Advertisement

ತಾರತಮ್ಯವೆಸಗದೆ ಎಲ್ಲರಿಗೂ ನೆರವಾಗಿ

01:23 AM Apr 27, 2020 | Sriram |

ಹೊಸದಿಲ್ಲಿ: ನೂರಮೂವತ್ತು ಕೋಟಿ ಭಾರತೀಯರೆಲ್ಲರೂ ನಮ್ಮವರೇ ಎಂದು ಭಾವಿಸಿ ಸಂಕಷ್ಟದಲ್ಲಿರುವ ಎಲ್ಲರಿಗೂ ತಾರತಮ್ಯವಿಲ್ಲದೆ ನೆರವಾಗಿ. ಸೋಂಕು ಪ್ರಸರಣಕ್ಕೆ ಇವರೇ ಕಾರಣ ಎಂದು ನಿರ್ದಿಷ್ಟ ಸಮು ದಾಯವನ್ನು ದೂಷಿಸಬೇಡಿ, ದೂರ ಇರಿಸಲೂಬೇಡಿ. ಜತೆಗೆ, ಸ್ವಾವಲಂಬನೆಗಾಗಿ ಸಾಧ್ಯವಾದಷ್ಟು ಸ್ವದೇಶೀ ಉತ್ಪನ್ನಗಳನ್ನೇ ಬಳಸಿ…ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರು ಸಂಘದ ಕಾರ್ಯಕರ್ತರ ಸಹಿತ ಎಲ್ಲ ಭಾರತೀಯರಿಗೆ ನೀಡಿದ ಕರೆ ಇದು.

Advertisement

“ಸದ್ಯದ ಪರಿಸ್ಥಿತಿ ಮತ್ತು ನಮ್ಮ ಪಾತ್ರ’ ಕುರಿತು ರವಿವಾರ ಆನ್‌ಲೈನ್‌ ಮೂಲಕ ಆರೆಸ್ಸೆಸ್‌ ಕಾರ್ಯಕರ್ತರು ಮತ್ತು ದೇಶವನ್ನುದ್ದೇಶಿಸಿ ಮಾತನಾಡಿದ ಭಾಗವತ್‌, ಸಾಂಕ್ರಾಮಿಕ ಸೋಂಕೊಂದು ದೇಶವನ್ನೇ ನಲುಗಿಸಿರುವ ಸಂದರ್ಭ ದಲ್ಲಿ ಯಾವುದೇ ತಾರತಮ್ಯ ತೋರದೆ ಕಷ್ಟದಲ್ಲಿರುವ ಎಲ್ಲರೂ ನಮ್ಮವರೇ ಎಂದು ಭಾವಿಸಿ ನೆರವಿನ ಹಸ್ತ ಚಾಚಬೇಕು. ಇದೇ ಭಾವನೆ ಯೊಂದಿಗೆ ಆರೆಸ್ಸೆಸ್‌ ಕಾರ್ಯಕರ್ತರು ಕೋವಿಡ್ 19 ಸೋಂಕು ನಿರ್ನಾಮವಾಗುವ ವರೆಗೂ ಪರಿಹಾರ ಕಾರ್ಯ ಮುಂದುವರಿಸಬೇಕು ಎಂದರು.

ಸಮುದಾಯದ ದೂಷಣೆ ಬೇಡ
ತಬ್ಲೀಘಿ ಜಮಾತ್‌ ಸಮಾವೇಶವನ್ನು ಉಲ್ಲೇಖೀಸದೆಯೇ ಮಾತನಾಡಿದ ಭಾಗವತ್‌, ಯಾರೋ ಒಬ್ಬರು ಮಾಡಿದ ತಪ್ಪಿಗೆ ಇಡೀ ಸಮುದಾಯವನ್ನೇ ದೂಷಿಸಬಾರದು. ನಾವು ಹಾಗೆ ಮಾಡಲಿ ಎಂದೇ ಕೆಲವರು ಕಾಯುತ್ತಿರುತ್ತಾರೆ. ಭಾರತ ವಿರೋಧಿ ಮನಃಸ್ಥಿತಿ ಹೊಂದಿರುವ ಕಪಟಿಗಳು ಈ ಸಂದಿಗ್ಧದ ಲಾಭ ಪಡೆಯಲು ಹವಣಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನಾವು ತಾಳ್ಮೆ ಕಳೆದುಕೊಳ್ಳದೆ ಶಾಂತಚಿತ್ತರಾಗಿರಬೇಕು. ಭಯ ಅಥವಾ ಆಕ್ರೋಶ‌ಕ್ಕೆ ಅವಕಾಶ ನೀಡಬಾರದು ಎಂದು ಮನವಿ ಮಾಡಿದರು.

ಸ್ವದೇಶೀ ಬಳಸಿ
ಲಾಕ್‌ಡೌನ್‌ ವೇಳೆ ಪರಿಚಯಿಸಲಾದ ಅಭಿವೃದ್ಧಿಯ ಹೊಸ ಮಾದರಿಗಳು ದೇಶವನ್ನು ಸ್ವಾವಲಂಬಿಯನ್ನಾಗಿಸಿವೆ. ಇದು ಮುಂದು ವರಿಯಲು ದೇಶವಾಸಿಗಳೆಲ್ಲ ಸ್ವದೇಶೀ ಉತ್ಪನ್ನ ಗಳನ್ನೇ ಬಳಸಬೇಕು ಎಂದು ಸಲಹೆ ನೀಡಿದರು.

ಸಂಘ ಸಕ್ರಿಯವಾಗಿದೆ
ಲಾಕ್‌ಡೌನ್‌ನಿಂದಾಗಿ ಸಂಘದ ಚಟುವಟಿಕೆ ಗಳು ಸ್ಥಗಿತಗೊಂಡಿವೆ ಎಂಬುದೆಲ್ಲ ಸುಳ್ಳು ಎಂದಿರುವ ಮೋಹನ್‌ ಭಾಗವತ್‌, ಈಗಲೂ ಸಂಘ ಸಕ್ರಿಯವಾಗಿದೆ. ಸದಸ್ಯರು ಸೋಂಕಿನಿಂದ ಸಂಕಷ್ಟಕ್ಕೆ ಸಿಲುಕಿರುವವರಿಗಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next