Advertisement

ಗೆಜ್ಜೆ ಬಿಚ್ಚುವ ಹೊತ್ತು ಕಾಡುವ ಒಂದಷ್ಟು ಪ್ರಶ್ನೆಗಳು…

05:59 PM May 23, 2019 | mahesh |

ದೀಪಾವಳಿ ಬಳಿಕ ತಿರುಗಾಟ ಆರಂಭಿಸುವುದು ಯಕ್ಷಗಾನ ಮೇಳಗಳ ಪದ್ಧತಿ. ತಿರುಗಾಟ ಪೂರೈಸಿ ಪತ್ತನಾಜೆಗೆ ಹೊರಟ ಠಾವಿಗೆ ಮರಳಿ ಬಂದು ತಿರುಗಾಟ ಮುಕ್ತಾಯ ಮಾಡುವುದು ಕ್ರಮ. ಇದಕ್ಕೆ ಮೇಳ ಒಳಹೋಗುವುದು ಅನ್ನುತ್ತಾರೆ. ದ.ಕ, ಉಡುಪಿ, ಉ.ಕ, ಕಾಸರಗೋಡು ಜಿಲ್ಲೆಗಳಲ್ಲಿ ದೇವಸ್ಥಾನಗಳಿಂದ ಹೊರಡುವ ಮೇಳಗಳಲ್ಲಿ ಹರಕೆ ಮೇಳಗಳು ಹಾಗೂ ವೃತ್ತಿಪರ ಮೇಳಗಳು ಅಂತ 45ಕ್ಕೂ ಅಧಿಕ ಸಂಖ್ಯೆಯಲ್ಲಿ ತಿರುಗಾಟಗೈದವು. ಈ ಎಲ್ಲ ಮೇಳಗಳು ಆರು ತಿಂಗಳು ಕಾಲಮಿತಿಯ ಅಥವಾ ರಾತ್ರಿಯಿಡೀ ಆಟದ ನೆಲೆಯಲ್ಲಿ ತಿರುಗಾಟ ನಡೆಸಿ ರಂಜಿಸಿವೆ. ಬಡಗುತಿಟ್ಟಿನ ವೃತ್ತಿಪರ ಟೆಂಟ್‌ ಮೇಳಗಳಾದ ಸಾಲಿಗ್ರಾಮ ಮತ್ತು ಪೆರ್ಡೂರು ಮೇಳಗಳು ಹೊಸ ಸಾಮಾಜಿಕ, ಕಾಲ್ಪನಿಕ ಪ್ರಸಂಗದೊಂದಿಗೆ. ಪೌರಾಣಿಕ ಪ್ರಸಂಗಗಳನ್ನು ಕೂಡ ಪ್ರದರ್ಶಿಸಿವೆ.

Advertisement

ಜಲವಳ್ಳಿ ಮೇಳವು ಕೂಡ ಟೆಂಟ್‌ ಮೇಳದ ಸ್ವರೂಪದಲ್ಲಿ ತಿರುಗಾಟ ಮಾಡಿ ಹೊಸತು, ಹಳತು ಎರಡೂ ರೀತಿಯ ಪ್ರಸಂಗಗಳನ್ನು ಆಡಿ ತೋರಿಸಿತು. ಪೂರ್ಣ ಪ್ರಮಾಣದ ಹರಕೆ ಮೇಳಗಳಾದ ಮಂದಾರ್ತಿಯ 5 ಮೇಳಗಳು ಹಾಗೂ ಮಾರಣಕಟ್ಟೆ 2 ಮೇಳಗಳು ಪೌರಾಣಿಕ ಪ್ರಸಂಗದೊಂದಿಗೆ ರಂಗಾವರಣಗೊಂಡರೆ, ಉಳಿದ ಬಯಲಾಟ ಮೇಳಗಳು ಪೌರಾಣಿಕ ಹಾಗೂ ಹೊಸ ಪ್ರಸಂಗಗಳನ್ನು ನೆಚ್ಚಿಕೊಂಡವು.

ತೆಂಕುತಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಮೇಳ ಕಾಲ ಮಿತಿಯಲ್ಲಿ ಪೌರಾಣಿಕ ಪ್ರಸಂಗಗಳನ್ನು ಆಡಿದರೆ, ಕಟೀಲಿನ ಆರು ಬಯಲಾಟ ಮೇಳಗಳು ಪೂರ್ಣ ರಾತ್ರಿಯಲ್ಲಿ ಪೌರಾಣಿಕ ಪ್ರಸಂಗಗಳನ್ನು ಆಡಿದವು. ನ್ನು ಉತ್ತಮ ಗುಣಮಟ್ಟದ ಕಲಾವಿದರ ಕೂಟವಾದ ಹನುಮಗಿರಿ ಹಾಗೂ ಎಡನೀರು ಮೇಳಗಳು ಕಾಲ ಮಿತಿಯಲ್ಲಿ ಪೌರಾಣಿಕ ಪ್ರಸಂಗಗಳನ್ನು ಆಡಿದರೂ ಆದ್ಯತೆಯ ಮೇರೆಗೆ ಇಡೀ ರಾತ್ರಿಯ ಪ್ರದರ್ಶನವನ್ನು ಕೂಡಾ ಆಡಿ ತೋರಿಸಿವೆ.

ಈ ಸಲ ಹೊಸದಾಗಿ ತಿರುಗಾಟ ಆರಂಭಿಸಿದ ದೆಂತಡ್ಕ ವನದುರ್ಗ ಮೇಳವು ಬಯಲಾಟ ಮೇಳವಾಗಿ ಗುರುತಿಸಿಕೊಂಡಿತು. ಉಳಿದಂತೆ ಈಗಾಗಲೇ ಚಾಲ್ತಿಯಲ್ಲಿದ್ದ ಬಯಲಾಟ ಮೇಳಗಳು ತುಳು ಪ್ರಸಂಗಗಳನ್ನು ಆಶ್ರಯಿಸಿದವು. ತೆಂಕುತಿಟ್ಟಿನಲ್ಲಿ ಈ ಸಲವೂ ಪೂರ್ಣಪ್ರಮಾಣದ ಒಂದು ಟೆಂಟ್‌ ಮೇಳವೂ ಇರಲಿಲ್ಲ.

ಹರಕೆ ಆಟದ ಒತ್ತಡ ಹೆಚ್ಚಿದ ದೆಸೆಯಿಂದ ಹರಕೆ ಮೇಳಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡರೂ ಇನ್ನೂ 20-30 ವರ್ಷಗಳಿಗೆ ಬೇಕಾಗುವಷ್ಟು ಹರಕೆ ಆಟಗಳು ಬುಕ್‌ ಆಗಿರುವುದು ವಿಶೇಷ . ಹಾಗಾಗಿ ಅವುಗಳು ಸಂಪಾದನೆಯ ದೃಷ್ಟಿಯಿಂದ ಸುಸ್ಥಿತಿಯಲ್ಲಿ ಇದ್ದಾವೆ. ಇನ್ನು ಯಕ್ಷಗಾನ ಕ್ಷೇತ್ರದಲ್ಲಿ ಕಲೆಯನ್ನು ವೃತ್ತಿಯಾಗಿ ಸ್ವೀಕರಿಸುವ ಕಲಾವಿದರ ಸಂಖ್ಯೆ ಗಣನೀಯವಾಗಿ ಹೆಚ್ಚಿದಂತೆ ಮೇಳಗಳ ಸಂಖ್ಯೆಯೂ ಹೆಚ್ಚಾಗಿದೆ , ಆ ಮೇಳಗಳೂ ಬಯಲಾಟದ ಮೂಲಕ ಪ್ರೇಕ್ಷಕರನ್ನು ಸೆಳೆಯಲು ತೆಂಕಿನಲ್ಲಿ ತುಳು ಪ್ರಸಂಗಗಳನ್ನು ಪುನಃ ರಂಗಕ್ಕೆ ತಂದಿವೆ.

Advertisement

ಬಡಗಿನಲ್ಲಿ ಕ್ಷೇತ್ರ ಮಹಾತ್ಮೆಯ ಹಣೆ ಪಟ್ಟಿಯಲ್ಲಿ ಅಣಿಕಟ್ಟಿದ ಭೂತಗಳನ್ನು ಯಕ್ಷಗಾನ ರಂಗಕ್ಕೆ ತಂದು ಕುಣಿಸಿ ಸಂಪಾದನೆ ಕಾಣಲು ಪ್ರಯತ್ನ ಇತ್ತೀಚಿನ ದಿನಗಳಲ್ಲಿ ಮಾಮೂಲು ಗಿಮಿಕ್‌ ಆಗಿದೆ. ಈ ವರ್ಷವೂ ಕೂಡ ಅದು ಕಂಡು ಬಂದಿದೆ ಆದರೆ ಈ ರೀತಿಯಲ್ಲಿಯೂ ಬಯಲಾಟ ಮೇಳಗಳ ಸಂಪಾದನೆ ಪರಿಸ್ಥಿತಿ ಈ ವರ್ಷದಲ್ಲಿ ಅಷ್ಟೇನೂ ತೃಪ್ತಿದಾಯಕವಾಗಿರಲಿಲ್ಲ ಅನ್ನುತ್ತಾರೆ ಮೇಳದ ಯಜಮಾನರು.

ಈ ಸಲದ ಟೆಂಟ್‌ ಮೇಳದ ಗಳಿಕೆಯಲ್ಲಿ ಹಿಂದಿನ ವರ್ಷಗಳ ಮಟ್ಟವನ್ನು ಕಾಣಲು ವಿಫ‌ಲವಾದದ್ದು ದಿಟವೆಂಬುದಾಗಿ ಬಡಗಿನ ಉಭಯ ಮೇಳಗಳ ಯಜಮಾನರು ಒಪ್ಪಿಕೊಂಡರೂ ಅದಕ್ಕೆ ಈ ಸಲ ನಡೆದ ಲೋಕಸಭೆಯ ಚುನಾವಣೆಯ ನೀತಿ ಸಂಹಿತೆ ಕಾರಣ ಎಂಬುದನ್ನು ಸಾರಾಸಗಟಾಗಿ ಅಲ್ಲಗಳೆಯುತ್ತಾರೆ.

ಇಡೀ ರಾತ್ರಿ ಆಟ ನೋಡುವ ವ್ಯವಧಾನ ಇಲ್ಲದ ಪ್ರೇಕ್ಷಕರನ್ನು ಟೆಂಟ್‌ ಮೇಳದತ್ತ ಸೆಳೆಯಲು ಯಾವ ತಂತ್ರವನ್ನು ಅನುಸರಿಸಬಹುದು ? ಅನವಶ್ಯಕ ಖರ್ಚುವೆಚ್ಚಗಳನ್ನು ಕಡಿಮೆಗೊಳಿಸಿ ಮೇಳದ ವೀಳ್ಯದ ಮೊತ್ತವನ್ನು ಕಡಿತಗೊಳಿಸಿ ಟೆಂಟ್‌ ಮೇಳಗಳಿಗೆ ಆದಾಯ ತರಬಲ್ಲ ಕಂಟ್ರಾಕ್ಟ್ ದಾರರನ್ನು ಹತ್ತಿರ ಬರುವಂತೆ ಮಾಡಲು ಯಾವ ಸೂತ್ರ ಹೆಣೆಯಬಹುದು? ಈ ಬಗ್ಗೆ ಏನು ಅನ್ನುತ್ತಾರೆ ಟೆಂಟ್‌ ಮೇಳದ ಯಜಮಾನರು?

ಸುರೇಂದ್ರ ಪಣಿಯೂರು

Advertisement

Udayavani is now on Telegram. Click here to join our channel and stay updated with the latest news.

Next