ಬಂಗಾರಪೇಟೆ: ವಾಹನಗಳ ದಟ್ಟಣೆ ಕಡಿಮೆ ಮಾಡುವ ದೃಷ್ಟಿಯಿಂದ ಪಟ್ಟಣದ ಬೂದಿಕೋಟೆ ರಸ್ತೆಗೆ ನೇರವಾಗಿದ್ದ ರೈಲ್ವೆ ಕ್ರಾಸಿಂಗ್ ಅನ್ನು ಬದಲಾವಣೆ ಮಾಡಲಾಗಿತ್ತು. ಇದರಿಂದ ವಾಹನ ದಟ್ಟಣೆ ಕಡಿಮೆಯಾಗಿಲ್ಲ.
ತಾಲೂಕಿನ ಹುಲಿಬೆಲೆ, ಆಲಂಬಾಡಿ ಜ್ಯೋತೇನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ದೊಡ್ಡದ್ಯಾವರ ಜಾತ್ರೆ ನಡೆಯುತ್ತಿರುವುದರಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಇದರಿಂದ ರೈಲ್ವೆ ಕ್ರಾಸಿಂಗ್ ಬಳಿ 3 ಕಿ.ಮೀ.ವರೆಗೂ ಟ್ರಾಫಿಕ್ ಉಂಟಾಗುತ್ತಿದೆ. ವಾಹನ ಚಾಲಕರು ರೈಲ್ವೆ ಹಳಿ ದಾಟಲು 3 ಗಂಟೆ ಉರಿ ಬಿಸಿಲಿನಲ್ಲೇ ಕಾಯಬೇಕಿದೆ.
ಬಂಗಾರಪೇಟೆ-ಮಾಲೂರು ಮುಖ್ಯ ರಸ್ತೆಯಲ್ಲಿ ಸಂಚರಿಸುವ ದ್ವಿಚಕ್ರ ಸೇರಿ ಭಾರೀ ತೂಕದ ವಾಹನಗಳು ಸೇಟ್ಕಾಂಪೌಂಡ್ ವಾರ್ಡ್‌ನಲ್ಲಿರುವ ರೈಲ್ವೆ ಕ್ರಾಸಿಂಗ್ ಬಳಿಯಲ್ಲೇ ರೈಲ್ವೆ ಹಳಿ ದಾಟಬೇಕು. ಬಿಸಿಲು ಹೆಚ್ಚಿರುವ ಕಾರಣ ಚಿಕ್ಕ ಮಕ್ಕಳು, ಮಹಿಳೆಯರು, ವೃದ್ಧರು, ಟ್ರಾಫಿಕ್ ಸಮಸ್ಯೆಯಲ್ಲಿ ಸಿಲುಕಿ ಮುಂದಕ್ಕೂ ಹೋಗದೆ, ಹಿಂದಕ್ಕೂ ಹೋಗಲಾಗದೇ ಸುಡು ಬಿಲಿಸಿನಲ್ಲೇ ಹೈರಾಣಾಗುತ್ತಿದ್ದಾರೆ.
ಪಟ್ಟಣದ ಬಸ್ ನಿಲ್ದಾಣದಿಂದ ಅರ್ಧ ಕಿ.ಮೀ. ದೂರದಲ್ಲಿ ಬಂಗಾರಪೇಟೆ-ಮಾಲೂರು ಮುಖ್ಯರಸ್ತೆಗೆ ಅಡ್ಡಲಾಗಿ ಕೋಲಾರ ರೈಲು ಮಾರ್ಗ ಹಾದು ಹೋಗಿದ್ದು, 3 ತಿಂಗಳಿಂದೀಚೆಗೆ ಈ ಟ್ರಾಫಿಕ್ ಸಮಸ್ಯೆ ಉಂಟಾಗಿದೆ. ರಸ್ತೆಯಲ್ಲಿ ಓಡಾಡುವ ವಾಹನ ಸವಾರರು 10 ಅಡಿಗಳ ರೈಲು ಮಾರ್ಗ ದಾಟಬೇಕಾದರೆ ಒಂದು ಕಿ.ಮೀ. ಯೂ-ಟರ್ನ್ ಮಾಡಿಕೊಂಡು ಬರಬೇಕಾಗಿದೆ.
ಪಟ್ಟಣದ ರೈಲು ನಿಲ್ದಾಣದಲ್ಲಿ ಕೋಲಾರ ಕಡೆಗೆ ಹೋಗುವ ರೈಲು ನಿಲ್ಲುವ ಪ್ಲಾಟ್ಫಾರಂ ಅನ್ನು ಮೇಲ್ದರ್ಜೆಗೇರಿಸುವ ಉದ್ದೇಶದಿಂದ ಹಳಿ ದಾಟಲು ಇದ್ದ ಹಳೇ ಮಾರ್ಗ ಮುಚ್ಚಿ, ಸ್ವಲ್ಪ ದೂರದಲ್ಲಿ ಮತ್ತೂಂದು ಮಾರ್ಗ ಮಾಡಲಾಗಿದೆ. ಇದಕ್ಕಾಗಿ ರೈಲ್ವೆ ಹಳಿ ಪಕ್ಕದಲ್ಲೇ ಹೊಸದಾಗಿ ರಸ್ತೆ ನಿರ್ಮಿಸಿದ್ದು, ಅದು ಕಿರಿದಾಗಿರುವ ಕಾರಣ ಬಸ್, ಲಾರಿ, ಟಿಪ್ಪರ್ ಭಾರೀ ವಾಹನಗಳು ಬಂದರೆ ಅವು ರೈಲ್ವೆ ಹಳಿ ದಾಟುವವರೆಗೂ ಬೇರೇ ವಾಹನಗಳು ಗೇಟಿನ ಮುಂದೆ ಕಾಯಬೇಕಾದ ಪರಿಸ್ಥಿತಿ ಇದೆ. ಇದರಿಂದ ಟ್ರಾಫಿಕ್ ಸಮಸ್ಯೆ ಉಂಟಾಗಲು ಪ್ರಮುಖ ಕಾರಣವಾಗಿದೆ.
ಮೊದಲು ಬಂಗಾರಪೇಟೆ-ಕೋಲಾರ ರೈಲು ಮಾರ್ಗವನ್ನು ಹಾದು ಹೋಗಲು 2ರಿಂದ 5 ಸೆಕೆಂಡ್ ಸಾಕಾಗಿತ್ತು. ಆದರೆ, ರೈಲ್ವೆ ಇಲಾಖೆ ಅವೈಜ್ಞಾನಿಕ ನೀತಿಯಿಂದ ರಸ್ತೆಯಲ್ಲಿ ಗಂಟೆ ಗಟ್ಟಲೆ ಕಾಯಬೇಕಿದೆ. ಮತ್ತೆ ಇದೇ ಮಾರ್ಗದಲ್ಲಿ ಅರ್ಧ ಕಿ.ಮೀ. ದೂರದಲ್ಲಿ ಬಂಗಾರಪೇಟೆ -ಬೆಂಗಳೂರು ಡಬ್ಬಲ್ ಟ್ರಾಕ್‌ನ ಗೇಟು ಇದ್ದು, ಇಲ್ಲಿಯೂ ಗಂಟೆಗಟ್ಟಲೇ ಕಾಯಬೇಕಾದ ಪರಿಸ್ಥಿತಿ ಇದೆ. ಪ್ರತಿ ಅರ್ಧ ಗಂಟೆಗೊಮ್ಮೆ ಗೇಟ್ ಹಾಕಲಾಗುತ್ತದೆ. ಪಟ್ಟಣದ ಬಸ್ ನಿಲ್ದಾಣದಿಂದ ಮಾಲೂರು ರಸ್ತೆ ಮಾರ್ಗವಾಗಿ ಒಂದು ಕಿ.ಮೀ. ಕ್ರಮಿಸುವ ದೂರಕ್ಕೆ 1 ರಿಂದ 2 ಗಂಟೆ ಕಾಯಬೇಕಾಗಿದೆ. ಶಾಲಾ ಮಕ್ಕಳು, ಉದ್ಯೋಗಸ್ಥರು, ರೈತರು, ದಿನಗೂಲಿ ಕಾರ್ಮಿಕರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಈ ರಸ್ತೆಯಲ್ಲಿ ಓಡಾಡುತ್ತಾರೆ. ರೈಲ್ವೆ ಅಧಿಕಾರಿಗಳು ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳಿಸಿ ಅನುಕೂಲ ಕಲ್ಪಿಸಲಿ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.