Advertisement

ಜಿಲ್ಲೆಗೆ ಹೇಮಾವತಿ ನೀರು ಹರಿದು ಬಂದಿಲ್ಲ

07:40 AM Feb 19, 2019 | |

ತುಮಕೂರು: ಸುಪ್ರೀಂ ಕೋರ್ಟ್‌ ಆದೇಶದಂತೆ ನಗರಕ್ಕೆ ಬರಬೇಕಾಗಿರುವ ಹೇಮಾವತಿ ನೀರು ಬಂದಿಲ್ಲ. ಜಿಲ್ಲೆಯ ಕೆರೆಕಟ್ಟೆಗಳೇ ತುಂಬುತ್ತಿಲ್ಲ. ಹೀಗಿರುವಾಗ ರಾಮನಗರ, ಚ‌ನ್ನಪಟ್ಟಣಕ್ಕೆ ಜಿಲ್ಲೆಗೆ ಹರಿಯಬೇಕಾಗಿರುವ ಹೇಮಾವತಿ ನೀರನ್ನು ಪೈಪ್‌ಲೈನ್‌ ಮೂಲಕ ನೀರು ಹರಿಸಲು ಎಕ್ಸ್‌ಪ್ರೆಸ್‌ ಲೈನ್‌ ಯೋಜನೆಗೆ ಸಂಪುಟ ಸಭೆಯಲ್ಲಿ ಸರ್ಕಾರ ಅನುಮೋದನೆ ನೀಡಿದರೆ, ಫೆ.28ರಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಬಿಜೆಪಿ ಹಿರಿಯ ಮುಖಂಡ, ಮಾಜಿ ಸಚಿವ ಸೊಗಡು ಎಸ್‌.ಶಿವಣ್ಣ ಸರ್ಕಾರಕ್ಕೆ ಎಚ್ಚರಿಸಿದರು.

Advertisement

ಯೋಜನೆ ಕೈಬಿಡಿ: ನಗರದಲ್ಲಿ ಸೋಮವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಗೆ ಹರಿಯಬೇಕಾಗಿರುವ 25 ಟಿಎಂಸಿ ನೀರನ್ನು ಈ ಸರ್ಕಾರಕ್ಕೆ ಹರಿಸಲು ಸಾಧ್ಯವಾಗಿಲ್ಲ. ಹೇಮಾವತಿ ನೀರು ಸಮುದ್ರದ ಪಾಲಾಯಿತು. ಜಿಲ್ಲೆಯ ಒಂದು ಕೆರೆ ಕಟ್ಟೆ ತುಂಬಿಲ್ಲ. ತುಮಕೂರು ನಗರಕ್ಕೆ ಸುಪ್ರಿಂ ಕೋರ್ಟ್‌ ಆದೇಶ ಪ್ರಕಾರ 1.35 ಟಿಎಂಸಿ ನೀರು ಬರಬೇಕಿತ್ತು.

ಆದರೆ, ಆ ನೀರು ಬಂದಿಲ್ಲ. ಗುಬ್ಬಿ, ಕುಣಿಗಲ್‌, ಕೊರಟಗೆರೆ, ಮಧುಗಿರಿ, ಶಿರಾ, ಚಿಕ್ಕನಾಯಕನಹಳ್ಳಿ, ತಿಪಟೂರು, ತುರುವೇಕೆರೆಯ ಭಾಗಕ್ಕೂ ಹೇಮಾವತಿ ನೀರು ಹರಿದಿಲ್ಲ. ಹೀಗಿರುವಾಗ ಜಿಲ್ಲೆಗೆ ಹರಿಯುವ ನೀರಿನಲ್ಲಿಯೇ ರಾಮನಗರ, ಚನ್ನಪಟ್ಟಣಕ್ಕೆ ಸರ್ಕಾರ ನೀರು ಹರಿಸಿದರೆ ಜಿಲ್ಲೆಯ ಜನರ ಗತಿಯೇನು? ಕೂಡಲೇ ಸರ್ಕಾರ ಈ ಯೋಜನೆ ಕೈಬಿಡಬೇಕು ಎಂದು ಎಚ್ಚರಿಸಿದರು.

ಒತ್ತಾಯ: ತುಮಕೂರು ನಗರಕ್ಕೆ ನೀರು ಕೊಡುವ ಕೆರೆಗಳಿಗೆ ನೀರು ಹರಿಸಿಲ್ಲ. ಸಿದ್ಧಗಂಗಾ ಶ್ರೀಗಳ ಆಶಯದಂತೆ ದೇವರಾಯಪಟ್ಟಣ ಹಾಗೂ ಮೈದಾಳ ಕೆರೆಗೆ ಮೊದಲು ನೀರು ಬಿಡುವ ಕಾರ್ಯವನ್ನು ಸರ್ಕಾರ ಮಾಡಬೇಕಾಗಿದೆ ಎಂದು ಒತ್ತಾಯಿಸಿದರು. 

ನೀರು ನಿಲ್ಲಿಸಲಿ ಸಚಿವರು: ಜಿಲ್ಲೆಯ ನೀರನ್ನು ನೀರಾವರಿ ಸಚಿವರು, ಮುಖ್ಯಮಂತ್ರಿಗಳು ರಾಮನಗರ, ಚನ್ನಪಟ್ಟಣಕ್ಕೆ ಪೈಪ್‌ಲೈನ್‌ ಮೂಲಕ ತೆಗೆದುಕೊಂಡು ಹೋಗಲು ಹುನ್ನಾರ ನಡೆಸಿದ್ದಾರೆ. ಜಿಲ್ಲೆಯ ಮೂವರು ಸಚಿವರಿಗೆ ನೈತಿಕತೆ, ಜಿಲ್ಲೆಯ ಬಗ್ಗೆ ಕಾಳಜಿ ಇದ್ದರೆ, ಕೂಡಲೇ ಸರ್ಕಾರದ ಮೇಲೆ ಒತ್ತಡ ತಂದು ನಿಲ್ಲಿಸಲಿ ಎಂದು ಆಗ್ರಹಿಸಿದರು.

Advertisement

ಮಠಾಧೀಶರರು ಹೋರಾಟಕ್ಕೆ ಬರಲಿ: ಜಿಲ್ಲೆಯ ರೈತ ಸಂಘಟನೆಗಳು ಹಾಗೂ ರಾಜಕಾರಣಗಳು ಒಂದಾಗಿಲ್ಲ. ಹೋರಾಟ ಮಾಡಿ, ನೀರು ಉಳಿಸಿಕೊಳ್ಳಬೇಕಾಗಿದೆ. ಎಲ್ಲರನ್ನೂ ಒಂದು ವೇದಿಕೆಯಲ್ಲಿ ತಂದು ಹೋರಾಟ ಮಾಡಲು ಜಿಲ್ಲೆಯ ಎಲ್ಲಾ ಮಠಾಧೀಪತಿಗಳು ಮುಂದಾಗಬೇಕು. ಈಗ ಹೋರಾಟ ಮಾಡದಿದ್ದರೆ ಮುಂದೆ ಜಿಲ್ಲೆಯ ಜನ ನೀರಿಗಾಗಿ ಪರಿತಪ್ಪಿಸಬೇಕಾಗುತ್ತದೆ.

ಅದಕ್ಕಾಗಿ ಎಲ್ಲರೂ ಒಂದಾಗಿ ಸೂಕ್ತ ಮಾರ್ಗದರ್ಶನ ನೀಡಿ ಜಿಲ್ಲೆಗೆ ನೀರಿನ ಬವಣೆ ನೀಗಿಸಬೇಕು ಎಂದು ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಎಂ.ಬಿ.ನಂದೀಶ್‌, ಜಯಸಿಂಹ ರಾವ್‌, ಕೆ.ಪಿ.ಮೋಹನ್‌, ಬನಶಂಕರಿ ಬಾಬು, ಗಣೇಶ್‌ ಹಾಗೂ ಬಡ್ಡಿಹಳ್ಳಿ ಚಂದ್ರಣ್ಣ ಮುಂತಾದವರು ಇದ್ದರು. 
 
ದೇಶದ ಒಳಗಿರುವವನ್ನು ಮಟ್ಟಹಾಕಲಿ
ತುಮಕೂರು:
ದೇಶದಲ್ಲಿ ಭಯೋತ್ಪಾದಕತೆ ತೀವ್ರಗೊಳ್ಳುತ್ತಿದೆ. ಇದನ್ನು ಮಟ್ಟಹಾಕಲು ದೇಶದ ಒಳಗಿರುವ ದೇಶದ್ರೋಹಿಗಳನ್ನು ಮಟ್ಟಹಾಕಲು ಕೇಂದ್ರ ಸರ್ಕಾರ ಮುಂದಾಗಬೇಕು. ಹಲವು ಮುಸ್ಲಿಂ ಸಂಘಟನೆಗಳನ್ನು ನಿಷ್ಕ್ರಿಯಗೊಳಿಸಿ, ಎಲ್ಲಾ ಮದರಾಸಗಳನ್ನು ತಪಾಸಣೆಗೊಳಿಸಬೇಕೆಂದು ಮಾಜಿ ಸಚಿವ ಸೊಗಡು ಎಸ್‌.ಶಿವಣ್ಣ ಆಗ್ರಹಿಸಿದರು.

ಮೂಟೆ ಹೊರಲು ಸಿದ್ಧ: ಜಮ್ಮುಕಾಶ್ಮೀರದ ಪುಲ್ವಾಮದಲ್ಲಿ ಭಯೋತ್ಪಾದಕರು ನಡೆಸಿದ ದಾಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಕಠಿಣ ಕ್ರಮ ತೆಗೆದುಕೊಂಡು ಪಾಕಿಸ್ತಾನದ ವಿರುದ್ಧ ಯುದ್ಧ ಸಾರಬೇಕು. ಮುಜಾಯಿದ್ದಿನ್‌, ಎಸಿಪಿಐ ಅಂಥ ಸಂಘಟನೆಗಳನ್ನು ಬ್ಯಾನ್‌ ಮಾಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಗಂಭೀರ ಸ್ಥಿತಿ ಎದುರಿಸಬೇಕಾಗಿದೆ. ಒಂದು ವೇಳೆ ಯುದ್ದದ ನಂತರ ಗಂಭೀರ ಸ್ಥಿತಿ ನಿರ್ಮಾಣವಾಗಿ ದೇಶದ ನಾಗರಿಕರನ್ನು ಆಹ್ವಾನಿಸಿದರೆ ನಾನು ದೇಶಕ್ಕಾಗಿ ಮೂಟೆ ಹೊರಲು ಸಿದ್ಧವಾಗಿದ್ದೇನೆ ಎಂದು ಹೇಳಿದರು. 

ದೇಶದ ಬಗ್ಗೆ ಗೌರವಿರಲಿ: ಇಂದು ಮನೆಯಲ್ಲಿಯೇ ಉಗ್ರರಿದ್ದರೂ ಯಾವೊಬ್ಬ ಮುಸ್ಲಿಮರು ಉಗ್ರವಾದಿ ಇದ್ದಾನೆ ಎಂದು ಹೇಳಿಕೊಳ್ಳದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಇಂಥ ನರಹಂತಕ ಕೃತ್ಯಗಳಿಗೆ ಪಾಲ್ಗೊಳ್ಳುವರು ಹೊರಗಡೆಯಿಂದ ಬಂದಂತಹ ಮುಸ್ಲಿಂರದ್ದಾಗಿದ್ದಾರೆ. ನಮ್ಮ ಮುಸ್ಲಿಮರು ದೇಶದ ಬಗ್ಗೆ ಗೌರವ ಹೊಂದಬೇಕು ಎಂದರು.

ಕೈ ಜೋಡಿಸಿ: ಇಂದು ರಾಜಕಾರಣಿಗಳನ್ನು ನಂಬಲು ಸಾಧ್ಯವಿಲ್ಲ. ಮತಕ್ಕಾಗಿ ಒಲೈಸುವ ಕೆಲಸ ಮಾಡುತ್ತಿದ್ದಾರೆ. ದೇಶದ ರಕ್ಷಣೆಗಾಗಿ ಎಲ್ಲರೂ ಕೈ ಜೋಡಿಸಬೇಕು. ಮುಂದಿನ ದಿನಗಳಲ್ಲಿ ಪುಲ್ವಾಮದಂಥ ಘಟನೆಗಳು ಸಂಭವಿಸದಂತೆ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next