Advertisement

ಇಲ್ಲಿ ಪ್ರತಿಯೊಂದು ಕೂಡ ಬಹಳ ಮುಖ್ಯ

01:58 AM May 10, 2021 | Team Udayavani |

ಈ ಸೃಷ್ಟಿ ಎಲ್ಲರ ಬದುಕಿಗಾಗಿ ಇದೆ. ನಾವು ಮಾತ್ರ ಇಲ್ಲಿ ಶ್ರೇಷ್ಠರೆಂದೇನೂ ಇಲ್ಲ. ಪ್ರತಿಯೊಂದು ಜೀವಿಗೂ ಅದರದ್ದೇ ಆದ ಬದುಕು, ಶಕ್ತಿ ಸಾಮರ್ಥ್ಯ ಇದೆ. ಕೆಸರಿನಲ್ಲಿರುವ ಪುಟ್ಟ ಹುಳದಿಂದ ಹಿಡಿದು ಆನೆಯ ವರೆಗೆ ಎಲ್ಲವುಗಳೂ ಅಮೂಲ್ಯ. ಮಳೆ ಬಿದ್ದಾಗ ಥಟ್ಟನೆ ಹುಟ್ಟಿಕೊಂಡು ನಾಲ್ಕು ದಿನ ಬದುಕಿ ಒಣಗಿಹೋಗುವ ಸಣ್ಣ ಸಸ್ಯದಿಂದ ತೊಡಗಿ ನೂರಾರು ವರ್ಷ ಬಾಳುವ ಮಹಾವೃಕ್ಷದ ತನಕ ಎಲ್ಲವೂ, ಎಲ್ಲರೂ ಈ ಸೃಷ್ಟಿಯಲ್ಲಿ ತಮ್ಮದೇ ಪಾತ್ರ ಹೊಂದಿದ್ದಾರೆ. ಈ ಸೃಷ್ಟಿ ಯಲ್ಲಿರುವ ಯಾವುದು ಕೂಡ ಕ್ಷುಲ್ಲಕವಲ್ಲ. ನಾವು ಮಾತ್ರ ಶ್ರೇಷ್ಠರು, ಸೃಷ್ಟಿಯ ಉತ್ತುಂಗ ನಾವು ಎಂದೆಲ್ಲ ಅಂದು ಕೊಂಡಿದ್ದರೆ ಅದು ನಮ್ಮ ಅಂದರೆ ಮನುಷ್ಯರ ಮೂರ್ಖತನ. ಈಗ ನಾವು ಎದುರಿಸುತ್ತಿರುವಂತಹ ಪರಿಸ್ಥಿತಿ ಗಳು ಎದುರಾದಾಗ ನಾವೆಷ್ಟು ಕ್ಷುಲ್ಲಕರು, ಎಷ್ಟು ನಶ್ವರವಾದದ್ದು ಈ ಬದುಕು ಎನ್ನುವುದು ಹೊಳೆದುಬಿಡುತ್ತದೆ. ಸೃಷ್ಟಿಯ ಅಗಾಧತೆಯ ಎದುರು ವಿನೀತರಾಗಿ, ಅದನ್ನು ಗೌರವಿಸುತ್ತ ವಿನಯದಿಂದ ಬದುಕಬೇಕು ಎನ್ನುವ ಸತ್ಯದ ಅರಿವಾಗುತ್ತದೆ.

Advertisement

ಸೃಷ್ಟಿಯಲ್ಲಿ ಎಲ್ಲವೂ ಇದೆ. ನಮ್ಮ ನಮ್ಮ ಸಾಮರ್ಥ್ಯ, ಅರ್ಹತೆಗೆ ಸರಿಯಾದದ್ದು ನಮಗೆ ಸಿಗುತ್ತದೆ. ನಮ್ಮ ಬೊಗಸೆ ಎಷ್ಟು ದೊಡ್ಡದೋ ಅಷ್ಟು ನೀರನ್ನು ಮೊಗೆಯಲು ಸಾಧ್ಯ ಅಲ್ಲವೆ!

ಒಂದು ನಗರದ ಜನನಿಬಿಡ ರಸ್ತೆಯಲ್ಲಿ ನಾಲ್ಕು ಮಂದಿ ಗೆಳೆಯರು ನಡೆದುಹೋಗುತ್ತಿದ್ದರು. ಅವರಲ್ಲೊಬ್ಬ ಹಳ್ಳಿ ಹಿನ್ನೆಲೆಯವನು. ಉಳಿದ ಮೂವರು ಪೇಟೆಯಲ್ಲಿಯೇ ಬೇರೆ ಬೇರೆ ಉದ್ಯೋಗದಲ್ಲಿ ಇದ್ದವರು. ಹರಟೆ ಹೊಡೆಯುತ್ತ ಅವರು ಮುಂದುಮುಂದಕ್ಕೆ ನಡೆಯುತ್ತಿದ್ದರು.

ಪೇಟೆ ಜನನಿಬಿಡವಾಗಿತ್ತು. ರಸ್ತೆಯಲ್ಲಿ ವಾಹನಗಳು ಹನುಮಂತನ ಬಾಲದಂತೆ ಸಾಲುಗಟ್ಟಿದ್ದವು. ಎಲ್ಲೆಡೆ ಸದ್ದುಗದ್ದಲ.
ಹಳ್ಳಿಯಿಂದ ಬಂದವನು ಇದ್ದಕ್ಕಿದ್ದ ಹಾಗೆ ಕಿವಿ ನಿಮಿರಿಸಿ “ಎಲ್ಲೋ ಮಿಡತೆಯ ಕೂಗು ಕೇಳಿಸುತ್ತಿದೆಯಲ್ಲ’ ಎಂದ.
ಉಳಿದ ಮೂವರು ಆತನನ್ನು ಮಿಕಮಿಕ ನೋಡುತ್ತ, “ಎಲ್ಲಿದೆ, ಎಲ್ಲಿಂದ ಕೇಳಿಸಿತು’ ಎಂದು ಪ್ರಶ್ನಿಸಿದರು.
“ಇಲ್ಲೇ ಎಲ್ಲೋ ಇರಬೇಕು’ ಎಂದ ಹಳ್ಳಿಯವನು.

“ನಿನಗೆಲ್ಲೋ ಭ್ರಮೆ. ಈ ಕಾಂಕ್ರೀಟ್‌ ಕಾಡಿನಲ್ಲಿ ಮಿಡತೆ ಎಲ್ಲಿಂದ ಬರುತ್ತದೆ. ಈ ವಾಹನಗಳ ಸದ್ದಿನ ನಡುವೆ ಅದರ ಕೂಗು ನಿನಗೆ ಕೇಳಿಸಿದ್ದು ಹೇಗೆ’ ಎಂದೆಲ್ಲ ಹೇಳಿದರು ಉಳಿದ ಮೂವರು.

Advertisement

ಹಳ್ಳಿಯಿಂದ ಬಂದ ವನು ಕಿವಿಗೆ ಕೈಯಾನಿಸಿ ಆ ಕಡೆ ಈ ಕಡೆ ನೋಡಿದ. ಬಳಿಕ ರಸ್ತೆ ಯನ್ನು ದಾಟಿಹೋಗಿ ಆ ಬದಿಯಲ್ಲಿ ಒಂದು ಕಂಬದ ಬುಡದಲ್ಲಿದ್ದ ಸಣ್ಣ ಗಿಡದ ಎಲೆಯ ಮೇಲಿದ್ದ ಮಿಡತೆಯನ್ನು ಹಿಡಿದೆತ್ತಿ ಸ್ನೇಹಿತರಿಗೆ ತೋರಿಸಿದ.

ಅವರಿಗೆ ಆಶ್ಚರ್ಯವಾಯಿತು. “ಈ ಸದ್ದುಗದ್ದಲದ ನಡುವೆ ಅದರ ಕೂಗು ನಿನಗೆ ಕೇಳಿಸಿದ್ದಾದರೂ ಹೇಗೆ’ ಎಂದವರು ಪ್ರಶ್ನಿಸಿದರು.

“ಕೇಳಿಸುತ್ತದೆ, ಎಲ್ಲವೂ ಕೇಳಿಸುತ್ತದೆ. ಆದರೆ ಅದು ನಿಮ್ಮ ಕಿವಿಯನ್ನು ಅವಲಂಬಿಸಿದೆ. ನಿಮ್ಮ ಕಿವಿ, ಮೆದುಳಿಗೆ ಯಾವುದು ಪ್ರಾಮುಖ್ಯ ಎನ್ನುವುದನ್ನು ಆಧರಿಸಿ ನಿಮಗೆ ಕೇಳಿಸುತ್ತದೆ, ಕಾಣಿಸುತ್ತದೆ’ ಎಂದ ಹಳ್ಳಿಯವನು. “ಇದನ್ನು ಒಂದು ಉದಾಹರಣೆಯ ಮೂಲಕ ಸಾಬೀತುಪಡಿಸುತ್ತೇನೆ ಬೇಕಾದರೆ’ ಎಂದ.

ಉಳಿದ ಮೂವರು ಆತ ಏನು ಮಾಡಲಿದ್ದಾನೆ ಎಂದು ನಿರೀಕ್ಷಿಸಿದರು. ಹಳ್ಳಿಯವನು ತನ್ನ ಕಿಸೆಯಿಂದ ನಾಲ್ಕಾರು ನಾಣ್ಯಗಳನ್ನು ತೆಗೆದ. ಬಳಿಕ ಗೆಳೆಯರ ಮುಂದೆಯೇ ನೆಲಕ್ಕೆ ಬೀಳಿಸಿದ.

ವಾಹನಗಳ ಸದ್ದುಗದ್ದಲದ ನಡುವೆಯೇ ಅವರಿದ್ದಲ್ಲಿಂದ ಹತ್ತಿಪ್ಪತ್ತು ಅಡಿ ವ್ಯಾಪ್ತಿಯಲ್ಲಿ ನಡೆದಾಡುತ್ತಿದ್ದ ಅನೇಕ ಮಂದಿ ನಾಣ್ಯ ಬಿದ್ದದ್ದು ತಮ್ಮ ಕಿಸೆಯಿಂದಲೇ ಎಂದುಕೊಂಡು ತಲೆ ಹೊರಳಿಸಿದರು, ಕಿಸೆ ಮುಟ್ಟಿ ನೋಡಿಕೊಂಡರು.
“ನೋಡಿದಿರಾ! ನಮಗೆ ಯಾವುದು ಮುಖ್ಯವಾಗಿದೆಯೋ ಅದಕ್ಕೆ ಸಂಬಂಧಿಸಿದ್ದು ನಮಗೆ ಕಾಣಿಸುತ್ತದೆ, ಕೇಳಿಸುತ್ತದೆ’ ಎಂದು ಮಾತು ಮುಗಿಸಿದ ಹಳ್ಳಿಯಿಂದ ಬಂದವನು.

( ಸಾರ ಸಂಗ್ರಹ)

Advertisement

Udayavani is now on Telegram. Click here to join our channel and stay updated with the latest news.

Next