ಕೊಪ್ಪಳ: ಕೋವಿಡ್ 19 ನಿಯಂತ್ರಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರವು ಹಲವು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ. ಈ ವೇಳೆ ಬಡ ಕುಟುಂಬಗಳು ದುಡಿಮೆ ಇಲ್ಲದೆ ತೊಂದರೆ ಅನುಭವಿಸುತ್ತಿವೆ. ಅವರಿಗೆ ನನ್ನ ಕಡೆಯಿಂದ ಅಳಿಲು ಸೇವೆ ಎಂಬಂತೆ ಹಸಿದವರಿಗೆ ನೆರವಾಗುತ್ತಿದ್ದೇನೆ. ಇದೇ ನನ್ನ ಜೀವನದ ಸಾರ್ಥಕತೆ ಎಂದು ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಸಿ.ವಿ. ಚಂದ್ರಶೇಖರ ಹೇಳಿದರು.
ನಗರ ಹೊರ ವಲಯದ ಕುಷ್ಟಗಿ ರಸ್ತೆಯಲ್ಲಿನ ತಮ್ಮ ತೋಟದ ಮನೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ಬಡ ಕುಟುಂಬಗಳು ತುಂಬಾ ಕಷ್ಟಪಡುತ್ತಿರುವುದನ್ನು ಗಮನಿಸಿದ್ದೇನೆ. ಪ್ರತಿಯೊಬ್ಬರೂ ಬಡ ಕುಟುಂಬಕ್ಕೆ ನೆರವಾಗುವುದು ಅಗತ್ಯ. ಇದನ್ನರಿತು ಅಂತಹ ಕುಟುಂಬ ಗುರುತಿಸಿ ಸುಮಾರು 1500 ದಿನಸಿ ಕಿಟ್ ವಿತರಣೆ ಮಾಡಲಾಗಿದೆ. ಇದಲ್ಲದೇ ನಿತ್ಯವೂ ಮೂರು ಸಾವಿರ ಜನರಿಗೆ ಅನ್ನದಾನ ಮಾಡಲಾಗುತ್ತಿದೆ ಎಂದರು.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ರಾಜ್ಯಾಧ್ಯಕ್ಷ ನಳೀನ್ ಕುಮಾರ ಕಟೀಲ್ ಅವರ ಸೂಚನೆ ಮೇರೆಗೆ ನಮ್ಮ ಕೈಲಾದಷ್ಟು ಸೇವೆ ಸಲ್ಲಿಸುತ್ತಿದ್ದೇನೆ. ಬಡ ಜನತೆಗೆ ನೆರವಾಗಲು ಕಿಟ್ ಕೊಡುವ ಜೊತೆಗೆ ನಿತ್ಯವೂ ವಿವಿಧ ವಾರ್ಡ್ ಗಳಿಗೆ ತೆರಳಿ ತಮ್ಮ ತಂಡವೇ ಊಟ ವಿತರಣೆ ಮಾಡುತ್ತಿದೆ. ನಾನೇ ಬಹುತೇಕ ವಾರ್ಡ್‌ಗಳಲ್ಲಿ ಅನ್ನದಾನ ಮಾಡಿದ್ದೇನೆ. ಕುಷ್ಟಗಿ ರಸ್ತೆಯಲ್ಲಿರುವ ಹಕ್ಕಿಪಿಕ್ಕಿ ಜನಾಂಗ ಸೇರಿದಂತೆ ಕೆಲವರು ಗುಡಿಸಲು ವಾಸಿಗಳಿದ್ದು, ಅವರಿಗೆ ನಿತ್ಯವೂ ಅನ್ನದಾನ ಮಾಡುತ್ತಿದ್ದೇವೆ ಎಂದರು.
ಪ್ರತಿನಿತ್ಯ ಬೆಳಗ್ಗೆ 7 ಗಂಟೆಗೆ ಅಡುಗೆ ತಯಾರು ಮಾಡಲು ಪ್ರಾರಂಭಿಸಿ, 8.30 ವೇಳೆಗೆ 5 ವಾಹನಗಳಲ್ಲಿ ವಿತರಣೆ ಮಾಡುತ್ತೇವೆ. ಇದಲ್ಲದೇ ತುರ್ತಾಗಿ ಕರೆ ಬಂದರೆ ಅಲ್ಲಿಗೂ ತೆರಳಿ ಊಟ ನೀಡಲಾಗುತ್ತಿದೆ. ನಾವೂ ರೆಡ್, ಎಲ್ಲೋ ಹಾಗೂ ಗ್ರೀನ್ ಜೋನ್ ಪಟ್ಟಿ ಮಾಡಿದ್ದು, ಆಯಾ ವ್ಯಾಪ್ತಿಯಲ್ಲಿ ತೊಂದರೆಯಲ್ಲಿರುವ, ಕಿರಾಣಿ ಇಲ್ಲದ ಕುಟುಂಬಕ್ಕೆ ಅನ್ನದಾಸೋಹ ಮಾಡುತ್ತಿದ್ದು, ಮೇ 3ರವರೆಗೂ ಈ ಸೇವೆ ನಡೆಯುತ್ತದೆ ಎಂದರು.
ಕರೆ ಮಾಡಿ: ಕೊಪ್ಪಳ ನಗರದಲ್ಲಿ ಯಾರಿಗಾದರೂ ಊಟದ ತೊಂದರೆಯಿದ್ದರೆ ಕೂಡಲೇ ನಮಗೆ ಕರೆ ಮಾಡಿ ಕೆಲವೇ ನಿಮಿಷದಲ್ಲಿ ನಾವು ನಿಮ್ಮಲ್ಲಿಗೆ ಬಂದು ಊಟ ವಿತರಣೆ ಮಾಡಲಿದ್ದೇವೆ. ಹೆಚ್ಚಿನ ಮಾಹಿತಿಗೆ ಮೊ. 9845777496, ಮೊ. 9535202222, ಮೊ.9632575359, ಮೊ.9448300073 ಸಂಖ್ಯೆಗೆ ಕರೆ ಮಾಡಬಹುದು ಎಂದರು.
ವಿ.ಎಂ. ಭೂಸನೂರಮಠ, ಡಾ| ಕೆ.ಜಿ. ಕುಲಕರ್ಣಿ, ಅಪ್ಪಣ್ಣ ಪದಕಿ, ನಾಗರತ್ನ ಪಾಟೀಲ, ಶ್ರೀನಿವಾಸ ಹ್ಯಾಟಿ, ಸುರೇಶ ಡೊಣ್ಣಿ, ಮಂಜುನಾಥ ಹಳ್ಳಿಕೇರಿ, ಸರ್ವೇಶಗೌಡ, ಹಾಲೇಶ ಕಂದಾರಿ, ದೇವರಾಜ ಹಾಲಸಮುದ್ರ ಇದ್ದರು.