Advertisement
ಫೆ. 28ರಂದು ರಾತ್ರಿ ಗುಲಾಬಿ ಸಾವನ್ನಪ್ಪಿದ್ದು, ಮಾ. 5ರಂದು ಕೊಲೆಯೆಂದು ದೃಢಪಟ್ಟಿತ್ತು. ತನಿಖೆ ನಡೆಸಿದ ಕುಂದಾಪುರ ಪೊಲೀಸರು, ವಾರದೊಳಗೆ ಆರೋಪಿಯನ್ನು ಸಿದ್ದಾಪುರದ ಪೆಟ್ರೋಲ್ ಬಂಕ್ ಸಮೀಪದಿಂದ ಬಂಧಿಸಿದ್ದಾರೆ. ಆತ ಪರಾರಿಯಾಗಲು ಬಳಸಿದ್ದ ಕಾರನ್ನು ಕೂಡ ವಶಪಡಿಸಿಕೊಂಡಿದ್ದಾರೆ.
ಆರೋಪಿಯು ಗುಲಾಬಿಯ ಮನೆ ಸಮೀಪ ಗೇರುಬೀಜ ಕಾರ್ಖಾನೆಯಲ್ಲಿ ಕೆಲಸಗಾರರಿಗೆ ಕೊಡುವ ಮನೆಯಲ್ಲಿ ವಾಸಿಸುತ್ತಿದ್ದ. ಆತ ಒಂದು ಕಾರು ಹೊಂದಿದ್ದ, ಆದರೆ ಸರಿಯಾದ ಉದ್ಯೋಗ ಇರಲಿಲ್ಲ. ಈತನ ಪತ್ನಿ ಈ ಕಾರ್ಖಾನೆಯ ಕಾರ್ಮಿಕೆಯಾಗಿದ್ದಾರೆ. ರವಿರಾಜ್ ಹಾಗೂ ಗುಲಾಬಿ 2008ರಿಂದಲೂ ಪರಿಚಿತರಾಗಿದ್ದು, ಇವರಿಬ್ಬರ ಮಧ್ಯೆ ಹಣಕಾಸಿನ ವ್ಯವಹಾರವಿತ್ತು. ಫೆ. 28ರಂದು ರಾತ್ರಿ ಗುಲಾಬಿ ಮನೆಗೆ ಬಂದ ರವಿರಾಜ್, ಸಾಲ ತೀರಿಸಲು ಗುಲಾಬಿಯ ಚಿನ್ನಾಭರಣವನ್ನು ಕೇಳಿದ್ದ. ಇದಕ್ಕೆ ಒಪ್ಪದಿದ್ದಾಗ ಟವೆಲ್‌ನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಬಳಿಕ ಆಕೆಯ ಮೈಮೇಲಿದ್ದ 1 ಲ. ರೂ. ಮೌಲ್ಯದ 28 ಗ್ರಾಂನ ಚಿನ್ನದ ಸರ, 30 ಸಾ. ರೂ. ಮೌಲ್ಯದ 8 ಗ್ರಾಂ. ತೂಕದ ಚಿನ್ನದ ಬೆಂಡೋಲೆ 1 ಜತೆ, 15 ಸಾ. ರೂ. ಮೌಲ್ಯದ 4 ಗ್ರಾಂ. ತೂಕದ ಚಿನ್ನದ ಉಂಗುರ ಸಹಿತ ಒಟ್ಟು 1.45 ಲ. ರೂ. ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ. ಚಿನ್ನಾ ಭರಣಗಳನ್ನು ಬೆಂಗಳೂರು ಹಾಗೂ ಸಿದ್ದಾಪುರದಲ್ಲಿ ಅಡವಿರಿಸಿದ್ದಾನೆ ಎಂದು ಹೆಚ್ಚುವರಿ ಎಸ್‌ಪಿ ಕುಮಾರಚಂದ್ರ ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಪತ್ತೆ ಹಚ್ಚಿದ ವಿಶೇಷ ತಂಡ
ಆರೋಪಿ ಪತ್ತೆಗೆ ಎಸ್‌ಪಿ ನಿಶಾ ಜೇಮ್ಸ್ ಹಾಗೂ ಹೆಚ್ಚುವರಿ ಎಸ್‌ಪಿ ಕುಮಾರಚಂದ್ರ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಬಿ.ಪಿ. ದಿನೇಶ್ ಕುಮಾರ್ ನಿರ್ದೇಶನದಂತೆ ಕುಂದಾಪುರ ಸಿಐ ಮಂಜಪ್ಪ ಡಿ.ಆರ್. ನೇತೃತ್ವದಲ್ಲಿ ಅಪರಾಧ ಪತ್ತೆ ದಳದ ಸಿಬಂದಿಯ ವಿಶೇಷ ತಂಡ ರಚಿಸಲಾಗಿತ್ತು.
Related Articles
ಆರೋಪಿಯನ್ನು ಸೋಮವಾರ ಕುಂದಾಪುರದ ಹೆಚ್ಚುವರಿ ಜೆಎಂ ಎಫ್‌ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಧೀಶ ಶ್ರೀಕಾಂತ ಎನ್.ಎ. ಅವರು 5 ದಿನಗಳ ಕಾಲ ಪೊಲೀಸ್ ಕಸ್ಟಡಿ ವಿಧಿಸಿದ್ದಾರೆ. ಪ್ರಾಸಿಕ್ಯೂಶನ್ ಪರ ಸಹಾಯಕ ಸರಕಾರಿ ಅಭಿಯೋಜಕಿ ಸುಮಂಗಲಾ ನಾಯ್ಕ ವಾದಿಸಿದ್ದಾರೆ.
Advertisement
ಆರೋಪಿ ಪತ್ನಿಗೆ ಹಲ್ಲೆಆರೋಪಿಯನ್ನು ಸೋಮವಾರ ಮಧ್ಯಾಹ್ನ ಸ್ಥಳ ಮಹಜರು ನಡೆಸಲು ಮೃತರ ಮನೆಗೆ ಕರೆ ತಂದಾಗ ಅಲ್ಲಿಗೆ ಬಂದಿದ್ದ ಆರೋಪಿ ಪತ್ನಿ ಮೇಲೆ ಗುಲಾಬಿ ಸಂಬಂಧಿಕರು ಹಲ್ಲೆ ನಡೆಸಿದ್ದಾರೆ. ಬಳಿಕ ಪೊಲೀಸರು ಹಾಗೂ ಸ್ಥಳೀಯರು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.