Advertisement

World Kidney Day: ಹಿಮೋಡಯಾಲಿಸಿಸ್‌: ಯಾವಾಗ ಅಗತ್ಯ? ಯಾಕೆ ಆವಶ್ಯಕ? ಕಾರ್ಯನಿರ್ವಹಣೆ ಹೇಗೆ?

09:53 AM Mar 10, 2024 | Team Udayavani |

ವಿಶ್ವ ಮೂತ್ರಪಿಂಡ (ಕಿಡ್ನಿ): ದಿನಾಚರಣೆ ಮಾರ್ಚ್‌ 14

Advertisement

ಈ ವರುಷದ ವಿಷಯ ಪರಿಕಲ್ಪನೆ: ಎಲ್ಲರಿಗೂ ಮೂತ್ರಪಿಂಡ (ಕಿಡ್ನಿ) ಆರೋಗ್ಯ ಆರೈಕೆ ಮತ್ತು ಸೂಕ್ತ ಔಷಧ ಅಭ್ಯಾಸಕ್ಕೆ ಸಮಾನ ಪ್ರವೇಶವನ್ನು ಮುನ್ನಡೆಸುವುದು.

ಈ ಚಿಕಿತ್ಸೆಯು ಮೂತ್ರಪಿಂಡ ವಿಫ‌ಲತೆಗೆ ಲಭ್ಯವಿರುವ ಚಿಕಿತ್ಸೆಯಾದರೂ ಇದರ ಪ್ರಾರಂಭದ ನಿರ್ಧಾರಕ್ಕೆ ವೈದ್ಯಕೀಯವಾಗಿ ಕೆಲವು ನಿಯಮಾವಳಿಗಳಿವೆ.

ದೀರ್ಘ‌ಕಾಲದ ಮೂತ್ರಪಿಂಡ ಕಾಯಿಲೆ (CKD) ಪ್ರಪಂಚದಾದ್ಯಂತ ಪ್ರಸ್ತುತವಾಗಿ ಸಾವಿಗೆ 8ನೇ ಪ್ರಮುಖ ಕಾರಣವಾಗಿದೆ. (The lancet : Latest global disease estimates reveal perfect storm of rising chronic diseases and public health failures fuelling COVID-19 pandemic) ತಯಾರಿ ಮತ್ತು ವಿತರಣೆಯ ಮೇಲೆ ಕೇಂದ್ರೀಕೃತವಾಗಿವೆ.

ಇತ್ತೀಚೆಗಿನ ಚಿಕಿತ್ಸಕ ಪ್ರಗತಿಗಳು ರೋಗವನ್ನು ತಡೆಗಟ್ಟಲು ಅಥವಾ ಕಾಯಿಲೆಯ ಪ್ರಗತಿಯನ್ನು ವಿಳಂಬಗೊಳಿಸಲು, ಹೃದಯ ರಕ್ತನಾಳದ ಕಾಯಿಲೆ ಮತ್ತು ಮೂತ್ರಪಿಂಡ ವೈಫ‌ಲ್ಯದಂತಹ ತೊಡಕುಗಳನ್ನು ತಗ್ಗಿಸಲು ಅಭೂತಪೂರ್ವ ಅವಕಾಶಗಳನ್ನು ನೀಡುತ್ತಿವೆ. ಇದಲ್ಲದೆ ಶಾಶ್ವತ ಮೂತ್ರಪಿಂಡ ವೈಫ‌ಲ್ಯ ಕಾಯಿಲೆಯೊಂದಿಗೆ ವಾಸಿಸುವ ಜನರ ಜೀವನದ ಗುಣಮಟ್ಟ ಮತ್ತು ಪ್ರಮಾಣವನ್ನು ಹೆಚ್ಚಿಸುತ್ತಿವೆ.

Advertisement

ಈ ಹೊಸ ಚಿಕಿತ್ಸೆಗಳು ಎಲ್ಲ ರೋಗಿಗಳಿಗೆ ಸಾರ್ವತ್ರಿಕವಾಗಿ ಲಭ್ಯವಿದ್ದರೂ ಪ್ರತೀ ದೇಶ ಮತ್ತು ಪರಿಸರದಲ್ಲಿ ಶಾಶ್ವತ ಮೂತ್ರಪಿಂಡ ವೈಫ‌ಲ್ಯ ಕಾಯಿಲೆಯ ಬಗ್ಗೆ ಅರಿವಿನ ಕೊರತೆ, ಮೂತ್ರಪಿಂಡದ ತಜ್ಞರ ಕೊರತೆ, ಹೊಸ ಚಿಕಿತ್ಸೆಗಳ ಬಗ್ಗೆ ಅರಿವಿಲ್ಲದಿರುವುದು ಮತ್ತು ದುಬಾರಿ ಚಿಕಿತ್ಸಾ ವೆಚ್ಚಗಳ ಕಾರಣ ಎಲ್ಲ ವರ್ಗಗಳ ಜನತೆಗೆ ಇದು ಸುಲಭವಾಗಿ ತಲುಪುವಲ್ಲಿ ನಿಧಾನಗತಿಯನ್ನು ಹೊಂದುತ್ತಿದೆ.

ಈ ಲೇಖನವು ಮೂತ್ರಪಿಂಡ ವೈಫ‌ಲ್ಯ ಹೊಂದಿರುವ ವ್ಯಕ್ತಿಗೆ ನೀಡಲಾಗುವ ವಿವಿಧ ರೀತಿಯ ವೈದ್ಯಕೀಯ ಚಿಕಿತ್ಸೆಗಳ ಪೈಕಿ ಒಂದಾದ ಮತ್ತು ಬಹು ಸಾಮಾನ್ಯವಾಗಿ ಚಾಲ್ತಿಯಲ್ಲಿರುವ ಕೃತಕವಾಗಿ ರಕ್ತ ಶುದ್ಧೀಕರಿಸುವ ಹಿಮೋಡಯಾಲಿಸಿಸ್‌ ಚಿಕಿತ್ಸೆಯ ಬಗ್ಗೆ ಕಿರು ಪರಿಚಯವನ್ನು ಮಾಡುತ್ತದೆ.

1. ಹಿಮೋಡಯಾಲಿಸಿಸ್‌ ಚಿಕಿತ್ಸೆ ಎಂದರೇನು ?

“ಹಿಮೋ’’ (hemo-blood) ಎಂದರೆ ರಕ್ತ ಮತ್ತು “ಡಯಾಲಿಸಿಸ್‌’’ ಎಂದರೆ ಸೋಸುವುದು ಅಥವಾ ಏನೋ ಒಂದನ್ನು/ಕೆಲವೊಂದನ್ನು ತೆಗೆಯುವುದು ಎಂದರ್ಥ. ಅಂದರೆ ರಕ್ತದಿಂದ ಕಶ್ಮಲಗಳನ್ನು ಸೋಸುವುದು/ಬೇರ್ಪಡಿಸುವುದು.

2. ಹಿಮೋಡಯಾಲಿಸಿಸ್‌ ಚಿಕಿತ್ಸೆ ಮಾಡುವ ಸಂದರ್ಭಗಳು

1. ಶಾಶ್ವತ ಮತ್ತು ತಾತ್ಕಾಲಿಕ ಮೂತ್ರಪಿಂಡ ವೈಫ‌ಲ್ಯ ಉಂಟಾದಾಗ

2. ಕೃತಕ ಮೂತ್ರಪಿಂಡದ ಮೂಲಕ ತೆಗೆಯಬಹುದಾದ ಕೆಲವು ವಿಷಕಾರಕ ಅಂಶಗಳನ್ನು (ಉದಾ: ಕೆಲವು ವಿಷ ಜಾತಿಯ ಹಾವು ಕಡಿತ ಅಥವಾ ವಿಷ ಸೇವನೆ) ತೆಗೆಯಲು/ಬೇರ್ಪಡಿಸಲು.

3. ಹಿಮೋಡಯಾಲಿಸಿಸ್‌ ಪ್ರಾರಂಭದ ನಿರ್ಧಾರ

1. ಮೂತ್ರಪಿಂಡ ಆರೋಗ್ಯ ಸಮಸ್ಯೆ ಇರುವ ವ್ಯಕ್ತಿಯು ಮೊದಲ ಹಂತದ ಚಿಕಿತ್ಸಾ ಕ್ರಮಗಳಾದ ಪಥ್ಯಾಹಾರ ಪಾಲನೆ, ಮತ್ತು ಔಷಧ ಸೇವನೆ ಚಿಕಿತ್ಸೆಗೆ ಸ್ಪಂದಿಸದ ಸಂದರ್ಭಗಳಲ್ಲಿ ಕಶ್ಮಲಗಳು, ವಿಷಕಾರಿಕ ಅಂಶಗಳು ಮತ್ತು ಸೇವನೆ ಮಾಡಿದ ನೀರು ಮೂತ್ರ ರೂಪದಲ್ಲಿ ಹೊರಹೋಗದೆ ದೇಹದಲ್ಲೇ ಉಳಿಯುತ್ತವೆ. ಹೀಗೆ ಶೇಖರಗೊಂಡ ತ್ಯಾಜ್ಯಗಳಿಂದ ವ್ಯಕ್ತಿಯು ಮಾರಣಾಂತಿಕ ಹಂತವನ್ನು ತಲುಪುತ್ತಾನೆ. ಇಂತಹ ಸಮಯದಲ್ಲಿ ತ್ವರಿತಗತಿಯಲ್ಲಿ ಇವುಗಳನ್ನು ರಕ್ತದಿಂದ ಬೇರ್ಪಡಿಸಲು ಹಿಮೋಡಯಾಲಿಸಿಸ್‌ ಚಿಕಿತ್ಸೆಯನ್ನು ನೀಡುವ ನಿರ್ಧಾರವನ್ನು ಮಾಡಲಾಗುತ್ತದೆ.

2. ಅಂತಿಮ ಹಂತದ ಮೂತ್ರಪಿಂಡ ವೈಫ‌ಲ್ಯದ ಸ್ಥಿತಿಯಲ್ಲಿ (ಕಿಡ್ನಿಯಲ್ಲಿ ರಕ್ತದ ಸೋಸುವಿಕೆಯ ಪ್ರಮಾಣ ನಿಮಿಷಕ್ಕೆ 15 ಮಿಲಿಗಿಂತ ಕಡಿಮೆಯಾದಾಗ) ವೇಗವಾಗಿ ಕಶ್ಮಲಗಳನ್ನು ರಕ್ತದಿಂದ ಬೇರ್ಪಡಿಸಲು ವೈದ್ಯರು ಹಿಮೋಡಯಾಲಿಸಿಸ್‌ ಚಿಕಿತ್ಸೆಯ ಸಲಹೆ ನೀಡುತ್ತಾರೆ.

3. ಮೂತ್ರಪಿಂಡ ಸಮಸ್ಯೆ ಹೊಂದಿರದ ಆದರೆ ರಕ್ತದಲ್ಲಿ ಡಯಾಲಿಸಿಸ್‌ ಮೂಲಕ ತೆಗೆಯಬಹುದಾದ ವಿಷಕಾರಿ ಅಂಶಗಳನ್ನು ಹೊಂದಿರುವಂತಹ ವ್ಯಕ್ತಿಗೆ ಹಿಮೋಡಯಾಲಿಸಿಸ್‌ ಸೂಕ್ತ ಚಿಕಿತ್ಸೆಯಾಗುತ್ತದೆ.

4. ತಾತ್ಕಾಲಿಕ ಕಿಡ್ನಿ ವೈಫ‌ಲ್ಯವಿದ್ದು ತುರ್ತಾಗಿ ರಕ್ತ ಶುದ್ಧಿಯ ಅಗತ್ಯವಿದ್ದಲ್ಲಿ ವ್ಯಕ್ತಿಗೆ ಹಿಮೋಡಯಾಲಿಸಿಸ್‌ ಅಗತ್ಯವಿರುತ್ತದೆ.

6. ಹಿಮೋಡಯಾಲಿಸಿಸ್‌ ಚಿಕಿತ್ಸೆಯ ಕಾರ್ಯವಿಧಾನದ ಹಂತಗಳು

1. ಈ ಚಿಕಿತ್ಸೆಯನ್ನು ಒಳ ಮತ್ತು ಹೊರರೋಗಿಗಳಿಗೂ ನೀಡಲಾಗುತ್ತದೆ.

2. ಚಿಕಿತ್ಸೆಗೆ ಒಳಗಾಗುವ ವ್ಯಕ್ತಿಗೆ ಮತ್ತು ರೋಗಿಯ ಆರೈಕೆ ಮಾಡುವವರಿಗೆ ಚಿಕಿತ್ಸೆಯ ಬಗ್ಗೆ ಮಾಹಿತಿಯನ್ನು ನೀಡಿ ನಂತರ ಮಾಹಿತಿ ಪತ್ರಕ್ಕೆ ಅವರ ಒಪ್ಪಿಗೆ ಸಹಿಯನ್ನು ಪಡೆಯಲಾಗುವುದು.

3. ವ್ಯಕ್ತಿಯು ಹಿಮೋಡಯಾಲಿಸಿಸ್‌ ಚಿಕಿತ್ಸೆಗೆ ಸೂಕ್ತರಾಗಿದ್ದಾರೆಯೇ ಎಂಬುದನ್ನು ಪರೀಕ್ಷಿಸಿ (ರಕ್ತದ ಒತ್ತಡ, ಹೃದಯ ಬಡಿತ, ಉಸಿರಾಟದ ವೇಗ ಮತ್ತು ದೇಹದ ಉಷ್ಣತೆ) ದೃಢಪಡಿಸಿಕೊಳ್ಳಲಾಗುವುದು.

4. ಚಿಕಿತ್ಸೆಯ ಪ್ರಾರಂಭದಲ್ಲಿ ರೋಗಿಯ ದೇಹದ ತೂಕವನ್ನು ಅಳತೆ ಮಾಡಲಾಗುವುದು.

5. ರೋಗಿಯ ರಕ್ತವನ್ನು ದೇಹದಿಂದ ಹೊರತಂದು ಒಂದು ನಿಮಿಷಕ್ಕೆ ಸುಮಾರು 250 ಮಿ.ಲಿ. ರಿಂದ 300 ಮಿ.ಲಿ.ನಷ್ಟು ಪ್ರಮಾಣದ ರಕ್ತವನ್ನು ಕೊಳವೆಗಳ ಮುಖಾಂತರ ಕೃತಕ ಮೂತ್ರಪಿಂಡದೊಳಗಿರುವ ರಕ್ತ ವಿಭಾಗದ ಮೂಲಕ ಡಯಾಲಿಸಿಸ್‌ ದ್ರಾವಣಕ್ಕೆ ವಿರುದ್ಧ ದಿಕ್ಕಿನಲ್ಲಿ ಸುಮಾರು 4 ಘಂಟೆಗಳ ಕಾಲ ಹಾಯಿಸಿ ಕಶ್ಮಲಗಳನ್ನು ಮತ್ತು ಅಧಿಕ ನೀರಿನಂಶವನ್ನು ಸೋಸಲಾಗುವುದು ಮತ್ತು ಮೂತ್ರದ ರೂಪದಲ್ಲಿ ತೆಗೆಯಲಾಗುವುದು. ಶುದ್ಧ ರಕ್ತವನ್ನು ದೇಹಕ್ಕೆ ಸಂಪೂರ್ಣವಾಗಿ ಮರಳಿಸಿ ರೋಗಿಯ ದೇಹದ ಸುಸ್ಥಿತಿ ಖಾತರಿಪಡಿಸಿಕೊಂಡ ನಂತರ ಹೊರರೋಗಿಯಾಗಿದ್ದಲ್ಲಿ ಮನೆಗೆ ಹೋಗಲು ಅನುಮತಿ ನೀಡಲಾಗುವುದು.

8. ಹಿಮೋಡಯಾಲಿಸಿಸ್‌ ಚಿಕಿತ್ಸೆಯ ಪ್ರಯೋಜನಗಳು ­

  1. ವೇಗವಾಗಿ ಕಡಿಮೆ ಅವಧಿಯಲ್ಲಿ ರಕ್ತದಿಂದ ಕಶ್ಮಲ ಬೇರ್ಪಡಿಸಬಹುದು. ­
  2. ನಿಯಮಿತ ಹಿಮೋಡಯಾಲಿಸಿಸ್‌ ಚಿಕಿತ್ಸೆಯು ವ್ಯಕ್ತಿಯ ಜೀವಿತಾವಧಿಯನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಲು ಸಹಾಯ ಮಾಡುತ್ತದೆ. ­
  3. ಚಿಕಿತ್ಸೆಯನ್ನು ತರಬೇತಿ ಹೊಂದಿದ ಹಾಗೂ ನುರಿತ ಆರೋಗ್ಯ ತಜ್ಞರಿಂದ ಮಾಡಲಾಗುತ್ತದೆ.

 

  1. ಚಿಕಿತ್ಸೆಯ ಮಿತಿಗಳು/ನ್ಯೂನತೆಗಳು ­
  • ಚಿಕಿತ್ಸಾ ವೆಚ್ಚವು ದುಬಾರಿಯಾಗಿರುತ್ತದೆ.
  • ಶಾಶ್ವತ ಮೂತ್ರಪಿಂಡ ಕಾಯಿಲೆಗೆ ಇದು ಜೀವನಪರ್ಯಂತ ಚಿಕಿತ್ಸೆಯಾಗಿರುತ್ತದೆ. ­
  • ಚಿಕಿತ್ಸೆಗಾಗಿ ವಾರದಲ್ಲಿ 3 ದಿನ ಆಸ್ಪತ್ರೆಗೆ ಭೇಟಿಯಾಗಬೇಕಾಗುತ್ತದೆ. ಮತ್ತು ಪ್ರತಿ ಚಿಕಿತ್ಸೆಯ ಪ್ರಾರಂಭದಲ್ಲಿ ಸೂಜಿ ಚುಚ್ಚುವಿಕೆ ಇರುತ್ತದೆ. ­
  • ಈ ಚಿಕಿತ್ಸೆಯಿಂದ ಮೂತ್ರಪಿಂಡದ ಎಲ್ಲಾ ಕಾರ್ಯಗಳನ್ನು ಪರ್ಯಾಯವಾಗಿ ಮಾಡಲಾಗುವುದಿಲ್ಲ. ಆದ್ದರಿಂದ ಇದು ಮೂತ್ರಪಿಂಡದ ತೊಂದರೆಯನ್ನು ಗುಣಪಡಿಸುವುದಿಲ್ಲ ಮತ್ತು ಶಾಶ್ವತ ಮೂತ್ರಪಿಂಡ ವೈಫ‌ಲ್ಯದಲ್ಲಿ ಈ ಚಿಕಿತ್ಸೆಯನ್ನು ಜೀವನಪರ್ಯಂತ ನಿರಂತರವಾಗಿ ಮಾಡಬೇಕಾಗುತ್ತದೆ.
  1. ಹಿಮೋಡಯಾಲಿಸಿಸ್‌ ಚಿಕಿತ್ಸೆಗೆ ಒಳಗಾಗುವ ವ್ಯಕ್ತಿಗಳಿಗೆ ಕೆಲವು ವೈದ್ಯಕೀಯ ಮಾಹಿತಿಗಳು ­
  • ಶಾಶ್ವತ ಮೂತ್ರಪಿಂಡ ವೈಫ‌ಲ್ಯ ಜೀವನದ ಅಂತಿಮವಲ್ಲ. ಅನಂತರವೂ ಜೀವಿಸಲು ಅವಕಾಶಗಳಿವೆ. ಸರಿಯಾದ ಚಿಕಿತ್ಸೆಯ ಪಾಲನೆಯಿಂದ ದೀರ್ಘ‌ಕಾಲ ಉತ್ತಮ ಜೀವನವನ್ನು ನಡೆಸಿಕೊಂಡು ಹೋಗಬಹುದು. ­
  • ವಿವಿಧ ರೀತಿಯ ಡಯಾಲಿಸಿಸ್‌ ಚಿಕಿತ್ಸಾ ವಿಧಾನಗಳಲ್ಲಿ ನಿಮಗೆ ಮೂತ್ರಪಿಂಡ ತಜ್ಞರು ಸೂಚಿಸಿದ ಚಿಕಿತ್ಸೆಯ ಬಗ್ಗೆ ವಿವರವಾಗಿ ಅರಿತುಕೊಂಡು ಮನೆಮಂದಿಯಲ್ಲಿ ಚರ್ಚಿಸಿ ನಿಮ್ಮ ಆರೈಕೆಗೆ ಉತ್ತಮವಾದುದನ್ನು ಆಯ್ಕೆ ಮಾಡಿ ಮಾಹಿತಿ ಪತ್ರಕ್ಕೆ ಒಪ್ಪಿಗೆ ಸಹಿ ಹಾಕಬೇಕಾಗುತ್ತದೆ. ­
  • ಹಿಮೋಡಯಾಲಿಸಿಸ್‌ ಚಿಕಿತ್ಸೆಯನ್ನು ಆಯ್ಕೆ ಮಾಡಿಕೊಂಡಾಗ ರಕ್ತನಾಳ ಪ್ರವೇಶಿಸಲು ದಾರಿಯ ಸ್ಥಾಪನೆ (establishment of vascular access) ಖಂಡಿತವಾಗಿಯೂ ಹಿಮೋಡಯಾಲಿಸಿಸ್‌ ಚಿಕಿತ್ಸೆ ನೀಡಲು ಸಾಧ್ಯವಾಗುವುದೇ ಇಲ್ಲ . ಆದುದರಿಂದ ಇದನ್ನು ಹಿಮೋಡಯಾಲಿಸಿಸ್‌ ಚಿಕಿತ್ಸೆ ಪಡೆಯುವ ವ್ಯಕ್ತಿಯ “ಜೀವನ ರೇಖೆ’’ (lifeline) ಎಂದು ಸಾಮಾನ್ಯವಾಗಿ ಹೇಳುತ್ತಾರೆ. ­
  • ರಕ್ತನಾಳದ ದಾರಿಯು (Vascular Access) ನಿಮ್ಮ ಜೀವನರೇಖೆಯಾಗಿರುವುದರಿಂದ ನೀವು ಅದರ ಸುಸ್ಥಿತಿಯ ಬಗ್ಗೆ ಕಾಳಜಿಯನ್ನು ವಹಿಸಬೇಕಾಗುತ್ತದೆ. ಇದರಿಂದ ನಿಮಗೆ ತುರ್ತುಪರಿಸ್ಥಿತಿ ಅಥವಾ ಯಾವುದೇ ಗಳಿಗೆಯಲ್ಲಿ ವೇಗವಾಗಿ ಡಯಾಲಿಸಿಸ್‌ ಚಿಕಿತ್ಸೆ ಪಡೆಯಬೇಕಾಗಿ ಬಂದಲ್ಲಿ ಕೂಡಲೇ ಹಿಮೋಡಯಾಲಿಸಿಸ್‌ ಚಿಕಿತ್ಸೆಯನ್ನು ನೀಡಬಹುದು. ­
  • ಹಿಮೋಡಯಾಲಿಸಿಸ್‌ ದಿವಸಕ್ಕೆ 4 ಗಂಟೆಯಂತೆ ವಾರದಲ್ಲಿ ಮೂರು ದಿವಸ ಅಂದರೆ ವಾರಕ್ಕೆ 12 ಗಂಟೆ ಮಾತ್ರ ಮಾಡಲಾಗುತ್ತದೆ. ಆದ್ದರಿಂದ ಡಯಾಲಿಸಿಸ್‌ ಇಲ್ಲದ ದಿನಗಳಲ್ಲಿ ರಕ್ತದಲ್ಲಿ ತ್ಯಾಜ್ಯ ವಸ್ತುಗಳ ಹಾಗೂ ಸೇವಿಸಿದ ನೀರಿನ ಶೇಖರಣೆಯಾಗುವುದರಿಂದ ವೈದ್ಯರ ಸಲಹೆಯಂತೆ ಪಥ್ಯಾಹಾರ ಮತ್ತು ನೀರಿನ ಸೇವನೆಯ ಪ್ರಮಾಣವನ್ನು ಪಾಲಿಸಬೇಕಾಗುತ್ತದೆ. ಎರಡು ಡಯಾಲಿಸಿಸ್‌ ಚಿಕಿತ್ಸೆಗಳ ನಡುವಿನ ದಿನಗಳಲ್ಲಿ ದೇಹದ ತೂಕ 3 ಕಿಲೋಗ್ರಾಂಗಿಂತ ಹೆಚ್ಚಾಗಿರದಿದ್ದರೆ ಸೂಕ್ತವಾಗಿರುತ್ತದೆ. ಇದರಿಂದ ಡಯಾಲಿಸಿಸ್‌ ಒಳಗಾಗುವಾಗ ರಕ್ತದೊತ್ತಡದ ಕುಸಿತ, ಸ್ನಾಯುಸೆಳೆತ, ವಾಂತಿ ಮತ್ತು ಸುಸ್ತಾಗುವುದನ್ನು ತಡೆಗಟ್ಟಬಹುದು.
  • ವೈದ್ಯಕೀಯ ರಂಗದಲ್ಲಿ ಈವರೆಗೆ ಲಭ್ಯವಿರುವ ಯಾವುದೇ ಮೂತ್ರಪಿಂಡ ಪರ್ಯಾಯ ಚಿಕಿತ್ಸೆಯನ್ನು ಆಯ್ಕೆ ಮಾಡಿಕೊಂಡರೂ ಅದು ಶಾಶ್ವತ ಮೂತ್ರಪಿಂಡ ವೈಫ‌ಲ್ಯತೆಯನ್ನು ಸಂಪೂರ್ಣವಾಗಿ ಗುಣಪಡಿಸುವ ಚಿಕಿತ್ಸೆಯಲ್ಲ . ಆದುದರಿಂದ ವಿವಿಧ ರೀತಿಯ ಚಿಕಿತ್ಸೆಗಳ ಬಗ್ಗೆ ಮಾಹಿತಿ ಪಡೆದು ತಮಗೆ ಸೂಕ್ತವಾಗುವ ಚಿಕಿತ್ಸೆಯನ್ನು ವೈದ್ಯರೊಂದಿಗೆ ಚರ್ಚಿಸಿ ಆಯ್ಕೆ ಮಾಡಿಕೊಳ್ಳುವುದು ಉತ್ತಮ.

-ವೀಣಾ ಎನ್‌.ಕೆ. ಅಸಿಸ್ಟೆಂಟ್‌ ಪ್ರೊಫೆಸರ್‌, ಸೆಲೆಕ್ಷನ್‌ ಗ್ರೇಡ್‌ ಆರ್‌ಆರ್‌ಟಿ ಮತ್ತು ಡಿಟಿ ವಿಭಾಗ, ಎಂಸಿಎಚ್‌ಪಿ, ಮಾಹೆ, ಮಣಿಪಾಲ

-ಡಾ| ದರ್ಶನ್‌ ರಂಗಸ್ವಾಮಿ ಮುಖ್ಯಸ್ಥರು ಮತ್ತು ಪ್ರಾಧ್ಯಾಪಕರು ನೆಫ್ರಾಲಜಿ ವಿಭಾಗ, ಕಸ್ತೂರ್ಬಾ ಆಸ್ಪತ್ರೆ , ಕೆಎಂಸಿ, ಮಾಹೆ, ಮಣಿಪಾಲ

-ಮೇಘಾ ನಾಗರಾಜ್‌ ನಾಯಕ್‌ ಅಸಿಸ್ಟೆಂಟ್‌ ಪ್ರೊಫೆಸರ್‌- ಸೀನಿಯರ್‌ ಗ್ರೇಡ್‌, ಆರ್‌ಆರ್‌ಟಿ ಮತ್ತು ಡಿಟಿ ವಿಭಾಗ ಎಂಸಿಎಚ್‌ಪಿ, ಮಾಹೆ, ಮಣಿಪಾಲ

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ನೆಫ್ರಾಲಜಿ ವಿಭಾಗ, ಕೆಎಂಸಿ , ಮಂಗಳೂರು)

 

Advertisement

Udayavani is now on Telegram. Click here to join our channel and stay updated with the latest news.

Next