Advertisement

ವೇಷಧಾರಿ ರವಿ ಕಟಪಾಡಿ ಅವರಿಂದ 20 ಮಕ್ಕಳ ಚಿಕಿತ್ಸೆಗೆ 33 ಲ.ರೂ. ಸಹಾಯ

10:23 AM Oct 24, 2018 | |

ಉಡುಪಿ: ಕಳೆದ 5 ವರ್ಷಗಳಿಂದ ಅಷ್ಟಮಿ ಸಮಯದಲ್ಲಿ ವೇಷ ಧರಿಸಿ ಅನಾರೋಗ್ಯ ಪೀಡಿತ ಮಕ್ಕಳಿಗಾಗಿ ಹಣ ಸಂಗ್ರಹಿಸುತ್ತಿರುವ ರವಿ ಕಟಪಾಡಿ ಅವರು ಇದುವರೆಗೆ ಒಟ್ಟು 33.18 ಲ.ರೂ.ಗಳನ್ನು ಸಂಗ್ರಹಿಸಿದ್ದಾರೆ.

Advertisement

ಕಳೆದ 5 ವರ್ಷಗಳಲ್ಲಿ ವೇಷ ಧರಿಸಿ ಒಟ್ಟು 19,33,810 ರೂ.ಗಳನ್ನು ಸಂಗ್ರಹಿಸಿ ಅದನ್ನು 20 ಮಕ್ಕಳಿಗೆ ನೀಡಿದ್ದಾರೆ. ಇವರ ಸೇವಾ ಕಾರ್ಯಕ್ಕೆ ಜತೆಯಾದ ಮಿಲಾಪ್‌ ಸರಕಾರೇತರ ಸೇವಾ ಸಂಸ್ಥೆ ಸಾಮಾಜಿಕ ಜಾಲತಾಣದಲ್ಲಿ ರವಿ ಕಟಪಾಡಿ ಅವರ ಸೇವಾಕಾರ್ಯದ ಕುರಿತು ವೀಡಿಯೋ ಮೂಲಕ ಜನರ ಗಮನ ಸೆಳೆದಿದ್ದು 1.7 ಕೋ. ಜನ ವೀಕ್ಷಿಸಿದ್ದಾರೆ.  ಅನಿವಾಸಿ ಭಾರತೀಯರು ಸೇರಿದಂತೆ  ಹಲವಾರು ಮಂದಿ ಸ್ಪಂದಿಸಿದ್ದು ಈ ಮೂಲಕ 13.85 ಲ.
ರೂ. ಸಂಗ್ರಹವಾಗಿದೆ. ಈ ಬಾರಿ ಅಷ್ಟಮಿ ಸಂದರ್ಭ ಸಂಗ್ರಹವಾದ 5,32,000 ರೂ.ಗಳನ್ನು 5 ಮಕ್ಕಳಿಗೆ ನೀಡಲಾಗಿದೆ. ಇವರ ಚಿಕಿತ್ಸೆಗೆ ಮತ್ತಷ್ಟುಮೊತ್ತ ಅವಶ್ಯ ಇರುವುದರಿಂದ 13.85 ಲ.ರೂ.ಗಳನ್ನು ಅದೇ 5 ಮಕ್ಕಳಿಗೆ ಹಾಗೂ ಹೊಸದಾಗಿ ಬೇಡಿಕೆ ಬಂದಿರುವ ತೀರಾ ಅಗತ್ಯವಿರುವ ಇಬ್ಬರು ಮಕ್ಕಳಿಗೆ ಹಂಚಲಾಗುವುದು  ಎಂದು ಮಿಲಾಪ್‌ ಸಂಸ್ಥೆಯ ಕೆ. ಮಹೇಶ್‌ ಶೆಣೈ ಪತ್ರಿಕಾಗೋಷ್ಠಿಯಲ್ಲಿ  ತಿಳಿಸಿದ್ದಾರೆ.

ಈ ಅಭಿಯಾನಕ್ಕೆ ಉಡುಪಿ ಜಿಲ್ಲೆಯ ನಾಗರಿಕರು ಮಾತ್ರವಲ್ಲದೆ ವಿದೇಶದಲ್ಲಿರುವವರು ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದಾರೆ. ಅಭಿಯಾನ ಮುಂದುವರಿಸಲು  ಮನವಿ ಮಾಡಿದ್ದಾರೆ. ಹಾಗಾಗಿ ಮತ್ತೆ ತಿಂಗಳ ಕಾಲ ಮುಂದುವರಿಸಿ ಬಡಮಕ್ಕಳ ಚಿಕಿತ್ಸೆಗೆ ಹಣ ನೀಡ ಲಾಗುತ್ತದೆ. ಹಣವನ್ನು ನೇರವಾಗಿ ಖಾತೆಗೆ  ವರ್ಗಾಯಿಸಲಾಗುತ್ತದೆ. ತೀರಾ ಅಗತ್ಯ ಇರುವವರಿಗೆ ತಲುಪಿಸುವ ಉದ್ದೇಶ ರವಿ ಕಟಪಾಡಿ ಮತ್ತು ಅವರ ಸ್ನೇಹಿತರದ್ದಾಗಿದೆ ಎಂದು ಮಹೇಶ್‌ ತಿಳಿಸಿದರು.

ಸಹಾಯ ಮಾಡುತ್ತಿರುವವರಲ್ಲಿ ಹೆಚ್ಚಿನ ಮಕ್ಕಳು ಕ್ಯಾನ್ಸರ್‌, ಕಿಡ್ನಿ ಸಮಸ್ಯೆಯವರು. ಸದ್ಯ ನಾವು ಮಕ್ಕಳಿಗೆ ಮಾತ್ರ ಸಹಾಯ ಮಾಡುತ್ತಿದ್ದೇವೆ. ಸ್ನೇಹಿತರು ಮತ್ತು ಎಲ್ಲ ಜನತೆಯ ಸಹಕಾರದಿಂದ ಇದು ಸಾಧ್ಯವಾಗಿದೆ ಎಂದು ರವಿ ಕಟಪಾಡಿ ಹೇಳಿದರು. ತಂಡ ಸದಸ್ಯ ರಕ್ಷಿತ್‌ ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಯಾವ ವರ್ಷ ಎಷ್ಟು  ಸಂಗ್ರಹ
ಮೊದಲ ವರ್ಷ     1,04,810 ರೂ.   –    1 ಮಗುವಿಗೆ
ಎರಡನೇ ವರ್ಷ    3,65,000 ರೂ.   –     4 ಮಕ್ಕಳಿಗೆ
ಮೂರನೇ ವರ್ಷ   4,20,000 ರೂ.   –    3 ಮಕ್ಕಳಿಗೆ
ನಾಲ್ಕನೇ ವರ್ಷ       5,12,000 ರೂ.   –    7 ಮಕ್ಕಳಿಗೆ
ಐದನೇ ವರ್ಷ         5,32,000 ರೂ.   –     5 ಮಕ್ಕಳಿಗೆ
ಮಿಲಾಪ್‌ ಸಂಸ್ಥೆಯ ಮೂಲಕ ಸಂಗ್ರಹ  ರೂ.    –    13,85,000

Advertisement
Advertisement

Udayavani is now on Telegram. Click here to join our channel and stay updated with the latest news.

Next