ಮಂಗಳೂರು: ಮಾಂಡ್ ಸೊಭಾಣ್ ವತಿಯಿಂದ 9ನೇ ಜಾಗತಿಕ ಕೊಂಕಣಿ ಸಂಗೀತ ಪುರಸ್ಕಾರ ಪ್ರದಾನ ಸಮಾರಂಭ ಡಿ. 10ರಂದು ನಗರದ ಕಲಾಂಗಣ್‌ನಲ್ಲಿ ಜರಗಿದ್ದು, 3ನೇ ಜಾಗತಿಕ ಕೊಂಕಣಿ ಸಂಗೀತ-ಜೀವಮಾನ ಪ್ರಶಸ್ತಿಯನ್ನು ಹೆನ್ರಿ ಡಿ’ಸೋಜಾ ಮುಂಬಯಿ ಅವರಿಗೆ ಪ್ರದಾನ ಮಾಡಲಾಯಿತು.
ಪ್ರಶಸ್ತಿಯು 1 ಲಕ್ಷ ರೂ. ನಗದು, ಸಂಮಾನ ಪತ್ರವನ್ನು ಒಳಗೊಂಡಿದೆ. ಅಂತಾರಾಷ್ಟ್ರೀಯ ಮಟ್ಟದ ಗಾಯಕಿ ಹಾಗೂ ನಟಿ, ವಸುಂಧರಾ ದಾಸ್ ಪುರಸ್ಕಾರ ಪ್ರದಾನ ಮಾಡಿದರು. ತನಗೆ ಕೊಂಕಣಿ ಸಂಗೀತದ ಅತೀ ದೊಡ್ಡ ಸಂಮಾನ ನೀಡಿದ್ದಕ್ಕಾಗಿ ಹೆನ್ರಿ ಡಿ’ಸೋಜಾ ಅವರು ಮಾಂಡ್ ಸೊಭಾಣ್ ಹಾಗೂ ಕೊಂಕಣಿ ಜನರಿಗೆ ಕೃತಜ್ಞತೆ ಸಲ್ಲಿಸಿದರು. ಮಾಂಡ್ ಸೊಭಾಣ್ ಸಂಯೋಜಕ ಸ್ಟ್ಯಾನಿ ಆಲ್ವಾರಿಸ್ ಸಂಮಾನ ಪತ್ರವನ್ನು ಓದಿದರು. ಸುಮೇಳ್ ಗಾಯನ ಮಂಡಳಿಯವರು ಹೆನ್ರಿ ಅವರ ಪ್ರಸಿದ್ಧ 5 ಹಾಡುಗಳನ್ನು ಹಾಡಿದರು. ಮಾಂಡ್ ಸೊಭಾಣ್ ಗುರಿಕಾರ ಎರಿಕ್ ಒಝೇರಿಯೊ, ಅಧ್ಯಕ್ಷ ಲುವಿ ಜೆ. ಪಿಂಟೊ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ರೋಯ್ ಕ್ಯಾಸ್ತೆಲಿನೊ, ಮಾಂಡ್ ಸೊಭಾಣ್ ಕಾರ್ಯದರ್ಶಿ ಕಿಶೋರ್ ಫೆರ್ನಾಂಡಿಸ್ ವೇದಿಕೆಯಲ್ಲಿದ್ದರು.
ಕೊಂಕಣಿಯ ಅತ್ಯುತ್ತಮ ಸಂಗೀತ ಪ್ರತಿಭೆಗಳನ್ನು ಗುರುತಿಸಿ 6 ಮಂದಿಗೆ 9ನೇ ಜಾಗತಿಕ ಕೊಂಕಣಿ ಸಂಗೀತ ಪುರಸ್ಕಾರ ನೀಡಲಾಯಿತು. ವಸುಂಧರಾ ದಾಸ್ ಅವರು ತನ್ನನ್ನು ಪ್ರಶಸ್ತಿ ಪ್ರದಾನ ಮಾಡಲು ಆಹ್ವಾನಿಸಿದ್ದಕ್ಕಾಗಿ ಸಂತಸ ವ್ಯಕ್ತಪಡಿಸಿ ಈ ಕಾರ್ಯಕ್ರಮದಲ್ಲಿ ಕೊಂಕಣಿ ಸಂಗೀತದ ಸೊಬಗು ಹಾಗೂ ಆನಂದವನ್ನು ತಾನು ಅನುಭವಿಸಿದೆ ಎಂದು ಹೇಳಿದರು.
ಲೊರಿ ಟ್ರವಾಸೊ ಮತ್ತು ಅವರ ಸಂಗೀತ ತಂಡದವರು ಗೋವಾದ ಸುಂದರ ಸಂಗೀತ ಪ್ರಸ್ತುತಪಡಿಸಿದರು. ನಾಚ್ ಸೊಭಾಣ್ ಹಾಗೂ ನಿಕ್ಕಿ ಪಿಂಟೊ (ಡ್ಯಾನ್ಸ್ ಪ್ಲಸ್ ಖ್ಯಾತಿಯ) ಅವರಿಂದ ನೃತ್ಯ, ಬ್ಲೂ ಏಂಜಲ್ಸ್ ಕೊಯರ್‌ನವರು ಶ್ರೇಷ್ಠ ಆಲ್ಬಮ್ ವಿಭಾಗದ ಟೊಪ್-3 ಆಲ್ಬಮ್‌ಗಳ ಹಾಡುಗಳನ್ನು ಹಾಡಿದರು.
ಮುಂದಿನ ವರ್ಷದಿಂದ ಎರಡು ವರ್ಷಗಳಿಗೊಮ್ಮೆ “ಜಾಗತಿಕ ಕೊಂಕಣಿ ಚಲನಚಿತ್ರ ಪುರಸ್ಕಾರ’ವನ್ನು ನೀಡುವುದಾಗಿ ಮಾಂಡ್ ಸೊಭಾಣ್ ಘೋಷಿಸಿತು. ಅಂತೆಯೇ, ಇನ್ನು ಮುಂದೆ ಜಾಗತಿಕ ಕೊಂಕಣಿ ಸಂಗೀತ ಪುರಸ್ಕಾರ ಕೂಡ ಎರಡು ವರ್ಷಕ್ಕೊಮ್ಮೆ ನೀಡಲಾಗುವುದೆಂದು ತಿಳಿಸಲಾಯಿತು.
ಅರುಣ್ ರಾಜ್ ರೊಡ್ರಿಗಸ್ ಹಾಗೂ ಅಮೋರಾ ಮೊಂತೇರೊ ಕಾರ್ಯಕ್ರಮ ನಿರ್ವಹಿಸಿದರು. ಜಗತ್ತಿನ ವಿವಿಧ ಕಡೆಗಳಿಂದ ಕೊಂಕಣಿ ಮಹನೀಯರು ಭಾಗವಹಿಸಿದ್ದರು.