ಬೆಂಗಳೂರು: ದ್ವಿಚಕ್ರ ವಾಹನ ಚಾಲಕರು ಹಾಗೂ ಹಿಂಬದಿ ಸವಾರರಿಗೆ ಕಡ್ಡಾಯವಾಗಿ ಹೆಲ್ಮೆಟ್ ಧರಿಸುವ ವಿಚಾರದಲ್ಲಿ ವಿನಾಯಿತಿ ನೀಡಲು ನಿರಾಕರಿಸಿರುವ ಹೈಕೋರ್ಟ್, ವಾಹನ ಸವಾರರ ಪ್ರಾಣ ರಕ್ಷಣೆಯ ದೃಷ್ಟಿಯಿಂದ ಸರ್ಕಾರದ ಕ್ರಮವನ್ನು ಎತ್ತಿ ಹಿಡಿದಿದೆ.
ಈ ಕುರಿತಂತೆ ಮಂಗಳೂರು ಮೂಲದ ವಕೀಲ ಕೆ. ಜಗನ್ನಾಥ್ ಶೆಟ್ಟಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾ. ಎ.ಎಸ್. ಓಕಾ ಹಾಗೂ ನ್ಯಾ. ಮೊಹಮ್ಮದ್ ನವಾಜ್ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಸೋಮವಾರ ವಿಚಾರಣೆಗೆ ಬಂದಿತ್ತು.
ಆ ವೇಳೆ, “ಬೈಕ್ ನನ್ನದು ಹಾಗಾಗಿ, ಹೆಲ್ಮೆಟ್ ಧರಿಸೋದು ಬಿಡೋದು ನನ್ನಿಷ್ಟ, ಹೆಲ್ಮೆಟ್ ಕಡ್ಡಾಯದಿಂದ ಮೂಲಭೂತ ಹಕ್ಕಿನ ಉಲ್ಲಂಘನೆ ಆಗುತ್ತದೆ. ಆದ್ದರಿಂದ ಕೇಂದ್ರ ಸರ್ಕಾರದ ಮೋಟಾರು ವಾಹನ ಕಾಯ್ದೆ-1988ರ ಸೆಕ್ಷನ್ 129 ಮತ್ತು ಕರ್ನಾಟಕ ಮೋಟಾರು ವಾಹನ ಅಧಿನಿಯಮ-1989ರ ಸೆಕ್ಷನ್ 230 ಅನ್ನು ಸಂವಿಧಾನಬಾಹಿರವೆಂದು ಘೋಷಿಸಬೇಕು’ ಎಂಬ ಅರ್ಜಿದಾರರ ಮನವಿಗೆ ನ್ಯಾಯಪೀಠ ಗರಂ ಆಯಿತು.
ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾದ ಅರ್ಜಿಯಾಗಿದ್ದು, ಪರಿಗಣಿಸಲು ಸಾಧ್ಯವಿಲ್ಲ. ದಂಡ ವಿಧಿಸಲು ಇದು ಸೂಕ್ತ ಪ್ರಕರಣವಾಗಿದೆ. ಹೆಲ್ಮೆಟ್ ಹಾಕುವುದರಿಂದ ಸವಾರರ ಪ್ರಾಣ ಉಳಿಯುತ್ತದೆ. ವಾಹನ ಸವಾರರ ಪ್ರಾಣ ರಕ್ಷಣೆಯ ದೃಷ್ಟಿಯಿಂದ ಹೆಲ್ಮೆಟ್ ಕಡ್ಡಾಯ ಕಾನೂನು ಬದ್ಧವಾಗಿದೆ. ಅರ್ಜಿ ವಾಪಸ್ ಪಡೆಯದಿದ್ದರೆ, ದಂಡ ವಿಧಿಸಿ ಅರ್ಜಿ ವಜಾಗೊಳಿಸ ಲಾಗುವುದು ಎಂದು ಎಚ್ಚರಿಸಿತು.
ಆಗ, ದಂಡ ಪಾವತಿಸುವಷ್ಟು ನಾನು ಶಕ್ತನಾಗಿಲ್ಲ. ನಾನು ಅರ್ಜಿಯನ್ನು ಹಿಂಪಡೆಯುತ್ತೇನೆ. ಆದರೆ, ಅರ್ಜಿಯ ಬಗ್ಗೆ ನ್ಯಾಯಾಲಯ ನಿರ್ಧರಿಸಲಿ ಎಂದು ವಕೀಲ ಜಗನ್ನಾಥ್ ಶೆಟ್ಟಿ ಮನವಿ ಮಾಡಿದರು. ಅದಕ್ಕೆ, ಮಾನ್ಯ ಮಾಡುವ ಅಂಶಗಳು ಅರ್ಜಿಯಲ್ಲಿಲ್ಲ ಎಂದು ನ್ಯಾಯಪೀಠ ಹೇಳಿತು.