಘ್ರ ನೆರವು ಒದಗಿಸುವಂತೆ ಮುಖ್ಯಮಂತ್ರಿಗಳನ್ನು ಆಗ್ರಹಿಸಿದ್ದಾರೆ. ಅವರು ತಾಲೂಕಿನಲ್ಲಿ ಕಳೆದ ವರ್ಷದ ಮುಂಗಾರು ಮಳೆಯಲ್ಲಿ ಮನೆ ಬಿದ್ದುಹೋದ ನಿರಾಶ್ರಿತರ ಕುಟುಂಬಗಳ ಜೊತೆ ಸಮಾಲೋಚಿಸಿ ಸರಕಾರವನ್ನು ಒತ್ತಾಯಿಸಿ, ಮನೆ ನಿರ್ಮಾಣಕ್ಕೆ ಸಂಬಂಧಿಸಿದ ಉಳಿದ ಪರಿಹಾರ ನೆರವು ಹಣ ಬಿಡುಗಡೆ ಮಾಡದೇ, ವರ್ಷವಾದರೂ ಸರಕಾರ ನಿರ್ಲಕ್ಷ್ಯ ತೋರಿದೆ. ಉಳಿಯಲು ಮನೆ ಇಲ್ಲದ ಸಂತ್ರಸ್ತರು ಅತಂತ್ರ ಸ್ಥಿತಿಯಲ್ಲಿರುವ ನಿರಾಶ್ರಿತರಿಗೆ ಅತೀ ಶೀಘ್ರದಲ್ಲಿ ಬಾಕಿ ಉಳಿದಿರುವ ಮನೆ ನಿರ್ಮಾಣದ ಅನುದಾನ ಬಿಡುಗಡೆ ಮಾಡಬೇಕು ಎಂದಿದ್ದಾರೆ.
ಸಂತ್ರಸ್ತರಿಗೆ ರಾಜ್ಯ ಸರಕಾರವು ಪ್ರವಾಹದಿಂದ ಹಾನಿಗೀಡಾದ ಎ ಮತ್ತು ಬಿ ವರ್ಗದ ಮನೆಗಳ ಪುನರ್ ನಿರ್ಮಾಣಕ್ಕೆ ಐದು ಲಕ್ಷ ರೂ. ನೆರವು ಘೋಷಿಸಿ, ಅದರಲ್ಲಿ ತಕ್ಷಣ ಒಂದು ಲಕ್ಷ ರೂ. ಸಂತ್ರಸ್ತರ ಖಾತೆಗಳಿಗೆ ನೇರವಾಗಿ ಪಾವತಿಸಿದ್ದಿರುತ್ತದೆ. ಉಳಿದ ನಾಲ್ಕು ಲಕ್ಷ ರೂ. ಅನುದಾನ ನಿರ್ಮಾಣವಾಗುತ್ತಿರುವ ಮನೆಯ ಹಂತವಾರು ಜಿಪಿಎಸ್ ಆಧಾರದ ಮೇಲೆ ಬಿಡುಗಡೆ
ಮಾಡಲಾಗುವುದು. ಆದ್ದರಿಂದ ಕೂಡಲೇ ಮನೆ ನಿರ್ಮಾಣ ಪ್ರಾರಂಭಿಸಿ ಬೇಗನೆ ಪೂರ್ಣಗೋಳಿಸಬೇಕು ಎಂದು ಸ್ವತಃ ಮುಖ್ಯಮಂತ್ರಿ ಸಹಿಯುಳ್ಳ ಪತ್ರದಲ್ಲಿ ಸಂತ್ರಸ್ತರಿಗೆ 13 ಡಿಸೆಂಬರ್ 2019 ರಂದು ನೀಡಲಾಗಿತ್ತು. ಆದರೆ ಸಂತ್ರಸ್ತರು ಒಂದು ಲಕ್ಷ ರೂ. ಪ್ರಥಮ ಹಂತದ ಮನೆ ಕಾಮಗಾರಿ ಮುಗಿಸಿದರೂ ಉಳಿದ ಹಣ ಸರಕಾರದಿಂದ ಪಾವತಿ ಆಗದೇ ಜಿಲ್ಲಾದ್ಯಂತ ನಿರಾಶ್ರಿತರ ಕುಟುಂಬಗಳು ಪ್ರಸಕ್ತ ಮಳೆಗಾಲದಲ್ಲಿ ಜೋಪಡಿ ಮನೆಯಲ್ಲಿ ಉಳಿದುಕೊಳ್ಳುವ ಪ್ರಸಂಗ ಬಂದಿರುವುದು ವಿಷಾದಕರ ಎಂದಿದ್ದಾರೆ.
ಕಳೆದ ವರ್ಷದ ಅತೀವೃಷ್ಟಿಯಿಂದ ಒಟ್ಟು ಅಡಕೆ ಕ್ಷೇತ್ರ ಜಿಲ್ಲೆಯಲ್ಲಿ 31,124 ಹೇಕ್ಟರ್ ತೋಟದಲ್ಲಿ 18,946 ಹೇಕ್ಟರ್ ತೋಟ ಕೊಳೆರೋಗ ಬಂದು ಅಡಕೆ ಬೆಳೆಯಲ್ಲಿ ರೈತರಿಗೆ 313.29 ಕೋಟಿ ಹಾನಿಯಾಗಿದೆ ಎಂದು ತೋಟಗಾರಿಕೆ ಇಲಾಖೆಯಿಂದ ಸರಕಾರಕ್ಕೆ ವರದಿ ಸಲ್ಲಿಸಿದ್ದರೂ, ಈವರೆಗೂ ಪರಿಹಾರ ಸಿಕ್ಕಿಲ್ಲ ಎಂದೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದೊಡ್ನಳ್ಳಿ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ಇಬ್ರಾಹಿಂ ನಬಿಸಾಬ ಸೈಯದ್ ಮತ್ತು ಅತಿಕ್ರಮಣ ಹೋರಾಟ ಸಮಿತಿ ಸಂಚಾಲಕ ತಿಮ್ಮ ಮರಾಠಿ ಉಪಸ್ಥಿತರಿದ್ದರು.