ಬೆಂಗಳೂರು: ಪೊಲೀಸ್ ಇಲಾಖೆ ಸಹಯೋಗದಲ್ಲಿ ಕನ್ನಿಂಗ್‌ಹ್ಯಾಂ ರಸ್ತೆಯ ಫೋರ್ಟಿಸ್ ಆಸ್ಪತ್ರೆ, ಹೆಪಟೈಟಿಸ್ ಕುರಿತು ಜಾಗೃತಿ ಅಭಿಯಾನ ಹಮ್ಮಿಕೊಂಡಿತ್ತು. ಈ ಅಭಿಯಾನದ ಅಂಗವಾಗಿ ಆಸ್ಪತ್ರೆಯಿಂದ 100 ಮಂದಿ ಪೊಲೀಸ್ ಸಿಬ್ಬಂದಿಗೆ ಹೆಪಟೈಟಿಸ್ ಲಸಿಕೆಯ ಮೂರು ಶಾಟ್‌ಗಳನ್ನು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನೀಡಲಾಯಿತು.
ಆಸ್ಪತ್ರೆಯ ಪಚನಾಂಗ ರೋಗಶಾಸ್ತ್ರ ಮತ್ತು ಪಿತ್ತಜನಕಾಂಗ ರೋಗಶಾಸ್ತ್ರ ಸಲಹಾ ತಜ್ಞ ಡಾ. ಶ್ರೀನಿವಾಸ ಡಿ. ಅವರು ಮಾತನಾಡಿ, ಹೈಪಟೈಟಿಸ್ ಸದ್ದಿಲ್ಲದೆ ಕೊಲ್ಲುವ ರೋಗವಾಗಿದೆ. ಅಲ್ಲದೆ, ಬಹಳ ಬೇಗನೆ ಹರಡುವ ರೋಗವಾಗಿದೆ. ಅತ್ಯಂತ ಕನಿಷ್ಟ ಪ್ರಮಾಣದ ರಕ್ತದಿಂದಲೇ ರೋಗದ ಸೋಂಕು ಹರಡಬಹುದೆಂದು ತಿಳಿದುಬಂದಿದೆ ಎಂದರು.
ಭಾರತದಲ್ಲಿ ಈ ಕಾಯಿಲೆ ಹೆಚ್ಚಾಗಿ ಕಂಡುಬಂದರೂ ಹೆಪಟೈಟಿಸ್ ಲಸಿಕೆ ಕುರಿತು ಜಾಗೃತಿ ಕೊರತೆ ಇದೆ. ಕರ್ತವ್ಯ ಮತ್ತು ವ್ಯಸ್ಥ ಜೀವನ ಶೈಲಿಗಳ ನಡುವೆ ಜನರು ಆರೋಗ್ಯ ತಪಾಸಣೆ ಹಾಗೂ ಲಸಿಕೆ ತೆಗೆದುಕೊಳ್ಳುವುದನ್ನು ನಿರ್ಲಕ್ಷಿಸುತ್ತಾರೆ. ಇದರಿಂದ ಗಂಭೀರ ಪಿತ್ತಜನಕಾಂಗ ಸಂಬಂಧಿ ರೋಗಗಳಾದ ಸಿರಾಸಿಸ್ ಮತ್ತು ಕ್ಯಾನ್ಸರ್‌ಗೆ ಕಾರಣವಾಗಬಹುದು. ರೋಗ ಹರಡುವುದನ್ನು ತಡೆಯಲು ಹೆಚ್ಚಿನ ಗಮನಹರಿಸಬೇಕಾಗಿದೆ.
ನಮ್ಮ ಆಸ್ಪತ್ರೆಯಲ್ಲಿ ಈ ಬಗ್ಗೆ ಕೈಲಾದಷ್ಟು ಅತ್ಯುತ್ತಮ ಸೇವೆಯನ್ನು ಸಮುದಾಯಕ್ಕೆ ನೀಡಲು ಇಚ್ಛಿಸುತ್ತೇವೆ. ಈ ಅಭಿಯಾನದ ಮೂಲಕ ರೋಗದ ಹಾಜರಿ ಮತ್ತು ಅದನ್ನು ತಡೆಯುವ ಬಗ್ಗೆ ಜನರಿಗೆ ಜಾಗೃತಿ ನೀಡಲು ಬದ್ಧವಾಗಿದ್ದೇವೆ. ದೇಶದಲ್ಲಿ 52 ದಶಲಕ್ಷ ಜನರ ಮೇಲೆ ಪರಿಣಾಮ ಬೀರಿದ್ದು, ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ ಎಂದು ಅವರು ವಿವರಿಸಿದರು.
ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ಮಾತನಾಡಿ, ಭಾರತದಲ್ಲಿ ದೊಡ್ಡ ಸಂಖ್ಯೆಯ ಹೆಪಟೈಟಿಸ್ ಪ್ರಕರಣಗಳು ಇದ್ದು, ಈ ರೋಗ ಹರಡುವುದನ್ನು ತಡೆಯುವುದಕ್ಕಾಗಿ ತಕ್ಷಣ ಕ್ರಮ ಕೈಗೊಳ್ಳಬೇಕಿದೆ. ಈ ರೋಗ ಕುರಿತು ಫೋರ್ಟಿಸ್ ಜಾಗೃತಿ ಅಭಿಯಾನದಲ್ಲಿ ಸಹಯೋಗ ಹೊಂದಲು ಹೆಪಟೈಟಿಸ್ ಲಸಿಕೆ ಪ್ರಾಮುಖ್ಯತೆ ಕುರಿತು ನಾಗರಿಕರಲ್ಲಿ ಎಚ್ಚರಿಕೆ ಮೂಡಿಸಲು ನಾವು ಹರ್ಷಿಸುತ್ತೇವೆ ಎಂದರು.