ಹಾಸನ: ಈ ವರ್ಷ ಹೇಮಾವತಿ ಜಲಾಶಯ ಒಂದೇ ವಾರದಲ್ಲಿ ಭರ್ತಿಯಾಗಿದೆ. ಕಳೆದ ವರ್ಷ ಆಗಸ್ಟ್ 2ನೇ ವಾರದಲ್ಲಿ ಭರ್ತಿಯಾಗಿದ್ದ ಜಲಾಶಯ ಈ ವರ್ಷ ಆಗಸ್ಟ್ ಮೊದಲ ವಾರದಲ್ಲಿಯೇ 37.10 ಟಿಎಂಸಿ ಸಂಗ್ರಹ ಸಾಮರ್ಥ್ಯದ ಜಲಾಶಯ ಭರ್ತಿ ಯಾಗಿರುವುದು ದಾಖಲೆ.
ಕಳೆದ ಭಾನುವಾರ ( ಆ.2) ರವರೆಗೂ ಮಳೆಯ ಕೊರತೆಯಿಂದ ರೈತರು ಪರದಾಡು ತ್ತಿದ್ದರು. ಮಲೆನಾಡು ಪ್ರದೇಶದಲ್ಲಿಯೂ ತುಂತುರು ಮಳೆಯಾಗುತ್ತಿದ್ದು, ಜಲಾಶಯಕ್ಕೆಕೇವಲ 1780 ಕ್ಯೂಸೆಕ್ ಒಳಹರಿವಿತ್ತು. ಜಲಾಶಯ ಭರ್ತಿಯಾಗದ ಆತಂಕವಿತ್ತು. ಆದರೆ ಸೋಮವಾರ (ಆ.3 ರಿಂದ) ಆರಂಭವಾದ ಮಳೆ ದಿನೆ. ದಿನೇ ರೌದ್ರಾವತಾರ ತಾಳುತ್ತಾ ಸಾಗಿತು. ಬುಧವಾರ 24,185 ಕ್ಯೂಸೆಕ್, ಗುರುವಾರ 36,849 ಕ್ಯೂಸೆಗೆ ಒಳ ಹರಿವು ಏರಿಕೆಯಾಗಿ ಜಲಾಶಯ ಭರ್ತಿಯಾಗುವ ಆಶಯ ಮೂಡಿತು.
ಜಲಾಶಯ ಭರ್ತಿ: ಶುಕ್ರವಾರ (ಆ.7) 47,320 ಕ್ಯೂಸೆಕ್‌ಗೆ ಏರಿದ ಒಳ ಹರಿವು ಶನಿವಾರದ ವೇಳೆಗೆ ಜಲಾಶಯಕ್ಕೆ 50,036 ಕ್ಯೂಸೆಕ್ ಒಳ ಹರಿವು ದಾಖಲಾಗಿ ಜಲಾಶಯ ಭರ್ತಿಯಾಗಿದೆ. ಜಲಾಶಯದಿಂದ ನದಿಗೆ 20 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಗರಿಷ್ಠ 37.10 ಟಿಎಂಸಿ ಸಂಗ್ರಹ ಸಾಮರ್ಥಯದ ಜಲಾಶಯದಲ್ಲಿ ಶನಿವಾರದ ವರೆಗೆ 34 ಟಿಎಂಸಿ ನೀರು ಸಂಗ್ರಹವಾಗಿದೆ.
ಪ್ರವಾಹ ನಿಯಂತ್ರಿಸಲು ಹಾಗೂ ಜಲಾಶಯದ ಸುರಕ್ಷತೆಯ ದೃಷ್ಟಿಯಿಂದ ಭಾನುವಾರದಿಂದ ಒಳಹರಿವಿನಷ್ಟೇ ನೀರನ್ನು ನದಿಗೆ ಬಿಟ್ಟು ಜಲಾಶಯದ ಸುರಕ್ಷತೆ ಕಾಪಾಡಿ ಕೊಳ್ಳಬೇಕಾಗಿದೆ. ನೀರು ಬಿಡಲಾಗಿದೆ: ನದಿಗೆ ನೀರು ಬಿಡುವುದರೊಂದಿಗೆ ಅಚ್ಚುಕಟ್ಟು ಪ್ರದೇಶಕ್ಕೂ ನಾಲೆಗಳ ಮೂಕ ನೀರು ಹರಿಸಲಾಗುತ್ತಿದೆ. ಹಾಸನ, ತುಮಕೂರು, ಮಂಡ್ಯ ಜಿಲ್ಲೆಯ ಅಚ್ಚುಕಟ್ಟು ಹೊಂದಿರುವ ಹೇಮಾವತಿ ಎಡದಂಡೆ ನಾಲೆಗೆ ಶುಕ್ರವಾರದಿಂದಲೇ ನೀರು ಹರಿಸಲಾಗುತ್ತಿದೆ. ಕಳೆದ ನಾಲ್ಕೈದು ದಿನಗಳ ಹಿಂದೆಯೇ ಹೇಮಾವತಿ ಬಲ ಮೇಲ್ದಂಡೆ ನಾಲೆಗೆ ನೀರು ಹರಿಸಲಾಗುತ್ತಿದೆ. ಆದರೆ ಬಲದಂಡೆ ನಾಲೆಗೆ ಇನ್ನೂ ನೀರು ಬಿಡುತ್ತಿಲ್ಲ.
ನಾಲೆಗಳಿಗೆ ನೀರು ಬಿಡದೆ ಪಶ್ಚಾತ್ತಾಪ: ಜಲಾಶಯದಲ್ಲಿ ಜುಲೈ ಮೊದಲ ವಾರದಲ್ಲಿಯೇ 12 ಟಿಎಂಸಿ ನೀರಿತ್ತು. ನಾಲೆಗಳಲ್ಲಿ ಅಚ್ಚಕಟ್ಟು ಪ್ರದೇಶಕ್ಕೆ ನೀರು ಹರಿಸಿ ಮುಂಗಾರು ಬೆಳೆಗಳ ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳಲು ಸಹ ಕರಿಸಬೇಕು ಎಂದು ಅಚ್ಚುಕಟ್ಟು ಪ್ರದೇಶದ ರೈತರು ಹಾಗೂ ಶಾಸಕರು ಒತ್ತಾಯ ಮಾಡ ಲಾರಂಭಿಸಿದ್ದರು. ಆದರೆ ಜಿಲ್ಲಾ ಉಸ್ತುವಾರಿ ಸಚಿವರು ಗಮನ ಕೊಡಲೇ ಇಲ್ಲ. ಹಿಂದಿನ ವರ್ಷಗಳಲ್ಲಿ ಯಾವ್ಯಾವ ದಿನಾಂಕಗಳಂದು ನೀರು ಬಿಡಲಾಗಿದೆ ಎಂಬ ದಾಖಲೆಗಳನ್ನು ಪರಿಶೀಲಿಸಿ ಆನಂತರ ನಾಲೆಗಳಲ್ಲಿ ನೀರು ಬಿಡುವ ತೀರ್ಮಾನ ಮಾಡಲಾಗುವುದು ಎಂದು ಒಂದು ತಿಂಗಳು ಕಾಲ ತಳ್ಳುತ್ತಾ ಬಂದರು.
ಈಗ ಜಲಾಶಯ ಭರ್ತಿಯಾಗಿ ಹೆಚ್ಚುವರಿ ನೀರು ಪ್ರವಾಹವಾಗಿ ನದಿಗೆ ವ್ಯರ್ಥವಾಗಿ ಹರಿದು ಹೋಗುತ್ತಿದೆ. ಜುಲೈ ತಿಂಗಳಿನಲ್ಲಿಯೇನಾಲೆಗಳಲ್ಲಿ ವಿಶೇಷವಾಗಿ ಎಡದಂಡೆ ನಾಲೆಯಲ್ಲಿ ನೀರು ಬಿಟ್ಟಿದ್ದರೆ ತುಮಕೂರು, ಮಂಡ್ಯ, ಹಾಸನ ಜಿಲ್ಲೆಯ ಕೆರೆಗಳನ್ನು ಈ ವೇಳೆಗಾಗಲೇ ತುಂಬಿಸಬಹುದಿತ್ತು. ಮುಖ್ಯವಾಗಿ ತುಮ ಕೂರು ಜಿಲ್ಲೆಯ ಜನರು ನೀರಿಗೆ ಹಾಹಾಕಾರಪಡುವುದನ್ನು ಒಂದು ತಿಂಗಳಲ್ಲಿ ತಪ್ಪಿಸಬಹುದಾಗಿತ್ತು. ಆದರೆ ಈಗ ಹೆಚ್ಚುವರಿ ನೀರು ನದಿಗೆ ಹರಿಯುವುದನ್ನು ನೋಡಿ ಒಂದು ತಿಂಗಳು ಮೊದಲು ನಾಲೆಗಳಿಗೆ ನೀರು ಬಿಡದಿದ್ದಕ್ಕೆ ಪಶ್ಚಾತ್ತಾಪ ಪಡುವಂತಾಗಿದೆ