Advertisement
ಪಾಷನದ್ದು ಆಟೋ ಚಾಲಕ ವೃತ್ತಿ. ಟಂಟಂ ಗಾಡಿ, ಸಿಟಿ ಬಸ್‌ಗಳ ಅಬ್ಬರದಿಂದ ಜನರು ಆಟೋಗಳನ್ನೇ ಆಶ್ರಯಿಸುವ ದಿನಗಳು ಈಗಿಲ್ಲ. ಈ ಕಾರಣಕ್ಕೆ ಅಲ್ಲಲ್ಲಿ ಅದೆಷ್ಟೋ ಆಟೋ ಚಾಲಕರು ಒಮ್ಮೊಮ್ಮೆ ನಯಾ ಪೈಸೆ ದುಡಿಮೆ ಇಲ್ಲದೆ ಖಾಲಿ ಕೈಲಿ ಮನೆಗೆ ಮರಳಿದ್ದೂ ಇದೆ. ಆಟೋ ನಂಬಿಕೊಂಡು ಹೊಟ್ಟೆ-ಬಟ್ಟೆಗೆ ದುಡಿಮೆಯೇ ಇಲ್ಲದೆ ಕೈಕೈ ಹಿಸಿಕಿಕೊಳ್ಳುವ ಅನೇಕ ಆಟೋ ಚಾಲಕರ ನಡುವೆ, ಈ ಪಾಷ ವಿಭಿನ್ನವಾಗಿ ಕಾಣಿಸುತ್ತಾನೆ. ಕಾರಣ ಇಷ್ಟೆ. ಇತರರಂತೆ ಈತನೂ ಸಹ ಅನೇಕ ಸಲ ಗಿರಾಕಿಗಳಲ್ಲದೇ ಬರಿಗೈ ಆಗಿದ್ದೂ ಉಂಟು. ಆದರೆ, ಅದೇ ವೇಳೆ ಅನ್ಯರು ಸಂಕಷ್ಟದಲ್ಲಿರುವ ಸುದ್ದಿ ಕಿವಿಗೆ ಬಿದ್ದಿದ್ದೇ ತಡ; ಸಾಲ ಮಾಡಿ, ಆಟೋಗೆ ಇಂಧನ ಹಾಕಿಸಿ ಅಂಥವರಿಗೆ ನೆರವಾಗುತ್ತಾನೆ. ಹೌದು, ದುಡ್ಡು ಇದ್ದರೂ ಬಿಟ್ಟರೂ, ಉಂಡರೂ- ಉಪವಾಸವಿದ್ದರೂ ಈತನ ಉಚಿತ ಸೇವೆ ಮಾತ್ರ ನಿತ್ಯ. ನಿರಂತರ ಆಗಿ ನಡೆಯುತ್ತಿದೆ. ಅದು ಹಗಲಿರುಳೆನ್ನದೆ…!
ಪಾಷ, ಈ ಕಾರಣಕ್ಕೇ ಕೊಪ್ಪಳದಲ್ಲಿ ಪಾಪ್ಯುಲರ್! ಮನೆಯಲ್ಲಿ ವಯಸ್ಸಾದ ತಂದೆ-ತಾಯಿ, ಹೆಂಡತಿ-ಮಕ್ಕಳಿದ್ದು ಅವರೆಲ್ಲರಿಗೂ ಈತನ ಈ ಚಿಕ್ಕ ದುಡಿಮೆಯೇ ಆಸರೆ. ಈತ ದುಡಿದು ತಂದರಷ್ಟೇ ಅಂದು ಮನೆಯ ಒಲೆ ಉರಿಯೋದು. ಹೊಟ್ಟೆ ತುಂಬೋದು. ಹೀಗಿದ್ದರೂ ಪಾಷನಲ್ಲಿ ನಾನು ಮತ್ತು ನನ್ನ ಕುಟುಂಬವಷ್ಟೇ ಚೆನ್ನಾಗಿರಬೇಕು ಎನ್ನುವ ಸ್ವಾರ್ಥವಿಲ್ಲ. ನಾಳೆಗಳ ಬಗ್ಗೆ ಚಿಂತೆ ಇಲ್ಲ. ಗರ್ಭಿಣಿಯರಿಗೆ, ವಯೋವೃದ್ಧ ರೋಗಿಗಳಿಗೆ, ಅಪಘಾತಕ್ಕೆ ತುತ್ತಾದವರನ್ನು ಸಕಾಲದಲ್ಲಿ ಆಸ್ಪತ್ರೆಗೆ ಸೇರಿಸುತ್ತಾರೆ! ಉಚಿತವಾಗಿ. ಅಷ್ಟೇಕೆ ಅನಾಥ ಶವಗಳನ್ನು ಆಟೋದಲ್ಲಿ ಸಾಗಿಸಿ ಮುಕ್ತಿ ಕಾಣಿಸುತ್ತಾರೆ. ಅಂದಹಾಗೆ, ಈತನ ಸೇವೆಯ ಸದುಪಯೋಗ ಮಾಡಿಕೊಳ್ಳುತ್ತಿರುವುದು ಈ ಭಾಗದ ಬಡ ಬಗ್ಗರು, ನಿರ್ಗತಿಕರು ಎನ್ನುವುದು ವಿಶೇಷ. ಇಂತಹ ವರ್ಗದ ಜನರಲ್ಲಿ ಸರಕಾರಿ ಆಸ್ಪತ್ರೆ, 108 ಅಂಬುಲೆನ್ಸ್‌ಗಿಂತ ಪಾಷನ ಮೊಬೈಲ್ ನಂಬರ್ ಇರುತ್ತೆ. ಒಮ್ಮೊಮ್ಮೆ ಸರಕಾರಿ ಸೇವೆ ಯಾವುದೋ ಕಾರಣಕ್ಕೆ ಅಲಭ್ಯವಾಗಿರುತ್ತೆ. ಆದರೆ, ಪಾಷನ ಸರ್ವಿಸ್ ಮಾತ್ರ ಮಿಸ್ ಆಗಲ್ಲ. “ನನ್ನ ಅಕ್ಕ ಮುನ್ನಿ ಬೇಗಂಗೆ ಒಂದು ರಾತ್ರಿ ಹೆರಿಗೆ ನೋವು ಕಾಣಿಸಿತು. ಆಗ ಅವಳನ್ನು ಆಸ್ಪತ್ರೆಗೆ ಕರೆದೊಯ್ಯಲು ಆಟೋ ಸೇರಿದಂತೆ ವಾಹನಗಳಿಗೆ ಹುಡುಕಾಡಿದೆ. ಆದರೆ, ನನ್ನ ದುರಾದೃಷ್ಟಕ್ಕೆ ಯಾವುದೂ ಸಿಗಲಿಲ್ಲ. ನಾನು ಅಂದು ಪಟ್ಟಕಷ್ಟ ಮತ್ಯಾರು ಪಡಬಾರದು ಎಂದು ನಿರ್ಧರಿಸಿದೆ. ನಾನು ಬಾಡಿಗೆ ಆಟೋ ಕೊಂಡು, ದುಡಿಮೆ ಪ್ರಾರಂಭಿಸಿದೆ. ಇದರೊಟ್ಟಿಗೆ ಈ ಸೇವೆಯನ್ನೂ ಪ್ರಾರಂಭಿಸಿದೆ’ ಎನ್ನುತ್ತಾರೆ ಪಾಷ. ಬಾಡಿಗೆ ಆಟೋಕ್ಕೆ ದುಡಿಮೆ ಆದರೂ, ಬಿಟ್ಟರೂ ದಿನಕ್ಕೆ 100 ರೂ ಅದರ ಮಾಲೀಕರಿಗೆ ಕೊಡಬೇಕಿತ್ತಂತೆ. ಇದರಲ್ಲೂ ಅವರು ಉಚಿತ ಆಟೋ ಸೇವೆಯನ್ನು ಮುಂದುವರೆಸಿದ್ದು ಇವರ ಸೇವಾ ಬದ್ಧತೆ ತೋರಿಸುತ್ತದೆ. ” ಹೊಟ್ಟೆ-ಬಟ್ಟೆ ಕಟ್ಟಿ ಕಷ್ಟಪಟ್ಟೇ ಒಂದು ಆಟೋ ಕೊಂಡೆ. ಅದೇ ಇದು. ಅದರ ಹಿಂದೆ ಉಚಿತ ಸೇವೆಯ ಕುರಿತು ಮೊಬೈಲ್ ನಂಬರ್ ಸಮೇತ ಈ ಬ್ಯಾನರ್ ಹಾಕಿದ್ದೇನೆ. ಇದರಿಂದ ಸಾಕಷ್ಟು ಜನಕ್ಕೆ ಅನುಕೂಲ ಆಗಿದೆ’ ಎಂದರು.
Related Articles
ಅಂದಹಾಗೆ, ಪಾಷ ಇವರ ಈ ಉಚಿತ ಸೇವೆ ದಶಕಗಳಿಂದ ನಡೆಯುತ್ತಾ ಬಂದಿದೆ. ಸುಮಾರು 80 ಗರ್ಭಿಣಿಯರು, 150 ಜನ ವಯೋವೃದ್ಧ ರೋಗಿಗಳು, 40-50 ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದರಿಂದ ಹತ್ತಾರು ಜನರ ಪ್ರಾಣ ಉಳಿಸಿದ ಸಂತೃಪ್ತಿ ಇವರಲ್ಲಿದೆ. ಇದರೊಂದಿಗೆ 10-15 ಅನಾಥ ಶವಗಳನ್ನು ಪೊಲೀಸರ ಸೂಚನೆ ಮೇರೆಗೆ ದಫನ್ ಮಾಡಲು ನೆರವಾಗಿದ್ದಾರೆ. “ಮೊಬೈಲ್ ಫೋನ್ ರಿಂಗ್ ಆದರೆ ಸಾಕು, ಮನೆಯಲ್ಲಿ ಕರೆ ಬಂತು ನೋಡಿ, ಪಾಪ ಯಾರಿಗೆ ಏನು ಆಗಿದೆಯೋ ಏನೋ. ಲಗೂನಾ ಹೊರಡ್ರಿ’ ಎಂದು ಹೆಂಡತಿ ಶರಿಫಾಬಿ ಎಚ್ಚರಿಸುತ್ತಾಳೆಂದು ಫಾಷ ನೆನಪು ಮಾಡಿಕೊಳ್ಳುತ್ತಾರೆ. ” ಒಮೊಮ್ಮೆ ರೇಷನ್‌ಗೆ, ಮಕ್ಕಳ ಫೀ ಕಟ್ಟಲಿಕ್ಕೆ, ದುಡ್ಡು ಇರಲ್ಲ. ಆದರೂ ಮನೆಯಲ್ಲಿ ಬೇಜಾರ್ ಆಗಲ್ಲ. ಅವರ ಸಹಕಾರದಿಂದಲೇ ಈ ಸೇವೆ ನಡೆಯುತ್ತಿದೆ.. ಎಂದು ಕುಟುಂಬದ ಸಹಕಾರವನ್ನು ಸ್ಮರಿಸುತ್ತಾರೆ. ಫೋನ್ ಕರೆ ಬಂದರೆ ಸಾಕು ಅದು ಎಷ್ಟೇ ದೂರವಿದ್ದರೂ ಮಧ್ಯರಾತ್ರಿಯಲ್ಲಿ ಹೋಗುತ್ತೇನೆ. ಒಮ್ಮೊಮ್ಮೆ ಏಕ ಕಾಲಕ್ಕೆ ಎರಡೆರಡು ಕರೆಗಳೂ ಬಂದಿದ್ದು ಇವೆ. ಆಗ ನಾನೇ ಮತ್ತೂಂದು ಆಟೋವನ್ನು ಬಾಡಿಗೆ ಮಾಡಿ ಕಳುಹಿಸುತ್ತೇನೆ. ಇಂಥ ಸಂದರ್ಭಗಳಲ್ಲಿ ನಮ್ಮ ಆಟೋದವರು ಸಹಕರಿಸುತ್ತಾರೆ ಎಂದು ಭಾವುಕರಾಗುತ್ತಾರೆ ಪಾಷ.
Advertisement
ಪಾಷ ಮೊ ನಂ 900875300
ಸ್ವರೂಪಾನಂದ ಎಂ. ಕೊಟ್ಟೂರು