Advertisement

ಅನಿವಾಸಿ ಭಾರತೀಯರ ನೆರವಿಗೆ ಸಹಾಯವಾಣಿ : 20 ರಾಷ್ಟ್ರಗಳ NRIಗಳ ಜತೆ ಪೊಲೀಸ್‌ ಆಯುಕ್ತರ ಸಂವಾದ

02:17 AM May 22, 2021 | Team Udayavani |

ಮಂಗಳೂರು : ಕೊರೊನಾ ಲಾಕ್‌ಡೌನ್‌ ಸಂದರ್ಭ ಮಂಗಳೂರು ನಗರ ಹಾಗೂ ಬೇರೆ ಕಡೆಗಳಲ್ಲಿರುವ ಅನಿವಾಸಿ ಭಾರತೀಯರ ಕುಟುಂಬಸ್ಥರಿಗೆ ನೆರವು ಒದಗಿಸುವುದಕ್ಕಾಗಿ ಮಂಗಳೂರು ಪೊಲೀಸರು ಸಹಾಯವಾಣಿ ಆರಂಭಿಸಿದ್ದಾರೆ.

Advertisement

ಶುಕ್ರವಾರ ಸುಮಾರು 20ಕ್ಕೂ ಅಧಿಕ ದೇಶಗಳಲ್ಲಿರುವ ಅನಿವಾಸಿ ಭಾರತೀಯರ (ಎನ್‌ಆರ್‌ಐ) ಜತೆ ವೆಬಿನಾರ್‌ ಮೂಲಕ ಸಂವಾದ ನಡೆಸಿದ ಅನಂತರ ಮಂಗಳೂರು ಪೊಲೀಸ್‌ ಆಯುಕ್ತ ಎನ್‌. ಶಶಿಕುಮಾರ್‌ ಅವರು ಸಹಾಯವಾಣಿ (9480802300)ಗೆ ಚಾಲನೆ ನೀಡಿದರು.

ವಿದೇಶಗಳಲ್ಲಿ ನೆಲೆಸಿರುವವರ ಕುಟುಂಬಸ್ಥರು, ಸ್ನೇಹಿತರು ಕೊರೊನಾದ ಈ ಸಂದರ್ಭ ಊರಿನಲ್ಲಿ ತೊಂದರೆಯಲ್ಲಿ ಇರುವ ಬಗ್ಗೆ ಮಾಹಿತಿಗಳು ಲಭಿಸಿವೆ. ಅವರಿಗೆ ಅಗತ್ಯ ಸಹಾಯ ಮಾಡುವ ಉದ್ದೇಶದಿಂದ ಈ ಸಹಾಯವಾಣಿಯನ್ನು ಆರಂಭಿಸಲಾಗಿದೆ ಎಂದು ಮಂಗಳೂರು ಪೊಲೀಸ್‌ ಆಯುಕ್ತರು ತಿಳಿಸಿದ್ದಾರೆ.

24×7 ಸಹಾಯ
ಆಹಾರ, ರಕ್ತ, ಪ್ಲಾಸ್ಮಾ, ಆ್ಯಂಬುಲೆನ್ಸ್‌, ತುರ್ತು ಸೇವೆಗೆ ವಾಹನ ಮೊದಲಾದ ಸೇವೆಗಳನ್ನು ಒದಗಿಸಿಕೊಡಲು ದಿನದ 24 ಗಂಟೆ ಕೂಡ ಈ ಸಹಾಯವಾಣಿ ಕಾರ್ಯನಿರ್ವಹಿಸುತ್ತದೆ. ಸಹಾಯ ಬಯಸುವ ಎನ್‌ಆರ್‌ಐಗಳು ಹಾಗೂ ಊರಿನಲ್ಲಿರುವ ಅವರ ಕುಟುಂಬಸ್ಥರು ಸಹಾಯವಾಣಿಗೆ ಕರೆ, ವಾಯ್ಸ ಮೆಸೇಜ್‌, ಎಸ್‌ಎಂಎಸ್‌, ವಾಟ್ಸ್‌ಆ್ಯಪ್‌, ವೀಡಿಯೋ ಸಂದೇಶಗಳ ಮೂಲಕ ಸಂಪರ್ಕಿಸಬಹುದು/ಮಾಹಿತಿ ನೀಡಬಹುದು. ನಗರದಲ್ಲಿ ಇದೀಗ “ಸಮನ್ವಯ’ ಎಂಬ ಗುಂಪಿನಡಿ ಸ್ವಯಂಸೇವಾ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ ಇವುಗಳ ಮೂಲಕವೂ ಎನ್‌ಆರ್‌ಐಗಳ ಕುಟುಂಬಸ್ಥರಿಗೂ ತುರ್ತು ಸೇವೆಗಳನ್ನು ಒದಗಿಸಲಾಗುವುದು.

20 ದೇಶಗಳ ಎನ್‌ಆರ್‌ಐಗಳ ಭಾಗಿ
ಕುವೈಟ್‌, ಕೆನಡ, ಯುಎಸ್‌ಎ, ಇಂಗ್ಲೆಂಡ್‌, ಕತಾರ್‌, ನ್ಯೂಜಿಲ್ಯಾಂಡ್‌, ಫ್ರಾನ್ಸ್‌, ಜರ್ಮನಿ, ಹಾಂಕಾಂಗ್‌, ಆಸ್ಟ್ರೇಲಿಯಾ, ಇಸ್ರೇಲ್‌ ಸೇರಿದಂತೆ ವಿಶ್ವದ 20 ದೇಶಗಳಿಂದ 100ಕ್ಕೂ ಅಧಿಕ ಮಂದಿ ಸಂವಾದದಲ್ಲಿ ಪಾಲ್ಗೊಂಡು ಸಲಹೆಗಳನ್ನು ನೀಡಿದ್ದಾರೆ ಎಂದು ಆಯುಕ್ತರು ತಿಳಿಸಿದ್ದಾರೆ.

Advertisement

ಪೊಲೀಸರ ಕಾರ್ಯಕ್ಕೆ ಶ್ಲಾಘನೆ
“ವಿದೇಶದಲ್ಲಿ ಸಿಲುಕಿರುವ ನಮ್ಮಂತಹ ಅನೇಕ ಮಂದಿಯ ಕುಟುಂಬಸ್ಥರು ಊರಿನಲ್ಲಿ ಗೊಂದಲದಲ್ಲಿದ್ದಾರೆ. ಅವರಿಗೆ ನೆರವಾಗುವ ಉದ್ದೇಶದಿಂದ ಪೊಲೀಸ್‌ ಆಯುಕ್ತರು ಸಲಹೆ ಕೇಳಿ ನೆರವಿಗೆ ಮುಂದಾಗಿರುವುದು ಶ್ಲಾಘನೀಯ ಕಾರ್ಯ’ ಎಂದು ಭಾರತೀಯ ಪ್ರವಾಸಿ ಪರಿಷತ್‌ ಕುವೈಟ್‌ ಕರ್ನಾಟಕ ಘಟಕದ ರಾಜ್‌ ಭಂಡಾರಿ ತಿರುಮಲೆಗುತ್ತು ಅವರು ಪ್ರತಿಕ್ರಿಯಿಸಿದ್ದಾರೆ.

10 ಮಂದಿ ಸಂಪರ್ಕ
ಎನ್‌ಆರ್‌ಐ ಸಹಾಯವಾಣಿ ಆರಂಭವಾದ ಮೊದಲ ದಿನ (ಶುಕ್ರವಾರ) 10 ಮಂದಿ ಸಂಪರ್ಕ ಮಾಡಿದ್ದಾರೆ. ಮೆಸೇಜ್‌ ಮೂಲಕ ಮಾಹಿತಿಯನ್ನು ಕೇಳಿದ್ದಾರೆ. ಲಸಿಕೆ ನೀಡುವಂತೆ ಹೆಚ್ಚಿನವರು ಮನವಿ ಮಾಡಿದ್ದಾರೆ. ಈ ಮಾಹಿತಿಯನ್ನು ಸಂಬಂಧಿಸಿದ ಇಲಾಖೆಗೆ ರವಾನಿಸಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಎನ್‌ಆರ್‌ಐ ಸಹಾಯವಾಣಿ : 9480802300

ಸ್ಥಳೀಯರ ನೆರವಿಗೆ ಕಂಟ್ರೋಲ್‌ ರೂಂ : 112

ಸಾರ್ವಜನಿಕರು ಸ್ಥಳೀಯವಾಗಿ ಕೊರೊನಾಗೆ ಸಂಬಂಧಿಸಿ ಸಮಸ್ಯೆಗಳಿದ್ದರೆ ಪೊಲೀಸ್‌ ಕಂಟ್ರೋಲ್‌ ರೂಂ (9480802321)ಗೆ
ಕರೆ ಮಾಡಬಹುದು. ಲಾಕ್‌ಡೌನ್‌ನಿಯಮ ಉಲ್ಲಂಘನೆ, ಔಷಧ ಮತ್ತು ಮೂಲಸೌಕರ್ಯಗಳಿಗೆ ಸಂಬಂಧಿಸಿದ ವಂಚನೆ, ಬ್ಲ್ಯಾಕ್‌ಮೈಲ್ ಮೊದಲಾದ ಘಟನೆಗಳ ಬಗ್ಗೆ 112 ಸಹಾಯವಾಣಿಗೂ ಕರೆ ಮಾಡಬಹುದು ಎಂದು ಆಯುಕ್ತರು ತಿಳಿಸಿದ್ದಾರೆ.

ನೆರವಾಗುವ ಸಣ್ಣ ಪ್ರಯತ್ನ
ಸಂವಾದದಲ್ಲಿ ಎನ್‌ಆರ್‌ಐಗಳು ಊರಿನಲ್ಲಿರುವ ಅವರ ಕುಟುಂಬಸ್ಥರ ಬಗ್ಗೆ, ಮುಖ್ಯವಾಗಿ ಹಿರಿಯ ನಾಗರಿಕರು, ಮಹಿಳೆಯರು ಮತ್ತು ವಿದ್ಯಾರ್ಥಿ ಸಮುದಾಯದ ಕಷ್ಟಗಳ ಬಗ್ಗೆ ತಿಳಿಸಿದ್ದಾರೆ. ಹಲವಾರು ಸಲಹೆಗಳನ್ನು ನೀಡಿದ್ದಾರೆ. ಎನ್‌ಆರ್‌ಐ ಕುಟುಂಬಗಳು ಹಲವು ರೀತಿಯ ನೆರವಿನ ನಿರೀಕ್ಷೆಯಲ್ಲಿದ್ದು ಅವರಿಗೆ ನೆರವಾಗುವುದಕ್ಕಾಗಿ ಜಿಲ್ಲಾಡಳಿತ, ಸ್ವಯಂಸೇವಾ ಸಂಸ್ಥೆಗಳು, ಸ್ವಯಂಸೇವಕರೊಂದಿಗೆ ಸೇರಿ ಪೊಲೀಸ್‌ ಇಲಾಖೆ ಸಣ್ಣ ಪ್ರಯತ್ನವನ್ನು ಸಹಾಯವಾಣಿ ಮೂಲಕ ಮಾಡಲಿದೆ.
-ಎನ್‌. ಶಶಿಕುಮಾರ್‌, ಪೊಲೀಸ್‌ ಆಯುಕ್ತರು, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next