ತುರುವೇಕೆರೆ: ಹೇಮೆ ಮುಖ್ಯ ನಾಲೆಯಲ್ಲಿ ಈಗಾಗಲೇ ನೀರು ಹರಿಯುತ್ತಿದ್ದು, ನಮ್ಮ ವಿಧಾನಸಭಾ ಕ್ಷೇತ್ರದ ಎಲ್ಲಾ ಕೆರೆಕಟ್ಟೆಗಳಿಗೆ ಆದ್ಯತೆ ಮೇರೆಗೆ ಹಂತ ಹಂತವಾಗಿ ನೀರು ತುಂಬಿಸ ಲಾಗುವು ದೆಂದು ಶಾಸಕ ಮಸಾಲೆ ಜಯರಾಂ ತಿಳಿಸಿದರು.
ತಾಲೂಕಿನ ಸೊರವನಹಳ್ಳಿ ಗ್ರಾಮದಲ್ಲಿ 1 ಕೋಟಿ ರೂ. ವೆಚ್ಚದ ಕಾಂಕ್ರೀಟ್ ರಸ್ತೆ, ಚರಂಡಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಈಗಾಗಲೇ ಕುಣಿಗಲ್ ತಾಲೂಕಿಗೆ ಹೆಚ್ಚು ನೀರು ಹರಿಯುತ್ತಿದ್ದು ಈ ತಿಂಗಳ ಅಂತ್ಯದವರೆಗೂ ನೀರು ಹರಿಯಲಿದೆ. ನಂತರ ನಮ್ಮ ವಿಧಾನಸಭಾ ಕ್ಷೇತ್ರದ ಸಿ. ಎಸ್.ಪುರ ಹೋಬಳಿ ಕೆರೆಗಳಿಗೆ 15 ದಿನ ನಂತರ ತುರುವೇಕೆರೆ ತಾಲೂಕಿನ ಕೆರೆಗಳಿಗೆ 15 ದಿನ ಟಿಬಿಸಿ ನಾಲೆಯಿಂದ ನೀರು ಹರಿಯಲಿದೆ. ಈ ಪ್ರಕ್ರಿಯೆ ಸೆ.1 ರಿಂದ ಜಾರಿಗೆ ಬರಲಿದ್ದು, ಡಿಸೆಂಬರ್ ಅಂತ್ಯದವರೆಗೂ ತುಮಕೂರು ನಾಲೆಯಲ್ಲಿ ನೀರು ಹರಿಯಲಿದೆ ಎಂದರು.
ಎಕ್ಸ್‌ಪ್ರೆಸ್ ನಾಲೆಗೆ ತಡೆ: ಈ ಹಿಂದೆ ಇದ್ದ ಕುಮಾರ ಸ್ವಾಮಿ ನೇತೃತ್ವದ ರಾಜ್ಯ ಸರ್ಕಾರ ಗುಬ್ಬಿ ತಾಲೂಕಿ ನಿಂದ ಕುಣಿಗಲ್, ಮಾಗಡಿ ಭಾಗಕ್ಕೆ ನೀರು ತೆಗೆದು ಕೊಂಡು ಹೋಗಲು ಸುಮಾರು 610 ಕೋಟಿ ರೂ. ವೆಚ್ಚದ ಎಕ್ಸ್‌ಪ್ರೆಸ್ ನಾಲೆಗೆ ಮಂಜೂರಾತಿ ನೀಡಿತ್ತು. ವಿರೋಧಿಸಿದರೂ ಎಚ್.ಡಿ.ಕುಮಾರಸ್ವಾಮಿ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿರಲಿಲ್ಲ. ಈಗ ಸಿಎಂಗೆ ಮನವಿ ಪತ್ರ ಸಲ್ಲಿಸಿದ್ದೇವೆ. ಈ ಯೋಜನೆ ಕೈ ಬಿಡುವುದಾಗಿ ಮುಖ್ಯ ಮಂತ್ರಿ ಗಳು ಈಗಾಗಲೇ ತಿಳಿಸಿದ್ದು ಇದಕ್ಕೆ ಮೀಸಲಿಟ್ಟ 610 ಕೋಟಿ ರೂ ಮತ್ತು ಹೆಚ್ಚುವರಿ ಸಾವಿರ ಕೋಟಿ ರೂ ಹಣ ನೀಡಿ ತುಮಕೂರು ನಾಲೆ 70 ನೇ ಕಿ.ಮೀ. ನಿಂದ 166 ನೇ ಕಿ.ಮೀ ವರೆಗೆ ನಾಲೆ ಅಗಲೀಕರಣ ಮಾಡಿ ಈಗ ಇರುವ 1300 ಕ್ಯುಸೆಕ್ ಸಾಮರ್ಥ್ಯದ ನಾಲೆಯನ್ನು 3 ಸಾವಿರ ಕ್ಯೂಸೆಕ್ ಸಾಮರ್ಥ್ಯಕ್ಕೆ ನೀರು ಹರಿಯುವಂತೆ ಅಗಲೀಕರಣ ಮಾಡಿದರೆ ಜಿಲ್ಲೆಯಲ್ಲಿ ಹೇಮಾವತಿ ನೀರು ಸಮೃದ್ಧವಾಗಿ ಹರಿಯಲಿದೆ. ಮುಂದಿನ ಕ್ಯಾಬಿನೆಟ್ ಸಭೆಯಲ್ಲಿ ಇದರ ಬಗ್ಗೆ ಅನುಮತಿ ದೊರೆಯಲಿದೆ ಎಂದರು.
ಹೋರಾಟ ಮಾಡುವೆ: ಕೆಲವು ಸಂಘಟನೆಗಳು ಹೇಮಾವತಿ ನೀರಿಗಾಗಿ ಪ್ರತಿಭಟನೆ ನೆಡೆಸುವ ವಿಚಾರ ತಿಳಿದಿದ್ದು ರೈತ ಸಂಘಟನೆಗಳು ಪ್ರತಿಭಟನೆ ಮಾಡುವ ಅವಶ್ಯಕತೆ ಇಲ್ಲ. ನೀರು ಬಿಡದೇ ಇದ್ದ ಪಕ್ಷದಲ್ಲಿ ತಾನೂ ಪ್ರತಿಭಟನಾಕಾರರ ಜೊತೆ ಹೋರಾಟ ಕೈಗೊಳ್ಳುವೆ ಎಂದರು.ಮುಖಂಡರಾದ ಕೊಂಡಜ್ಜಿ ವಿಶ್ವನಾಥ್, ಜಿಪಂ ಮಾಜಿ ಸದಸ್ಯ ಎನ್.ಆರ್. ಜಯರಾಂ, ಎಪಿಎಂಸಿ ನಿರ್ದೇಶಕ ಕಾಂತರಾಜು, ಮುಖಂಡರಾದ ವಿ.ಬಿ. ಸುರೇಶ್, ಕಾಳಂಜೀಹಳ್ಳಿ ಸೋಮಣ್ಣ, ಪಪಂ ಸದಸ್ಯರಾದ ಅಂಜನ್ ಕುಮಾರ್, ಚಿದಾನಂದ್, ತಾಪಂ ಸದಸ್ಯೆ ಮಂಜುನಾಥ್, ನಾಗಲಾಪುರ ಮಂಜಣ್ಣ ಮತ್ತಿತರರಿದ್ದರು.