ಈಗಿನ ಕಾಲದಲ್ಲಿ ಯಾರೂ ಒಬ್ಬರಿಗೊಬ್ಬರು ಸಹಾಯ ಮಾಡಲು ಮುಂದಾಗುವುದಿಲ್ಲ. ಕೆಲವೊಮ್ಮೆ ಕುಟುಂಬದವರೇ ನಮಗೆ ಸಹಾಯ ಮಾಡಲು ಹಿಂದುಮುಂದು ನೋಡುತ್ತಾರೆ. ಅಂದ ಹಾಗೆ, ನಾವು ಅಪರಿಚಿತರಿಂದ ಸಹಾಯದ ನಿರೀಕ್ಷೆ ಇಡುವುದು ವ್ಯರ್ಥ. ನಾನು ತಿಳಿದುಕೊಂಡ ಪ್ರಕಾರ ಅಪರಿಚಿತರು ಇನ್ನೊಬ್ಬರಿಗೆ ಸಹಾಯ ಮಾಡಲು ಹಿಂಜರಿಯುತ್ತಾರೆ. ಆದರೆ, ಕೆಲವು ಅಪರಿಚಿತರು ಇನ್ನೊಬ್ಬರಿಗೆ ಪರಿಚಿತರಂತೆಯೇ ಸಹಾಯ ಮಾಡುತ್ತಾರೆ ಎಂದು ನಾನು ತಿಳಿದಿರಲಿಲ್ಲ.
ಆ ಒಂದು ದಿನ ಜೋರಾಗಿ ಮಳೆ ಸುರಿಯುತ್ತಿತ್ತು. ನಾನು ತಡವಾಗಿ ಬಸ್‌ನಿಲ್ದಾಣಕ್ಕೆ ಬಂದ ಕಾರಣ ಬಸ್ ಮಿಸ್ ಆಗಿತ್ತು. ನನಗೆ ಕಾಲೇಜಿಗೆ ಹೋಗಲು ತಡವಾಗುತ್ತಿತ್ತು. ಇನ್ನೊಂದು ಬಸ್‌ಗೆ ಹದಿನೈದು ನಿಮಿಷ ಕಾಯಬೇಕಿತ್ತು. ಆದರೆ ನನಗೆ ಅಷ್ಟು ನಿಮಿಷ ಕಾಯುವ ತಾಳ್ಮೆ ಇರಲಿಲ್ಲ. ಇವತ್ತು ಕಾಲೇಜಿಗೆ ತಡವಾಗಿ ಹೋಗುತ್ತೇನೇನೋ ಅಂತ ಭಯವಾಗುತ್ತಿತ್ತು. ಅಷ್ಟೊತ್ತಿಗೆ ಅಪರಿಚಿತ ಮಹಿಳೆಯೊಬ್ಬರು ಬಂದು, “ನೀನು ರಿಕ್ಷಾದಲ್ಲಿ ಹೋಗ್ತಿಯಾ. ನಾನು ರಿಕ್ಷಾ ತರಿಸಲೆ?’ ಎಂದು ಕೇಳಿದರು.
ನಾನು ಒಪ್ಪಿಗೆಯನ್ನು ಸೂಚಿಸುವ ಮೊದಲು ನನ್ನ ಬ್ಯಾಗ್‌ನಲ್ಲಿ ಹಣವಿದೆಯೇ ಎಂದು ಪರಿಶೀಲಿಸಿದಾಗ ನನ್ನ ಬ್ಯಾಗ್‌ನಲ್ಲಿ ಒಂದು ರೂಪಾಯಿಯೂ ಇರಲಿಲ್ಲ. ನಾನು ಲಗುಬಗೆಯಿಂದ ಮನೆಯಿಂದ ಹೊರಟಾಗ ಹಣ ತೆಗೆದುಕೊಂಡು ಬರಲು ಮರೆತುಬಿಟ್ಟಿದ್ದೆ. ನನಗೆ ಅಳು ಬಂದುಬಿಟ್ಟಿತು. ಆಗ ಆ ಮಹಿಳೆ ಬಂದು ನನ್ನ ಕೈಯಲ್ಲಿ ನೂರು ರೂಪಾಯಿಯ ನೋಟನ್ನು ಕೈಗಿಟ್ಟು ನನ್ನ ಕಣ್ಣೀರನ್ನು ಒರೆಸಿದರು ಮತ್ತು ರಿಕ್ಷಾವನ್ನು ತರಿಸಿ ನನ್ನನ್ನು ಕಾಲೇಜಿಗೆ ಬಿಡುವಂತೆ ಚಾಲಕನಿಗೆ ತಿಳಿಸಿದರು.
ನಾನು ಅವರ ಪಾಲಿಗೆ ಅಪರಿಚಿತಳಾಗಿದ್ದೆ. ಅವರೂ ನನ್ನ ಪಾಲಿಗೆ ಅಪರಿಚಿತರಾಗಿದ್ದರು. ಆದರೂ ಆ ಅಪರಿಚಿತ ಮಹಿಳೆ ನನ್ನ ಪಾಲಿಗೆ ದೇವರಾಗಿದ್ದರು. ಅವರ ಪ್ರೀತಿ ಪರಿಚಿತದವರಿಗಿಂತಲೂ ಅದ್ಭುತವಾಗಿತ್ತು. ಮರುದಿನದಿಂದ ನಾನು ಅವರಿಗೆ ಆ ಹಣವನ್ನು ಹಿಂತಿರುಗಿಸಲು ಬಸ್‌ನಿಲ್ದಾಣದಲ್ಲಿ ನನ್ನ ಬಸ್ ಬರುವ ತನಕ ಕಾಯುತ್ತಿದ್ದೆ. ಆದರೆ, ಅವರು ಸಿಗಲೇ ಇಲ್ಲ. ಆದರೆ, ಅವರ ಪ್ರೀತಿ, ಸಹಾಯ ಮತ್ತು ನೆನಪು ನನ್ನ ಹೃದಯದಲ್ಲಿ ಶಾಶ್ವತವಾಗಿದೆ.
– ಶಿವಾನಿ
ದ್ವಿತೀಯ ಪಿಯುಸಿ ಸರಕಾರಿ ಪದವಿಪೂರ್ವ ಕಾಲೇಜು, ಕಾರ್ಕಳ