Advertisement

ಹೇಮೆಗೆ ಇನೂ ಆರಂಭ ಆಗಿಲ್ಲ ಒಳ ಹರಿವು 

03:12 PM Jun 19, 2023 | Team Udayavani |

ಹಾಸನ: ಮುಂಗಾರು ಮಳೆ ಇನ್ನೂ ಆರಂಭವಾದ ಕಾರಣ ಹೇಮಾವತಿ ಜಲಾಶಯಕ್ಕೆ ಇನ್ನೂ ಒಳ ಹರಿವು ಶುರುವಾಗಿಲ್ಲ. ಈ ವರ್ಷ ಜಲಾಶಯ ಭರ್ತಿಯಾಗದಿದ್ದರೆ ಅಚ್ಚುಕಟ್ಟು ಪ್ರದೇಶದ ಬೆಳೆಗಳಿಗೆ, ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಬಹುದೆಂಬ ಆತಂಕ ಎದುರಾಗಿದೆ.

Advertisement

ಸದ್ಯಕ್ಕೆ ಕುಡಿಯವ ನೀರಿಗಾಗುವಷ್ಟು ಸಂಗ್ರಹ ಹೇಮಾವತಿ ಜಲಾಶಯದಲ್ಲಿದೆ. ಆದರೆ, ಮುಂಗಾರು ಮಳೆಯ ವಿಳಂಬದಿಂದಾಗಿ ಈ ವರ್ಷ ಹೇಮಾವತಿ ಜಲಾಶಯ ಭರ್ತಿಯಾಗದಿದ್ದರೆ ಅಚ್ಚುಕಟ್ಟು ಪ್ರದೇಶದ ಬೆಳೆಗಳಿಗೆ ಹಾಗೂ ಕುಡಿಯುವ ನೀರಿಗೆ ತೊಂದರೆ ಆಗಬಹುದು ಎಂಬ ಆತಂಕ ಶುರುವಾಗಿದೆ.

ಬತ್ತಿದ ಒಳ ಹರಿವು: ಕಳೆದ ವರ್ಷ ಇದೇ ದಿನ ಹೇಮಾವತಿ ಜಲಾಶಯದಲ್ಲಿ 19 ಟಿಎಂಸಿ ನೀರಿನ ಸಂಗ್ರಹವಿತ್ತು. ಜಲಾಶಯಕ್ಕೆ 495 ಕ್ಯೂಸೆಕ್‌ ಒಳ ಹರಿವಿತ್ತು. ಆದರೆ, ಈ ವರ್ಷ ಜಲಾಶಯದಲ್ಲಿ 10 ಟಿಎಂಸಿ ನೀರಿನ ಸಂಗ್ರಹವಿದ್ದು, ಒಳ ಹರಿವು ಕೇವಲ 44 ಕ್ಯೂಸೆಕ್‌ ಇದೆ. ಬೇಸಿಗೆ ಬೆಳೆಗಳಿಗೆ ನೀರು ಹರಿಸದಿದ್ದರಿಂದ ಹೇಮಾವತಿ ಜಲಾಶಯದಲ್ಲಿ 10 ಟಿಎಂಸಿ ನೀರು ಉಳಿದಿದೆ. ಆದರೂ, ಕಳೆದ ವರ್ಷಕ್ಕೆ ಹೋಲಿಸಿದರೆ ಕಡಿಮೆ ಇದೆ.

ನಾಲ್ಕು ಜಿಲ್ಲೆಗೆ ನೀರು: ಹಾಸನ ತಾಲೂಕು, ಗೊರೂರಿನಲ್ಲಿ ನಿರ್ಮಾಣವಾಗಿರುವ ಹೇಮಾವತಿ ಜಲಾಶಯ 4 ಜಿಲ್ಲೆಗಳ 7 ಲಕ್ಷ ಎಕರೆ ಅಚ್ಚುಕಟ್ಟು ಪ್ರದೇಶವನ್ನು ಹೊಂದಿದ್ದು, ತುಮಕೂರು, ಮಂಡ್ಯ ಜಿಲ್ಲೆಯಲ್ಲಿ ಅತಿ ಹೆಚ್ಚು ಅಚ್ಚುಕಟ್ಟು ಪ್ರದೇಶವನ್ನು ಹೊಂದಿದೆ. ಇನ್ನುಳಿದಂತೆ ಹಾಸನ ಜಿಲ್ಲೆಯ 3 ತಾಲೂಕುಗಳ ಅಚ್ಚುಕಟ್ಟು ಪ್ರದೇಶದ ಬೆಳೆಗಳಿಗೆ, 6 ತಾಲೂಕುಗಳ ಕುಡಿಯುವ ನೀರಿಗೂ ಹೇಮಾವತ ಜಲಾಶಯವೇ ಆಶ್ರಯ. ಇನ್ನು ಮೈಸೂರು ಜಿಲ್ಲೆಯಲ್ಲಿ ಸ್ವಲ್ಪ ಭಾಗ ಅಚ್ಚುಕಟ್ಟು ಪ್ರದೇಶವನ್ನು ಹೇಮಾವತಿ ಜಲಾಶಯ ಹೊಂದಿದೆ.

ತುಮಕೂರಿಗೆ ಜೀವಧಾರೆ: ತುಮಕೂರು ಜಿಲ್ಲೆಯಲ್ಲಿ 3.18 ಲಕ್ಷ ಎಕರೆ ಅಚ್ಚುಕಟ್ಟು ಪ್ರದೇಶ ಹೊಂದಿರುವ ಹೇಮಾವತಿ ಯೋಜನೆ ಅ ಜಿಲ್ಲೆಯ ಕೇಂದ್ರ ತುಮಕೂರು ನಗರಕ್ಕೂ ಕುಡಿಯುವ ನೀರಿಗೆ ಆಶ್ರಯವಾಗಿದೆ. ಜೊತೆಗೆ ತಿಪಟೂರು, ತುರುವೇಕೆರೆ, ಗುಬ್ಬಿ, ಶಿರಾ ಸೇರಿ ಹಲವು ಪಟ್ಟಣಗಳೂ ಕುಡಿಯುವ ನೀರಿಗೆ ಹೇಮಾವತಿ ಜಲಾಶಯವನ್ನೇ ಆಶ್ರಯಿಸಿವೆ. ಮೂರು ಪಟ್ಟಣಕ್ಕೆ ನೀರು: ಮಂಡ್ಯ ಜಿಲ್ಲೆಯಲ್ಲಿ 2.30 ಲಕ್ಷ ಎಕರೆ ಅಚ್ಚುಕಟ್ಟು ಪ್ರದೇಶ ಹೊಂದಿರುವ ಹೇಮಾವತಿ ಜಲಾಶಯವು ನಾಗಮಂಗಲ, ಕೆ.ಆರ್‌ .ಪೇಟೆ, ಪಾಂಡವಪುರ ಪಟ್ಟಣಗಳಿಗೆ ಕುಡಿಯುವ ನೀರನ್ನೂ ಪೂರೈಸುತ್ತದೆ.

Advertisement

ಹಾಸನಕ್ಕೆ ಏಕೈಕ ಜಲಮೂಲ: ಹಾಸನ ಜಿಲ್ಲೆಯ 1.55 ಲಕ್ಷ ಎಕರೆ ಅಚ್ಚುಕಟ್ಟು ಜೊತೆಗೆ ಅರಸೀಕೆರೆ, ಚನ್ನರಾಯಪಟ್ಟಣ ತಾಲೂಕುಗಳ ಹಳ್ಳಿಗಳಿಗೆ ಕುಡಿಯವ ನೀರು, ಹಾಸನ ನಗರಕ್ಕೂ ಕುಡಿಯುವ ನೀರು ಪೂರೈಸುವ ಏಕೈಕ ಜಲ ಮೂಲವಾಗಿದೆ ಹೇಮಾವತಿ ಜಲಾಯಶ. ಜೊತೆಗೆ ಜಿಲ್ಲೆಯ ಸಕಲೇಶಪುರ, ಅರಕಲಗೂಡು, ಹೊಳೆನರಸೀಪುರ, ಚನ್ನರಾಯಪಟ್ಟಣ, ಅರಸೀಕೆರೆ ಪಟ್ಟಣಗಳಿಗೂ ಹೇಮಾವತಿಯ ಕುಡಿಯುವ ನೀರಿನ ಅಶ್ರಯ ತಾಣವಾಗಿದೆ.

ಆತಂಕ ತಂದ ಮುಂಗಾರು ವಿಳಂಬ: ಕಳೆದ ವರ್ಷಕ್ಕೆ ಹೋಲಿಸಿದರೆ ಹೇಮಾವತಿ ಜಲಾಶಯದಲ್ಲಿ ನೀರಿನ ಸಂಗ್ರಹ ಕಡಿಮೆ ಇರುವುದರ ಜೊತೆಗೆ ಅಚ್ಚುಕಟ್ಟು ಪ್ರದೇಶದ ಕೆರೆಕಟ್ಟೆಗಳಲ್ಲಿಯೂ ನೀರಿನ ಸಂಗ್ರಹ ಕಡಿಮೆಯಾಗಿದೆ. ಕೆಲವು ಕೆರೆ ಕಟ್ಟೆಗಳಂತೂ ಒಣಗಿ ಹೋಗಿವೆ. ಮುಂಗಾರು ಮಳೆ ವಿಳಂಬವಾದರೂ ಜುಲೈ ಮತ್ತು ಆಗಸ್ಟ್‌ನಲ್ಲಿ ಉತ್ತಮ ಮಳೆಯಾದರೂ ಜಲಾಶಯಕ್ಕೆ ನೀರು ಬರಬಹುದು ಎಂಬ ಅಶಾ ಭಾವನೆಯಿದೆ. ಆದರೆ, ಇದುವರೆಗಿನ ಮುಂಗಾರು ಮಳೆಯ ಪರಿಸ್ಥಿತಿ ಆತಂಕಕಾರಿಯಾಗಿಯೇ ಇದೆ.

ತುಮಕೂರು ಜಿಲ್ಲೆಯಲ್ಲಿ ಆತಂಕದ ಸ್ಥಿತಿ : ತುಮಕೂರು ಜಿಲ್ಲೆಯ ಕೃಷಿ ಚಟುವಟಿಕೆ ಹೇಮಾವತಿ ನೀರನ್ನೇ ಆಶ್ರಯಿಸಿದೆ. ಅಲ್ಲಿನ ಬಹುಪಾಲು ಜನರ ಕುಡಿಯವ ನೀರಿಗೂ ಹೇಮಾವತಿ ಜಲಾಶಯವೇ ಅಶ್ರಯ ತಾಣವಾಗಿದೆ. ಆದರೆ, ಈಗಾಗಲೇ ಆ ಜಿಲ್ಲೆಯ ಕೆರೆ ಕಟ್ಟೆಗಳಿಗೆ ಹೇಮಾವತಿ ಯೋಜನೆಯ ಎಡದಂಡೆ ನಾಲೆ (ಎ.ಜಿ.ರಾಮಚಂದ್ರರಾವ್‌ ನಾಲೆ) ಯಿಂದ ತುಂಬಿಸಿದ್ದ ನೀರು ಬಹುತೇಕ ಖಾಲಿಯಾಗಿದೆ. ಎಡದಂಡೆ ನಾಲೆಯಿಂದ ಜುಲೈನಲ್ಲಿ ಹೇಮಾವತಿ ಜಲಾಶಯದಿಂದ ನೀರು ಬಿಡದಿದ್ದರೆ ಜನ ಜಾನುವಾರುಗಳ ಕುಡಿಯವ ನೀರಿಗೂ ಹಾಹಾಕಾರ ಉಂಟಾಗಬಹುದಾದ ಪರಿಸ್ಥಿತಿ ಇದೆ. ಮಂಡ್ಯ ಜಿಲ್ಲೆಯ ನಾಗಮಂಗಲ ಮತ್ತು ಕೆ.ಆರ್‌.ಪೇಟೆ ತಾಲೂಕುಗಳ ಪರಿಸ್ಥಿಯೂ ತುಮಕೂರು ಜಿಲ್ಲೆಯ ಪರಿಸ್ಥಿತಿಯಂತೆಯೇ ಇದೆ. ಹಾಸನ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದಿದ್ದರೂ ಹೇಮಾವತಿ ಜಲಾಶಯ ಭರ್ತಿಯಾಗದಿದ್ದರೆ ಆಚ್ಚುಕಟ್ಟು ಪ್ರದೇಶದ ಬೆಳೆಗಳಿಗೆ ನೀರು ಪೂರೈಕೆಯಾಗುವುದಿಲ್ಲ. ಹಾಗಾಗಿ ಮುಂಗಾರು ಮಳೆ ಆರಂಭವಾಗಿ ಹೇಮಾವತಿ ಜಲಾಶಯ ಭರ್ತಿಯಾಗಲಿ ಎಂಬ ಅಶಯ ಜನರದ್ದು .

●ಎನ್‌.ನಂಜುಂಡೇಗೌಡ

Advertisement

Udayavani is now on Telegram. Click here to join our channel and stay updated with the latest news.

Next