ಬೆಲೆ ಬಂದಿದೆ !
Advertisement
ಮೀರಾ ಆಗ ತಾನೆ ಡಿಗ್ರಿ ಮುಗಿಸಿ ಕೆಲಸಕ್ಕೆ ಸೇರಿದ್ದಳು. ಆಫೀಸಿನ ಕೆಲಸವೇ ಹಾಸಿ ಹೊದ್ದುಕೊಳ್ಳುವಷ್ಟಿದ್ದರೂ ಪಾರ್ಟ್‌ಟೈಮ… ಜಾಬ್ ಅಂತ ಎಫ್ಎಮ… ರೇಡಿಯೋ ಸ್ಟೇಷನ್ನಿನಲ್ಲಿ ಕೆಲಸ, ಕೆಲವೊಮ್ಮೆ ಆ್ಯಂಕರಿಂಗ್ ಅಂತ ಕಾರ್ಯಕ್ರಮಗಳ ನಡೆಸಿಕೊಡುವುದು, ಡ್ಯಾನ್ಸ್ ಗ್ರೂಪ್ ಜೊತೆ ಡ್ಯಾನ್ಸ್ ಪ್ರೋಗ್ರಾಮ್- ಹೀಗೆ ಹಲವಾರು ಚಟುವಟಿಕೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಳು. ಕೈ ತುಂಬಾ ಸಂಪಾದಿಸಬೇಕು, ನಾಲ್ಕು ಜನ ಗುರುತಿಸುವ ಹಾಗೆ ಇರಬೇಕು ಎಂದು ಯಾರು ಯಾವುದೇ ಕೆಲಸ ಹೇಳಿದರೂ ಇಲ್ಲ ಎನ್ನದೆ ಮಾಡುತ್ತಿದ್ದಳು. ಇವಳ ಈ ಪಾಟಿ ಬದುಕಿನೆಡೆಗಿನ ಆತುರವ ಕಂಡು ಒಂದು ದಿನ ಕೇಳೇ ಬಿಟ್ಟೆ.
Related Articles
Advertisement
ಹಿಂದೊಂದು ಕಾಲ ಇತ್ತು. ಹೆಣ್ಣೆಂದರೆ ಕೇವಲ ಸೌಂದರ್ಯದ ಪ್ರತೀಕವೆಂದು. ದಿನಗಳು ಉರುಳಿದಂತೆ ಅವಳ ಆಂತರಿಕ ಸೌಂದರ್ಯಕ್ಕೂ, ಅವಳ ಚಾಕಚಕ್ಯತೆಗೂ, ಅವಳ ಬುದ್ಧಿವಂತಿಕೆಗೂ ಬೆಲೆ ಬರುವ ಕಾಲ ಬಂದಾಗಿದೆ. ಈಗೀಗ ಅದೆಷ್ಟೋ ಜನ ಹುಡುಗರು ಅವಳ ಮಾತಿನ ಶೈಲಿ, ಅವಳ ಜಾಣ್ಮೆ, ಅವಳ ಹಾವಭಾವಕ್ಕೆ ಮನಸೋಲುವವರಿದ್ದಾರೆ. ಸೌಂದರ್ಯವೆನ್ನುವುದು ನಾಮಕಾವಸ್ಥೆಗೆ ಮಾತ್ರ ಉಳಿದಿರುವ ಕಾಲ ಇದು.
ಈ ರೀತಿ ಯೋಚಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ. ಆದರೆ, ಎಲ್ಲರೂ ಸಂಪೂರ್ಣವಾಗಿ ಹೀಗೆಯೇ ಯೋಚಿಸುವುದಿಲ್ಲ. ಅವಳ ಬಣ್ಣ, ಎತ್ತರ, ನಡವಳಿಕೆ… ಹೀಗೆ ಹೆಣ್ಣನ್ನು ಅಳೆಯುವ ಮಾನದಂಡಗಳ ಪಟ್ಟಿಯೇ ಇದೆ. ಎಲ್ಲರಿಗೂ ಓದಿರುವ ಹುಡುಗಿಯೇ ಬೇಕು. ಕೈ ತುಂಬಾ ಸಂಬಳ ತರಬೇಕು. ಮನೆ, ಮಕ್ಕಳು, ಅತ್ತೆ-ಮಾವ, ಗಂಡ ಎಲ್ಲರ ಚಾಚೂತಪ್ಪದೆ ಪಾಲಿಸಬೇಕು. ಅದೆಷ್ಟೇ ತ್ರಾಸವಾದರೂ ನಗುನಗುತ್ತಲೇ ಎಲ್ಲವ-ಎಲ್ಲರ ನಿಭಾಯಿಸಬೇಕು. ಇದೇ ಕಾರಣಕ್ಕೆ ಹುಡುಗಿಯರು ಮದುವೆಯನ್ನು ಈಗೀಗ ಮುಂದೂಡುತ್ತಿದ್ದಾರೆ. ತಮ್ಮದೂ ಒಂದು ಜೀವ ಅದನ್ನು ಕೆಲದಿನಗಳಿಗಾದರೂ ತಮ್ಮಂತೆಯೇ ಜೀಕಿ ಖುಷಿ ಪಡಬಯಸುತ್ತಾರೆ. ಇನ್ನೊಬ್ಬರಿಗೆ ಮಾದರಿಯಾಗುವಂತೆ ಏನಾದರೂ ಸಾಧಿಸಿ ತೋರಿಸುತ್ತಾರೆ.
ಇಂತಹವರಿಗೇನಾದರೂ ಗಂಡನ ಮನೆಯಲ್ಲೂ ಸ್ವಲ್ಪ ಬೆಂಬಲ ಸಿಕ್ಕಿತೆನ್ನಿ ನಿಮ್ಮ ಮನೆಯಲ್ಲಿ ಸುಧಾಮೂರ್ತಿ, ಮೇರಿ ಕೋಮ…ನಂಥವರು ತಲೆ ಎತ್ತುತ್ತಾರೆ. ಆಗ ಅದೆಲ್ಲದರ ಶ್ರೇಯ ನಿಮ್ಮದೇ ಆಗುತ್ತದೆ. ಪ್ರತಿಯೊಂದು ನಾಗರಿಕತೆಯೂ ಮದುವೆಗೆ ವಿಶಿಷ್ಟ ಮಾನ್ಯತೆ ನೀಡಿದೆ. ಅದಕ್ಕೆ ಗೌರವಾನ್ವಿತ ಸ್ಥಾನ ಕೊಟ್ಟಿದೆ. ಮದುವೆಗೆ ಒಂದು ಸಾಂಸ್ಥಿಕ ಸ್ವರೂಪ ಇದೆ. ಕೌಟುಂಬಿಕ ಬೆಸುಗೆಯ ಜೊತೆಗೆ ಸಾಮಾಜಿಕ ಮನ್ನಣೆ ಇದೆ. ಭವಿಷ್ಯದ ತಲೆಮಾರನ್ನು ರೂಪಿಸುವ ಪರೋಕ್ಷ ಹೊಣೆಗಾರಿಕೆ ದಂಪತಿಗಳಿಗಿರುತ್ತದೆ. ಅಲ್ಲಿಯವರೆಗೆ ತಂತಮ್ಮ ಪಾಡಿಗಿದ್ದ ಇಬ್ಬರು ವಿಭಿನ್ನ ವ್ಯಕ್ತಿಗಳು ಮದುವೆಯ ಮೂಲಕ ಒಂದಾಗುತ್ತಾರೆ. ತಂತಮ್ಮ ವಿಭಿನ್ನ ವ್ಯಕ್ತಿತ್ವಗಳ ಜೊತೆಗೇ ಒಂದಾಗಿ ಬದುಕಲು ಶುರು ಮಾಡುತ್ತಾರೆ.
ಪತಿಯೇ ಪರದೈವ ಎಂಬ ಕಾಲ ಬದಲಾಗಿ ಕಾಲು ಶತಮಾನವೇ ಆಗಿಹೋಯ್ತು. ಹೆಚ್ಚುತ್ತಿರುವ ಉದ್ಯೋಗಾವಕಾಶಗಳು, ಮಹಿಳಾ ಶಿಕ್ಷಣ, ಮಹಿಳೆಯ ಹಕ್ಕುಗಳ ಅರಿವು ಪರಿಸ್ಥಿತಿಯನ್ನು ತುಂಬ ಬದಲಾಯಿಸಿವೆ. ಈಗ ಹೆಣ್ಣು ತನ್ನ ಗಂಡನ ಅಥವಾ ಅತ್ತೆಮನೆಯ ದೌರ್ಜನ್ಯವನ್ನು ಮೌನವಾಗಿ ಎದುರಿಸಲು ಸಿದ್ಧಳಿಲ್ಲ. ಏಕೆಂದರೆ, ಆಕೆ ಆರ್ಥಿಕವಾಗಿ ಅವಲಂಬಿತಳಾಗಿಲ್ಲ. ತನ್ನ ಹಕ್ಕುಗಳ ಬಗ್ಗೆ ಆಕೆಗೆ ಸ್ಪಷ್ಟತೆ ಇದೆ. ಆಧುನಿಕ ಉದ್ಯೋಗಾವಕಾಶಗಳು ಮಹಿಳೆಗೂ ಆದ್ಯತೆ ನೀಡಿವೆ. ಇವೆಲ್ಲ ಕಾರಣಗಳಿಂದಾಗಿ, ಮಹಿಳೆ ಈಗ ವೊದಲಿಗಿಂತ ಹೆಚ್ಚು ಸಶಕ್ತೆ ಹಾಗೂ ಸ್ವಾವಲಂಬಿ. ಹೆಚ್ಚಿನ ಮಹತ್ವಾಕಾಂಕ್ಷೆ, ಹಕ್ಕು ಚಲಾಯಿಸುವ ಅತ್ಯುತ್ಸುಕತೆ, ಮುಕ್ತ ವಾತಾವರಣ ಹೆಣ್ಣಿನಲ್ಲಿ ಹೊಸ ಕನಸುಗಳ ಹುಟ್ಟು ಹಾಕಿವೆ.
ಗಂಡು ಮದುವೆಗೆ ಮುಂಚೆ ಹೇಗಿರುತ್ತಾನೋ, ಮದುವೆಯಾದ ನಂತರವೂ ಹಾಗೇ ಇರುವುದಾದರೆ ಹೆಣ್ಣಿಗೂ ಅದರ ಸ್ವಲ್ಪ ಭಾಗವಾದರೂ ಸಲ್ಲಬೇಕು. ಈಗಿನ ಹೆಣ್ಣುಮಕ್ಕಳಿಗೆ ಗೃಹಿಣಿ ಎನ್ನುವ ಸ್ಥಾನವನ್ನು ಸ್ವೀಕರಿಸುವ ಮನಃಸ್ಥಿತಿ ಮಾಯವಾಗಿದೆ. ಹುಡುಗ ಕೂಡ ಕೆಲಸ ಮಾಡುವ ಹುಡುಗಿಯೇ ಬೇಕು ಎನ್ನುತ್ತಾನೆ. ಆದರೆ, ಆತನಿಗೆ ಹುಡುಗಿಯ ಸಂಬಳ ಬೇಕೇ ಹೊರತು, ಆಕೆಗೆ ಮನೆಯ ಜವಾಬ್ದಾರಿಗಳಲ್ಲಿ ವಿನಾಯಿತಿ ನೀಡಲು ಮಾತ್ರ ಯೋಚನೆಬಾರದು. ಹೀಗಾಗಿ ತಿಕ್ಕಾಟ ಶುರುವಾಗುತ್ತದೆ. ಒಳಗೂ ದುಡಿ, ಹೊರಗೂ ದುಡಿ ಎಂದರೆ ಹೇಗೆ? ನಾನೇನು ಗಾಣದೆತ್ತೆ? ಎಂದು ಅವಳು ಜಗಳ ಶುರು ಮಾಡುತ್ತಾಳೆ. ಆಗ, ಕೆಲಸ ಬಿಟ್ಟುಬಿಡು ಎಂಬ ಸಲಹೆ ಬರುತ್ತದೆ. ಹೆಣ್ಣು ಅದನ್ನು ಒಪ್ಪಿಕೊಳ್ಳುವುದಿಲ್ಲ. ಈಗಿನ ಕಾಲದ ಹೆಣ್ಣುಮಕ್ಕಳಿಗೆ ಓದಿನಂತೆ ಕೆಲಸ ಕೂಡ ತನ್ನ ವ್ಯಕ್ತಿತ್ವದ ಮುಖ್ಯ ಭಾಗ ಎಂದುಕೊಳ್ಳುವ ಆಕೆ ತನ್ನ ವ್ಯಕ್ತಿತ್ವಕ್ಕೆ ಪೂರಕವಾದ ಅಂಶಗಳನ್ನು ಉಳಿಸಿಕೊಳ್ಳಲು ಒತ್ತು ಕೊಡುತ್ತಾಳೆಯೇ ವಿನಾ ವೈವಾಹಿಕ ಸಂಬಂಧಕ್ಕಲ್ಲ.
ದಾಂಪತ್ಯವೆನ್ನುವುದು ಜೋಡೆತ್ತು ಎಳೆಯುವ ಬಂಡಿ. ಅಲ್ಲಿ ಎರಡೆತ್ತುಗಳೂ ಸಮಾನವಾಗಿ ಭಾರವನ್ನು ಹೊತ್ತು ಬಂಡಿಯನ್ನು ಮುನ್ನೆಡೆಸುತ್ತಾ ಸಾಗಬೇಕು. ಇಬ್ಬರಲ್ಲಿ ಒಬ್ಬರು ವೊಂಡುತನಕ್ಕೋ, ನಾನೆಂಬ ದರ್ಪಕ್ಕೋ ಬಿದ್ದರೆ ಮುಗೀತು ಸಂಸಾರದ ಬಂಡಿ ನಡೆಯುವುದು ನಿಂತು ಬಿಡುತ್ತದೆ. ಇಬ್ಬರ ನೆಮ್ಮದಿ, ಬದುಕು ಹಾಳಾಗುತ್ತದೆ. ಸಂಸಾರದ ಬುನಾದಿ ಪ್ರೀತಿ, ಸಹಬಾಳ್ವೆ, ನಂಬಿಕೆ, ಹಂಚಿಕೆ, ಒಟ್ಟೊಟ್ಟಿಗೆ ಹೆಜ್ಜೆ ಹಾಕುವುದು. ಆದರೆ, ಹಿಂದಿನಿಂದಲೂ ನಡೆದು ಬಂದಿರುವುದು ಹೆಣ್ಣು ಸಂಸಾರದ ಜವಾಬ್ದಾರಿಯನ್ನು ಹೊರಬೇಕು, ಗಂಡು ದುಡಿಯಬೇಕು ಎಂದು. ಆದರೆ, ಈಗಿನ ಕಾಲಘಟ್ಟದಲ್ಲಿ ಈ ನಿಯಮ ಅನ್ವಯವಾಗುವುದಿಲ್ಲ.
ಆಧುನಿಕತೆಯಲ್ಲಿನ ಸಂಸಾರದ ಸಾರೋಟಿಗೆ ಅಂಟಿಕೊಂಡಿರುವ ಪ್ರೀತಿಯೊಟ್ಟಿಗೆ ಬರುವ ಜವಾಬ್ದಾರಿಗಳ ಸೇರಿ ನಿರ್ವಹಿಸಿದರೆ ಮೀರಾಳಂತಹ ಅನೇಕ ಹೆಣ್ಣುಮಕ್ಕಳು ಕಂಡ ಕನಸುಗಳು ಸಾಕಾರಗೊಳ್ಳುತ್ತವೆ. ಆಗ ಮದುವೆ ಎನ್ನುವುದು ಬೇಡಿಯಾಗದೆ ಬದುಕಿನ ಭಾಗವಾಗಿ ಮುಂದುವರೆಯುತ್ತದೆ.
ಜಮುನಾರಾಣಿ ಎಚ್. ಎಸ್.