Advertisement

ಮಾನಸಿಕ ಅಸ್ವಸ್ಥರಿಗೆ ಬೆಳಕಾದ ದೀಪಿಕಾ ಪಡುಕೋಣೆ

03:44 PM Oct 10, 2022 | Team Udayavani |

ದಾವಣಗೆರೆ: ಬಹುಭಾಷಾ ನಟಿ ದೀಪಿಕಾ ಪಡುಕೋಣೆ ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಪಲ್ಲಾಗಟ್ಟೆ ಮತ್ತು ಬಿಳಿಚೋಡು ಸುತ್ತಮುತ್ತಲಿನ ಗ್ರಾಮಗಳ ಮಾನಸಿಕ ಆರೋಗ್ಯ ಸಮಸ್ಯೆ ಹೊಂದಿರುವವರ ಪಾಲಿನ ಬೆಳಕಾಗಿದ್ದಾರೆ.

Advertisement

ಸ್ವತಃ ಮಾನಸಿಕ ಒತ್ತಡ, ಇತರೆ ಸಮಸ್ಯೆ ಎದುರಿಸುತ್ತಿದ್ದ ದೀಪಿಕಾ ಪಡುಕೋಣೆ, ಪ್ರತಿ ದಿನ ಧ್ಯಾನ, ಯೋಗ ಹಾಗೂ ಚಿಕಿತ್ಸೆ ಮೂಲಕ ಸಮಸ್ಯೆ ಮೆಟ್ಟಿ ನಿಂತರು. ಇದಾದ ನಂತರ ತಮ್ಮಂತೆ ಸಮಸ್ಯೆ ಇರುವವರ ಚಿಕಿತ್ಸೆಗೆ ನೆರವಾಗುವ ನಿಟ್ಟಿನಲ್ಲಿ ದಿ ಲಿವ್‌, ಲವ್‌, ಲಾಫ್‌ ಫೌಂಡೇಶನ್‌’ ಮೂಲಕ ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಪಲ್ಲಾಗಟ್ಟೆ ಮತ್ತು ಬಿಳಿಚೋಡು ಸುತ್ತಮುತ್ತಲಿನ ಗ್ರಾಮದ ಅನೇಕರಿಗೆ ನೆರವಾಗುವ ಮೂಲಕ ಅವರ ಬಾಳಲ್ಲಿ ಭರವಸೆಯ ಬೆಳಕಾಗಿದ್ದಾರೆ. ದೀಪಿಕಾ ಪಡುಕೋಣೆ ಫೌಂಡೇಶನ್‌ ಮೂಲಕ ಚಿಕಿತ್ಸೆ ಪಡೆದವರು ಸಹಜ ಜೀವನ ನಡೆಸುತ್ತಿದ್ದಾರೆ.

ಪೈಲಟ್‌ ಯೋಜನೆ: ಮಾನಸಿಕ ಆರೋಗ್ಯ ಸಮಸ್ಯೆ ಹೊಂದಿರುವವರಿಗೆ ನೆರವಾಗುವ ಉದ್ದೇಶದಿಂದ ದೀಪಿಕಾ ಪಡುಕೋಣೆ “ದಿ ಲಿವ್‌, ಲವ್‌, ಲಾಫ್‌’ ಫೌಂಡೇಶನ್‌ ಜಗಳೂರು ತಾಲೂಕಿನಲ್ಲಿ ಆರಂಭಿಸಿದರು. ಮಾತ್ರವಲ್ಲ 2017, ಅ.10ರಂದು ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯಂದು ಸ್ವತಃ ದೀಪಿಕಾ ಪಡುಕೋಣೆ ಮತ್ತು ತಾಯಿ ಉಜಾಲಾ ಪಡುಕೋಣೆ, ಸಹೋದರಿ ಅನುಷಾ ಪಡುಕೋಣೆ, ಫೌಂಡೇಷನ್‌ನ ಅನ್ನಾ ಚಾಂಡಿ, ನೀನಾ ನಾಯರ್‌, ಮಾನಸಿಕ ತಜ್ಞ ಡಾ| ಶ್ಯಾಂ ಭಟ್‌ ಇತರರೊಡಗೂಡಿ ಬಿಳಿಚೋಡು, ಪಲ್ಲಾಗಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಗಮಿಸಿದ್ದರು.

ಸಮಸ್ಯೆ ಹೊಂದಿರುವವರ ಜತೆಗೆ ಸಂವಾದ ನಡೆಸಿದ್ದರು. ಅಲ್ಲದೆ ಮಹೇಶ್ವರಪ್ಪ, ಆಶಾ ಎಂಬುವರ ಮನೆಗೆ ಭೇಟಿ ನೀಡಿದ್ದರು. ತಾವು ಎದುರಿಸುತ್ತಿದ್ದ ಸಮಸ್ಯೆ, ಪಡೆದ ಚಿಕಿತ್ಸೆ ಮತ್ತು ಸಮಸ್ಯೆಯಿಂದ ಹೊರ ಬಂದಿದ್ದನ್ನು ಅತ್ಯಂತ ಮುಕ್ತವಾಗಿ ಹಂಚಿಕೊಳ್ಳುವ ಮೂಲಕ ಸಮಸ್ಯೆ ಹೊಂದಿರುವವರಲ್ಲಿ ಸಮಸ್ಯೆಯಿಂದ ಮುಕ್ತವಾಗುವ ಆಶಾಭಾವ ಮೂಡಿಸಿದ್ದರು. ಕೇವಲ ಆಶಾಭಾವನೆ, ಸ್ಥೈರ್ಯ ಮೂಡಿಸಿದ್ದಲ್ಲದೆ ಹೆಚ್ಚಿನ ಚಿಕಿತ್ಸೆಗಾಗಿ ಫೌಂಡೇ ಶನ್‌ ಮೂಲಕ ನೆರವಿಗೆ ಮುಂದಾಗಿದ್ದರ ಫಲವಾಗಿ ಇದುವರೆಗೆ ಅನೇಕರು ಮಾನಸಿಕ ಆರೋಗ್ಯ ಸಮಸ್ಯೆ ಮುಕ್ತವಾಗಿದ್ದಾರೆ. ಎಲ್ಲರಂತೆ ಸಹಜ ಜೀವನ ನಡೆಸುತ್ತಿದ್ದಾರೆ. ಇಂತಹ ಅದ್ಭುತ ಬೆಳವಣಿಗೆಗೆ ಕಾರಣರಾದ ದೀಪಿಕಾ ಪಡುಕೋಣೆ ಅವರನ್ನು ಸ್ಮರಿಸುತ್ತಾರೆ.

Advertisement

ಸಮಸ್ಯೆ ಗುರುತಿಸುವಿಕೆ: ಮಾನಸಿಕ ಆರೋಗ್ಯ ಸಮಸ್ಯೆ ಅನುಭವಿಸುತ್ತಿರುವವರ ಗುರುತಿಸುವಿಕೆ ಕೆಲಸ ಆಶಾ ಕಾರ್ಯಕರ್ತೆಯರ ಮೂಲಕ ನಡೆಯುತ್ತಿದೆ. ಸದಾ ಮನೆಯಲ್ಲಿ ಒಂಟಿಯಾಗಿಯೇ ಇರುವುದು, ತಮ್ಮಷ್ಟಕ್ಕೆ ತಾವೇ ಮಾತನಾಡುವುದು, ಇದ್ದಕ್ಕಿದ್ದಂತೆ ಯಾರೋ ತಮ್ಮನ್ನು ಹೊಡೆಯಲಿಕ್ಕೆ ಬಂದಂತೆ ಬೆದರುವುದು, ಮೊಬೈಲ್‌ನಲ್ಲಿ ಮಾತನಾಡುವಂತೆ ವರ್ತಿಸುವುದು, ಕಾರಣವಿಲ್ಲದೆ ನಗುತ್ತಿರುವುದು, ಭಯದಿಂದ ಮನೆಯ ಹೊರಗೆ ಬಾರದೇ ಇರುವುದು ಸೇರಿದಂತೆ ಸಮಸ್ಯೆ ಇರುವವರನ್ನು ಗುರುತಿಸುವ ಆಶಾ ಕಾರ್ಯಕರ್ತೆ ಯರು, ಮಾನಸಿಕ ಆರೋಗ್ಯ ಎದುರಿಸುತ್ತಿರುವವರು ಮತ್ತವರ ಮನೆಯ ಇತರೆ ಸದಸ್ಯರಿಗೆ ಮನವರಿಕೆ ಮಾಡಿ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಕರೆ ತಂದು ಚಿಕಿತ್ಸೆ ಕೊಡಿಸುತ್ತಿದ್ದಾರೆ. ವಿಶೇಷ ವೈದ್ಯರ ಮೂಲಕ ಚಿಕಿತ್ಸೆ ಕೊಡಿಸಿದ ನಂತರ ಪ್ರತಿ ದಿನ ತಾವೇ ಮನೆಗಳಿಗೆ ತೆರಳಿ ಮಾತ್ರೆ ಇತರೆ ಔಷಧಿ ಕೊಡುತ್ತಿದ್ದಾರೆ. ನಿಗದಿತ ಸಮಯದಲ್ಲಿ ತಾಲೂಕು ಇಲ್ಲವೇ ಜಿಲ್ಲಾ ಕೇಂದ್ರಗಳಿಗೆ ಬರುವ ತಜ್ಞರ ಬಳಿಗೆ ಕರೆದೊಯ್ದು ಚಿಕಿತ್ಸೆ ಕೊಡಿಸುವ ಕೆಲಸವನ್ನೂ ಆಶಾ ಕಾರ್ಯಕರ್ತೆಯರು ಮಾಡುತ್ತಿದ್ದಾರೆ.

ಪಲ್ಲಾಗಟ್ಟೆ ಮತ್ತು ಬಿಳಿಚೋಡು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಭವನದಲ್ಲಿ ನಡೆಸಿದ ಸಂವಾದದಲ್ಲಿ ದೀಪಿಕಾ ಪಡುಕೋಣೆ ಅವರು ಕನ್ನಡದಲ್ಲೇ ಮಾತನಾಡಿದ್ದರು. ಅವರೇ ತಮ್ಮ ಸಮಸ್ಯೆಯನ್ನು, ಚಿಕಿತ್ಸೆ, ಸಮಸ್ಯೆಯ ಮೆಟ್ಟಿ ನಿಂತಿದ್ದನ್ನು ಸೊಗಸಾಗಿ ಎಲ್ಲರಿಗೂ ಮನಮುಟ್ಟುವಂತೆ ಹೇಳಿದ್ದರು. ಅವರ ಫೌಂಡೇಶನ್‌ ಮೂಲಕ ಚಿಕಿತ್ಸೆ ಪಡೆದವರಲ್ಲಿ ಅನೇಕರು ಗುಣಮುಖರಾಗಿದ್ದಾರೆ. ದೀಪಿಕಾ ಅವರ ಕೆಲಸ ಬಹಳ ಒಳ್ಳೆಯದು. ● ಟಿ. ತಿಪ್ಪಮ್ಮ, ಆಶಾ ಕಾರ್ಯಕರ್ತೆ, ಪಲ್ಲಾಗಟ್ಟೆ ಗ್ರಾಮ

● ರಾ. ರವಿಬಾಬು

 

Advertisement

Udayavani is now on Telegram. Click here to join our channel and stay updated with the latest news.

Next