Advertisement

ದೂರು ಸಲ್ಲಿಕೆಗೆ ಶೀಘ್ರದಲ್ಲಿ ಹೆಲ್ಪ್ ಲೈನ್

11:56 AM Oct 01, 2019 | Team Udayavani |

ಕಲಬುರಗಿ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಾಗರಿಕರು ಕುಂದು-ಕೊರತೆ ಬಗ್ಗೆ ದೂರು ನೀಡಲು ಶೀಘ್ರವೇ ಹೆಲ್ಪ್ ಲೈನ್ ಆರಂಭಿಸಲಾಗುವುದು ಎಂದು ಸಂಸದ ಡಾ| ಉಮೇಶ ಜಾಧವ್‌ ಮತ್ತು ದಕ್ಷಿಣ ಮತಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ತಿಳಿಸಿದರು.

Advertisement

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಬುರಗಿ ಮಹಾನಗರವು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ. ಸ್ವಚ್ಛ, ಸುಂದರ ನಗರವಾಗಿ ಕಾಪಾಡಿಕೊಳ್ಳುವುದರೊಂದಿಗೆ ಸಾರ್ವಜನಿಕರ ಸಮಸ್ಯೆ ಆಲಿಸುವುದು ಅಗತ್ಯವಾಗಿದ್ದು, ಹೆಲ್ಪ್ ಲೈನ್ ಮೂಲಕ ಸಾರ್ವಜನಿಕರು ತಮ್ಮ ದೂರು ಸಲ್ಲಿಸಲು ಕ್ರಮ ಜರುಗಿಸಲಾಗುವುದು ಎಂದರು.

ದೂರುಗಳ ಸಲ್ಲಿಕೆಯಾದ ವಾರದೊಳಗೆ ಸಮಸ್ಯೆ ಪರಿಹರಿಸಲು ಪ್ರಯತ್ನಿಸಲಾಗುವುದು. ಸಣ್ಣ-ಪುಟ್ಟ ದೂರುಗಳು ಇದ್ದರೆ ಅಂದೇ ಪರಿಹರಿಸಲು ಕ್ರಮ ವಹಿಸಲಾಗುವುದು. ಅಲ್ಲದೇ, ಪಾಲಿಕೆಯಲ್ಲಿ ದೂರು ಪೆಟ್ಟಿಗೆ ಸ್ಥಾಪಿಸಲಾಗುವುದು. ಜತೆಗೆ ಸಾಧ್ಯವಾದರೆ ಪ್ರತಿ ವಾರ್ಡ್‌ಗೆ ತೆರಳಿ ಸಮಸ್ಯೆ ಆಲಿಸಲು ಸಂಸದರ ಅನುದಾನದಲ್ಲಿ ವಾಹನದ ವ್ಯವಸ್ಥೆ ಮಾಡಲಾಗುವುದು ಎಂದರು.

ಫ್ಲೆಕ್ಸ್‌ಗೆ ಕಡಿವಾಣ: ಪ್ಲಾಸ್ಟಿಕ್‌ ಬಳಕೆಯಿಂದ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಈ ನಿಟ್ಟಿನಲ್ಲಿ ನಗರವನ್ನು ಪ್ಲಾಸ್ಟಿಕ್‌ ಮುಕ್ತ ಮಾಡಲು ಪಾಲಿಕೆ ಈಗಾಗಲೇ ಶ್ರಮಿಸುತ್ತಿದೆ. ಇನ್ನು ಮುಂದೆ ಸಹ ಪ್ಲಾಸ್ಟಿಕ್‌ ಮೇಲೆ ಸಂಪೂರ್ಣ ನಿರ್ಬಂಧ ಹೇರಲು ಕ್ರಮಕೈಗೊಳ್ಳಲಾಗುವುದು. ಕಾರ್ಯಕ್ರಮಗಳಿಗೆ ಬಳಸುವ ಫ್ಲೆಕ್ಸ್‌ ಸಹ ಒಂದೇ ಬಾರಿ ಬಳಕೆ ಮಾಡುವಂತಹದ್ದಾಗಿದ್ದು, ಫ್ಲೆಕ್ಸ್‌ ಬಳಕೆಗೂ ಕಡಿವಾಣ ಹಾಕಲಾಗುವುದು ಎಂದರು.

ಗಣ್ಯರ ಪ್ರತಿಮೆ ನಿರ್ಮಾಣ: ನಗರದ ಸೌಂದಯಿಕರಣದ ನಿಟ್ಟಿನಲ್ಲಿ ನಗರದ ಅಪ್ಪನ ಕೆರೆ ಬದಿಯಲ್ಲಿ 10 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಯೋಜಿಸಲಾಗಿದ್ದು, ಸ್ವಾಮಿ ವಿವೇಕಾನಂದ, ಕನಕದಾಸ, ಶಿವಾಜಿ ಸೇರಿದಂತೆ ಹಲವು ಗಣ್ಯರ ಪ್ರತಿಮೆಗಳನ್ನು ಸ್ಥಾಪಿಸಲಾಗುವುದು ಎಂದು ಶಾಸಕ ದತ್ತಾತ್ರೇಯ ಪಾಟೀಲ ರೇವೂರ ತಿಳಿಸಿದರು.ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ಫುಟ್‌ಪಾತ್‌ ಸುಧಾರಣೆಗೆ ಕ್ರಮಕೈಗೊಳ್ಳಲಾಗುತ್ತಿದೆ. ಒಂದು ತಿಂಗಳಲ್ಲಿ ಟೆಂಡರ್‌ ಕರೆದು ಕಾಮಗಾರಿ ಆರಂಭಿಸಲಾಗುವುದು. ಜತೆಗೆ ಉದ್ಯಾನವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲು ತೀರ್ಮಾನಿಸಲಾಗಿದೆ ಎಂದರು.

Advertisement

ಬಹಮನಿ ಕೋಟೆಯ ಸಮೀಪ ನಿಂತ ನೀರು ಮಲೀನವಾಗಿದ್ದು, ಇಡೀ ಪ್ರದೇಶವನ್ನು ಸ್ವಚ್ಛಗೊಳಿಸಲು ಉದ್ದೇಶಿಸಲಾಗಿದೆ. ಗೌಳಿಗರ ಎಮ್ಮೆಗಳು ನೀರಿನಲ್ಲಿ ಇಳಿಯುವುದರಿಂದ ಮಲೀನವಾಗುತ್ತಿದೆ. ಹೀಗಾಗಿ ಗೌಳಿಗರ ಸಮಸ್ಯೆ ಪರಿಹರಿಸಲು ಹಾಗೂ ಎಮ್ಮೆಗಳನ್ನು ಕಟ್ಟಲು ಸ್ಥಳದ ಹುಡುಕಾಟ ನಡೆಯುತ್ತಿದೆ. ಈ ಸಂಬಂಧ ಈಗಾಗಲೇ ಜಿಲ್ಲಾಧಿಕಾರಿಗೆ ಸಂಸದರು ಸೂಚಿಸಿದ್ದಾರೆ. ಅಲ್ಲದೇ, ಬಸ್‌ ನಿಲ್ದಾಣ ಸಮೀಪದ ಕಣ್ಣಿ ಮಾರುಕಟ್ಟೆ ಪ್ರದೇಶದಲ್ಲಿ 15 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್‌ ಸದಸ್ಯ ಬಿ.ಜಿ. ಪಾಟೀಲ, ಮಹಾನಗರ ಪಾಲಿಕೆ ಆಯುಕ್ತ ರಾಹುಲ್‌ ಪಾಂಡ್ವೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next