ಮಂಡ್ಯ: ಕೊಳಕು ತ್ಯಾಜ್ಯ, ಮೂಳೆಗಳ ಅಸ್ಥಿ, ಹಳೆಯ ಸೀರೆ, ಬಟ್ಟೆಗಳು, ಬೇಡವಾದ ಪೂಜಾ ಸಾಮಗ್ರಿಗಳು, ಜಲಸಸ್ಯಗಳ ರಾಶಿ, ಕೊಳೆತ ವಸ್ತುಗಳ ವಾಸನೆ, ಬಳಸಿದ ಹೂವಿನ ಹಾರಗಳ ತ್ಯಾಜ್ಯ ಅನೇಕ ಸತ್ಯಾಜ್ಯಗಳಿಂದ ಕೆ.ಆರ್.ಪೇಟೆ ತಾಲೂಕಿನ ಹೇಮಗಿರಿ ಬಳಿ ಹೇಮಾವತಿ ನದಿ ಕಲುಷಿತಗೊಂಡಿದೆ. ಇದೇ ನೀರನ್ನು ಪಟ್ಟಣದ ಸಾವಿರಾರು ಜನರಿಗೆ ಒದಗಿಸಲಾಗುತ್ತಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಸಾರ್ವಜನಿಕರು ಆರೋಪಿಸಿದ್ದಾರೆ.
ಅಧಿಕಾರಿಗಳೇ ಸೂಕ್ತ ಕ್ರಮಕೈಗೊಳ್ಳಿ: ಭೃಂಗ ಮಹರ್ಷಿಗಳ ಕ್ಷೇತ್ರವಾದ ಪ್ರಸಿದ್ಧ ಹೇಮಗಿರಿಯ ಶ್ರೀ ಕಲ್ಯಾಣ ವೆಂಕಟರಮಣ ಸ್ವಾಮಿ ಬೆಟ್ಟದ ಸನ್ನಿಧಿಯಲ್ಲಿ ಹರಿಯುವ ಹೇಮಾವತಿ ನದಿ ತ್ಯಾಜ್ಯಗಳಿಂದ ಕುಲಷಿತಗೊಂಡು ಪರಿಸರ ಹಾಳಾಗುವುದರ ಜತೆಗೆ ಪಟ್ಟಣಕ್ಕೆ ಇಲ್ಲಿಂದಲೇ ಕುಡಿಯುವ ನೀರು ಸರಬರಾಜಾಗುತ್ತಿದೆ. ಪಟ್ಟಣದ ಜನತೆ ಈ ಕಲುಷಿತ ನೀರನ್ನೇ ಕುಡಿಯುವಂತಾಗಿದೆ. ನದಿಗೆ ಹಳೆಯ ದೇವರ ಪೋಟೋಗಳು, ಬಟ್ಟೆಗಳು, ಮಾಟ ಮಂತ್ರ ಮಾಡಿಸಿದ ಕಾಯಿಗಳು, ಕುಡಿಕೆಗಳು ಹಾಗೂ ಕೋಳಿ ತ್ಯಾಜ್ಯಗಳನ್ನು ತಂದು ಬಿಸಾಡುವುದರಿಂದ ನೀರು ಕುಲಷಿತಗೊಂಡು ವಿಷದ ನೀರಾಗಿ ಪರಿಣಮಿಸಿದೆ. ಆದ್ದರಿಂದ ಕೂಡಲೇ ತಾಲೂಕು ಆಡಳಿತ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ವಹಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ನದಿ ಸ್ವತ್ಛತೆಗೆ ಶಾಶ್ವತ ಪರಿಹಾರವಿಲ್ಲ: ಕೆಲವೇ ದಿನಗಳು ಬಾಕಿ ಇರುವಂತೆ ಹೇಮಗಿರಿ ವೆಂಕಟರಮಣ ಸ್ವಾಮಿಯ ಜಾತ್ರಾ ಮಹೋತ್ಸವಕ್ಕೆ ವಿವಿಧ ಜಿಲ್ಲೆ, ತಾಲೂಕುಗಳಿಂದ ಸಾವಿರಾರು ಸಂಖ್ಯೆಯ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ನದಿ ಪಾತ್ರದ ದಂಡೆ ಯಲ್ಲಿ ಬೆಳೆದಿರುವ ಗಿಡಗಂಟಿಗಳನ್ನು ತೆರವು ಮಾಡುವ ಕಾರ್ಯಕ್ಕೆ ತಹಶೀಲ್ದಾರ್ ಚಾಲನೆ ನೀಡಿದ್ದರೂ, ನದಿ ಸ್ವತ್ಛತೆಗೆ ಶಾಶ್ವತ ಪರಿಹಾರ ಕಂಡು ಹಿಡಿದಿಲ್ಲ.
ಇದನ್ನೂ ಓದಿ :ಬುದ್ಧಿವಂತನಿಗೆ ಶ್ರೀನಗರ ಕಿಟ್ಟಿ ವಿಲನ್!
ಇಚ್ಛಾಶಕ್ತಿಯ ಕೊರತೆ: ಜನರ ಇಚ್ಛಾಶಕ್ತಿಯ ಕೊರತೆಯಿಂದಾಗಿ ಪವಿತ್ರ ಸ್ಥಳಗಳಲ್ಲಿನ ನದಿ ನೀರು ಮಲೀನ ಹೆಚ್ಚಾಗುತ್ತಿದೆ. ಅಲ್ಲದೆ, ಹೇಮಗಿರಿ ಸುತ್ತಮುತ್ತಲಿನ ಪ್ರಶಾಂತವಾದ ತಾಣಕ್ಕೆ ಸಂಜೆಯ ವೇಳೆ ಪಾರ್ಟಿ, ಮೋಜು ಮಸ್ತಿ ಮಾಡಲು ನೂರಾರು ಸಂಖ್ಯೆಯ ಜನರು ಪ್ರತೀ ದಿನ ಆಗಮಿಸುತ್ತಿದ್ದು, ಮದ್ಯದ ಬಾಟಲ್‌ಗಳು, ಸಿಗರೇಟಿನ ತ್ಯಾಜ್ಯಗಳು ಎಲ್ಲೆಂದರಲ್ಲಿ ಚೆಲ್ಲಾಡುತ್ತಿವೆ. ಇತ್ತೀಚಿನ ದಿನಗಳಲ್ಲಿ 2-3 ಕೊಲೆಗಳೂ ಸಹ ನಡೆದಿದ್ದರೂ ಇದರ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಹೇಮಗಿರಿಗೆ ಒಂದು ಹೊರ ಪೊಲೀಸ್ ಠಾಣೆ ಮಂಜೂರು ಮಾಡಿ, ಅಲ್ಲಿ ನಡೆಯುವ ಅನೈತಿಕ ಚಟುವಟಿಕೆಗಳನ್ನು ನಿಯಂತ್ರಣ ಮಾಡಬೇಕಾಗಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ಬಂಡಿಹೊಳೆ ದರ್ಶನ್ ಸೇರಿದಂತೆ ಸ್ಥಳೀಯ ನಿವಾಸಿಗಳು ಮತ್ತು ಎಂದು ಆರೋಪಿಸಿದ್ದಾರೆ.