Advertisement

ಹೇಮೆ ನಾಲೆ ಅಗಲೀಕರಣ ಶೀಘ್ರ

08:25 PM Dec 24, 2019 | Lakshmi GovindaRaj |

ಹುಳಿಯಾರು: 1030 ಕೋಟಿ ರೂ. ವೆಚ್ಚದಲ್ಲಿ ತುಮಕೂರು ಜಿಲ್ಲೆಯಲ್ಲಿನ ಹೇಮೆ ನಾಲೆ ಅಗಲೀಕರಣ ಮಾಡಲಾಗುವುದು ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು. ಹೋಬಳಿಯ ಬರಕನಹಾಲ್‌ ಗ್ರಾಮದಲ್ಲಿ ಮಂಗಳವಾರ ನಡೆದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಬ್ಯಾಂಕ್‌ ಕೌಂಟರ್‌ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

Advertisement

ತುಮಕೂರು ಜಿಲ್ಲೆಗೆ ಹೇಮಾವತಿ ಜಲಾಶಯದಿಂದ ಲಭ್ಯವಿರುವ 1200 ಕ್ಯೂಸೆಕ್‌ ನೀರನ್ನು ಎರಡ್ಮೂರು ತಿಂಗಳು ಹರಿಸಬೇಕಿತ್ತು. ನಾಲೆಯ ಅಗಲೀಕರಣದಿಂದ ಒಂದೂವರೆ ತಿಂಗಳಲ್ಲಿ ಜಿಲ್ಲೆಗೆ ಮೀಸಲಿಟ್ಟ ನೀರು ಹರಿಸಿಕೊಳ್ಳಲು ಸಾಧ್ಯವಾಗುತ್ತದೆ. ಕಾಮಗಾರಿಯು 2 ವರ್ಷ ನಡೆಯಲಿದೆ ಎಂದು ತಿಳಿಸಿದರು.

ಅಂತರ್ಜಲ ವೃದ್ಧಿ: ಹುಳಿಯಾರು ಹೋಬಳಿಯ ರೈತರ ಜೀವನಾಡಿಯಾದ ಬೋರನಕಣಿವೆ ಜಲಾಶಯಕ್ಕೆ ಭದ್ರ ಮತ್ತು ಹೇಮಾವತಿ ಯೋಜನೆಯಿಂದ ನದಿ ನೀರು ಹರಿಸಲಾಗುತ್ತದೆ. ಈ ಜಲಾಶಯ ತುಂಬಿದರೆ 2 ಸಾವಿರ ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೆರವಾಗಲಿದೆ ಎಂದರು.

ಸರ್ಕಾರ 10-15 ದಿನಗಳಲ್ಲಿ ಬಗರ್‌ ಹುಕುಂ ಕಮಿಟಿ ರಚಿಸಲಿದೆ. ಪ್ರತಿ ತಿಂಗಳು ಸಭೆ ನಡೆಸಿ ಅರ್ಹ ರೈತರ ಗುರುತಿಸಿ ಸಾಗುವಳಿ ಚೀಟಿ ನೀಡಲಾಗುವುದು. ತಾಲೂಕಿನಲ್ಲಿ 6 ಸಾವಿರ ಪವತಿ ಖಾತೆ, 24 ಸಾವಿರ ಪಹಣಿ ಸಮಸ್ಯೆ ಪರಿಹರಿಸಿ ರೈತರಿಗೆ ಅನುಕೂಲ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಮುಚ್ಚುವ ಸ್ಥಿತಿ ತಲುಪಿದ್ದ ಬರಕನಹಾಲ್‌ ಸೊಸೈಟಿ ಇಂದು ಕೆ.ಎನ್‌.ರಾಜಣ್ಣ ಮತ್ತು ಜೆ.ಸಿ.ಮಾಧುಸ್ವಾಮಿ ವಿಶೇಷ ಕಾಳಜಿಯಿಂದ ಅಭಿವೃದ್ಧಿ ಪಥದತ್ತ ಹೋಗುತ್ತಿದೆ. ಕಳೆದ ವರ್ಷ ನೀಡಿದ್ದ 1 ಕೋಟಿ ರೂ. ಸಾಲ ಮನ್ನಾವಾಗಿ ಹೊಸ ಸಾಲ ನೀಡಲು ಕ್ರಮ ಕೈಗೊಂಡಿದೆ ಎಂದು ಡಿಸಿಸಿ ಬ್ಯಾಂಕ್‌ ನಿರ್ದೇಶಕ ಸಿಂಗದಹಳ್ಳಿ ರಾಜ್‌ ಕುಮಾರ್‌ ಹೇಳಿದರು.

Advertisement

ಸಂಘದ ಅಧ್ಯಕ್ಷ ಎಚ್‌.ಎಂ.ವಿಶ್ವನಾಥ್‌, ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಹಳೆಮನೆ ಶಿವನಂಜಪ್ಪ, ಸಹಕಾರ ಸಂಘಗಳ ಅಭಿವೃದ್ಧಿ ಅಧಿಕಾರಿ ಕೆ.ಎಚ್‌.ಮಹಾಂತೇಶಯ್ಯ, ಮೇಲ್ವಿಚಾರಕ ಎಸ್‌.ಆರ್‌.ರಂಗಸ್ವಾಮಿ, ಡಿಸಿಸಿ ಬ್ಯಾಂಕ್‌ ವ್ಯವಸ್ಥಾಪಕ ತನ್ವೀರ್‌ ಖಾನ್‌, ಸೊಸೈಟಿ ಕಾರ್ಯನಿರ್ವಹಣಾಧಿಕಾರಿ ಕಲ್ಪನಾ, ತಾಪಂ ಸದಸ್ಯೆ ಕಲಾವತಿ, ಗ್ರಾಪಂ ಅಧ್ಯಕ್ಷೆ ಲಲಿತಾಬಾಯಿ, ಕೇಶವಮೂರ್ತಿ, ಶಿವಕುಮಾರ್‌, ಬರಗೂರು ನಾಗರಾಜು, ರಾಜಣ್ಣ, ನಾಗರಾಜು, ನಿಂಗಮ್ಮ, ಪದ್ಮಾಕ್ಷಮ್ಮ, ರಾಮಣ್ಣ, ಸೀತರಾಮಯ್ಯ ಮತ್ತಿತರರಿದ್ದರು.

ಚಿಕ್ಕನಾಯನಕನಹಳ್ಳಿ ತಾಲೂಕಿಗೆ ಮಂಜೂರಾಗಿದ್ದ ಮುರಾರ್ಜಿ, ರಾಣಿ ಚೆನ್ನಮ್ಮ, ಇಂದಿರಾಗಾಂಧಿ  ವಸತಿ ಶಾಲೆಗಳ ಕಟ್ಟಡ ನಿರ್ಮಾಣ ಹಾಗೂ ವಾಲ್ಮೀಕಿ, ಜಗಜೀವನರಾಮ್‌ ಸಮುದಾಯ ಭವನಕ್ಕೆ ಅನುದಾನ ಮಂಜೂರಾಗಿದ್ದು, ಕಾಮಗಾರಿ ಉದ್ಘಾಟನೆಗೆ ಜ.1ರಂದು ಡಿಸಿಎಂ ಗೋವಿಂದಕಾರಜೋಳ ಆಗಮಿಸಲಿದ್ದಾರೆ.
-ಜೆ.ಸಿ.ಮಾಧುಸ್ವಾಮಿ, ಸಚಿವ

Advertisement

Udayavani is now on Telegram. Click here to join our channel and stay updated with the latest news.

Next