ಹಾಸನ: ಕಾವೇರಿ ಜಲಾನಯನ ವ್ಯಾಪ್ತಿ ಪ್ರಮುಖ ಜಲಾಶಯಗಳಲ್ಲಿ ಒಂದಾಗಿರುವ ಹೇಮಾವತಿ ಜಲಾಶಯದಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚು ನೀರು ಸಂಗ್ರಹ ವಾಗಿದ್ದರೂ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆಗಳ ಬೆಳೆಯಲು ನೀರು ಬಿಡುವುದು ಅಸಂಭವ ಎಂಬ ಆತಂಕ ಮೂಡುತ್ತಿದೆ. ಕಳೆದ ವರ್ಷ ಜಲಾಶಯ ಬಹುತೇಕ ಭರ್ತಿಯಾದರೂ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಕೊಡದಿದ್ದರಿಂದ ಲಕ್ಷಾಂತರ ಎಕರೆ ಪ್ರದೇಶ ಪಾಳು ಬಿದ್ದಿತ್ತು. ಈ ವರ್ಷವೂ ಅದೇ ಸ್ಥಿತಿ ಎದುರಾಗುವ ಆತಂಕದ ಪರಿಸ್ಥಿತಿ ರೈತರಲ್ಲಿದೆ.
ಒಟ್ಟು 37.10 ಟಿಎಂಸಿ ನೀರು ಸಂಗ್ರಹ ಸಾಮ್ಯರ್ಥಯದ ಹೇಮಾವತಿ ಜಲಾಶಯದಲ್ಲಿ ಕಳೆದ ವರ್ಷ 33 ಟಿಎಂಸಿ ನೀರು ಸಂಗ್ರಹ ವಾಗಿತ್ತು. ಆದರೂ ಸರ್ಕಾರದ ಉದಾಸೀನ ಧೋರಣೆಯಿಂದ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆಗಳ ಬೆಳೆಯಲು ನಾಲೆಗಳಲ್ಲಿ ನೀರು ಹರಿಸಲಿಲ್ಲ. ಜಲಾಶಯದಲ್ಲಿ ಸಂಗ್ರಹವಾಗಿದ್ದ ಬಹಳಷ್ಟು ನೀರನ್ನು ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ನಿರ್ದೇಶನದಂತೆ ತಮಿಳುನಾಡಿಗೆ ಹರಿಸಿದ ರಾಜ್ಯ ಸರ್ಕಾರ ಅಳಿದುಳಿದ ನೀರನ್ನು ಅಚ್ಚುಕಟ್ಟು ಪ್ರದೇಶದ ಜನ- ಜಾನುವಾರುಗಳ ಕುಡಿವ ನೀರಿಗಾಗಿ ಮಾತ್ರ ಹರಿಸಿ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆ ಬೆಳೆ ಯಲು ಸಜ್ಜಾಗಿದ್ದ ರೈತರಿಗೆ ಭ್ರಮ ನಿರಸನವನ್ನುಂಟು ಮಾಡಿತು.
ನಾಲೆಗಳಿಗೆ ನೀರು ಹರಿಸಲು ನಿರುತ್ಸಾಹ: ಈ ವರ್ಷ ಈವರೆಗೆ ಹೇಮಾವತಿ ಜಲಾಶಯ ದಲ್ಲಿ 20.68 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾ ಶಯ ಭರ್ತಿಯಾಗಲು ಇನ್ನೂ 17 ಟಿಎಂಸಿ ನೀರು ಹರಿದು ಬರಬೇಕಾಗಿದೆ. ಒಳ ಹರಿವೂ ಆಶಾದಾಯಕವಾಗಿದೆ. ಕಬಿನಿ, ಹಾರಂಗಿ, ಕೆಆರ್‌ಎಸ್ ಅಣೆಕಟ್ಟೆ ನಾಲೆಗಳಲ್ಲಿ ಈಗಾಗಲೆ ನೀರು ಹರಿಸಲಾಗುತ್ತಿದೆ. ಆದರೆ ಹೇಮಾವತಿ ಯೋಜನೆ ನಾಲೆಗಳಲ್ಲಿ ಮಾತ್ರ ಇನ್ನೂ ನೀರು ಹರಿಯುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ನೀರು ಹರಿಸಬೇಕೆಂಬ ಉತ್ಸಾಹವನ್ನೂ ತೋರುತ್ತಿಲ್ಲ.
ಜಿಲ್ಲೆಯನ್ನು ಮರೆತಿರುವ ಉಸ್ತುವಾರಿ ಸಚಿವ: ಕೆ.ಎನ್.ರಾಜಣ್ಣ ಅವರು ಉಸ್ತುವಾರಿ ಸಚಿವರಾಗಿ ಒಂದು ವರ್ಷ ಮುಗಿದಿದೆ. ಕಳೆದೊಂದು ವರ್ಷದಲ್ಲಿ ಅವರು ಜಿಲ್ಲೆಗೆ ಪೂರಕವಾದ ಯಾವೊಂದು ನಿರ್ಧಾರವನ್ನೂ ತೆಗೆದು ಕೊಂಡಿಲ್ಲ. ಅಭಿವೃದ್ಧಿಗೆ ಅನುದಾನ ವನ್ನೂ ಬಿಡುಗಡೆ ಮಾಡಿಸಿಲ್ಲ. ಕಳೆದ ವರ್ಷ ಹೇಮಾವತಿ ಜಲಾಶಯದಿಂದ 3 ಬಾರಿ ತುಮಕೂರು ಜಿಲ್ಲೆಗೆ ನೀರು ಹರಿಸಿಕೊಂಡರೇ ಹೊರತು ಬೇಸಿಗೆಯಲ್ಲಿಯೂ ಹಾಸನ ಜಿಲ್ಲೆಯ ಕೆರೆ – ಕಟ್ಟೆಗಳಿಗೆ ನೀರು ತುಂಬಿಸಿ ಕುಡಿ ಯುವ ನೀರು ಪೂರೈಸುವ ಕನಿಷ್ಠ ಸೌಜನ್ಯ ವನ್ನೂ ತೋರಲಿಲ್ಲ. ಹೇಮಾವತಿ ನೀರಿಗಾಗಿ ಹಾಸನ ಜಿಲ್ಲೆಯಲ್ಲಿ ಪ್ರತಿಭಟನೆ ಗಳು ನಡೆದರೂ ಸ್ಪಂದಿಸಲಿಲ್ಲ. ತಾವು ಹಾಸನ ಜಿಲ್ಲಾ ಉಸ್ತುವಾರಿ ಸಚಿವನೆಂಬುದನ್ನೂ ಮರೆತು ತುಮಕೂರು ಜಿಲ್ಲೆಯ ಪರವಾದ ನಿರ್ಧಾರ ತೆಗೆದುಕೊಂಡು ಸರ್ವಾಧಿಕಾರಿ ಧೋರಣೆಯನ್ನು ಸಚಿವರು ಪ್ರದರ್ಶಿಸಿದರು.
ಈ ವರ್ಷವೂ ಜಿಲ್ಲೆಯಲ್ಲಿ ಡೆಂ à ಪ್ರಕರಣ ಗಳು ವ್ಯಾಪಕವಾಗಿ ಹರಡುತ್ತಿವೆ. ಡೆಂ à ಶಂಕಿತ 8 ಸಾವುಗಳು ಸಂಭವಿಸಿವೆ. ಆದರೂ ಅಧಿಕಾರಿಗಳ ಸಭೆ ನಡೆಸಿ ಡೆಂ à ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವ ಕನಿಷ್ಠ ಸೌಜನ್ಯವನ್ನು ಜಿಲ್ಲಾ ಉಸ್ತುವಾರಿ ಸಚಿವರು ತೋರಿಲ್ಲ. ಇನ್ನು ಹೇಮಾವತಿ ನೀರನ್ನು ಹರಿಸುವ ವಿಷಯದಲ್ಲಿ ಉಸ್ತುವಾರಿ ಸಚಿವರು ಕೈಗೊಳ್ಳುವರೆಂಬ ವಿಶ್ವಾಸ ಜಿಲ್ಲೆಯ ಜನರಲ್ಲಿ ಉಳಿದಿಲ್ಲ.
ಜಿಲ್ಲೆಯತ್ತ ಗಮನ ಹರಿಸದ ಮುಖಂಡರು:
ಇತ್ತೀಚೆಗಷ್ಟೇ ಕಾವೇರಿ ನೀರು ನಿಯಂತ್ರಣ ಸಮಿತಿ ಜು.12 ರಿಂದ 31 ರವರೆಗೆ ಪ್ರತಿದಿನ ಒಂದು ಟಿಎಂಸಿ ನೀರನ್ನು ಕರ್ನಾಟಕ ತಮಿಳುನಾಡಿಗೆ ಹರಿಸಬೇಕು ಎಂದು ನಿರ್ದೇಶನ ನೀಡಿದೆ. ಅಂದರೆ ಈ ತಿಂಗಳಲ್ಲೇ ಹೇಮಾವತಿ ಜಲಾಶಯವೂ ಸೇರಿದಂತೆ ರಾಜ್ಯದ ಕಾವೇರಿ ಕಣಿವೆ ಜಲಾಶಯಗಳಿಂದ 20 ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸಬೇಕಾದ ಅನಿವಾರ್ಯ ಸ್ಥಿತಿಗೆ ರಾಜ್ಯ ಸರ್ಕಾರ ಸಿಲುಕಿದೆ. ಕಬಿನಿಯಿಂದ ಸುಮಾರು ಅರ್ಧ ಟಿಎಂಸಿ ನೀರು ನೀರು ತಮಿಳುನಾಡಿಗೆ ಪ್ರತಿದಿನವೂ ಹರಿಯುತ್ತಿದೆ. ಇನ್ನಳಿದ ನೀರನ್ನು ಕೆಆರ್‌ಎಸ್‌ನಿಂದ ಹರಿಸಲು ಮಂಡ್ಯ ಜಿಲ್ಲೆಯ ರೈತರು ಅವಕಾಶ ಕೊಡಲಾರರು. ಈಗಾಗಲೇ ಬೀದಿಗಿಳಿದು ಮಂಡ್ಯದ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ. ಹಾರಂಗಿ ಚಿಕ್ಕ ಜಲಾಶಯ ಅದರಿಂದ ಹೆಚ್ಚು ನೀರು ಹರಿಸಲಾಗದು. ಇನ್ನುಳಿದಿರುವುದು ಹೇಮಾವತಿ ಜಲಾಶಯವೊಂದೇ. ಜಿಲ್ಲೆಯಲ್ಲೀಗ ಹೇಳವವರು ಕೇಳವರಿಲ್ಲದ ಪರಿಸ್ಥಿತಿ ಇದೆ. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಜಿಲ್ಲೆಯತ್ತ ಬರುತ್ತಿಲ್ಲ. ಕೌಟುಂಬಿಕ ಕಾರಣದಿಂದ ಜೆಡಿಎಸ್ ಮುಖಂಡ ಎಚ್. ಡಿ.ರೇವಣ್ಣ ಅವರು ಜಿಲ್ಲೆ ಸಮಸ್ಯೆಗಳತ್ತ ಗಮನ ಹರಿಸುತ್ತಿಲ್ಲ. ಇನ್ನು ಅಧಿಕಾರಿಗಳು ನಿರ್ಧಾರ ತೆಗೆದುಕೊಳ್ಳುವ ಸ್ಥಿತಿಯಲ್ಲಿಲ್ಲ. ಸರ್ಕಾರದ ಸೂಚನೆ ಬಂದ ತಕ್ಷಣ ಹೇಮಾವತಿಯಿಂದ ನದಿಗೆ ನೀರು ಹರಿಸುವುದು ಹೇಮಾವತಿ ಯೋಜನೆ ಎಂಜಿನಿಯರುಗಳಿಗೆ ಅನಿವಾರ್ಯವಾಗಿ ಪರಿಣಮಿಸಿದೆ.
-ಎನ್. ನಂಜುಂಡೇಗೌಡ