ರಾಂಚಿ: ಝಾರ್ಖಂಡ್ ವಿಧಾನಸಭೆ ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿರುವ ಝಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ)ದ ಶಾಸಕಾಂಗ ಪಕ್ಷದ ನಾಯಕರಾಗಿ ಹೇಮಂತ್ ಸೊರೇನ್ ಮಂಗಳವಾರ ಆಯ್ಕೆಯಾಗಿದ್ದು, ಡಿ.27ರಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ.
ಇದಕ್ಕಾಗಿ ಅವರು ಮಂಗಳವಾರ ರಾತ್ರಿ ರಾಜ್ಯಪಾಲೆ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ ಸರಕಾರ ರಚನೆಗೆ ಹಕ್ಕು ಮಂಡಿಸಿದರು. ಕಾಂಗ್ರೆಸ್‌ಗೆ ಸ್ಪೀಕರ್ ಹುದ್ದೆ ಹಾಗೂ ಐದು ಸಚಿವ ಸ್ಥಾನಗಳು ಲಭಿಸುವ ಸಂಭವ ಇದೆ.
ಮತಗಳಿಕೆಯಲ್ಲಿ ಬಿಜೆಪಿ ಸಾಧನೆ: ಝಾರ್ಖಂಡ್‌ನಲ್ಲಿ ಬಿಜೆಪಿ ಸೋಲು ಅನುಭವಿಸಿದರೂ ಶೇಕಡಾವಾರು ಮತಗಳಿಕೆಯಲ್ಲಿ ಸಾಧನೆ ತೋರಿದೆ. ಕಳೆದ ವಿಧಾನಸಭೆ ಚುನಾವಣೆಗೆ ಹೋಲಿಸಿದರೆ 12 ಸ್ಥಾನ ಕಡಿಮೆ ಪಡೆದಿದ್ದರೂ ಶೇ.2ರಷ್ಟು ಹೆಚ್ಚು ಮತ ಪಡೆದಿದೆ. ಕಳೆದ ಬಾರಿ 37 ಸ್ಥಾನ ಪಡೆದಿದ್ದ ಬಿಜೆಪಿ ಈ ಬಾರಿ 25ಕ್ಕೆ ಸೀಮಿತವಾಗಿದೆ.
ಜೆಎಂಎಂ ಮತಗಳಿಕೆ: ಹೇಮಂತ್ ಸೊರೇನ್ ನೇತೃತ್ವದ ಜೆಎಂಎಂ ಕಳೆದ ಚುನಾವಣೆಗೆ ಹೋಲಿಸಿದರೆ ಶೇ.2ರಷ್ಟು ಮತಗಳಿಕೆ ಕಡಿಮೆಯಾಗಿದ್ದರೂ ಹೆಚ್ಚು ಸ್ಥಾನ ಗಳಿಸುವಲ್ಲಿ ಯಶಸ್ವಿಯಾಗಿದೆ. ಕಳೆದ ಬಾರಿ 19 ಸ್ಥಾನ ಪಡೆದಿದ್ದ ಜೆಎಂಎಂ ಈ ಸಂಖ್ಯೆಯನ್ನು 30ಕ್ಕೆ ಏರಿಸಿಕೊಂಡಿದೆ.
ಶೇಕಡಾವಾರು ಮತಗಳಿಕೆ ಹಾಗೂ ಶಾಸಕ ಸ್ಥಾನದಲ್ಲೂ ಕಾಂಗ್ರೆಸ್ ಸಾಧನೆ ತೋರಿದೆ. ಕಳೆದ ಬಾರಿಗಿಂತ ಶೇ. 3.5ರಷ್ಟು ಹೆಚ್ಚು ಮತಗಳಿಕೆಯೊಂದಿಗೆ 9 ಸ್ಥಾನದಿಂದ 16ಕ್ಕೆ ಏರಿಕೆ ಕಂಡಿದೆ.
10 ಪಕ್ಷಾಂತರಿಗಳಿಗೆ ಸೋಲು: ಚುನಾವಣೆಯಲ್ಲಿ ಘಟಾನುಘಟಿ ನಾಯಕರು ಸೇರಿದಂತೆ 10 ಮಂದಿ ಪಕ್ಷಾಂತರಿಗಳು ಸೋಲು ಅನುಭವಿಸಿದ್ದಾರೆ. ಪಕ್ಷಾಂತರ ಮಾಡಿದ್ದ ಇಬ್ಬರು ಮಾಜಿ ಕಾಂಗ್ರೆಸ್ ಅಧ್ಯಕ್ಷರು, ಓರ್ವ ಬಿಜೆಪಿ ಮಾಜಿ ಅಧ್ಯಕ್ಷರು ಸೋತಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆಯಿಂದಾಗಿ ಝಾರ್ಖಂಡ್‌ನಲ್ಲಿ ಒಬ್ಬನೇ ಒಬ್ಬ ವ್ಯಕ್ತಿಯು ಪೌರತ್ವ ಕಳೆದುಕೊಳ್ಳುತ್ತಾನೆ ಎಂದು ಗೊತ್ತಾದರೂ, ಅದನ್ನು ನಾವು ಅನುಷ್ಠಾನ ಮಾಡುವುದಿಲ್ಲ.
– ಹೇಮಂತ್ ಸೊರೇನ್, ನಿಯೋಜಿತ ಸಿಎಂ