ನವದೆಹಲಿ:ಭಾರತೀಯ ಜನತಾ ಪಕ್ಷದ ಸಂಘಟನೆಗೆ ನೆರವು ನೀಡುವ ನಿಟ್ಟಿನಲ್ಲಿ ಪಕ್ಷದ ಬೆಂಬಲಿಗರು ಸಣ್ಣ ಮೊತ್ತದ ದೇಣಿಗೆ ನೀಡುವ ಮೂಲಕ ನೆರವು ನೀಡಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ(ಡಿಸೆಂಬರ್ 25) ಮನವಿ ಮಾಡಿಕೊಂಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ನಾನು ಬಿಜೆಪಿ ನಿಧಿಗೆ ಒಂದು ಸಾವಿರ ರೂಪಾಯಿ ದೇಣಿಗೆ ನೀಡಿದ್ದೇನೆ. ಅಲ್ಲದೇ ಬೆಂಬಲಿಗರು ಕೂಡಾ ಬಿಜೆಪಿ ಪಕ್ಷವನ್ನು ಬಲಿಷ್ಠಗೊಳಿಸಲು ಸಹಾಯ ಮಾಡಬೇಕೆಂದು ವಿನಂತಿಸಿಕೊಂಡಿದ್ದಾರೆ.
ಭಾರತೀಯ ಜನತಾ ಪಕ್ಷದ ಪಕ್ಷದ ನಿಧಿಗೆ ನಾನು ಒಂದು ಸಾವಿರ ರೂ. ದೇಣಿಗೆ ನೀಡಿದ್ದೇನೆ. ಯಾವತ್ತೂ ದೇಶ ಮೊದಲು ಎಂಬುದು ನಮ್ಮ ಧ್ಯೇಯವಾಗಿದೆ. ನಮ್ಮ ಪಕ್ಷದ ಕಾರ್ಯಕರ್ತರ ನಿರಂತರವಾದ ನಿಸ್ವಾರ್ಥ ಸೇವೆಯ ಸಂಸ್ಕೃತಿಯು ನಿಮ್ಮ ಸಣ್ಣ ಮೊತ್ತದ ದೇಣಿಗೆಯಿಂದ ಪಕ್ಷ ಇನ್ನಷ್ಟು ಬಲಿಷ್ಠಗೊಳ್ಳಲಿದೆ. ಬಿಜೆಪಿಯನ್ನು ಬಲಗೊಳಿಸಲು ನೆರವು ನೀಡಿ, ಈ ಮೂಲಕ ಭಾರತವನ್ನು ಗಟ್ಟಿಗೊಳಿಸಿ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
ಬಿಜೆಪಿ ನಿಧಿಗೆ ನೀಡಿರುವ ಒಂದು ಸಾವಿರ ರೂಪಾಯಿ ದೇಣಿಗೆಯ ರಶೀದಿಯನ್ನು ಇ-ಮೇಲ್ ಮೂಲಕ ಕಳುಹಿಸಿದ್ದು, ರಶೀದಿಯಲ್ಲಿ ಮೊಬೈಲ್ ನಂಬರ್, ಬ್ಯಾಂಕ್ ಖಾತೆ ಸಂಖ್ಯೆ ಮತ್ತು ಪಾನ್ ನಂಬರ್ ಅನ್ನು ಗೌಪ್ಯತೆ ಕಾರಣದಿಂದ ಮರೆಮಾಡಲಾಗಿದೆ ಎಂದು ವರದಿ ತಿಳಿಸಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಕೂಡಾ ಪಕ್ಷದ ನಿಧಿಗೆ ಒಂದು ಸಾವಿರ ರೂಪಾಯಿ ದೇಣಿಗೆ ನೀಡಿದ್ದಾರೆ. ಈ ಸಾಮೂಹಿಕ ಅಭಿಯಾನಕ್ಕೆ ಗೆಳೆಯರು, ಕುಟುಂಬದ ಸದಸ್ಯರು ಸೇರಿದಂತೆ ಎಲ್ಲರೂ ಕೈಜೋಡಿಸಬೇಕಾಗಿದೆ ಎಂದು ನಡ್ಡಾ ತಿಳಿಸಿದ್ದಾರೆ.