Advertisement

ಮಲೆನಾಡ ಗಂಗೆ ಎಂದೇ ಪ್ರಸಿದ್ದಿ ಪಡೆದ ಹೇಮಾವತಿ ನದಿ ಉಗಮವಾಗಿದ್ದೇ ಇಲ್ಲಿ

05:13 PM Nov 27, 2020 | sudhir |

ಪಶ್ಚಿಮ ಘಟ್ಟಗಳ ಸೌಂದರ್ಯ ಸ್ವರ್ಗದ ದ್ವಾರ, ಕಾಫಿ ಕಣಜವಾದ ಚಿಕ್ಕಮಗಳೂರು ಸುಂದರ ಸ್ಥಳಗಳ ತವರೂರು. ಸ್ವತ್ಛ ಗಾಳಿ ಸೇವನೆಯ ಮಲೆನಾಡು ನಿರ್ಮಲ ನಿಸರ್ಗ ತಾಣಗಳ ನೇಲೆಬೀಡು. ಹೇಮಾವತಿ ಉಗಮ ಸ್ಥಾನವಾದ ಚಿಕ್ಕಮಗಳೂರು ಜಿಲ್ಲೆಯ ಸ್ವರ್ಗದಂತಿದೆ. ಪಶ್ವಿ‌ಮ ಘಟ್ಟಗಳ ಸೌಂದರ್ಯ ಕರುನಾಡಿನ ಮೂಲ ಚೇತನ ಸಾನಿಧ್ಯ.

Advertisement

ಮಲೆನಾಡಿನ ಸೌಂದರ್ಯದ ಬೊಕ್ಕಸದಲ್ಲಿ ಪ್ರಸಿದ್ಧ ಪ್ರವಾಸಿ ತಾಣಗಳ ಸಾಲಿನಲ್ಲಿ ಹೇಮಾವತಿ ನದಿ ಮೂಲವು ಒಂದಾಗಿದೆ. ಹೇಮಾವತಿ ನದಿಯು ಮೂಡಿಗೆರೆ ತಾಲೂಕಿನ ಜವಳಿ ಎಂಬಲ್ಲಿ ಉಗಮವಾಗುತ್ತದೆ. ನದಿ ಮೂಲ ಮತ್ತು ಋಷಿ ಮೂಲ ಹುಡುಕಬಾರದು ಎಂಬ ನಾಣ್ಣುಡಿಯಂತೆ ಹೇಮಾವತಿ ನದಿ ಮೂಲದ ಜಾಡು ಕೂಡ ಕೂತುಹಲ ಮೂಡಿಸುತ್ತದೆ.
ಶ್ರೀ ಮಹಾಗಣಪತಿ ದೇವಸ್ಥಾನದ ಸನ್ನಿದಾನದಲ್ಲಿ ಹನಿ ಹನಿಯ ರೂಪದಲ್ಲಿ ತೊಟ್ಟಿರುವ ಹೇಮಾವತಿ ಗ್ರಾಮದ ಬೆಟ್ಟದ ಮೇಲಿಂದ ಇಳಿದು ನದಿಯಾಗಿ ಹರಿದು ಮೂಡಿಗೆರೆ ಮತ್ತು ಹಾಸನ ಸೇರಿದಂತೆ ನಾಲ್ಕು ಜಿಲ್ಲೆಗಳ ರೈತರ ಪಾಲಿನ ಜೀವದಾತೆಯಾಗಿದ್ದಾಳೆ ಮಲೆನಾಡ ಗಂಗೆ ಹೇಮಾವತಿ.

ಪುರಾಣದಲ್ಲಿ ಹೇಮಾವತಿ ನದಿಯ ಬಗ್ಗೆ ಉಲ್ಲೇಖವಿದೆ. ಸತ್ಯ ಕಾಮ ಎಂಬಾತ ಗೌತಮ ಮಹರ್ಷಿಗಳ ಬಳಿ ಬಂದು ತನ್ನನ್ನು ಶಿಷ್ಯನಾಗಿ ಸ್ವೀಕರಿಸಿ ಎಂದು ವಿನಂತಿಸಿದಂತೆ ಗೌತಮ ಮಹರ್ಷಿಗಳು ಆತನ ಗೋತ್ರ ವಿಚಾರಿಸಿದಾಗ ಅವನಿಗೆ ಅದು ತಿಳಿಯದೇ ಇದ್ದುದರಿಂದ ಆತನ ತಾಯಿ ಬಳಿ ವಿಚಾರಿಸಿ ಬಾ ಎನ್ನುತ್ತಾರೆ. ತಾಯಿಗೂ ಕೂಡ ತಿಳಿಯದೇ ಇದ್ದುದರಿಂದ ಗೋತ್ರದ ವಿಚಾರ ತನ್ನ ತಾಯಿಗೂ ಅರಿವಿಲ್ಲವೆಂದು ಹೇಳುತ್ತಾನೆ. ಆಗ ಮಹರ್ಷಿ ತನ್ನ ದಿವ್ಯ ದೃಷ್ಠಿಯಿಂದ ಸತ್ಯಕಾಮನ ಪೂರ್ವಪರ ತಿಳಿದು ಕೊಂಡು ಅವನ ತಂದೆ ಒಬ್ಬ ಬ್ರಾಹ್ಮಣನಾಗಿದ್ದು,ಇವನನ್ನು ಶಿಷ್ಯನಾಗಿ ಸ್ವೀಕರಿಸುವುದಾಗಿ ತಿಳಿಸುತ್ತಾನೆ. ಅನಂತರ ಸತ್ಯಕಾಮನಿಗೆ ಬ್ರಹ್ಮೋಪದೇಶ ಮಾಡಿ ಆತನಿಗೆ ಮೂನ್ನೂ ಹಸುಗಳನ್ನು ಕೊಟ್ಟು ಈ ಹಸುಗಳು ಒಂದು ಸಾವಿರ ಆಗುವ ತನಕ ನೋಡಿಕೊಳ್ಳುವಂತೆ ಹೇಳುತ್ತಾನೆ.

ಸತ್ಯ ಕಾಮನು ಹಸುಗಳನ್ನು ಕಾಡಿಗೆ ಕೊಂಡೊಯ್ಯೊತ್ತಾನೆ. ಪಂಚ ಭೂತಗಳಾದ ಭೂಮಿ, ವಾಯು,ಅಗ್ನಿ, ನೀರು, ಆಕಾಶ ಆತನಿಗೆ ಬ್ರಹ್ಮಸ್ವರ ಜ್ಞಾನವನ್ನು ಮತ್ತು ಅಧಿಶಕ್ತಿಯ ಪರಿಚಯವನ್ನು ಒದಗಿಸುತ್ತದೆ. ಪಂಚ ಭೂತಗಳಿಂದ ಬ್ರಹ್ಮಸ್ವರ ಉಪದೇಶವನ್ನು ಪಡೆದುಕೊಂಡು ಹಸುವಿನೊಂದಿಗೆ ತಪಸ್ವಿಗೆ ತೆರಳುತ್ತಾನೆ. ಹಾಗೇ ತಪಸ್ವಿಗೆ ಕುಳಿತ ಸ್ಥಳವೇ ಈಗೀನ ಜಾವಳಿ ಸಮೀಪದ ಹೇಮಾವತಿ ಗುಡ್ಡ ಎಂಬ ಇತಿಹಾಸವಿದೆ. ಸತ್ಯ ಕಾಮ ಸ್ಥಾಪಿಸಿದ ಆಶ್ರಮದ ಬಳಿ ( ಈಗಿನ ಹೇಮಾವತಿ) ನೀರಿಲ್ಲದೆ ಇರುವುದನ್ನು ಗಮನಿಸಿ ಶಿವನ ಶಿರದಿಂದ ಹರಿಯುವ ಗಂಗೆಯನ್ನು ಕರುಣಿಸುವಂತೆ ಪಾವರ್ತಿಯನ್ನು ಪ್ರಾರ್ಥಿಸಿ ತಪಸ್ಸಿಗೆ ಕುಳಿತುಕೊಳ್ಳುತ್ತಾನೆ. ತನ್ನ ತಪಸ್ಸು ನಿರ್ವಿಘ್ನವಾಗಿ ನಡೆಯಲಿ ಎಂದು ತಪಶಕ್ತಿಯಿಂದ ಗಣಪತಿಯನ್ನು ಸೃಷ್ಟಿಸಿಕೊಂಡು ಪೂಜಿಸುತ್ತಾನೆ.

ಬಹುಕಾಲ ತಪಸ್ಸು ಮಾಡಿದ ಅನಂತರ ಪಾವರ್ತಿಯು ಪ್ರತ್ಯಕ್ಷಳಾಗಿ ವರ ಬೇಡುವಂತೆ ಹೇಳುತ್ತಾಳೆ. ತನ್ನ ಹಸುಗಳಿಗೆ ಕುಡಿಯಲು ನೀರಿಲ್ಲ ಹಾಗಾಗಿ ಇಲ್ಲಿ ನೀರನ್ನು ಕರುಣಿಸಿ ಎಂದಾಗ ಹಿಮ ಕರಗಿ ದಂಡಕಾರಣ್ಯದ ಮೂಲಕ ಒಣ ಭೂಮಿಯಲ್ಲಿ ಹರಿಯಲಿ ಎಂದು ವರವನ್ನು ಕೊಟ್ಟಳು.

Advertisement

ಹೀಗೆ ಹಿಮಗಡ್ಡೆಗಳು ಕರಗಿ ನೀರಾಗಿ ಹರಿಯಲಾರಂಭಿಸಿದವು. ಈಗಿನ ಹಾಸನ ಜಿಲ್ಲೆ ಅಂದಿನ ದಂಡಕಾರಣ್ಯದ ಒಂದು ಭಾಗವಾಗಿತ್ತು. ಹಿಮವಾಹಿನಿಯೂ ಹರಿದು ದಂಡಕಾರಣ್ಯದ ಒಣ ಭೂಮಿಯನ್ನು ಪ್ರವೇಶಿಸುತ್ತಿದ್ದಂತೆ ಅಲ್ಲಿನ ಜೀವನವೇ ಬದಲಾಯಿತು. ಹೀಗೆ ಹೇಮವಾಹಿನಿ ನದಿಯು ಕಾಲ ಕ್ರಮೇಣ ಹೇಮಾವತಿ ನದಿ ಎಂದಾಯಿತು.

ಹೇಮಾವತಿ ನದಿಯು ಕಾವೇರಿ ನದಿಯ ಮುಖ್ಯ ಉಪನದಿಗಳೊಂದು ಚಿಕ್ಕಮಗಳೂರು ಜಿಲ್ಲೆ ಜಾವಳಿಯಲ್ಲಿ ಉಗಮಿಸುವ ಈ ನದಿ ಹಾಸನ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಹರಿದು, ಕೃಷ್ಣ ರಾಜ ಪೇಟೆ ತಾಲೂಕಿನ ಅಂಬಿಗರ ಹಳ್ಳ ಬಳಿ ಯ ಸಂಗಮದಲ್ಲಿ ಕಾವೇರಿ ನದಿಯನ್ನು ಸೇರುತ್ತದೆ.

– ಯಶಸ್ವಿನಿ ಸುರೇಂದ್ರ ಗೌಡ, ಜ್ಞಾನ ಜ್ಯೋತಿ ಟಿ.ಎಂ.ಎಸ್‌ ಕಾಲೇಜು, ಚಿಕ್ಕಮಗಳೂರು

Advertisement

Udayavani is now on Telegram. Click here to join our channel and stay updated with the latest news.

Next