ತುಮಕೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅತಿವೃಷ್ಟಿ ಉಂಟಾಗಿರುವುದರಿಂದ ಜನರು ಅಕ್ಷರಶಃ ತತ್ತರಿಸಿಹೋಗಿದ್ದರೆ, ಕಲ್ಪತರು ನಾಡಿನ ಮೇಲೆ ವರುಣನ ಮುನಿಸು ಕಡಿಮೆಯಾದಂತಿಲ್ಲ. ಆದರೆ ಹೇಮಾವತಿ ಜಲಾಶಯ ತುಂಬಿರುವುದರಿಂದ ಜಿಲ್ಲೆಯ ಜನರ ನೀರಿನ ದಾಹ ನೀಗಿಸುವ ಸಲುವಾಗಿ ಹೇಮಾವತಿ ನೀರು ಜಿಲ್ಲೆಗೆ ಪ್ರವೇಶಿಸಲಿದೆ.
ಬೇರೆಡೆ ಮಳೆಯಿಂದ ಜಿಲ್ಲೆಗೆ ಹೇಮೆ: ಕಳೆದ ವರ್ಷ ತುಮಕೂರು ಜಿಲ್ಲೆಗೆ ಜುಲೈ ತಿಂಗಳಲ್ಲಿಯೇ ಹೇಮಾವತಿ ಜಲಾಶಯದಿಂದ ನೀರು ಹರಿಸಲಾಗಿತ್ತು. ಆದರೆ ಈ ವರ್ಷ ನಗರಕ್ಕೆ ನೀರು ಹರಿಸುವ ಬುಗಡನಹಳ್ಳಿ ಕೆರೆ ಬರಿದಾಗಿದೆ. ಕೊಳವೆಬಾವಿಗಳಲ್ಲಿ ಅಂತರ್ಜಲ ಕುಸಿದಿದೆ. ಜನರು ಟ್ಯಾಂಕರ್ ನೀರಿಗೆ ಅವಲಂಬಿತರಾಗಿದ್ದು, ಮಳೆ ಬರದಿದ್ದರೆ ಹೇಗಪ್ಪ ಎಂದು ಚಿಂತಿಸುವ ವೇಳೆಯಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ಮಳೆ ಧಾರಾಕಾರವಾಗಿ ಸುರಿದು ಜಲಾಶಯಗಳ ಒಳಹರಿವು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಾಲೆಗಳಲ್ಲಿ ನೀರು ಹರಿಸಲು ನಿರ್ಧರಿಸಿದ್ದು, ಅದರಂತೆ ತುಮಕೂರಿನ ಹೇಮಾವತಿ ನಾಲೆಗೆ ನೀರು ಬಿಟ್ಟಿರುವುದರಿಂದ ಈಗಾಗಲೇ ನೀರು ನಾಲೆಯಲ್ಲಿ ಹರಿದು ಬರುತ್ತಿದ್ದು, ಶನಿವಾರ ಮಧ್ಯಾಹ್ನ ಅಥವಾ ಸಂಜೆಯೊಳಗೆ ಹೇಮಾವತಿ ಬುಗಡನಹಳ್ಳಿ ಕೆರೆಗೆ ಬರುವ ಸಾಧ್ಯತೆ ಇದೆ.
ಹೇಮಾವತಿ ಜಲಾನಯನ ಪ್ರದೇಶದಲ್ಲಿ ಧಾರಕಾರವಾಗಿ ಮಳೆಯಾಗುತ್ತಿದ್ದು, ಹೇಮಾವತಿ ಜಲಾಶಯದಲ್ಲಿ ಶುಕ್ರವಾರದ ಒಳಹರಿವು 1 ಲಕ್ಷ ಕ್ಯೂಸೆಕ್‌ಗಿಂತ ಹೆಚ್ಚಾಗಿದ್ದು, ಪ್ರತಿನಿತ್ಯ 8 ಟಿಎಂಸಿ ನೀರು ಹೇಮಾವತಿ ಜಲಾಶಯದಲ್ಲಿ ಸಂಗ್ರವಾಗುತ್ತಿದೆ. ಈಗಾಗಲೇ ತುಮಕೂರು ಜಿಲ್ಲೆಯ ಹೇಮಾವತಿ ನಾಲಾ ವಲಯ ವ್ಯಾಪ್ತಿಗೆ ನೀರು ಹರಿಸಲಾಗಿದೆ. ನೀರು ರಭಸವಾಗಿ ನಾಲೆಯಲ್ಲಿ ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಶನಿವಾರ ತುಮಕೂರು ನಗರದ ಪ್ರಮುಖ ಕುಡಿಯುವ ನೀರಿನ ಜಲ ಸಂಗ್ರಹವಾದ ಬುಗಡನಹಳ್ಳಿ ಕೆರೆಗೆ ಹೇಮಾವತಿ ನೀರು ಬರಲಿದೆ.
ಜ್ಯೋತಿಗಣೇಶ್ ಪರಿಶೀಲನೆ: ಬುಗಡನಹಳ್ಳಿ ಕೆರೆಗೆ ಹೇಮಾವತಿ ನೀರು ಬರುತ್ತಿರುವುದರಿಂದ ಶುಕ್ರವಾರ ತುಮಕೂರು ನಗರ ಶಾಸಕ ಜಿ.ಬಿ ಜ್ಯೋತಿಗಣೇಶ್ ಬುಗಡನಹಳ್ಳಿ ಕೆರೆಗೆ ಭೇಟಿನೀಡಿ, ನೀರು ಬರುವ ಕಾಲುವೆ ದುರಸ್ತಿ ಕಾಮಗಾರಿ ಪರಿಶೀಲನೆ ನಡೆಸಿ, ಶನಿವಾರ ಮಧ್ಯಾಹ್ನದೊಳಗೆ ಹೇಮಾವತಿ ನೀರು ಬುಗುಡನಹಳ್ಳಿ ಕೆರೆಗೆ ಬರಲಿದ್ದು, ಕೆರೆಯ ಹತ್ತಿರ ಕಾಲುವೆಗೆ ಬಿದ್ದಿರುವ ಕಲ್ಲು, ನಾಲೆಯಲ್ಲಿ ತುಂಬಿರುವ ಮಣ್ಣು ತಕ್ಷಣವೇ ತೆಗೆಯುವಂತೆ, ಸೈಪೋನಿಂಗ್ ದುರಸ್ತಿ ಮಾಡುವಂತೆ ತಿಳಿಸಿ, ಹೆಚ್ಚುವರಿಯಾಗಿ ಜೆಸಿಬಿ ತೆಗೆದುಕೊಂಡು ತ್ವರಿತವಾಗಿ ದುರಸ್ತಿ ಕಾಮಗಾರಿ ಮಾಡುವಂತೆ ಮಹಾನಗರ ಪಾಲಿಕೆಯ ಕಾರ್ಯಪಾಲಕ ಎಂಜಿನಿಯರ್ ತಿಪ್ಪೇರುದ್ರಪ್ಪ ಮತ್ತು ಪಾಲಿಕೆ ಹಾಗೂ ಹೇಮಾವತಿ ಇಲಾಖೆಯ ಕಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
● ಚಿ. ನಿ. ಪುರುಷೋತ್ತಮ್