ರಾಯಚೂರು: ಖಾಸಗಿ ಮಕ್ಕಳ ಪಾಲಕರ ಬಗ್ಗೆ ಕನಿಕರ ವ್ಯಕ್ತಪಡಿಸುವ ಸರ್ಕಾರ ಖಾಸಗಿ ಶಾಲೆಗಳ ಸ್ಥಿತಿಗತಿ ಬಗ್ಗೆ ಚಿಂತಿಸುತ್ತಿಲ್ಲ. ಶಿಕ್ಷಕರಿಗೆ ವೇತನ ನೀಡದ ಸ್ಥಿತಿ ಇದ್ದು, ಅನುದಾನ ರಹಿತ ಶಾಲೆಗಳ ಶಿಕ್ಷಕರಿಗೆ ಸರ್ಕಾರ ವಿಶೇಷ ಆರ್ಥಿಕ ನೆರವು ನೀಡಬೇಕು ಎಂದು ಜಿಲ್ಲಾ ಖಾಸಗಿ ಶಿಕ್ಷಣ ಸಂಸ್ಥೆ ಅಡಳಿತ ಮಂಡಳಿ ಒಕ್ಕೂಟದ ಜಿಲ್ಲಾಧ್ಯಕ್ಷ ಟಿ.ಬಸವರಾಜ ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶುಲ್ಕ ಪಾವತಿಸಬೇಡಿ ಎಂದು ಸರ್ಕಾರ ಪಾಲಕರಿಗೆ ಕರೆ ನೀಡಿದೆ. ಆದರೆ, ಎಲ್ಲ ಖಾಸಗಿ ಶಾಲೆಗಳು ಆರ್ಥಿಕವಾಗಿ ಸಬಲವಾಗಿಲ್ಲ. ಇದರಿಂದ ಲಾಕ್‌ಡೌನ್ ವೇಳೆ ಶಿಕ್ಷಕರಿಗೆ ವೇತನ ಕೂಡ ನೀಡಲಾಗದ ಸ್ಥಿತಿ ಎದುರಾಗಿದೆ. ಹೀಗಾಗಿ ನಿಯಮಿತ ಶುಲ್ಕ ಸಂಗ್ರಹಕ್ಕೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.
ಸರ್ಕಾರಿ ಶಾಲೆ ಶಿಕ್ಷಕರಿಗೆ ಒಂದು ನ್ಯಾಯ ಖಾಸಗಿ ಶಾಲೆಗಳ ಶಿಕ್ಷಕರಿಗೆ ಮತ್ತೂಂದು ನ್ಯಾಯ ಎನ್ನುವಂತಾಗಿದೆ. ಲಾಕ್‌ಡೌನ್ ಶುರುವಾದಾಗಿನಿಂದ ವೇತನ ಇಲ್ಲದೆ ಶಿಕ್ಷಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ, ಈವರೆಗೆ ಶಿಕ್ಷಣ ಇಲಾಖೆ ಅನುದಾನ ರಹಿತ ಶಾಲೆಗಳಿಂದ ಸಂಗ್ರಹಿಸುವ ಶಿಕ್ಷಕರ ಹಾಗೂ ವಿದ್ಯಾರ್ಥಿ ಕಲ್ಯಾಣ ನಿಧಿಯಿಂದ ಅರ್ಥಿಕ ನೆರವಿಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ಪ್ರಧಾನ ಕಾರ್ಯದರ್ಶಿ ಡಿ.ಕೆ. ಮುರುಳಿಧರ ಮಾತನಾಡಿ, ಎಲ್ಲ ಶಾಲೆಗಳು ದುಬಾರಿ ಶುಲ್ಕ ಪಡೆಯುವುದಿಲ್ಲ. ನಿರ್ವಹಣೆ ಮಾಡಲು ಶಾಲಾಡಳಿತ ಮಂಡಳಿಗೆ ಆರ್ಥಿಕ ಮುಗ್ಗಟ್ಟು ಎದುರಾಗಿದೆ. ಆ ವರ್ಷದ ಅದಾಯ ಅದೇ ವರ್ಷಕ್ಕೆ ವಿನಿಯೋಗವಾಗುತ್ತದೆ. ಈಗ ಶಿಕ್ಷಕರಿಗೆ ಕೈಯಿಂದ ವೇತನ ನೀಡು ಎಂದರೆ ಎಲ್ಲಿಂದ ನೀಡುವುದು ಎಂದು ಪ್ರಶ್ನಿಸಿದರು. ಸಾರಿಗೆ ಇಲಾಖೆ ನಿಯಮಗಳನ್ವಯ ಕೆಲ ಸಂದರ್ಭ ತಮ್ಮ ವಾಹನಗಳನ್ನು ಪಡೆದಿದ್ದು, ಅವುಗಳಿಗೆ ಖರ್ಚು ವೆಚ್ಚ ಭರಿಸಬೇಕು. ಶಾಲೆಯಲ್ಲಿ ನಡೆಯುವ ಪರೀಕ್ಷೆ, ಮೌಲ್ಯಮಾಪನ ಮತ್ತಿತರ ವೆಚ್ಚವನ್ನು ಸರ್ಕಾರವೇ ಭರಿಸಬೇಕು.
ಖಾಸಗಿ ಶಾಲೆ ಆರಂಭಿಸಲು, ಆನ್ ಲೈನ್ ಶಿಕ್ಷಣಕ್ಕೆ ತಕಾರರು ತೆಗೆದು ಶಿಕ್ಷಣ ಇಲಾಖೆ ನೋಟಿಸ್ ನೀಡುತ್ತಿದ್ದು, ವಿಪತ್ತು ನಿರ್ವಹಣೆ ಉಲ್ಲಂಘಿಸಿ ವಠಾರ ಶಾಲೆಗೆ ಪ್ರೊತ್ಸಾಹ ನೀಡುತ್ತಿರುವುದು ಸರಿಯಲ್ಲ. ಆನ್‌ಲೈನ್ ಶಿಕ್ಷಣ ಕಡ್ಡಾಯ, ಶುಲ್ಕ ಭರಿಸಲೇಬೇಕು ಎಂದು ಒತ್ತಡ ಹಾಕಿಲ್ಲ. ಕಂತುಗಳಲ್ಲಿ ಪಾಲಕರಿಂದ ಹಣ ಕೋರುತ್ತಿದ್ದೇವೆ. ಬಾಕಿ ಇರುವ ಆರ್‌ಟಿಇ ಶುಲ್ಕ ಪಾವತಿಸಬೇಕು. ಇಲಾಖೆ ಸರ್ಕಾರಿ ಶಾಲೆಗೆ ನೀಡುವ ಮನ್ನಣೆಯನ್ನೂ ಖಾಸಗಿಯವರಿಗೂ ನೀಡಿ ತಾರತಮ್ಯ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಒಕ್ಕೂಟದ ಸದಸ್ಯರಾದ ಚನ್ನಪ್ಪ ದೇವದುರ್ಗ, ಶಂಶುದ್ದೀನ್ ಪೋತ್ನಾಳ, ರಾಜು ತಾಳಿಕೋಟಿ ಸೇರಿ ಇತರರಿದ್ದರು.