Advertisement

ಹೇಮನಾಥ ಶೆಟ್ಟಿ ದಿಲ್ಲಿಗೆ: ಕಾಂಗ್ರೆಸ್‌ನಲ್ಲಿ ಏರಿದ ಕಾವು!

12:09 AM Apr 02, 2023 | Team Udayavani |

ಪುತ್ತೂರು : ನಾಮಪತ್ರ ಸಲ್ಲಿಕೆಗೆ ಹನ್ನೊಂದೇ ದಿನ ಉಳಿದಿದ್ದು, ಇಲ್ಲಿಯ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿ ಎ.ಹೇಮನಾಥ ಶೆಟ್ಟಿ ಅವರು ದಿಢೀರನೇ ದಿಲ್ಲಿಗೆ ತೆರಳಿರುವುದು ಕುತೂಹಲ ಮೂಡಿಸಿದೆ. ಯಾವ ಕಾರಣಕ್ಕೆ ವರಿಷ್ಠರು ಕರೆದಿದ್ದಾರೆ ಎಂಬುದು ತಿಳಿದಿಲ್ಲ.

Advertisement

ಹಿಂದಿನ ಮೂರು ಚುನಾವಣೆಗಳಲ್ಲೂ ಹೇಮನಾಥ ಶೆಟ್ಟಿ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಆದರೆ ಅವಕಾಶ ಸಿಕ್ಕಿರಲಿಲ್ಲ. ಈ ಬಾರಿ ತಮಗೇ ಟಿಕೆಟ್‌ ನೀಡಬೇಕು ಎಂದು ಬಹಿರಂಗವಾಗಿ ಹೇಳಿಕೆ ನೀಡಿ ಕ್ಷೇತ್ರಾದ್ಯಂತ ಓಡಾಟ ನಡೆಸುತ್ತಿದ್ದರು. ಈ ಮಧ್ಯೆ ಇವರ ದಿಢೀರ್‌ ದಿಲ್ಲಿ ಭೇಟಿ ಚರ್ಚೆಗೀಡಾಗಿದೆ.

2013 ರಲ್ಲಿ ಕಾಂಗ್ರೆಸ್‌ ಸೇರಿದ್ದ ಶಕುಂತಳಾ ಟಿ. ಶೆಟ್ಟಿ ಅವರಿಗೆ ಅವಕಾಶ ನೀಡಿದ್ದಾಗಲೂ ಹೇಮನಾಥ ಶೆಟ್ಟರ ಹೆಸರು ಚಾಲ್ತಿಯಲ್ಲಿತ್ತು. 2018 ರಲ್ಲಿ ನಡೆಸಿದ ಪ್ರಯತ್ನವೂ ಕೈಗೂಡಿರಲಿಲ್ಲ. ಭಿನ್ನಮತದ ಲಕ್ಷಣ ತೋರಿದಾಗ ಹೇಮನಾಥ ಶೆಟ್ಟಿ ಅವರಿಗೆ ವರಿಷ್ಠರು ಕರೆಸಿ ಮಾತನಾಡಿಸಿದ್ದರು. ಅದಾಗ್ಯೂ ಹೇಮನಾಥ ಶೆಟ್ಟಿ ಹಾಗೂ ಶಕುಂತಳಾ ಟಿ. ಶೆಟ್ಟಿ ಗುಂಪಿನ ನಡುವಿನ ಮುನಿಸು ಸಂಪೂರ್ಣ ತಣಿದಿರಲಿಲ್ಲ. ಈ ಚುನಾವಣೆ ವೇಳೆಯಲ್ಲಿಯೂ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ಎರಡನೇ ಪಟ್ಟಿ ಪ್ರಕಟಿಸುವ ದಿನಗಳು ಹತ್ತಿರವಾಗಿದ್ದು, ಒಂದುವೇಳೆ ಅವಕಾಶ ಸಿಗದಿದ್ದರು ಪಕ್ಷದ ಸಂಘಟನೆಯಲ್ಲಿ ತೊಡಗಬೇಕು ಎಂದು ತಾಕೀತು ಮಾಡುವುದಕ್ಕೆ ವರಿಷ್ಠರು ಕರೆದಿರಬಹುದೇ ಎಂಬ ಪ್ರಶ್ನೆಯೂ ಉದ್ಭವಿಸಿದೆ.

ದಿಲ್ಲಿಯಲ್ಲಿ ಶೆಟ್ಟಿ
ಶುಕ್ರವಾರ ಸಂಜೆ ದಿಲ್ಲಿ ತಲುಪಿರುವ ಹೇಮನಾಥ ಶೆಟ್ಟಿ ಅವರು ಶನಿವಾರ ಪಕ್ಷದ ಪ್ರಮುಖರನ್ನು ಭೇಟಿಯಾಗುವರು. ಶಕುಂತಳಾ ಟಿ ಶೆಟ್ಟಿಯ ಜತೆಗೆ ಬಿಜೆಪಿಯಿಂದ ಕಾಂಗ್ರೆಸ್‌ ಸೇರಿರುವ ಉದ್ಯಮಿ ಅಶೋಕ್‌ ಕುಮಾರ್‌ ರೈ ಕೋಡಿಂಬಾಡಿ ಕೂಡ ಪ್ರಬಲ ಆಕಾಂಕ್ಷಿಗಳು. ಒಕ್ಕಲಿಗ ಕೋಟದಲ್ಲಿ ಧನಂ ಜಯ ಅಡ³ಂಗಾಯ, ಭರತ್‌ ಮುಂಡೋಡಿ ಹೆಸರೂ ಇದೆ. ಉಳಿದಂತೆ ಸತೀಶ್‌ ಕೆಡೆಂಜಿ, ಡಾ| ರಾಜಾರಾಂ, ಪ್ರತಿಭಾ ಕುಳಾಯಿ ಅವರ ಹೆಸರು ಚರ್ಚೆಯಲ್ಲಿದೆ. ಪಕ್ಷದವರೇ ಎಂಬ ಲೆಕ್ಕಾಚಾರ ಹಾಕಿದರೆ ಶಕುಂತಲಾ ಶೆಟ್ಟಿ, ಹೇಮನಾಥ ಶೆಟ್ಟಿ ಸೇರಿದಂತೆ ಯಾರಾದರೊಬ್ಬರನ್ನು ಆರಿಸಬಹುದು. ಮೂಲ-ವಲಸಿಗರೆಂಬ ಬೇಧವಿಲ್ಲದೇ ಹೊಸ ಅಭ್ಯರ್ಥಿಗೆ ಹೈಕಮಾಂಡ್‌ ಮಣೆ ಹಾಕಿದರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರ ಆಪ್ತ ಬಳಗದ ಅಶೋಕ್‌ ಕುಮಾರ್‌ಗೂ ಅವಕಾಶ ಸಿಗಬಹುದು. ಹೀಗಾಗಿ ಟಿಕೆಟ್‌ ಘೋಷಣೆಯ ಬಳಿಕ ಉದ್ಭವಿಸ ಬಹುದಾದ ಬಿಕ್ಕಟ್ಟು ಅನ್ನು ಪೂರ್ವದಲ್ಲೇ ಶಮನ ಗೊಳಿಸುವ ತಂತ್ರವೂ ಇದಾಗಿದೆ ಎನ್ನಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next