ಬೆಳ್ಳಾರೆ: ಖಾಸಗಿ ಮತ್ತು ಸರಕಾರಿ ಶಾಲೆ ಎಂಬ ಭಾವನೆಯನ್ನು ಬಿಟ್ಟು ವಿದ್ಯಾರ್ಥಿಗಳ ಹೆತ್ತವರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರಕಲು ಸರಕಾರಿ ಶಾಲೆಯನ್ನು ಪ್ರೋತ್ಸಾಹಿಸಬೇಕು. ಸರಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದಂತೆ ಸರಕಾರದಿಂದ ಸವಲತ್ತುಗಳನ್ನು ಪಡೆಯಲು ಸುಲಭಾವಾಗುತ್ತದೆ ಎಂದು ಶಾಸಕ ಎಸ್. ಅಂಗಾರ ಹೇಳಿದರು
ಅವರು ಮುರುಳ್ಯ ಅಲೆಕ್ಕಾಡಿ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಮನೆಪೂರ್ವ ಪ್ರಾಥಮಿಕ ತರಗತಿಯ ಉದ್ಘಾಟನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಲು ಸಮಗ್ರ ಶಿಕ್ಷಣ ನೀತಿಯ ಕೊರತೆಯೇ ಕಾರಣ. ಆಂಗ್ಲ ಮಾಧ್ಯಮ ಶಿಕ್ಷಣ ಆರಂಭಿಸಿದ ಬಳಿಕ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಸರಕಾರ ಸೌಲಭ್ಯಗಳನ್ನು ಒದಗಿಸಬೇಕು ಎಂದರು.
ಜಿ.ಪಂ. ಸದಸ್ಯ ಎಸ್.ಎನ್. ಮನ್ಮಥ ತರಗತಿ ಕೊಠಡಿಯನ್ನು, ತಾ.ಪಂ. ಸದಸ್ಯ ಚನಿಯ ಕಲ್ತಡ್ಕ ಸ್ಮಾರ್ಟ್ ಟಿ.ವಿ.ಯನ್ನು, ತಾ.ಪಂ. ಉಪಾಧ್ಯಕ್ಷೆ ಶುಭದಾ ಎಸ್. ರೈ ಆಟದ ಮನೆಯನ್ನು ಉದ್ಘಾಟಿಸಿದರು. ಪೂರ್ವ ಪ್ರಾಥಮಿಕ ಶಾಲೆಗೆ ದಾಖಲಾದ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ, ಪುಸ್ತಕ, ಶೂ ಹಾಗೂ ಬ್ಯಾಗ್ ವಿತರಿಸಲಾಯಿತು. ಬೆಳ್ಳಾರೆ ಪೊಲೀಸ್ ಠಾಣೆಯ ಉಪನಿರೀಕ್ಷಕ ಈರಯ್ಯ ಡಿ.ಎನ್., ಎಣ್ಮೂರು ಗ್ರಾ.ಪಂ. ಉಪಾಧ್ಯಕ್ಷ ಕರುಣಾಕರ ಹುದೇರಿ, ಗ್ರಾ.ಪಂ. ಸದಸ್ಯೆ ಗೀತಾ ಪೂದೆ, ಸಮೂಹ ಸಂಪನ್ಮೂಲ ವ್ಯಕ್ತಿ ಜಯಂತ ಕೆ., ರಾಷ್ಟ್ರ ಪ್ರಶಸ್ತಿ ವಿಜೇತ ಸಂಶೋಧಕ, ನಿವೃತ್ತ ಶಿಕ್ಷಕ ರಾಘವ ಗೌಡ ಪಲ್ಲತ್ತಡ್ಕ, ಮಕ್ಕಳ ಮನೆ ಸಮಿತಿ ಅಧ್ಯಕ್ಷ ಅವಿನಾಶ್ ದೇವರಮಜಲು, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬಾಲಕೃಷ್ಣ ಪೂಜಾರಿ, ಗೌರವ ಸಲಹೆಗಾರರಾದ ಸುದೇಶ್ ರೈ, ಸಂದರ ಗೌಡ ಪಿಲಂಕಜೆ, ವೆಂಕಟ್ ವಳಲಂಬೆ ಉಪಸ್ಥಿತರಿದ್ದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಮಧು ಪಿ.ಆರ್. ಪ್ರಾಸ್ತಾವಿಸಿದರು. ಮುಖ್ಯೋಪಾಧ್ಯಾಯಿನಿ ಚಂದ್ರಿಕಾ ಬಿ.ಸಿ. ಸ್ವಾಗತಿಸಿದರು. ಐತ್ತಪ್ಪ ಅಲೆಕ್ಕಾಡಿ ವಂದಿಸಿದರು. ಶಿಕ್ಷಕಿ ನಳಿನಾಕ್ಷಿ ರೈ ನಿರ್ವಹಿಸಿದರು.
ಮಾದರಿ ಶಾಲೆಗಳಾಗಿ ಪರಿವರ್ತನೆ
ದೀಪ ಪ್ರಜ್ವಲನೆಗೈದ ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ.ಮಹಾದೇವ ಮಾತನಾಡಿ, ಗುಣಮಟ್ಟದ ಶಿಕ್ಷಣದ ಜತೆಗೆ ಸರಕಾರಿ ಶಾಲೆಯ ಸಶಕ್ತೀ ಕರಣಕ್ಕೆ ತಾಲೂಕಿನ 3 ಶಾಲೆಗಳಲ್ಲಿ ಈ ವರ್ಷದಿಂದ ಆಂಗ್ಲ ಮಾಧ್ಯಮ ಶಿಕ್ಷಣ ಆರಂಭಿಸಿದ್ದು, ಖಾಸಗಿ ಶಾಲೆಗಳಿಗೆ ಸಮಾನವಾಗಿ ಸರಕಾರಿ ಶಾಲೆಗಳು ಮಾದರಿ ಶಾಲೆಗಳಾಗಿ ಪರಿವರ್ತನೆಯಾಗಲಿವೆೆ ಎಂದರು.