ಹೈದರಾಬಾದ್: ಜಮ್ಮಿಕುಂಟ ಅನ್ನೋದು ತೆಲಂಗಾಣ ರಾಜ್ಯದ ಕರೀಮ್‌ನಗರ್ ಜಿಲ್ಲೆಯ ಒಂದು ಸಣ್ಣ ಪಟ್ಟಣ. ಈ ಪಟ್ಟಣ ಪ್ರತಿ ದಿನ ಬೆಳಗ್ಗೆ 7 ಗಂಟೆ 54 ನಿಮಿಷಕ್ಕೆ ಸರಿಯಾಗಿ ಸಂಪೂರ್ಣ ಸ್ತಬ್ಧವಾಗುತ್ತದೆ. ರಸ್ತೆಯಲ್ಲಿ ಸಂಚರಿಸುವ ಲಾರಿ, ಬಸ್ಸು, ಕಾರು, ಬೈಕ್, ಸೈಕಲ್‌ಗಳ ಓಡಾಟಕ್ಕೆ ಸಡನ್ನಾಗಿ ಬ್ರೇಕ್ ಬೀಳುತ್ತದೆ. ವಾಹನ ಚಾಲಕರೆಲ್ಲರೂ ಗಾಡಿ ಆಫ್ ಮಾಡಿ ಕೆಳಗಿಳಿದು ನಿಲ್ಲುತ್ತಾರೆ. ಮಾತ್ರವಲ್ಲ, ನಡೆದಾಡುವ ಜನರೂ ಕೊಂಚ ಕೂಡ ಕದಲದೆ ನಿಂತಲ್ಲೇ ನಿಲ್ಲುತ್ತಾರೆ…
ಹೀಗೆ ಜನರೆಲ್ಲ ನಿಲ್ಲುವಷ್ಟರಲ್ಲಿ ಪಟ್ಟಣದ ಕೇಂದ್ರ ಭಾಗದಲ್ಲಿರುವ ವೃತ್ತದಲ್ಲಿನ ಸ್ಪೀಕರ್‌ಗಳಿಂದ ಧ್ವನಿಯೊಂದು ಮೊಳಗುತ್ತದೆ. ಆ ಧ್ವನಿ ಕೇಳಿ ಎಲ್ಲರ ಎದೆ ಗರ್ವದಿಂದ ಉಬ್ಬುತ್ತದೆ. ಕೈಗಳು ಹಣೆಗೆ ಅಂಟಿಕೊಂಡು ಸೆಲ್ಯೂಟ್ ಹೊಡೆಯುತ್ತವೆ! ಸರಿಯಾಗಿ 52 ಸೆಕೆಂಡು ಪಟ್ಟಣ ಹೀಗೆ ಸ್ತಬ್ಧ ಸ್ಥಿತಿಯಲ್ಲಿರುತ್ತದೆ. 53ನೇ ಸೆಕೆಂಡ್‌ಗೆ ಜನರೆಲ್ಲ “ಜೈ ಹಿಂದ್’ ಘೋಷ ಕೂಗಿ ನಿಂತ ಸ್ಥಳದಿಂದ ಚದುರುತ್ತಾರೆ.
ಅಂದಹಾಗೆ ಜಮ್ಮಿಕುಂಟ ಪಟ್ಟಣದ ಹೃದಯ ಭಾಗದಲ್ಲಿರುವ ಸರ್ಕಲ್‌ನಲ್ಲಿ ಸ್ಪೀಕರ್‌ಗಳಿಂದ ಹೊರಹೊಮ್ಮುವ ಆ ಧ್ವನಿ ಬೇರೇನೂ ಅಲ್ಲ, ನಮ್ಮ ರಾಷ್ಟ್ರಗೀತೆ “ಜನ ಗಣ ಮನ ಅಧಿನಾಯಕ ಜಯಹೇ…’ 45 ಸಾವಿರ ಮಂದಿ ವಾಸವಿರುವ ಪಟ್ಟಣದಲ್ಲಿ ಕಳೆದ ಒಂದು ವಾರದಿಂದ ಪ್ರತಿದಿನ ಮುಂಜಾನೆ 7.54ಕ್ಕೆ ಜನ ಗಣ ಮನ ಮೊಳಗುತ್ತಿದೆ. ಈ ಪ್ರಕ್ರಿಯೆಯಲ್ಲಿ ಪಟ್ಟಣದ ಬಹುತೇಕ ಎಲ್ಲ ನಾಗರಿಕರು ಭಾಗಿಯಾಗುತ್ತಾರೆ. ಇದಕ್ಕೆಲ್ಲ ಕಾರಣ ಅಲ್ಲಿನ ಪೊಲೀಸ್ ಇನ್ಸ್‌ಪೆಕ್ಟರ್ ಪ್ರಶಾಂತ್ ರೆಡ್ಡಿ.
ಪೊಲೀಸ್ ಆದೇಶವಲ್ಲ: ಇನ್ಸ್‌ಪೆಕ್ಟರ್ ಹೇಳಿದ್ರು ಅಂದ್ರೆ ಜನ ಕೇಳೆª ಇರ್ತಾರಾ? ಅಂದುಕೊಳ್ಳಬೇಡಿ, ಏಕೆಂದರೆ ರೆಡ್ಡಿ ಅವರು “ಎಲ್ಲರೂ ರಾಷ್ಟ್ರಗೀತೆ ಹಾಡಲೇಬೇಕು’ ಎಂದೇನೂ ಫರ್ಮಾನು ಹೊರಡಿಸಿಲ್ಲ. ಆದರೆ ಭಾರತದಲ್ಲಿ ವಾಸವಿರುವ ಎಲ್ಲರಿಗೂ ರಾಷ್ಟ್ರಗೀತೆ ಹಾಡಲು ಬರಬೇಕು ಅನ್ನೋ ಸದುದ್ದೇಶ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಪಟ್ಟಣದಾದ್ಯಂತ ಸರ್ವೆ ನಡೆಸಿದಾಗ ಶೇ.90ರಷ್ಟು ಜನರಿಗೆ ರಾಷ್ಟ್ರಗೀತೆ ಬರುವುದೇ ಇಲ್ಲ ಎಂಬ ಆಘಾತಕಾರಿ ಅಂಶ ಗೊತ್ತಾಗಿದೆ. ಕೂಡಲೇ ಕಾರ್ಯಪ್ರವೃತ್ತರಾದ ರೆಡ್ಡಿ, ಪ್ರತಿ ದಿನ ಮುಂಜಾನೆ “ಜನ ಗಣ ಮನ’ ಹಾಡಿಸುವ ವ್ಯವಸ್ಥೆ ಮಾಡಿದ್ದಾರೆ. ಪಟ್ಟಣದ ನಡುವಿರುವ ವೃತ್ತವೊಂದರಲ್ಲಿ 16 ಸ್ಪೀಕರ್‌ಗಳನ್ನು ಅಳವಡಿಸಿರುವ ಅವರು, ಬೆಳಗ್ಗೆ 7.54ಕ್ಕೆ ಸರಿಯಾಗಿ ರಾಷ್ಟ್ರಗೀತೆ ಹಾಕುತ್ತಾರೆ. ಹೀಗೆ ಮಾಡುವುದರಿಂದ ಪಟ್ಟಣದ ಜನರೆಲ್ಲ ರಾಷ್ಟ್ರಗೀತೆ ಕಲಿಯುತ್ತಾರೆ ಎಂಬ ವಿಶ್ವಾಸ ಅವರದ್ದಾಗಿದೆ.
ಕ್ರೈಂ ಕಂಟ್ರೋಲ್: ರಾಷ್ಟ್ರಗೀತೆ ಹಾಡಿಸುವುದು ಕೇವಲ ದೇಶಭಕ್ತಿ ಮೂಡಿಸಲಷ್ಟೇ ಅಲ್ಲ. ಬದಲಿಗೆ ಅದರಿಂದ ಅಪರಾಧ ಕೃತ್ಯಗಳನ್ನೂ ತಡೆಯಬಹುದು ಎಂಬುದು ಇನ್ಸ್‌ಪೆಕ್ಟರ್ ರೆಡ್ಡಿ ಅವರ ವಾದ. “ರಾಷ್ಟ್ರಗೀತೆ ಹಾಡುವ ಮೂಲಕ ದಿನ ಆರಂಭಿಸಿದರೆ ಜನರ ಮನಸ್ಸು ಶುದ್ಧವಾಗುತ್ತದೆ. ಒಳ್ಳೆಯ ಆಲೋಚನೆಗಳು ಮೊಳೆಯುತ್ತವೆ. ಅಪರಾಧಕೃತ್ಯಗಳಲ್ಲಿ ತೊಡಗಿದವರ ಮನ ಪರಿವರ್ತನೆಯಾಗುತ್ತದೆ. ಹೀಗಾಗಿ ಈ ಪ್ರಕ್ರಿಯೆ ಮುಂದುವರಿಸಿಕೊಂಡು ಹೋಗುತ್ತೇನೆ’ ಎನ್ನುತ್ತಾರೆ ರೆಡ್ಡಿ. ಅಲ್ಲದೆ, ಸಿನಿಮಾ ಮಂದಿರಗಳಲ್ಲಿ ಕತ್ತಲಲ್ಲಿ ರಾಷ್ಟ್ರಗೀತೆ ಹಾಡುವುದಕ್ಕಿಂತ ಊರ ಮಧ್ಯೆ ಊರ ಜನರೆಲ್ಲ ಒಟ್ಟಾಗಿ “ಜನ ಗಣ ಮನ’ ಘೋಷ ಮೊಳಗಿಸಿದಾಗ ಅದರ ಗೌರವ ಹೆಚ್ಚುತ್ತದೆ,’ ಎಂಬುದು ಇನ್ಸ್‌ಪೆಕ್ಟರ್ ರೆಡ್ಡಿ ಅವರ ಅಭಿಪ್ರಾಯ.