ವಿಜಯಪುರ: ಜಿಲ್ಲೆಯಲ್ಲಿ ಜನೇವರಿ 1ರಿಂದ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸುವುದನ್ನು ಕಡ್ಡಾಯ ಮಾಡಲಾಗಿದೆ. ನಿಯಮ ಮೀರಿದವರ ವಿರುದ್ಧ ಮೋಟಾರು ವಾಹನ ಕಾಯ್ದೆಯನ್ವ ಕ್ರಮ ಅನಿವಾರ್ಯ ಎಂದು ವಿಜಯಪುರ ಎಸ್ಪಿ ಆನಂದಕುಮಾರ ಎಚ್ಚರಿಕೆ ನೀಡಿದ್ದಾರೆ.
ಶನಿವಾರ ನಗರದ ಗಾಂಧಿ ಚೌಕ್ ಪೊಲೀಸ್ ಠಾಣೆಯಲ್ಲಿ ವಿಜಯಪುರ ಜಿಲ್ಲಾ ಪೊಲೀಸ್ ಇಲಾಖೆಯಿಂದ ಹಮ್ಮಿಕೊಂಡಿದ್ದ ಹೆಲ್ಮೆಟ್ ಧರಿಸುವ ಅಗತ್ಯದ ಕುರಿತ ಜಾಗೃತಿ ಅಭಿಯಾನಕ್ಕಾಗಿ ಹೆಲ್ಮೆಟ್‌ದಾರಿ ಪೊಲೀಸರ ಬೈಕ್ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದ ಅವರು, ಬೈಕ್ ಸವಾರರು ಜೀವ ಉಳಿಸಿಕೊಳ್ಳಲು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂದು ಮನವಿ ಮಾಡಿದರು.
ಇದೇ ವೇಳೆ ಹೆಲ್ಮೆಟ್ ರಹಿತವಾಗಿ ಬೈಕ್ ಸವಾರಿ ಮಾಡುವ ಸಾರ್ವಜನಿಕರಿಗೆ ಗುಲಾಬಿ ಹೂ ನೀಡಿ ಹೆಲ್ಮೆಟ್ ಧರಿಸುವ ಅಗತ್ಯವನ್ನು ಮನವರಿಕೆ ಮಾಡಿಕೊಟ್ಟರು. ಅಲ್ಲದೇ ಕೆಲವರಿಗೆ ಉಚಿತವಾಗಿ ಹೆಲ್ಮೆಟ್ ನೀಡಿ, ಹೆಲ್ಮೆಟ್ ಧರಿಸಿಯೇ ಬೈಕ್ ಚಾಲನೆ ಮಾಡುವಂತೆ ಕೋರಿದರು.
ಜಿಲ್ಲೆಯಲ್ಲಿ ಡಿಸೆಂಬರ್ 31ರವರೆಗೆ ಹೆಲ್ಮೆಟ್ ಧರುಲಿಸುವ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಜನೇವರಿ 1ರೊಳಗೆ ದ್ವಿಚಕ್ರ ವಾಹನ ಸವಾರರು ಕಡ್ಡಾಯ ಹೆಲ್ಮೆಟ್ ಧರಸಬೇಕು. ಇಲ್ಲವಾದರೆ ಭಾರತೀಯ ಮೋಟರ್ ವೆಹಿಕಲ್ ಕಾಯ್ದೆಯಡಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಹೆಲ್ಮೆಟ್ ಇಲ್ಲದೇ ಸವಾರಿ ಮಾಡುವಾಗ ಅಪಘಾತವಾಗಿ ಜಿಲ್ಲೆಯಲ್ಲಿ 2019ರಲ್ಲಿ 130 ಸವಾರರು, 2020ರಲ್ಲಿ 185 ಸವಾರರು ಹಾಗೂ 2021ರಲ್ಲಿ 127 ಸವಾರರು ಮೃತಪಟ್ಟಿದ್ದಾರೆ. ಹೀಗಾಗಿ ಬೈಕ್ ಸವಾರರು ಹೆಲ್ಮೆಟ್ ಧರಿಸುವ ವಿಷಯದಲ್ಲಿ ನಿರ್ಲಕ್ಷé ತೋರಬಾರದು ಎಂದು ಸೂಚಿಸಿದರು.