Advertisement
ನಗರಸಭೆಯಲ್ಲಿರುವುದು ಕೇವಲ 23 ವಾರ್ಡ್‌ಗಳು,ಇದನ್ನೇ ನಿಭಾಯಿಸಲಾಗದ ಆಡಳಿತ ವ್ಯವಸ್ಥೆಯ ಅಧೋಗತಿ ಯನ್ನು ಗಮನಿಸಿದರೆ ನಾಗರಿಕರು ಮಾಡಿದ ಜನಪ್ರತಿನಿಧಿಗಳ ಆಯ್ಕೆ ತಪ್ಪೆಂದು ತೋರುತ್ತದೆ. ಕೇವಲ ಕಸವನ್ನೇ ಗುಡಿಸಲಾಗದ ನಗರಸಭೆ ಸ್ವತ್ಛತಾ ಕಾರ್ಯದ ಹೆಸರಿನಲ್ಲಿ ಸುಮಾರು ಒಂದು ಕೋಟಿ ರೂ.ಗಳಷ್ಟು ಹಣವನ್ನು ಖರ್ಚು ಮಾಡುತ್ತಿದೆ. ಈ ಹಣವನ್ನು ಆಯಾ ವಾರ್ಡ್‌ನ ಮಹಿಳಾ ಸಂಘಟನೆಗಳಿಗೆ ವಿನಿಯೋಗ ಮಾಡಿದ್ದರೆ ವಾರ್ಡ್‌ಗಳ ಸ್ವತ್ಛತಾ ಜವಾಬ್ದಾರಿಯನ್ನು ಮಹಿಳೆಯರೇ ನಿಭಾಯಿಸುತ್ತಿದ್ದರು. ಆದರೆ ನಗರಸಭೆ ಎನ್ನುವ ಬಿಳಿಆನೆ ಇಂದು ನಾಗರಿಕರ ನೆಮ್ಮದಿ ಕೆಡಿಸುವಲ್ಲಿ ಯಶಸ್ವಿಯಾಗಿದೆಯೇ ಹೊರತು ನಗರದ ಅಭಿವೃದ್ಧಿಗೆ ಪೂರಕವಾಗಿಲ್ಲ.
Related Articles
ಮಡಿಕೇರಿಯನ್ನು ಸಿಂಗಾಪುರ ಮಾಡುತ್ತೇವೆ ಎಂದು ಹಲವು ರಾಜಕಾರಣಿಗಳು ಹಾಗೂ ಅಧಿಕಾರಿಗಳು ಜನರ ಮೂಗಿಗೆ ತುಪ್ಪ ಸವರುತ್ತಲೇ ಬಂದಿದ್ದಾರೆ. ಆದರೆ ನಗರದ ಜನ ಮಾತ್ರ ಮೂಗು ಮುಚ್ಚಿಕೊಂಡೇ ನಡೆದಾಡಬೇಕಾದ ದುಃಸ್ಥಿತಿಯಿಂದ ಮುಕ್ತಿ ಹೊಂದಿಲ್ಲ. ಮನೆ ಮನೆ ಕಸ ಸಂಗ್ರಹಿಸುವ ಕಾರ್ಯದ ಗುತ್ತಿಗೆಯನ್ನು ಕೆಲವು ಮಹಿಳಾ ಸಂಘಗಳಿಗೆ ನೀಡಲಾಗಿದೆ. ಈ ಸಂಘ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿದ್ದರೂ ಆರ್ಥಿಕ ಅಡಚಣೆ ಹಾಗೂ ತಾಂತ್ರಿಕ ಕಾರಣಗಳಿಂದಾಗಿ ಸಮರ್ಪಕವಾಗಿ ಕಸ ವಿಲೇವಾರಿ ಮಾಡಲು ಸಾಧ್ಯವಾಗುತ್ತಿಲ್ಲ. ಕೆಲವು ಬಡಾವಣೆಗಳಿಗೆ ಕಸದ ಗಾಡಿಯೇ ಹೋಗುತ್ತಿಲ್ಲ.
Advertisement
ಮಳೆಗಾಲದಲ್ಲಿ ಅವೈಜ್ಞಾನಿಕ ಕಾಮಗಾರಿ ಪ್ರತಿ ಮಳೆಗಾಲದಲ್ಲಿ ಚರಂಡಿಗಳ ಕಾಡು ಹಾಗೂ ಚರಂಡಿಗೆ ಅಡ್ಡಲಾಗಿರುವ ರಸ್ತೆ ಬದಿಯ ಗಿಡಗಂಟೆಗಳನ್ನು ಕಡಿದು ನೀರು ಸರಾಗವಾಗಿ ಹರಿಯಲು ಅನುವು ಮಾಡಿಕೊಡಲಾಗುತ್ತದೆ. ಪಾಚಿ ಹಿಡಿದ ಕಾಲು ದಾರಿಗಳು ಜಾರದಿರಲಿ ಎಂದು ಬ್ಲೀಚಿಂಗ್ ಪೌಡರ್ ಹಾಕಲಾಗುತ್ತದೆ. ಆದರೆ ಪ್ರಸ್ತುತ ವರ್ಷ ಈ ಎರಡೂ ಕಾರ್ಯವನ್ನು ಮಾಡದ ನಗರಸಭೆ ಪಾದಾಚಾರಿಗಳು ಕೆಸರು ನೀರಿನಿಂದ ಸಂಕಷ್ಟವನ್ನು ಎದುರಿಸುವಂತಹ ಪರಿಸ್ಥಿತಿಯನ್ನು ಸೃಷ್ಟಿ ಮಾಡಿದೆ. ಅನೇಕರು ಪಾಚಿ ಕಟ್ಟಿದ ಕಾಲುದಾರಿಯಲ್ಲಿ ಬಿದ್ದು ಆಸ್ಪತ್ರೆ ಸೇರಿದ್ದಾರೆ. ಮಳೆಗಾಲದಲ್ಲೇ ಅವೈಜ್ಞಾನಿಕ ಕಾಮಗಾರಿಗಳಿಗೆ ಕೈಹಾಕಿ ಪಾದಚಾರಿಗಳು ನಡೆದಾಡದಂತೆ ಮಾಡಲಾಗಿದೆ. ಕೊಹಿ ನೂರ್ ರಸ್ತೆಯಿಂದ ರೇಸ್‌ಕೋರ್ಸ್ ರಸ್ತೆಗೆ ಸಂಪರ್ಕ ಕಲ್ಪಿಸುವ ಕಾಲುದಾರಿಯನ್ನು ಅಗೆದು ಹಾಕಿರುವ ನಗರಸಭೆ ಕಾಮ ಗಾರಿಯನ್ನು ಅರ್ಧದಲ್ಲೇ ಸ್ಥಗಿತಗೊಳಿಸಿ ಅಪಾಯಕಾರಿ ಗುಂಡಿಗಳನ್ನು ಮುಚ್ಚದೆ ಹಾಗೇ ಬಿಟ್ಟು ಕೈತೊಳೆದುಕೊಂಡಿದೆ. ಈ ಅರ್ಥಹೀನ ಕಾಮಗಾರಿಯಿಂದ ಪಾದಚಾರಿಗಳು ಓಡಾ ಡದ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಅನೇಕರು ಕಾಲು ಜಾರಿ ಬಿದ್ದಿದ್ದಾರೆ. ಅಸಹಾಯಕತೆಯ ಅಧ್ಯಕ್ಷರು
ಈ ಎಲ್ಲ ಅವ್ಯವಸ್ಥೆಗಳ ಬಗ್ಗೆ ಅಧ್ಯಕ್ಷರಾದ ಕಾವೇರಮ್ಮ ಸೋಮಣ್ಣ ಅವರನ್ನು ಪ್ರಶ್ನಿಸಿದರೆ ಕಸ ವಿಲೇವಾರಿ ಸಮರ್ಪ ಕವಾಗಿ ಆಗುತ್ತಿದೆ. ಪ್ರವಾಸಿಗರಿಂದ ಸ್ವಲ್ಪ ಕಸ ಹೆಚ್ಚಾಗಿದೆ ಎಂದಷ್ಟೇ ಹೇಳುತ್ತಾರೆ. ವಿರೋಧ ಪಕ್ಷಗಳ ಸದಸ್ಯರುಗಳು ಮಾಮೂಲಿನಂತೆ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ ಎಂದು ಟೀಕಿಸುತ್ತಿದ್ದಾರೆ. ಆದರೆ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ನೈಜ ಕಾಳಜಿಯನ್ನು ಆಡಳಿತ ಪಕ್ಷವಾಗಲಿ ಅಥವಾ ವಿರೋಧ ಪಕ್ಷವಾಗಲಿ ತೋರುತ್ತಿಲ್ಲ ಎನ್ನುವ ಅಸಮಾಧಾನ ಜನ ವಲಯದಲ್ಲಿದೆ. ಬಳಕೆಯಾಗದ ಆಟೋ ಟಿಪ್ಪರ್‌ಗಳು
ನಗರದಲ್ಲಿ ಸಮರ್ಪಕವಾಗಿ ಕಸ ವಿಲೇವಾರಿಯಾಗಬೇಕೆನ್ನುವ ಉದ್ದೇಶ ದಿಂದ ಸರಕಾರ ಎರಡು ತಿಂಗಳ ಹಿಂದೆ ಒಟ್ಟು ಆರು ನೂತನ ಆಟೋ ಟಿಪ್ಪರ್‌ಗಳನ್ನು ನಗರಸಭೆಗೆ ನೀಡಿತ್ತು. ಜಿಲ್ಲಾ ಉಸ್ತುವಾರಿ ಸಚಿವರಾದ ಸೀತಾರಾಮ್ ಹಾಗೂ ಶಾಸಕರಾದ ಅಪ್ಪಚ್ಚು ರಂಜನ್ ಅವರುಗಳೇ ಈ ವಾಹನಗಳಿಗೆ ಚಾಲನೆ ನೀಡಿದ್ದರು. ಆದರೆ ಇಂದಿನ ವರೆಗೂ ಆರು ಆಟೋ ಟಿಪ್ಪರ್‌ಗಳಿಗೆ ಕಸ ವಿಲೇವಾರಿಯ ಭಾಗ್ಯವೇ ಕೂಡಿ ಬಂದಿಲ್ಲ. ಆರೂ ವಾಹನಗಳಿಗೆ ಚಾಲಕರ ಅಗತ್ಯವಿದ್ದು, ಇನ್ನೂ ಕೂಡ ಟೆಂಡರ್ ಪ್ರಕ್ರಿಯೆ ನಡೆದಿಲ್ಲ. ಆಮೆ ನಡಿಗೆಯ ಆಡಳಿತದ ನಗರಸಭೆಯಿಂದಾಗಿ ನಗರದ ಬಹುತೇಕ ಬಡಾವಣೆಗಳು ಗಬ್ಬೆದ್ದು ನಾರುತ್ತಿದ್ದು, ಪ್ರವಾಸಿಗರ ಸ್ವರ್ಗವಾಗಬೇಕಾಗಿದ್ದ ಮಂಜಿನ ನಗರಿ ಮಡಿಕೇರಿ ಇಂದು ಕಸ ತುಂಬಿದ ನರಕದಂತಾಗಿದೆ. ಪ್ರವಾಸಿಗರೂ ಅಸಹ್ಯ ಪಡುವಂತಹ ಸ್ಥಿತಿಯಿದ್ದು, ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದಲೂ ಕಸದ ಸಮಸ್ಯೆ ಉಲ್ಬಣವಾಗಿದೆ ಎನ್ನುವುದು ನಾಗರೀಕರ ಆರೋಪವಾಗಿದೆ. ಹೊರಗುತ್ತಿಗೆ ಆಧಾರದ ಪೌರ ಕಾರ್ಮಿಕರಿಗಾಗಿ ವಾರ್ಷಿಕ 60 ಲಕ್ಷ ರೂ.ಗಳಿಗಿಂತಲೂ ಅಧಿಕ ಹಾಗೂ ತನ್ನ ಖಾಯಂ ಕಾರ್ಮಿಕರಿಗಾಗಿ ಸುಮಾರು 40 ಲಕ್ಷ ರೂ.ಗಳಷ್ಟನ್ನು ನಗರಸಭೆ ಖರ್ಚು ಮಾಡುತ್ತಿದೆ. ಇಷ್ಟು ಸಾಲದೆಂಬಂತೆ ಲಕ್ಷಾಂತರ ರೂ. ಬೆಲೆ ಬಾಳುವ ವಾಹನಗಳನ್ನು ಕೂಡ ಸರಕಾರ ನೀಡಿದೆ. ಆದರೆ ನಗರಸಭೆಯಲ್ಲಿ ಆಡಳಿತ ನಡೆಸುತ್ತಿರುವವರ ಇಚ್ಛಾಶಕ್ತಿಯ ಕೊರತೆಯಿಂದಾಗಿ ಇಂದು ಮಡಿಯಾಗಿರಬೇಕಾಗಿದ್ದ ಮಡಿಕೇರಿ ದುರ್ನಾತ ಬೀರುತ್ತಿದೆ.