ಸಕಲೇಶಪುರ: ಹೇಮಾವತಿ ನದಿಯಲ್ಲಿ ಹೂಳು ತೆಗೆಯದ ಕಾರಣ ಹಾಗೂ ಪಟ್ಟಣ ವ್ಯಾಪ್ತಿಯ ಸುಮಾರು 2ಕಿ.ಮೀ ದೂರ ನದಿ ದಡದಲ್ಲಿ ತಡೆಗೋಡೆ ನಿರ್ಮಾಣ ಮಾಡದ ಕಾರಣ ಮಳೆ ಬಂದರೆ ಪ್ರತಿ ವರ್ಷ ಪಟ್ಟಣದ ಕೆಲವು ಬಡಾವಣೆಗಳು ಜಲಾವೃತವಾಗುವುದು ಸಾಮಾನ್ಯವಾಗಿಬಿಟ್ಟಿದೆ.
ಶಾಶ್ವತಪರಿಹಾರವಾಗಿಲ್ಲ; ಪ್ರತಿ ವರ್ಷ ಮಳೆಗಾಲದಲ್ಲಿ ಮಳೆ ಪ್ರಮಾಣ ಹೆಚ್ಚಾದಾಗ ಪಟ್ಟಣದ ಆಜಾದ್ ರಸ್ತೆ, ಹಳೇ ಸಂತೇವೇರಿ, ಕೊಪ್ಪಲು ಸೇರಿದಂತೆ ಕೆಲವೊಂದು ಬಡಾವಣೆಗಳಿಗೆ ಹೇಮಾವತಿ ನದಿ ನೀರು ನುಗ್ಗುತ್ತದೆ. ಪ್ರತಿ ವರ್ಷ ಕೆಲವು ಮನೆ ಹಾಗೂ ಅಂಗಡಿಗಳಿಗೆ ನೀರು ನುಗ್ಗಿ ಹಾನಿ ಸಂಭವಿಸುತ್ತಿದ್ದು ನಂತರ ಸರ್ಕಾರ ನೆರೆಯಿಂದ ಹಾನಿಗೊಳಗಾದ ಪ್ರತಿ ಮನೆಗೆ10 ಸಾವಿರ ರೂ. ತಾತ್ಕಾಲಿಕ ಪರಿಹಾರ ನೀಡುವುದು ಸಾಮಾನ್ಯವಾಗಿದೆ.ಈಪರಿಹಾರವೂ ಎಲ್ಲರಿಗೂ ಸಿಗುತ್ತಿಲ್ಲ.ಕಳೆದ ಹಲವಾರು ವರ್ಷಗಳಿಂದ ಈ ಸಮಸ್ಯೆ ಸಾಮಾನ್ಯವಾಗಿದೆ. ಆದರೆ ಇಲ್ಲಿಯವರೆಗೂ ಇಲ್ಲಿನ ಜನಪ್ರತಿನಿಧಿಗಳು, ಅಧಿಕಾರಿಗಳು ಈ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಲು ಮುಂದಾಗಿಲ್ಲ.
ಹೂಳು ತೆಗೆದಿಲ್ಲ: ಪಟ್ಟಣ ವ್ಯಾಪ್ತಿಯ ರೈಲ್ವೆ ಸೇತುವೆಯಿಂದ ಕೌಡಹಳ್ಳಿ ವ್ಯಾಪ್ತಿಯಲ್ಲಿ ಹರಿಯುವ ಹೇಮಾವತಿ ನದಿ ದಂಡೆಯಲ್ಲಿ ವ್ಯಾಪಕ ಹೂಳುತುಂಬಿದೆ. ಈ ಹೂಳು ತೆಗೆಯುವ ಕೆಲಸವನ್ನು ಜನಪ್ರತಿನಿಧಿಗಳು,ಅಧಿಕಾರಿಗಳುಮಾಡಿದರೆಪಟ್ಟಣದ ಕೆಲವು ಬಡಾವಣೆಗಳಿಗೆ ಮಳೆಗಾಲದಲ್ಲಿ ನೀರು ನುಗ್ಗುವ ಪ್ರಮೇಯವೇ ಇರುವುದಿಲ್ಲ. ಪಟ್ಟಣ ವ್ಯಾಪ್ತಿಯ ಹೇಮಾವತಿ ನದಿ ತೀರದಲ್ಲಿ ಹೂಳು ತೆಗೆಯುವ ಕೆಲಸವಾಗಬೇಕಾಗಿದೆ ಹಾಗೂ ನದಿಯ ಎರಡುಬದಿಯಲ್ಲಿ ತುಸು ಎತ್ತರದ ತಡೆಗೋಡೆ ನಿರ್ಮಾಣವಾಗಬೇಕಾಗಿದೆ. ಹೂಳು ತೆಗೆಯಲು ಯಾವುದೇ ಖರ್ಚು ಸಹ ಮಾಡಬೇಕಾಗಿಲ್ಲ. ತಾಲೂಕಿನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ 75 ರ ಚತುಷ್ಪಥ ರಸ್ತೆ ಕಾಮಗಾರಿಗಾಗಿ ಗುಂಡಿಗಳನ್ನು ಮುಚ್ಚಲು ವ್ಯಾಪಕ ಮಣ್ಣು ಬೇಕಾಗಿದ್ದು ಈ ಕಾಮಗಾರಿ ಗುತ್ತಿಗೆ ಪಡೆದಿರುವ ಖಾಸಗಿ ಕಂಪನಿ ಹೇಮಾವತಿ ನದಿ ತೀರದ ಮಣ್ಣು ಮಿಶ್ರಿತ ಮರಳನ್ನು ತೆಗೆದುಕೊಂಡು ಗುಂಡಿಗಳನ್ನುಮುಚ್ಚಲು ತೆಗೆದುಕೊಂಡುಹೋಗುವಲ್ಲಿ ಅನುಮಾನವಿಲ್ಲ. ಇದಕ್ಕೆ ಜಿಲ್ಲಾಧಿಕಾರಿಗಳು ಹಾಗೂ ಭೂವಿಜ್ಞಾನ ಗಣಿ ಇಲಾಖೆ ವತಿಯಿಂದ ಅನುಮತಿ ಪಡೆಯಬೇಕಾಗಿದೆ. ಆದರೆ ಈ ಕಾರ್ಯವನ್ನು ಮಾಡಲು ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಇಚ್ಛಾ ಶಕ್ತಿ ಬೇಕಾಗಿದೆ. ಇನ್ನು ತಡೆಗೋಡೆ ನಿರ್ಮಾಣ ಮಾಡಲು ಎತ್ತಿನ ಹೊಳೆ ಯೋಜನೆಯಿಂದ ಅನುದಾನ ಪಡೆಯಬಹುದಾಗಿದೆ.
ವಾಸ್ತವವಾಗಿ ಎತ್ತಿನಹೊಳೆ ಎಂಬ ಯೋಜನೆಗೆ ಕೋಟ್ಯಂತರ ಹಣ ಸುರಿಯುವ ಬದಲು ಸಮುದ್ರಕ್ಕೆ ಹರಿಯುವ ತಾಲೂಕಿನ ಸಣ್ಣಪುಟ್ಟ ನದಿಗಳ ನೀರನ್ನು ಹೇಮಾವತಿಗೆ ಬಿಟ್ಟು ದೂರದ ತುಮಕೂರಿನಿಂದ ಎತ್ತಿನ ಹೊಳೆಪೈಪ್‌ಲೈನ್‌ಕಾಮಗಾರಿ ಮಾಡಬಹುದಿತ್ತು. ಎತ್ತಿನಹೊಳೆಗೆಕೋಟ್ಯಂತರ ಹಣ ವ್ಯಯಿಸುವ ಬದಲು ಹೇಮೆ ಹೂಳನ್ನು ತೆಗೆದು ತಡೆಗೋಡೆ ಮಾಡಿದ್ದಾರೆ. ಎತ್ತಿನಹೊಳೆ ಯೋಜನೆ ಹೆಸರಿನಲ್ಲಿ ಪರಿಸರ ನಾಶವಾಗುವುದನ್ನು ತಪ್ಪಿಸಬಹುದಿತ್ತು. ಒಟ್ಟಾರೆಯಾಗಿ ಪಟ್ಟಣ ವ್ಯಾಪ್ತಿಯಲ್ಲಿ ಪ್ರತಿ ಮಳೆಗಾಲದಲ್ಲಿ ಕೆಲವು ಬಡಾವಣೆನಿವಾಸಿಗಳಿಗೆ ಹಾಗೂರೈತರಿಗೆಉಂಟಾಗುವ ಸಮಸ್ಯೆ ಬಗೆಹರಿಸಲು ಜನಪ್ರತಿನಿಧಿಗಳು, ಅಧಿಕಾರಿಗಳು ಇಚ್ಛಾಶಕ್ತಿ ತೋರಬೇಕಾಗಿದೆ.
ಕೇವಲ ಅರ್ಧ ಕಿ.ಮೀ.ತಡೆಗೋಡೆ : ನದಿಯಲ್ಲಿ ತುಂಬಾ ಹೂಳು ತುಂಬಿರುವುದರಿಂದ ಮಳೆಗಾಲದಲ್ಲಿ ನದಿ ನೀರು ಸರಾಗವಾಗಿ ಹರಿಯಲು ಅವಕಾಶ ಆಗು ವುದಿಲ್ಲ. ಮರಳು ಸಹ ಹುಟ್ಟದಿರುವುದರಿಂದ ನದಿಯ ಸೌಂದರ್ಯಕ್ಕೂ ಧಕ್ಕೆಯುಂಟಾಗುತ್ತಿದೆ. ನದಿ ಹಾದಿಯಲ್ಲಿ ವಿಪರೀತ ಹೂಳು ತುಂಬಿರುವುದರಿಂದ ಪಟ್ಟಣ ವ್ಯಾಪ್ತಿಯ ಹೊಳೆಮಲ್ಲೇಶ್ವರ ದೇವಸ್ಥಾನ ಸಮೀಪ ಹೇಮಾವತಿ ನದಿ ಬೇಸಿಗೆ ಕಾಲದಲ್ಲಿ ಕ್ರಿಕೆಟ್ ಮೈದಾನವಾಗುತ್ತದೆ. ಹಾಗೆಯೇ ದನ ಕುರಿಗಳು ಮೇಯವ ಸ್ಥಳವಾಗುತ್ತದೆ. ಜತೆಗೆ ಹೇಮಾವತಿ ನದಿ ತೀರದಲ್ಲಿ ಸುಮಾರು ಅರ್ಧ ಕಿ.ಮೀ.ನಷ್ಟು ದೂರ ಒಂದು ಬದಿ ಮಾತ್ರ ತಡೆಗೋಡೆ ನಿರ್ಮಾಣವಾಗಿದೆ. ಇದರಿಂದಾಗಿ ಮಳೆ ಹೆಚ್ಚಾದರೆ ನೀರು ದೇಗುಲ ತಲುಪುತ್ತದೆ. ಇದು ಸಹ ಈ ಹಿಂದೆ ಕೇಂದ್ರ – ರಾಜ್ಯ ಸರ್ಕಾ ರದ ವಿವಿಧ ಇಲಾಖೆಗಳಲ್ಲಿ ಅಧಿಕಾರ ನಿರ್ವಹಿಸಿದ ತಾಲೂಕಿನ ಬೈಕೆರೆ ನಾಗೇಶ್ ವಹಿಸಿದ ವಿಶೇಷ ಕಾಳಜಿಯಿಂದ ಅನುದಾನ ಬಿಡುಗಡೆಯಾಗಿ ತಡೆಗೋಡೆ ನಿರ್ಮಾಣವಾಗಿತ್ತು.
ಪಟ್ಟಣ ವ್ಯಾಪ್ತಿಯ ಹೇಮಾವತಿ ನದಿಯ ಹೂಳು ಎತ್ತಲು ಹಾಗೂ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಮುಂದಿನ ದಿನಗಳಲ್ಲಿಯೋಜನೆ ರೂಪಿಸಲಾಗುವುದು.
–ಕಾಡಪ್ಪ, ಪುರಸಭಾ ಅಧ್ಯಕ್ಷ
ಪ್ರತಿವರ್ಷ ಸುರಿಯುವ ಮಳೆಯಿಂದಾಗಿ ನಮ್ಮ ಮನೆಗಳಿಗೆ ನೀರು ನುಗ್ಗಿ ತೊಂದರೆಯುಂಟಾಗುತ್ತದೆ. ಆದರೆ ಜನಪ್ರತಿನಿಧಿಗಳುಹಾಗೂಅಧಿಕಾರಿಗಳು ಇಲ್ಲಿಯವರೆಗೆಈ ಕುರಿತು ಶಾಶ್ವತ ಪರಿಹಾರ ರೂಪಿಸಲು ಮುಂದಾಗಿಲ್ಲ.
– ಜಗದೀಶ್, ಷಣ್ಮುಖಯ್ಯ ರಸ್ತೆ ನಿವಾಸಿ
ಹೇಮಾವತಿ ನದಿಯಲ್ಲಿ ಹೂಳು ತೆಗೆದು ತಡೆಗೋಡೆಕಾಮಗಾರಿ ಮಾಡುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಹಾಗೂ ತಜ್ಞರ ಸಭೆಕರೆದು ಈ ಕುರಿತು ಚರ್ಚಿಸಲಾಗುವುದು.
– ಎಚ್.ಕೆ.ಕುಮಾರಸ್ವಾಮಿ, ಶಾಸಕ
-ಸುಧೀರ್‌ಎಸ್.ಎಲ್