Advertisement

ದೇವೇಗೌಡರಿಗೆ ತಟ್ಟಿದ ಹೇಮಾವತಿಯ ಶಾಪ

10:17 PM May 24, 2019 | Lakshmi GovindaRaj |

ತುಮಕೂರು: ಮಾಜಿ ಪ್ರಧಾನಿ ದೇವೇಗೌಡರ ಸ್ಪರ್ಧೆಯಿಂದ ದೇಶದ ಗಮನ ಸೆಳೆದಿದ್ದ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಮತದಾರರು, ಬಿಜೆಪಿ ಅಭ್ಯರ್ಥಿ ಜಿ.ಎಸ್‌.ಬಸವರಾಜ್‌ಗೆ ಮಣೆ ಹಾಕಿದ್ದಾರೆ.

Advertisement

ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಇದ್ದ ಕಾಂಗ್ರೆಸ್‌ ಸಂಸದ ಎಸ್‌.ಪಿ.ಮುದ್ದ ಹನುಮೇಗೌಡರಿಗೆ ಟಿಕೆಟ್‌ ವಂಚಿಸಿ, ದೇವೇಗೌಡರು ಸ್ಪರ್ಧೆ ಮಾಡಿದ ದಿನದಿಂದಲೇ ಗೌಡರಿಗೆ ವಿರೋಧಿ ಅಲೆ ಶುರುವಾಯಿತು. ಮಾಜಿ ಶಾಸಕ ಕೆ.ಎನ್‌.ರಾಜಣ್ಣ ಬಹಿರಂಗವಾಗಿಯೇ ದೇವೇಗೌಡರ ವಿರುದ್ಧ ಹರಿಹಾಯ್ದಿದ್ದರು.

ಇದೇನು, “ಬಾಂಬೆ ರೆಡ್‌ಲೈಟ್‌ ಏರಿಯಾನಾ?, ಯಾರು ಬೇಕಾದರೂ ಬಂದು ಹೋಗಲು’ ಎಂದು ಕುಟಿಕಿ, ದೇವೇಗೌಡರು ಇಲ್ಲಿ ಬಂದು ನಿಂತರೆ ಸೋಲು ಖಚಿತ ಎಂದಿದ್ದರು. “ಅವರು ನಿಂತರೆ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ’ ಎಂದು ಗುಡುಗಿದ್ದರು.

ದೇವೇಗೌಡರು ನಾಮಪತ್ರ ಸಲ್ಲಿಸುವ ದಿನವೇ ಭಾರೀ ರೋಡ್‌ ಶೋ ನಡೆಸಿ, ಕೆ.ಎನ್‌.ರಾಜಣ್ಣ ಮತ್ತು ಸಂಸದ ಎಸ್‌.ಪಿ.ಮುದ್ದಹನುಮೇ ಗೌಡ ನಾಮಪತ್ರ ಸಲ್ಲಿಸಿದ್ದರು. ವರಿಷ್ಠರ ಒತ್ತಾಯದ ಮೇರೆಗೆ ಇಬ್ಬರೂ ನಾಮಪತ್ರ ವಾಪಸ್‌ ತೆಗೆದುಕೊಂಡರಾದರೂ, ಈ ಇಬ್ಬರು ನಾಯಕರ ಜೊತೆ ದೇವೇಗೌಡರನ್ನು ಹೊಂದಾಣಿಕೆ ಮಾಡುವಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮುಖಂಡರು ಸೋತರು.

ಇಬ್ಬರೂ ನಾಯಕರ ಬೆಂಬಲಿಗರು ಆಂತರಿಕವಾಗಿ ಬಿಜೆಪಿ ಪರ ಕೆಲಸ ಮಾಡಿದರು. ಇನ್ನು, ಜೆಡಿಎಸ್‌ ಶಾಸಕರಿರುವ ಮಧುಗಿರಿ, ತುಮಕೂರು ಗ್ರಾಮಾಂತರ, ಗುಬ್ಬಿ ವಿಧಾನಸಭಾ ಕ್ಷೇತ್ರಗಳಲ್ಲಿಯೇ ದೇವೇಗೌಡರಿಗೆ ಹಿನ್ನಡೆಯಾಗಿದೆ. ಸ್ಥಳೀಯ ನಾಯಕರ ಒಳ ಏಟೇ ದೇವೇಗೌಡರ ಸೋಲಿಗೆ ಕಾರಣವಾಗಿದೆ.

Advertisement

ತುಮಕೂರಿಗೆ ನಿಗದಿಯಾಗಿರುವಷ್ಟು ಹೇಮಾವತಿ ನೀರು ಹರಿಸಲು ಹಾಸನದ ರಾಜಕಾರಣ ಅಡ್ಡಿ ಬರುತ್ತಿದೆ. ದೇವೇಗೌಡರ ಕುಟುಂಬ ಇದಕ್ಕೆ ತೊಂದರೆ ನೀಡುತ್ತಿದೆ. ಹೇಮಾವತಿ ನೀರು ಕೊಡದ ದೇವೇಗೌಡರಿಗೆ ಬರಗಾಲದಿಂದ ನೀರಿನ ಬವಣೆಯಿಂದ ತತ್ತರಿಸುತ್ತಿರುವ ಕ್ಷೇತ್ರದ ಜನತೆ ಮತ ಹಾಕಬೇಕೇ ಎಂಬ ಪ್ರಶ್ನೆಯನ್ನು ಬಿಜೆಪಿ ನಾಯಕರು ಹೋದ ಕಡೆಯಲೆಲ್ಲಾ ಜನರನ್ನು ಕೇಳಲಾರಂಭಿಸಿದರು.

ಇದಕ್ಕೆ ಪೂರಕವಾಗಿ ಮಾಜಿ ಬಿಜೆಪಿ ಶಾಸಕ ಬಿ.ಸುರೇಶ್‌ ಗೌಡ ಅವರು, “ದೇವೇಗೌಡರಿಗೆ ಗಂಗೇ ಶಾಪ ಇದೆ. ಇಲ್ಲಿಯ ಮತದಾರರು ಪ್ರಬುದ್ಧರು, ಸ್ವಾಭಿಮಾನಿಗಳು. ಆದ್ದರಿಂದ ದೇವೇಗೌಡರನ್ನು ಸೋಲಿಸುತ್ತಾರೆ’ ಎಂದು ಹೇಳಿದ್ದರು.

* ಚಿ.ನಿ.ಪುರುಷೋತ್ತಮ್‌

Advertisement

Udayavani is now on Telegram. Click here to join our channel and stay updated with the latest news.

Next