Advertisement

ಕೈಫ್ ಸೂರ್ಯ ನಮಸ್ಕಾರ ಫೋಟೋಗೆ ವಿರೋಧ

03:45 AM Jan 02, 2017 | |

ಹೊಸದಿಲ್ಲಿ: ಕ್ರಿಕೆಟಿಗ ಮೊಹಮ್ಮದ್‌ ಶಮಿ ಪತ್ನಿ ಜತೆಗಿನ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡಿ ಭಾರೀ ವಿರೋಧ ಎದುರಿಸಿದ್ದರು. ಈ ಘಟನೆಯ ಬೆನ್ನಲ್ಲೇ ಮತ್ತೋರ್ವ ಕ್ರಿಕೆಟಿಗ ಮೊಹಮ್ಮದ್‌ ಕೈಫ್ ಕೂಡ ಇಂಥದೇ ಒಂದು ಸಂದಿಗ್ಧ ಪರಿಸ್ಥಿತಿಗೆ ಸಿಲುಕಿದ ಘಟನೆ ನಡೆದಿದೆ. ಕೈಫ್ ಸೂರ್ಯ ನಮಸ್ಕಾರ ಮಾಡುತ್ತಿರುವ ಫೋಟೋವನ್ನು ಟ್ವಿಟರ್‌ನಲ್ಲಿ ಹಾಕಿದ್ದೇ ವಿವಾದಕ್ಕೆ ಕಾರಣ!

Advertisement

ಏನಿದು ಘಟನೆ?
ಯೋಗ ಭೌತಿಕ ವ್ಯವಸ್ಥೆಯ ಅತ್ಯುತ್ತಮ ತಾಲೀಮು. ಯಾವುದೇ ಉಪಕರಣವಿಲ್ಲದೆ ಮಾಡುವ ಯೋಗ ಆರೋಗ್ಯ, ಫಿಟ್‌ನೆಸ್‌ ರಕ್ಷಣೆಯಲ್ಲಿ ಬಹಳಷ್ಟು ಪರಿಣಾಮಕಾರಿ ಎಂದು ಬರೆದು ಟ್ವಿಟರ್‌ನಲ್ಲಿ ಕೈಫ್ ಫೋಟೋ ಸಮೇತ ಟ್ವಿಟ್‌ ಮಾಡಿದ್ದರು. ಇದರಿಂದ ಕೆರಳಿದ ಕೆಲವರು ರೀ ಟ್ವೀಟ್‌ ಮಾಡುವ ಮೂಲಕ ಕೈಫ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಸೂರ್ಯ ನಮಸ್ಕಾರ ಮುಸ್ಲಿಂ ಧರ್ಮ, ಸಂಸ್ಕೃತಿಗೆ ವಿರೋಧವಾಗಿದೆ. ಇಂಥ ಪೋಸ್ಟ್‌ಗಳನ್ನು ನೀವು ಸಾಮಾಜಿಕ ಜಾಲತಾಣದಲ್ಲಿ ಯಾಕೆ ಅಪ್‌ಲೋಡ್‌ ಮಾಡಿದ್ದೀರಿ? ಅಲ್ಲಾನನ್ನು ಹೊರತುಪಡಿಸಿ ನಮ್ಮ ಧರ್ಮದಲ್ಲಿ ಯಾರಿಗೂ ಮೊದಲ ಆದ್ಯತೆ ನೀಡುವುದಿಲ್ಲ. ನೀವು ನಮಾಜ್‌ ಮಾಡುವ ಚಿತ್ರವನ್ನು ಯಾವಾಗಲಾದರೂ ಅಪ್‌ಲೋಡ್‌ ಮಾಡಿದ್ದೀರಾ… ಎಂದು ಕೈಫ್ಗೆ ಪ್ರಶ್ನಿಸಿದ್ದಾರೆ.

ಕೈಫ್ ಸಮರ್ಥನೆ
ಈ ಎಲ್ಲ ಟೀಕೆಗಳ ಹೊರತಾಗಿಯೂ ಮೊಹಮ್ಮದ್‌ ಕೈಫ್ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ದೈಹಿಕ ವ್ಯಾಯಾಮದೊಂದಿಗೆ ಧರ್ಮವನ್ನು ತರುವುದು ಸೂಕ್ತವಲ್ಲ ಎಂದು ಪ್ರತ್ಯುತ್ತರ ನೀಡಿದ್ದಾರೆ.

ಶಮಿ ಪತ್ನಿಯ ಇನ್ನೊಂದು ಫೋಟೋ!
ಈ ನಡುವೆ ವೇಗಿ ಮೊಹಮ್ಮದ್‌ ಶಮಿ ಹೊಸ ವರ್ಷದ ಶುಭಾಶಯ ಹೇಳುತ್ತ, ಪತ್ನಿ ಹಸೀನ್‌ ಜಾಹನ್‌ ಜತೆಗಿನ ಮತ್ತೂಂದು ಫೋಟೋವನ್ನು ಟ್ವಿಟರ್‌ನಲ್ಲಿ ಅಪಲೋಡ್‌ ಮಾಡಿದ್ದಾರೆ. ಇದರಲ್ಲೂ ಹಸೀನ್‌ ಆಧುನಿಕ ಶೈಲಿಯ ಉಡುಗೆಯನ್ನೇ ಧರಿಸಿರುವುದು ಕಂಡುಬಂದಿದೆ.

ಮೊನ್ನೆ ಹಸೀನ್‌ ತೋಳಿಲ್ಲದ ಬಟ್ಟೆ ಧರಿಸಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಇದು ಮುಸ್ಲಿಂ ಸಂಪ್ರದಾಯಕ್ಕೆ ವಿರೋಧ, ಮುಸ್ಲಿಂ ಮಹಿಳೆಯರು ಹೀಗೆ ಅಂಗಾಂಗ ಪ್ರದರ್ಶಿಸುವ ಬಟ್ಟೆಯನ್ನು ಧರಿಸಬಾರದು ಎಂದು ಕೆಲವರು ಶಮಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು.

Advertisement

ಆದರೆ ರವಿವಾರದ ಫೋಟೋದಲ್ಲಿ ಹಸೀನ್‌ ಜಾಹನ್‌ ತೋಳಿರುವ ಉಡುಗೆ ಧರಿಸಿದ್ದನ್ನು ಗಮನಿಸಬಹುದು.
ಶಮಿ ಅವರ ಹೊಸ ವರ್ಷದ ಶುಭಾಶಯ ಪದ್ಯ ರೂಪದಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next