Advertisement
ಇದು ಜಾರ್ಖಂಡ್‌ನಿಂದ ಬದುಕಿಗಾಗಿ ಕೆಲಸ ಅರಸಿ ಬಂದ ದೇವಿಕಾಳ (ಹೆಸರು ಬದಲಾಯಿಸಲಾಗಿದೆ) ಕಥೆ. ಗಾರ್ಮೆಂಟ್ಸ್ ಒಂದರಲ್ಲಿ ಕೆಲಸ ಮಾಡುವ ದೇವಿಕಾ, ಅಲ್ಲಿ ಜೀತದಾಳಿಗಿಂತಲೂ ಕೀಳಾಗಿ ಬದುಕು ಸಾಗಿಸುತ್ತಿದ್ದಾರೆ.ತನ್ನ ಬದುಕು ಹಾಸ್ಟೆಲ್ ವಾರ್ಡ್‌ನ್ ಹಾಗೂ ಗಾರ್ಮೆಂಟ್ಸ್‌ಗಳ ಮೇಲಾಧಿಕಾರಿಗಳ ಹಿಡಿತದಲ್ಲಿರುವ ಬಗ್ಗೆ ಉದಯವಾಣಿಯೊಂದಿಗೆ ಅಳಲು ತೋಡಿಕೊಂಡ ಆಕೆ, ಅಲ್ಲಿನ ದೌರ್ಜನ್ಯದ ಚಿತ್ರಣ ಬಿಡಿಸಿಟ್ಟರು. ಇದು ದೇವಿಕಾ ಒಬ್ಬರ ಕಥೆಯಲ್ಲ. ಅನ್ಯ ನಾಡಿನಿಂದ ಬಂದು ಇಲ್ಲಿನ ಗಾರ್ಮೆಂಟ್ಸ್‌ಗಳಲ್ಲಿ ದುಡಿಯುತ್ತಿರುವ ಬಹುತೇಕ ಹೆಣ್ಣು ಮಕ್ಕಳು ಇದೇ ಪರಿಸ್ಥಿತಿಯನ್ನೇ ಎದುರಿಸುತ್ತಿದ್ದಾರೆ.
Related Articles
Advertisement
ಜೀತದಾಳುಗಳಿಗಿಂತ ಕಡೆ ನಮ್ಮ ಬದುಕು: ಗಾರ್ಮೆಂಟ್ಸ್‌ನಲ್ಲಿ ಕೆಲಸ ಆರಂಭಿಸುತ್ತಿದ್ದಂತೆ ಶುರುವಾಗುತ್ತದೆ ನರಕ ಯಾತನೆ. ಗಾರ್ಮೆಂಟ್ಸ್‌ನ ಒಂದು ಶಾಖೆಯಲ್ಲಿ ನನಗೆ ಉದ್ಯೋಗ ಸಿಕ್ಕಿತು. ಆದರೆ, ಏನು ಕೆಲಸ ಎಂದು ಗೊತ್ತಿರಲಿಲ್ಲ. ಸ್ವಲ್ಪ ಹೊತ್ತಿನಲ್ಲಿ ಅಲ್ಲಿ ಬಂದ ಮೇಲ್ವಿಚಾರಕ ಯಾಕಿಷ್ಟು ಕೆಲಸ ಬಾಕಿ ಉಳಿಸಿಕೊಂಡಿದ್ದಿಯಾ ಎಂದು ಪ್ರಶ್ನಿಸಿ ತಲೆಗೆ ಮೊಟಕಿದ. ರಾತ್ರಿ ಎಷ್ಟೇ ತಡವಾಗಲಿ, ಕೆಲಸ ಮುಗಿಸಿಯೇ ಹಾಸ್ಟೆಲ್‌ಗೆ ಹೋಗಬೇಕು. ಹಾಸ್ಟೆಲ್‌ಗೆ ಹೋದರೆ ಅಲ್ಲೂ ನೆಮ್ಮದಿಯ ನಿದ್ದೆ ಇಲ್ಲ. ತಿಗಣೆ, ಜಿರಳೆ ಕಾಟದ ಜತೆ ಸೊಳ್ಳೆಗಳೂ ಸಾಕಷ್ಟಿರುತ್ತವೆ. ಹೊಟ್ಟೆ ತುಂಬ ಊಟ ಸಿಗುವುದೂ ಕಷ್ಟ ಎನ್ನುವ ಪರಿಸ್ಥಿತಿ ಎನ್ನುತ್ತಾರೆ ಮಣಿಪುರದಿಂದ ಕೆಲಸಕ್ಕಾಗಿ ಬಂದ ಪಾರ್ವತಿ (ಹೆಸರು ಬದಲಾಯಿಸಲಾಗಿದೆ).
ಮರುದಿನ ಕೆಲಸಕ್ಕೆ ಹೋದಾಗ ವಾಸ್ತವ ಸ್ಥಿತಿ ಅರ್ಥವಾಯಿತು. ಫ್ಲೋರ್ ಮೇಲ್ವಿಚಾರಕ, ಕ್ವಾಲಿಟಿ ಮ್ಯಾನೇಜರ್, ಪ್ರೊಡಕ್ಷನ್ ಮ್ಯಾನೇಜರ್, ಮೇಷ್ಟ್ರು ಹಾಗೂ ಇವರೆಲ್ಲರಿಗೂ ಒಬ್ಬ ಮೇಲ್ವಿಚಾರಕ ಮತ್ತು ಮಾನವ ಸಂಪನ್ಮೂಲ ಅಧಿಕಾರಿ… ಹೀಗೆ ಎಲ್ಲರೂ ನಮ್ಮನ್ನು ಶೋಷಣೆ ಮಾಡುತ್ತಾರೆ. ಸರಿಯಾಗಿ ಬಟ್ಟೆಗಳನ್ನು ಹೊಲಿಯದಿದ್ದರೆ ಅದನ್ನು ಮುಖದ ಮೇಲೆ ಎಸೆಯುತ್ತಾರೆ. ಕೆಲವೊಮ್ಮೆ ಹೊಡೆದು ಎಲ್ಲರೆದುರೇ ಅವಮಾನ ಮಾಡುತ್ತಾರೆ. ಅಲ್ಲದೆ ಅವರಿಗೆ ಬೇಕಾದಾಗ ಇಲ್ಲಿನ ಪುರುಷ ಉದ್ಯೋಗಿಗಳಿಂದ ಮದ್ಯ ತರಿಸುತ್ತಾರೆ ಎನ್ನುತ್ತಾರೆ ಪಶ್ಚಿಮ ಬಂಗಾಳದಿಂದ ಬಂದತಹ ಮತ್ತೋರ್ವ ಉದ್ಯೋಗಿ ದುರ್ಗಾ.
ಒಂದು ವರ್ಷದವರೆಗೂ ಊರಿಗೆ ಹೋಗುವಂತಿಲ್ಲ. ಇಲ್ಲಿನವರು ಅವರನ್ನು ಪರಕೀಯರಂತೆ ಕಾಣುತ್ತಾರೆ. ಸಂಬಳವೂ ಕಡಿಮೆ. 6 ರಿಂದ 7 ಸಾವಿರ ಸಂಬಳ, ಹೆಚ್ಚೆಂದರೆ 8 ಸಾವಿರ. ಇಎಸ್‌ಐ ಪಿಎಫ್ ಎಂದು ಸಂಬಳ ಹಿಡಿದುಕೊಳ್ಳುತ್ತಾರೆ. ಸ್ಥಳೀಯರಾಗಿಇಲ್ಲದಿರುವುದರಿಂದ ಅದು ಅವರಿಗೆ ಸಿಗುವುದಿಲ್ಲ.
ಹಾಸ್ಟೆಲ್ ರೂಮ್‌ಗಿಂತ ಹಂದಿಗೂಡು ವಾಸಿ!: ಹಾಸ್ಟೆಲ್ ಹಾಗೂ ಗಾರ್ಮೆಂಟ್ ಎರಡು ಕಡೆಗಳಲ್ಲೂ ಕುಡಿಯುವ ನೀರು ಹಾಗೂ ಶೌಚಾಲಯಗಳು ಚೆನ್ನಾಗಿರುವುದಿಲ್ಲ. ಕುಡಿಯುವ ನೀರಿಗೆಂದಿರುವ ಟ್ಯಾಂಕ್ ಅನ್ನು ಸ್ವತ್ಛಗೊಳಿಸುವುದೇ ಅಪರೂಪ. ಮೇಲಧಿಕಾರಿಗಳು ಫೀಲ್ಟರ್ ನೀರು ತರಸಿಕೊಂಡು ಕುಡಿಯುತ್ತಾರೆ. ಆ ನೀರು ಈ ನೌಕರರಿಗೆ ದೊರೆಯುವುದಿಲ್ಲ. ಅವರು ಟ್ಯಾಂಕ್ ನೀರನ್ನೇ ಬಟ್ಟೆ ಮುಚ್ಚಿ ಹಿಡಿದುಕೊಂಡು ಕುಡಿಯುತ್ತಾರೆ. ಹಾಸ್ಟೆಲ್ ರೂಂ.ಗಳು 4 ಜನರಿಗೆ ಇರಲು ಯೋಗ್ಯವಾಗಿರುತ್ತದೆ. ಆದರೆ ಅದರಲ್ಲಿ 8 ರಿಂದ 10 ಮಂದಿ ಇರುತ್ತಾರೆ. ಇದಕ್ಕಿಂತ ಹಂದಿಗೂಡು ವಾಸಿ ಎಂದು ಹೇಳುತ್ತಾರೆ.
ಮಧ್ಯರಾತ್ರಿಯೇ ಹಾಸ್ಟೆಲ್‌ನಿಂದ ಹೊರಕ್ಕೆ ಊರಿನ ನೆನಪಾಗಿ ನಾವು ಹೋಗಬೇಕೆಂದು ರಜೆ ಕೇಳಿದರೆ ಕೊಡುವುದಿಲ್ಲ. ಹಠ ಹಿಡಿದರೂ ಪ್ರಯೋಜನವಿಲ್ಲ. ಒಂದು ವೇಳೆ ನಾವು ಅವರೊಂದಿಗೆ ಜಗಳವಾಡಿಕೊಂಡು ಊರಿಗೆ ಹೋಗಿ ಮತ್ತೆಗಾರ್ಮೆಂಟ್ಗೆ ಬಂದರೆ ನಮ್ಮನ್ನು ಕೆಲಸಕ್ಕೆ ಸೇರಿಸಿಕೊಳ್ಳುವುದಿಲ್ಲ. ಹಾಸ್ಟೆಲ್ ವಾರ್ಡ್‌ನ್ ಜತೆ ಏರು ದನಿಯಲ್ಲಿ ಮಾತನಾಡಿದರೆ ಮಧ್ಯರಾತ್ರಿಯೇ ನಮ್ಮನ್ನು ಹೊರ ಹಾಕುತ್ತಾರೆ. ಬಹುತೇಕರು ಇದೇ ತೊಂದರೆ ಎದುರಿಸುತ್ತಿದ್ದಾರೆ ಎನ್ನುತ್ತಾರೆ ಹಾಸ್ಟೆಲ್‌ಗಳಲ್ಲಿರುವ ಅನ್ಯ ರಾಜ್ಯದ ಮಹಿಳೆಯರು. ಮೂರು ತಿಂಗಳ ಹಿಂದೆ ರಾಂಚಿ ಮೂಲದ ಗೆಳತಿಯೊಬ್ಬಳು ಹಾಸ್ಟೆಲ್‌ನಲ್ಲಿ ನೀಡುವ ಊಟ ಹಳಸಿದೆ ಎಂದು ವಾರ್ಡ್‌ನ್‌ಗೆ ತಿಳಿಸಿದಕ್ಕೆ ಆಕೆಯೊಂದಿಗೆ ಕೆಟ್ಟದಾಗಿ ನಡೆದುಕೊಂಡು ರಾತ್ರಿಯೇ ಬ್ಯಾಗ್‌ಗಳನ್ನು ಮುಖದ ಮೇಲೆ ಎಸೆದು ಇಲ್ಲಿಂದ ಹೊರಡು ಎಂದುಬಿಟ್ಟರು. ಆಕೆ ಎಷ್ಟೇ ಮನವಿ ಮಾಡಿ, ಅತ್ತು ಕರೆದರೂ ಕರಗಲಿಲ್ಲ. ಮರುದಿನ ಆಕೆಯನ್ನು ಕೆಲಸದಿಂದ ತೆಗೆದು ಹಾಕಿ 2 ಸಾವಿರ ರೂ. ನೀಡಿದರು ಎಂದು ಹಾಸ್ಟೆಲ್‌ನಲ್ಲಿ ನಡೆಯುವ ದೌರ್ಜನ್ಯದ ಬಗ್ಗೆ ಗಾರ್ಮೆಂಟ್ಸ್ ನೌಕರರು ವಿವರಿಸುತ್ತಾರೆ. ಶ್ರುತಿ ಮಲೆನಾಡತಿ