Advertisement
ಸಚಿವರ ಲಾಬಿ: ತುಮಕೂರು ಜಿಲ್ಲೆಯಲ್ಲಿ ಕುಡಿವ ನೀರಿಗೆ ತೊಂದರೆ ಇದೆ. ಹಾಗಾಗಿ ತುರ್ತಾಗಿ ನೀರು ಹರಿಸಬೇಕು ಎಂದು ತುಮಕೂರು ಜಿಲ್ಲಾ ಉಸ್ತುವಾರಿ ಹಾಗೂ ಹಾಸನ ಜಿಲ್ಲಾ ಹೆಚ್ಚುವರಿ ಉಸ್ತುವಾರಿ ಸಚಿವರೂ ಆಗಿರುವ ಜೆ.ಸಿ.ಮಾಧುಸ್ವಾಮಿ ಒತ್ತಡ ಹೇರಿ ನೀರು ಬಿಡಿಸಿಕೊಳ್ಳುವ ಮೂಲಕ ತವರು ಜಿಲ್ಲೆ ತುಮಕೂರಿನ ಪರ ಲಾಬಿ ಮಾಡಿದ್ದಾರೆ ಎಂದು ಹೇಳಲಾಗಿದೆ. ಹೇಮಾವತಿ ಜಲಾಶಯದಿಂದ ನಾಲೆಗಳಲ್ಲಿ ನೀರು ಹರಿಸಿ ಅಚ್ಚುಕಟ್ಟು ಪ್ರದೇಶದ ಕೆರೆಗಳಿಗೆ ನೀರು ತುಂಬಿಸುವ ಮೂಲಕ ಬೇಸಿಗೆಯಲ್ಲಿ ಕುಡಿಯುವ ನೀರಿನ ಬವಣೆ ನಿವಾರಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲೆಯ ಜೆಡಿಎಸ್ ಶಾಸಕರಾದ ಎ.ಟಿ. ರಾಮಸ್ವಾಮಿ. ಎಚ್.ಡಿ.ರೇವಣ್ಣ, ಸಿ.ಎನ್. ಬಾಲಕೃಷ್ಣ ಅವರು ಒತ್ತಾಯಿಸಿದ್ದರು. ಆದರೆ ಈಗ ಹಾಸನ ಜಿಲ್ಲೆಗೆ ನೀರು ಬಿಡದೆ ಹಾಸನ ಜಿಲ್ಲೆಯ ಮೂಲಕವೇ ತುಮಕೂರು ಜಿಲ್ಲೆಗೆ ಮಾತ್ರ ನೀರು ಕೊಂಡೊಯ್ಯಲಾಗುತ್ತಿದೆ. ಈ ಬೆಳವಣಿಗೆಯು ರಾಜಕೀಯ ಸಂಘರ್ಷಕ್ಕೂ ಕಾರಣವಾಗುವ ಸಾಧ್ಯತೆ ಇದೆ. ಹೇಮಾವತಿಜಲಾಶಯವು ಹಾಸನ, ಮಂಡ್ಯ, ತುಮಕೂರು ಮತ್ತು ಮೈಸೂರು ಜಿಲ್ಲೆಯ ಅಚ್ಚುಕಟ್ಟು ಪ್ರದೇಶವನ್ನು ಹೊಂದಿದೆ. ಆದರೆ ಮೂರು ಜಿಲ್ಲೆಗೆ ನೀರು ಕೊಡದೆ ತುಮಕೂರು ಜಿಲ್ಲೆಗೆ ಮಾತ್ರ ನೀರು ಹರಿಸಲು ಮುಂದಾಗಿ ರುವುದು ಅನು ಮಾನಕ್ಕೆ ಕಾರಣವಾಗಿದೆ.
ಹೇಮಾವತಿ ಜಲಾಶಯದಿಂದ ತುಮಕೂರಿಗೆ 15 ದಿನಗಳ ವರೆಗೆ 2000 ಕ್ಯೂಸೆಕ್ ನೀರನ್ನು ಶುಕ್ರವಾರದಿಂದ ಬಿಡಲಾಗುತ್ತಿದೆ. ಈ ಸಂಬಂಧ ಸೂಚನೆ ಬಂದಿದೆ. ಅಚ್ಚುಕಟ್ಟು ವ್ಯಾಪ್ತಿಯ ಇನ್ನುಳಿದ ಜಿಲ್ಲೆಗಳಿಗೂ ಅಗತ್ಯವಿದ್ದರೆ ನೀರು ಬಿಡುಗಡೆಗೆ ಅಗತ್ಯದಷ್ಟು ನೀರು ಜಲಾಶಯ ದಲ್ಲಿದೆ. ಎಂದು ಹೇಮಾವತಿ ಯೋಜನೆ ಕಾರ್ಯಪಾಲಕ ಎಂಜಿನಿಯರ್ ವೆಂಕಟರ ಮಣಪ್ಪ ಅವರು ಪ್ರತಿಕ್ರಿಯಿಸಿದ್ದಾರೆ. ಐಸಿಸಿ ಸಭೆ ಕರೆದು ತೀರ್ಮಾನಿಸಲಿ: ಶುಕ್ರವಾರದಿಂದ ನೀರು ಬಿಡುತ್ತಿರುವ ವಿಚಾರ ನನ್ನ ಗಮನಕ್ಕೂ ಬಂದಿದೆ. ಜಿಲ್ಲಾ ಉಸ್ತುವಾರಿ ಸಚಿವರಾಗಲಿ, ಬೇರೆ ಯಾರೇ ಆಗಲಿ ಏಕ ಪಕ್ಷೀಯ ತೀರ್ಮಾನ ತೆಗೆದುಕೊಳ್ಳುವುದಕ್ಕೆ ನಮ್ಮ ವಿರೋಧವಿದೆ. ಅಚ್ಚುಕ್ಟ ವ್ಯಾಪ್ತಿಯ ಎಲ್ಲ ಜಿಲ್ಲೆಗಳ ಕೆರೆಗಳಿಗೂ ನೀರು ಹರಿಸಬೇಕು. ಹೇಮಾವತಿ ಯೋಜನೆ ಅಚ್ಚುಕಟ್ಟು ವ್ಯಾಪ್ತಿಯ ಶಾಸಕರನ್ನೊಳಗೊಂಡ ನೀರಾವರಿ ಸಲಹಾ ಸಮಿತಿ ಸಭೆ ( ಐಸಿಸಿ ಸಭೆ) ಕರೆದು ಚರ್ಚಿ ನೀರು ಬಿಡುವ
ತೀರ್ಮಾನ ಕೈಗೊಳ್ಳಬೇಕು. ಈ ಸಂಬಂಧ ಹಾಸನ ಜಿಲ್ಲೆಯ ಅಚ್ಚುಕಟ್ಟು ವ್ಯಾಪ್ತಿಯ ಜೆಡಿಎಸ್ ಶಾಸಕರು ಶುಕ್ರವಾರ ಸಭೆ ನಡೆಸಿ ಮುಂದಿನ ಹೋರಾಟದ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಜೆಡಿಎಸ್ ಮುಖಂಡ, ಹೊಳೆನರಸೀಪುರ ಕ್ಷೇತ್ರದ ಶಾಸಕ ಎಚ್.ಡಿ.ರೇವಣ್ಣ ಅವರು ಪ್ರತಿಕ್ರಿಯಿಸಿದರು.