ಬೆಂಗಳೂರು: ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಸಾಯುತ್ತೇನೆ ಎಂದು ಪತ್ನಿಯನ್ನು ಬೆದರಿಸಲು ಬೆಂಕಿ ಹಚ್ಚಿಕೊಳ್ಳುವ ನಾಟಕವಾಡಿದ ವ್ಯಕ್ತಿಯೊಬ್ಬ ಆಕಸ್ಮಿಕವಾಗಿ ಬೆಂಕಿ ತಗುಲಿ ತೀವ್ರ ಸುಟ್ಟ ಗಾಯಗಳೊಂದಿಗೆ ನರಳುತ್ತಿರುವ ಘಟನೆ ರಾಜಗೋಪಾಲನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ ಸಂಭವಿಸಿದೆ.
ಹೆಗ್ಗನಹಳ್ಳಿ ನಿವಾಸಿ ನಾಗರಾಜ್ (38) ಬೆಂಕಿ ಹಚ್ಚಿಕೊಂಡ ವ್ಯಕ್ತಿ. ಶೇ.90ರಷ್ಟು ಸುಟ್ಟ ಗಾಯಗಳಿಂದ ಬಳಲುತ್ತಿರುವ ನಾಗರಾಜ್ ವಿಕ್ಟೋರಿಯಾ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಖಾಸಗಿ ಕಾರ್ಖಾನೆಯಲ್ಲಿ ಲೇಥ್ ಮಷೀನ್ ವಿಭಾಗದಲ್ಲಿ ಸಹಾಯಕನಾಗಿ ಕೆಲಸ ಮಾಡಿಕೊಂಡಿದ್ದ ನಾಗರಾಜ್, ಕೆಲ ವರ್ಷಗಳ ಹಿಂದೆ ಲಲಿತಾ ಎಂಬುವವರನ್ನು ಮದುವೆಯಾಗಿದ್ದ. ದಂಪತಿಗೆ ಒಂದು ಗಂಡು ಮಗುವಿದ್ದು, ಲಲಿತಾ ಗಾರ್ಮೆಂಟ್ ಕೆಲಸಕ್ಕೆ ಹೋಗುತ್ತಿದ್ದರು. ಆದರೆ, ಕೌಟುಂಬಿಕ ಕಲಹದಿಂದ ಒಂದು ವರ್ಷದ ಹಿಂದೆ ಪತಿಯಿಂದ ದೂರವಾಗಿದ್ದ ಲಲಿತಾ, ಪುತ್ರನೊಂದಿಗೆ ವಾಸವಿದ್ದರು.
ಅಲ್ಲದೆ, ಪತಿ ವಿರುದ್ಧ ವರದಕ್ಷಿಣೆ ಕಿರುಕುಳ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದರು. ಹೆಗ್ಗನಹಳ್ಳಿಯಲ್ಲಿ ಮನೆ ಮಾಡಿಕೊಂಡಿದ್ದ ನಾಗರಾಜ್, ಜೈಲಿನಿಂದ ಬಿಡುಗಡೆಯಾದ ಬಳಿಕ ಆಗಾಗ ಪತ್ನಿ ಲಲಿತಾ ಮನೆಗೆ ಹೋಗಿ, ತನ್ನೊಂದಿಗೆ ಬರುವಂತೆ ಒತ್ತಾಯಿಸುತ್ತಿದ್ದ. ಅದಕ್ಕೆ ಆಕೆ ನಿರಾಕರಿಸಿದಾಗ ಜಗಳವಾಡುತ್ತಿದ್ದ. ತನ್ನೊಂದಿಗೆ ಬರಲು ಪತ್ನಿ ಎಷ್ಟೇ ನಿರಾಕರಿಸಿದರೂ ಆತ ಮಾತ್ರ ತನ್ನ ಪ್ರಯತ್ನ ನಿಲ್ಲಿಸಿರಲಿಲ್ಲ.
ಬುಧವಾರ ರಾತ್ರಿ 9 ಗಂಟೆ ಸುಮಾರಿಗೆ ಮತ್ತೆ ಪತ್ನಿ ಮನೆಗೆ ಬಂದಿದ್ದ ನಾಗರಾಜ್, ಕುಡಿದ ಮತ್ತಿನಲ್ಲಿ ಆಕೆಯೊಂದಿಗೆ ಜಗಳವಾಡಿದ್ದ. ಜಗಳ ವಿಕೋಪಕ್ಕೆ ತೆರಳಿದ್ದು, ಮೊದಲೇ ಸಿದ್ಧವಾಗಿ ಬಂದಿದ್ದ ನಾಗರಾಜ್, ಪತ್ನಿಯನ್ನು ಹೆದರಿಸಲು ನಿನ್ನನ್ನು ಕೊಂದು ನಾನೂ ಸಾಯುತ್ತೇನೆ ಎಂದು ಹೇಳಿ ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡಿದ್ದಾನೆ. ಅಲ್ಲದೆ, ಕೈಯ್ಯಲ್ಲಿ ಬೆಂಕಿಪೊಟ್ಟಣ ಗೀರುತ್ತಾ ಬೆಂಕಿ ಹಚ್ಚಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ.
ಆದರೆ, ಆತ ಕುಡಿದ ಮತ್ತಿನಲ್ಲಿದ್ದುದರಿಂದ ಕಡ್ಡಿ ಗೀರಿದಾಗ ಬೆಂಕಿ ಮೈಗೆ ಹತ್ತಿಕೊಂಡಿದೆ. ಕೂಡಲೇ ನೀರು ಸುರಿದು ಬೆಂಕಿ ಆರಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಬಳಿಕ ಸ್ಥಳೀಯರು ನೆರವಿಗೆ ಬಂದು ಬೆಂಕಿ ಆರಿಸಿದ್ದಾರೆ. ಆದರೆ, ಅಷ್ಟರಲ್ಲಾಗಲೇ ನಾಗರಾಜ್‌ಗೆ ಶೇ.90ರಷ್ಟು ಸುಟ್ಟ ಗಾಯಗಳಾಗಿದ್ದವು. ತಕ್ಷಣ ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದು, ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರಾಜಗೋಪಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.