Advertisement

ಪಟ್ಟಣಗಳಿಗೂ ದಾಂಗುಡಿ ಇಟ್ಟ ಹೆಲ್ಮೆಟ್‌

11:35 AM Dec 01, 2017 | Team Udayavani |

ಕಲಬುರಗಿ: ನಗರ ಸೇರಿದಂತೆ ತಾಲೂಕುಗಳ ಪಟ್ಟಣ ಪ್ರದೇಶದಲ್ಲಿ ಈಗ ಹೆಲ್ಮೆಟ್‌ ಹವಾ ಜೋರಾಗಿದೆ. ನಗರವಿರಲಿ
ಪಟ್ಟಣ ಪ್ರದೇಶಗಳಿಗೂ ಹೆಲ್ಮೆಟ್‌ ಗುಮ್ಮ ದಾಂಗುಡಿ ಇಟ್ಟಿದೆ. ಪೊಲೀಸರ ದಂಡಕ್ಕೆ ಹೆದರಿ ಜನರು ಎಂತಹದೊ ಒಂದು
ಹೆಲ್ಮೆಟ್‌ ಖರೀದಿ ಮಾಡಿ ಪೊಲೀಸರ ಕಣ್ಣಿಗೆ ಬಿದ್ದರೆ ಸಾಕು ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಜನರಂತು ರಸ್ತೆಗಳು, ಅಂಗಡಿಗಳು, ಪುಟ್‌ಪಾತಗಳಲ್ಲಿ ನಿಂತು ಹೆಲ್ಮೆಟ್‌ ಖರೀದಿಗೆ ಚೌಕಾಸಿ ಮಾಡಿದ್ದೆ.. ಮಾಡಿದ್ದು… 200-300ರೂ., 500-1000 ರೂ. ನೀಡಿ ಖರೀದಿಸುತ್ತಿದ್ದಾರೆ. ಕಲಬುರಗಿ ನಗರದಲ್ಲಂತೂ ಎಲ್ಲಿ ನೋಡಿದರಲ್ಲಿ ಹೆಲ್ಮೆಟ್‌ ಮಾರಾಟ ಜೋರಾಗಿ. ಗುಂಪು ಗುಂಪಾಗಿ ವಾಹನ ಸವಾರರು ಹೆಲ್ಮೆಟ್‌ ಖರೀದಿ ಮಾಡುವ ದೃಶ್ಯ ಸಾಮಾನ್ಯವಾಗಿವೆ. ಇನ್ನೊಂದೆಡೆ ಹೆಲ್ಮೆಟ್‌ ಇಲ್ಲದೆ ಒಂದೇ ಒಂದು ವೃತ್ತ ದಾಟಿಕೊಂಡು ಹೋಗಲು ವಾಹನ ಸವಾರರಿಗೆ ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಜನರು ಹೆಲ್ಮೆಟ್‌ ಗಳಿಗಾಗಿ ಪರದಾಡುವ ಪರಿಸ್ಥಿತಿಯೂ ನಿರ್ಮಾಣವಾಗಿದೆ.

ನ.24ರಿಂದ ನಗರ ಸೇರಿದಂತೆ ತಾಲೂಕು ಕೇಂದ್ರಗಳಲ್ಲೂ ಹೆಲ್ಮೆಟ್‌ ಕಡ್ಡಾಯ ಎನ್ನುವ ಐಜಿಪಿ ಅಲೋಕಕುಮಾರ ಅವರ ಆದೇಶ ಹೈಕದ ಯಾದಗಿರಿ, ಬೀದರ್‌ ಮತ್ತು ಕಲಬುರಗಿ ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ಬರುತ್ತಿದೆ. ಮೂರು
ನಗರಗಳಲ್ಲಿ ಖುದ್ದು ಐಜಿಪಿ ಕೆಲವು ಸಂಜೆಗಳನ್ನು ರಸ್ತೆಗಳಲ್ಲಿ ನಿಂತು ಜನರು ಹೆಲ್ಮೆಟ್‌ ಕಡ್ಡಾಯವಾಗಿ ಧರಿಸಿದ್ದಾರೋ
ಇಲ್ಲವೋ ಎನ್ನುವುದನ್ನು ತಪಾಸಣೆ ಮಾಡುತ್ತಿದ್ದಾರೆ.

ನಗರ ಪ್ರದೇಶ, ಪಟ್ಟಣ ಪ್ರದೇಶದ ಪ್ರಮುಖ ವೃತ್ತಗಳಲ್ಲಿ ನಾಲ್ಕು ಕಡೆಗಳಲ್ಲಿ ಪೊಲೀಸರು ಹೆಲ್ಮೆಟ್‌ ಇಲ್ಲದ ವಾಹನ
ಸವಾರರಿಗೆ ಮುಲಾಜಿಲ್ಲದೆ ದಂಡ ವಿಧಿಸುತ್ತಿದ್ದಾರೆ. ಯಾರ ಪ್ರಭಾವಕ್ಕೂ ಒಳಗಾಗುತ್ತಿಲ್ಲ. ನಿರ್ದಾಕ್ಷಿಣ್ಯವಾಗಿ ದಂಡ
ವಿಧಿಸುತ್ತಿರುವುದುರಿಂದ ಜನರು ಅನಿವಾರ್ಯವಾಗಿ ಹೆಲ್ಮೆಟ್‌ಗಳಿಗೆ ಮೊರೆ ಹೋಗುತ್ತಿದ್ದಾರೆ.

ಕಳೆದ ಎರಡೂಮೂರು ದಿನಗಳಿಂದ ಕಲಬುರಗಿ ನಗರದ ಮುಖ್ಯ ರಸ್ತೆಯ ಅಕ್ಕ, ಪಕ್ಕದಲ್ಲಿ ಐಎಸ್‌ಐ ಪ್ರಮಾಣಿಕೃತ ಹೆಲ್ಮೆಟ್‌ಗಳು ಇರದೇ ಇದ್ದರೂ ಪೊಲೀಸರ ದಂಡದಿಂದ ಬಚಾವಾದರೆ ಸಾಕಪ್ಪೋ ಸಾಕು ಎನ್ನುವಂತೆ ಸವಾರರು ಕಡಿಮೆ ಬೆಲೆಯಲ್ಲಿ ಸಿಗುತ್ತಿರುವ ಹೆಲ್ಮೆಟ್‌ಗಳನ್ನು ಖರೀದಿಸುತ್ತಿದ್ದಾರೆ. ಅದರಲ್ಲೂ ಸಣ್ಣ ಮತ್ತು ಸಂಪೂರ್ಣ ಮುಖ ಆವರಿಸದಿರುವ ಹೆಲ್ಮೆಟ್‌ಗಳ ಮಾರಾಟ ಜೋರಾಗಿದೆ. ಅದರೆ, ಅವುಗಳಿಂದ ಅಪಘಾತದಲ್ಲಿ ಪ್ರಾಣ ಉಳಿಯುತ್ತದೆ ಎನ್ನುವ ಭರವಸೆ ಇಲ್ಲ. ಪೊಲೀಸರು ಈ ಕಡೆಗೂ ನಿಗಾವಹಿಸಬೇಕಾಗಿದೆ ಎನ್ನುವುದು ಕೆಲವು ಸಾರ್ವಜನಿಕರ ಅನಿಸಿಕೆಯಾಗಿದೆ.

Advertisement

ನಗರದ ಕೊಠಾರಿ ಭವನದ ಮುಂದುಗಡೆ, ಹೊಸ ಜೇವರ್ಗಿ ರಸ್ತೆಯ ಹೊರ ಸೇತುವೆಯ ಬಳಿ, ಬಸ್‌ ನಿಲ್ದಾಣದ ಹತ್ತಿರ, ಸರ್ಕಾರಿ ಐಟಿಐ ಕಾಲೇಜಿನ ಮುಂದಿನ ಮಾರ್ಗದಲ್ಲಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಮುಂದೆ, ಕೆಬಿಎನ್‌ ಆಸ್ಪತ್ರೆಯ ಎದುರು, ಜಗತ್‌ ವೃತ್ತ, ಸೂಪರ್‌ ಮಾರ್ಕೆಟ್‌, ಶರಣಬಸವೇಶ್ವರ ದೇವಸ್ಥಾನ, ಆರ್‌ಟಿಓ ಕಚೇರಿ ಮಾರ್ಗ, ಖರ್ಗೆ ಪೆಟ್ರೋಲ್‌ ಬಂಕ್‌ ವೃತ್ತ ಸೇರಿದಂತೆ ಎಲ್ಲಿ ನೋಡಿದರಲ್ಲಿ ಹೆಲ್ಮೆಟ್‌ ವ್ಯಾಪಾರಿಗಳು
ಹೆಲ್ಮೆಟ್‌ಗಳ ರಾಶಿಯನ್ನು ಹಾಕಿಕೊಂಡು ಮಾರಾಟ ಮಾಡುತ್ತಿದ್ದಾರೆ.

ಇತ್ತ ಪೊಲೀಸರು ಹೆಲ್ಮೆಟ್‌ ಧರಿಸದವರಿಗೆ ದಂಡ ವಿಧಿಸುವುದನ್ನು ಮುಂದುವರಿಸಿದ್ದಾರೆ. ಹೀಗಾಗಿ ಬಹುತೇಕ
ದ್ವಿಚಕ್ರವಾಹನ ಸವಾರರು ದಂಡದಿಂದ ಪಾರಾಗಲು ಹೆಲ್ಮೆಟ್‌ ಧಾರಣೆ ಮಾಡುತ್ತಿದ್ದಾರೆ.

ಇನ್ನು ಕಾರಿನಲ್ಲಿ ಸೀಟ್‌ ಬೆಲ್ಟ್‌ಗಳನ್ನು ಪ್ರಯಾಣಿಕರು ಧರಿಸುವ ಮೂಲಕ ದಂಡದಿಂದ ತಪ್ಪಿಸಿಕೊಳ್ಳುತ್ತಿದ್ದಾರೆ.
ಆಟೋ ಚಾಲಕರು ಸಮವಸ್ತ್ರ ಧರಿಸುತ್ತಿದ್ದು, ಬಹುತೇಕ ವಾಹನ ಸವಾರರು ಸಂಚಾರಿ ನಿಯಮ ಪಾಲಿಸುವ ಮನೋಭಾವ ಹೊಂದಿದ್ದಾರೆ. ಆದಾಗ್ಯೂ, ಕಳಪೆ ಹೆಲ್ಮೆಟ್‌ ಗಳ ಖರೀದಿಯನ್ನು ಪೊಲೀಸ್‌ ಇಲಾಖೆ ತಡೆಯಬೇಕು.
ಇಲ್ಲವಾದಲ್ಲಿ ಹೆಲ್ಮೆಟ್‌ ಧಾರಣೆ ಕಟ್ಟುನಿಟ್ಟಿನ ಕ್ರಮವು ಕಾಟಾಚಾರದ್ದಾಗಲಿದೆ

ಚಿಂಚೋಳಿ: ಮಹಾತ್ಮಾ ಬಸವೇಶ್ವರ ವೃತ್ತದಲ್ಲಿ ಪೊಲೀಸ್‌ ಇಲಾಖೆ ವತಿಯಿಂದ ದ್ವಿಚಕ್ರ ವಾಹನ ಸವಾರರಿಗೆ ಕಡ್ಡಾಯವಾಗಿ ಹೆಲ್ಮೆಟ್‌ ಧರಿಸಿ ಸಂಚಾರ ಮಾಡುವಂತೆ ಚಿಂಚೋಳಿ ಉಪ-ವಿಭಾಗದ ಡಿವೈಎಸ್ಪಿ ಯು.ಶರಣಪ್ಪ
ಜಾಗೃತಿ ಮೂಡಿಸಿದರು. 

ಪಟ್ಟಣದ ಬಸವೇಶ್ವರ ವೃತ್ತದ ಚಿಂಚೋಳಿ-ಕಲಬುರಗಿ ರಾಜ್ಯ ಹೆದ್ದಾರಿಯಲ್ಲಿ ಹೆಲ್ಮೆಟ್‌ ಧರಿಸಿ ಸಂಚಾರ ಮಾಡುತಿದ್ದ
ಸವಾರರಿಗೆ ಡಿವೈಎಸ್ಪಿ ಯು ಶರಣಪ್ಪ ಹೂ ಕೊಟ್ಟು ನೀವು ಹೆಲ್ಮೆಟ್‌ ಧರಿಸಿ ಸಂಚಾರ ಮಾಡುವುದರ ಜೊತೆಗೆ ನಿಮ್ಮ ಗೆಳೆಯರಿಗೂ ಸಂಚಾರಿ ನಿಯಮಗಳನ್ನು ಪಾಲಿಸಲು ತಿಳಿಸಿ ಎಂದು ಹೇಳಿದರು.ದ್ವಿಚಕ್ರ ವಹಾನ ಸವಾರರು ಕಡ್ಡಾಯವಾಗಿ ಹೆಲ್ಮೆಟ್‌ ಧರಿಸಿ ಸಂಚಾರ ಮಾಡುವುದರಿಂದ ನಿಮ್ಮ ಜೀವನ ಉಳಿಸಿಕೊಳ್ಳಲು ಸಾದ್ಯ. ಯಾವುದೇ ರಸ್ತೆ ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಮೊದಲು ತಲೆ ಪೆಟ್ಟು ಬೀಳುವ ಸಾಧ್ಯತೆ ಇರುತ್ತದೆ. ಒಂದು ವೇಳೆ ಹೆಲ್ಮೆಟ್‌ ಇಲ್ಲದಿದ್ದಲ್ಲಿ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಸಂದರ್ಭದಲ್ಲಿ ಹೆಲ್ಮೆಟ್‌ ಹಾಕಿದರೆ ಪ್ರಾಣ ಉಳಿಯುತಿತ್ತು ಎಂದು ಹೇಳುವಂತಾಗುತ್ತದೆ. ಸಂಚಾರಿ ನಿಯಮ ಪಾಲನೆ ಮಾಡುವುದರ ಜೊತೆಗೆ ಸುಖ ಜೀವನ ಮಾಡಿ ಎಂದು
ಹೇಳಿದರು. 

ದ್ವಿಚಕ್ರ ವಾಹನ ಸವಾರರಿಗೆ 100 ರೂ.ದಂಡ ಹಾಕಲಾಗಿದೆ. ಮುಂದೆ ಸೀಟ್‌ ಬೆಲ್ಟ್ ಮತ್ತು ಚಾಲನೆ ಪರವಾನಿಗೆ
ಹಾಗೂ ವಿಮೆ ಕಡ್ಡಾಯವಾಗಿ ಪರಿಶೀಲನೆ ನಡೆಸಲಾಗುವುದು ಎಂದು ಹೇಳಿದರು.

ಈಗಾಗಲೇ ಕಾಲೇಜು ವಿದ್ಯಾರ್ಥಿನಿಯರಿಗೆ ಚುಡಾಯಿಸಿದರೆ ಅಂತಹವರ ವಿರುದ್ಧ ಪೋಕ್ಸೋ ಕಾಯಿದೆ ಅಡಿಯಲ್ಲಿ ಬಂಧಿಸಲಾಗುವುದು. ಮಾದಕ ದ್ರವ್ಯ ಹಾಗೂ ಬೀದಿ ಕಾಮಣ್ಣರ ಹಾವಳಿ ತಪ್ಪಿಸಲು ಮತ್ತು ಪೊಲೀಸರು ನಿಗಾ ವಹಿಸುತ್ತಿದ್ದಾರೆ. ಬಸ್‌ ನಿಲ್ದಾಣ, ಕಾಲೇಜು ಹತ್ತಿರ ಕೆಲವರು ಹುಡುಗಿಯರಿಗೆ ಚುಡಾಯಿಸುತ್ತಿರುವವರನ್ನು ಬಂಧಿಸಿ ಠಾಣೆಗೆ ಕರೆತಂದು ಬುದ್ಧಿ ಮಾತು ಹೇಳಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ನವೆಂಬರ 28ರಿಂದ ಒಟ್ಟು343 ಪ್ರಕರಣ ದಾಖಲಿಸಿಕೊಂಡು 34,300ರೂ., ನ.29ರಂದು 405 ಪ್ರಕರಣಗಳನ್ನು
ದಾಖಲಿಸಿಕೊಂಡು 43,300ರೂ.ಗಳನ್ನು ಚಿಂಚೋಳಿ ಮತ್ತು ಸೇಡಂ ತಾಲೂಕಿನಲ್ಲಿ ಒಟ್ಟು 77,600 ರೂ.ದಂಡ ವಸೂಲಿ ಮಾಡಲಾಗಿದೆ ಎಂದು ಹೇಳಿದರು.

ಸಿಪಿಐ ಇಸ್ಮಾಯಿಲ್‌ ಶರೀಫ, ಪಿಎಸ್‌ಐಗಳಾದ ಎ.ಎಸ್‌. ಪಟೇಲ,ಸುರೇಶಕುಮಾರ, ಎಎಸ್‌ಐ ಲಿಂಗಣ್ಣ, ಪೊಲೀಸ್‌ ಸಿಬ್ಬಂದಿಗಳಾದ ಮಂಜುನಾಥ, ಮಹೇಶರೆಡ್ಡಿ, ಗುರುಶಾಂತ, ಮಹಾಂತೇಶ, ಅಪ್ಪು, ಗೃಹರಕ್ಷಕ ದಳದ ಎಂ.ಮಸ್ತಾನ,
ಹಣಮಂತ ತಾಡಪಳ್ಳಿ ಇದ್ದರು. 

„ಸೂರ್ಯಕಾಂತ ಎಂ.ಜಮಾದಾರ

Advertisement

Udayavani is now on Telegram. Click here to join our channel and stay updated with the latest news.

Next