ಚಿಂಚೋಳಿ: ಪುರಸಭೆ ವ್ಯಾಪ್ತಿಯಲ್ಲಿ ಬರುವ ಚಂದಾಪುರ ತಹಶೀಲ್ದಾರ ಕಚೇರಿ(ಮಿನಿ ವಿಧಾನಸೌಧ)ಪಕ್ಕದಲ್ಲಿನ ಸಾರ್ವಜನಿಕ ಉದ್ಯಾನವನದಲ್ಲಿ ಸರಕಾರದ ಅನುಮತಿ ಇಲ್ಲದೆ ಕೆಲವು ತಿಂಗಳ ಹಿಂದೆ ಅನಧಿಕೃತವಾಗಿ ನಿರ್ಮಿಸಿದ ಶಿವಶರಣೆ ಹೇಮರಡ್ಡಿ ಮಲ್ಲಮ್ಮಳ ದೇವಸ್ಥಾನವನ್ನು ಪೊಲೀಸ್ ಬಿಗಿ ಬಂದೋಬಸ್ತ್ನಲ್ಲಿ ಜೆಸಿಬಿ ಯಂತ್ರದ ಮೂಲಕ ನೆಲಸಮಗೊಳಿಸಲಾಯಿತು.
ಗುರುವಾರ ಬೆಳಗ್ಗೆಯೇ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನವನ್ನು ಜಿಲ್ಲಾಧಿ ಕಾರಿ ಆದೇಶದಂತೆ ಮುಖ್ಯಾಧಿಕಾರಿ ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ ಜೆಸಿಬಿ ಯಂತ್ರಗಳ ಮೂಲಕ ತೆರವುಗೊಳಿಸಿದ್ದಾರೆ.
ಪುರಸಭೆ ಉದ್ಯಾನ ವನದಲ್ಲಿ ಅನಧಿಕೃತವಾಗಿ ಹೇಮರೆಡ್ಡಿ ಮಲ್ಲಮ್ಮಳ ದೇವಸ್ಥಾನವನ್ನು ನಿರ್ಮಾಣ ಮಾಡದಂತೆ ರೆಡ್ಡಿ ಸಮಾಜದ ಮುಖಂಡರಿಗೆ ಅನೇಕ ಸಲ ತಿಳಿಸಲಾಗಿತ್ತು. ಆದರೆ ರೆಡ್ಡಿ ಸಮಾಜದವರು ತಹಶೀಲ್ದಾರ ಮತ್ತು ಪುರಸಭೆ ಮುಖ್ಯಾಧಿಕಾರಿಗಳ ಆದೇಶ ತಿರಸ್ಕರಿಸಿದ್ದರೆಂದು ಹೇಳಲಾಗಿದೆ.
ಚಂದಾಪುರ ನಗರದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನವನ್ನು ಜೆಸಿಬಿ ಯಂತ್ರದಿಂದ ತೆರವುಗೊಳಿಸಲಾಗುತ್ತಿದೆ ಎನ್ನುವ ವಿಷಯ ತಿಳಿಯುತ್ತಿದ್ದಂತೆ ರೆಡ್ಡಿ ಸಮಾಜದ ರವಿಶಂಕರ ಮುತ್ತಂಗಿ, ಭೀಮರೆಡ್ಡಿ ಮೊಕಾಶಿ, ಗಂಗಾಧರ ಹಾಗೂ ಇನ್ನಿತರರು ಮುಖ್ಯಾಧಿಕಾರಿಗಳ ವಿರುದ್ಧ ತರಾಟೆಗೆ ತೆಗೆದುಕೊಂಡ ಪ್ರಯುಕ್ತ ಸ್ಥಳದಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣವಾಗಿತ್ತು. ಸ್ಥಳದಲ್ಲಿಯೇ ಇದ್ದ ಪೊಲೀಸರು ಎಲ್ಲರನ್ನು ಚದುರಿಸಿದರು.