Advertisement

ಹಲೊ ಹಲೊ ಕಾಲ್‌ ಕಟ್‌

07:56 PM Apr 27, 2019 | mahesh |

ಹಲೋ ಸರಸತ್ತಿಗೆ ನಾನು ನಿಮ್ಮಿ ಮಾತಾಡೋದು, ಆರಾಮಾ?”
“”ಯಾರು ತೋಟಗಾರ್‌ ಸೊಸೈಟಿ ಅವರಾ? ನಿಮ್ಮ ಜೋನಿ ಬೆಲ್ಲ ಭಯಂಕರ ಚೋಲೊ ಅದೆ”
“”ಅಯ್ಯೋ ತೋಟಗಾರ್ಸ್‌ ಸೊಸೈಟಿ ಅಲೆª. ಚಿಕ್ಕಿ ನಾನು ಥೊ…”
ಕಾಲ್‌ ಕಟ್‌!
“”ನಮಸ್ಕಾರ್ರಿ… ಪಾಂಡುರಂಗಾಚಾರ್ಯ ಇದ್ದಾರಾ?”
“”ಅವರು ವೋಟ್‌ ಹಾಕ್ಲಿಕ್ಕೆ ಹೋದವರು ಬರಲೇ ಇಲ್ಲ. ಹಿಮಾಲಯಕ್ಕೆ ಹೋಗ್ತೀನೆ ಅಂತ ಹೇಳಿ ಹೋದ್ರು ಅಂತಾರೆ. ನಾವು ಇಲ್ಲಿ ತಂಪಾಗಿ ಇದ್ದೇವೆ… ಎಂಥ ಮಾತಾಡ್ತೀರಿ ಹಲೋ ಹಲೋ”

Advertisement

ಕಾಲ್‌ ಕಟ್‌!
“”ಹಮ್‌ ನೀವು ಒಂದು ಕೆಲಸ ಮಾಡಿ. ಹಲೊ ಹಲೊ…”
ಕಾಲ್‌ಕಟ್‌!
ಈಗ ಎರಡು ತಿಂಗಳ ಮೇಲಾಯಿತು ಯಾವ ಪ್ರದೇಶಕ್ಕೆ ಹೋದರೂ ಫೋನಿಗೆ ಇದೇ ಕಾಯಿಲೆ. ನಾವು “ಓ’ ಎಂದರೆ ಆ ಕಡೆಯಿಂದ “ಥೋ!’ ಬಲು ಮುಖ್ಯವಾದ ವಿಷಯವೊಂದನ್ನು ಈ ಕಡೆಯ ಸ್ವರ ಪ್ರಸ್ತಾಪಿಸುತ್ತ ಇರುವಂತೆ ಆ ಕಡೆಯ ಸ್ವರ “ಹಲೋ ಹಲೋ’ ಎಂದು ಒದರಿದರೆ ಹೇಗಾಗಬೇಡ? ದೊಡ್ಡ ಸುದ್ದಿಯೊಂದನ್ನು ಹೇಳುತ್ತ ಇದ್ದಂತೆ ಫೋನು ಗಾಢ ಮೌನವನ್ನು ಅಪ್ಪಿಬಿಡುತ್ತದೆ. ಪರಿವೆಯೇ ಇಲ್ಲದೆ ಹೇಳುತ್ತ ಹೋದವರು ಆ ಕಡೆಯಿಂದ, “ಕಂ’ “ಕಿಂ’ ಕೇಳದಿದ್ದಾಗ “ಹಲೋ ಹಲೋ’ ಎಂದು ಒದರುತ್ತಾರೆ. ಸಪ್ಪಳವಿಲ್ಲದಾಗ “ಅಯ್ಯ ಇದರ ! ಕಾಲೇ ಕಟ್ಟಾಗಿ ಹೋಗಿದೆ. ಸುಡುಗಾಡು’ ಎನ್ನುತ್ತ ಫೋನ್‌ ಇಡುತ್ತಾರೆ.

ನಮ್ಮೂರ ಫೋನುಗಳಿಗೆ ಈ “ಕಾಲ್‌ ಕಟ…’ ಕಾಯಿಲೆ ಶುರುವಾಗುವುದಕ್ಕೂ ನನ್ನ ನಿಜ “ಕಾಲ್‌ ಕಟ್‌’ ಆಗಿ ಬ್ಯಾಂಡೇಜ್‌ ಬೀಳುವುದಕ್ಕೂ ಒಂದೇ ಸಮಯಕ್ಕೆ ಕಾಲ ಕೂಡಿ ಬಂದಿದ್ದು ಮಾತ್ರ ವಿಸ್ಮಯವೇ.
ಸಾಗರದ ಸಂಬಂಧಿಕರ ಮನೆ ಮದುವೆಗೆ ಹೋಗಿದ್ದೆ. ಮಲೆನಾಡಿನ ಮನೆಯಂಗಳದ ಮದುವೆ ಎಂದರೆ ಅದೊಂದು ಸಾಂಸ್ಕೃತಿಕ ಸಂಭ್ರಮದ ಲೋಕ. ಮದುವೆ ಮುಗಿದ ಮೇಲೆ ಮಲೆನಾಡಿನ ಅಡಿಕೆ ಅಟ್ಟದ ಕಂಬಗಳನ್ನು ಬಳಸಿ ಓಡಿ ಮುಟ್ಟುವ ಕಂಬ-ಕಂಬದ ಆಟ ಆಡಲು ಮಕ್ಕಳು ಕರೆದರು. ಮಕ್ಕಳ ಜೊತೆ ಆಡಿದೆ, ಓಡಿದೆ ಮತ್ತು ತುಳಸಿಕಟ್ಟೆ ಎದುರು ಮುಗ್ಗರಿಸಿ ಬಿದ್ದೆ. ಎದ್ದಾಗ ಕಾಲು ಕಟ್‌! ತುಟಿ ಒಡೆದು ರಕ್ತ ಸೋರತೊಡಗಿದೆ. ಕಾಲು ಎತ್ತಿಡಲು ಬರುತ್ತಿಲ್ಲ. ಡಾಕ್ಟರ್‌ ಬರುವ ತನಕ ರೂಮಲ್ಲಿ ಮಲಗಿಸಿ ಮಲೆನಾಡಿನ ಪ್ರಥಮ ಚಿಕಿತ್ಸೆಯಾದ ಕೊಬ್ಬರಿ ಎಣ್ಣೆ ಸವರಿ ಮಲಗಿಸಿದರು.

ನನ್ನ ಜತೆ ಆಟಕ್ಕಿಳಿದ ಕ್ರೀಡಾಪಟುಗಳು ಆರು-ಏಳು ವರ್ಷದ ಪುಟಾಣಿಗಳು. ಹೀಗೆ ತುಟಿ ಒಡೆದು ಹೋಗಿ ರಕ್ತ ಸೋರಿದ ಮೇಲೆ, “ನಾನು ಸತ್ತೆ’ ಎಂದೇ ಭಾವಿಸಿದ್ದವು. “ನಾನು ಬದುಕಿದ್ದೇನೆ ಮಕ್ಕಳ’ ಎಂದರೂ ನಂಬದೇ “ದೊಡ್ಡಮ್ಮ ಈಸ್‌ ಡೆಡ್‌’ ಎಂದು ದೊಡ್ಡಪ್ಪನಿಗೆ ಅಂದರೆ ನನ್ನ ಪತಿಗೆ ಫೋನ್‌ ಮಾಡಿ ಹೇಳಿಬಿಟ್ಟವು. ಫೋನಿನಲ್ಲಿ ಯಥಾಪ್ರಕಾರ ಅದೇನು ಕೇಳಿಸಿತೊ ಅವರು, “ವೆರಿ ಗುಡ್‌’ ಅಂದರಂತೆ. ಇಡೀ ಮನೆಯೇ ನಕ್ಕರೂ ಆ ನಗುವಿಗೆ ಕಾರಣಳಾದ ನಾನು ಮಾತ್ರ ನಗಲಾಗುತ್ತಿರಲಿಲ್ಲ. ಕಾಲು ಮುರಿದಿದೆ, ತುಟಿ ಒಡೆದಿದೆ, ಇನ್ನೆಲ್ಲಿ ನಗುವುದು! ಭಯಂಕರ ನೋವು ಬೇರೆ. ಅವುಗಳಲ್ಲಿದ್ದ ಮಕ್ಕಳಲ್ಲಿ ಇಬ್ಬರು ಡಾಕ್ಟರ್‌ ಮಕ್ಕಳು. ಎಲಯಲಾ! ಪಿಳ್ಳೆಗಳು ತಾಯಂದಿರ ಕಣ್ಣು ತಪ್ಪಿಸಿ ನನ್ನ ರೂಮಿಗೆ ನುಗ್ಗುವುದು, “ಎಕ್ಸ್‌ಕ್ಯೂಸ್‌ ಮಿ’ ಎಂದು ನನ್ನನ್ನು ಪರೀಕ್ಷಿಸುವುದು. “ಬಚಾವ್‌ ದೊಡ್ಡಮ್ಮ. ಓಪನ್ಸ್‌ ಹರ್‌ ಐಸ್‌. ಸೋ ನಾಟ್‌ ಯೆಟ್‌ ಡೆಡ್‌’ ಎಂದು ಪಿಸುನುಡಿಯುವುದು, ಆಗಾಗ ಒಳಗೆ ಬಂದು- ಸಾರಿ ಕೇಳುವುದು, ಡೋಂಟ್‌ ವರಿ ಹೇಳುವುದು- ಹೀಗೆ “ಬಾಲ ಚಿಕಿತ್ಸೆ’ ನಡೆಸಿಕೊಂಡೇ ಇದ್ದವು. ತಮ್ಮಿಂದಾಗಿ ಬಿದ್ಲು ಅಂತ ಗಿಲ್ಟಿ ಅವಕ್ಕೆ. ಸಾಗರದಲ್ಲಿ ಇದ್ದ ಏಕಮೇವ ಮೂಳೆತಜ್ಞ ಡಾಕ್ಟರು ಸಂಬಂಧಿಗಳ ಮದುವೆಗೆ ಹೋಗಿ ಬಿಟ್ಟಿದ್ದರಿಂದ ಅಲ್ಲಿ ಚಿಕಿತ್ಸೆ ದೊರೆಯದೆ ನನ್ನನ್ನು ಮದುವೆಗೆ ಕರೆತಂದ ಮಕ್ಕಳ ತಾಯಂದಿರು ಪುನಃ ನನ್ನನ್ನು ಮಂಗಳೂರಿಗೆ ತಂದು ಬಿಟ್ಟರು.

ಮಂಗಳೂರಿನ (ಮಾತ್ರವಲ್ಲ, ನೆರೆ ರಾಜ್ಯಗಳಿಂದ ಸಹ) ಮೂಳೆ ಮುರಿತಕ್ಕೊಳ ಗಾದವರಿಗೆ ಮರುಜನ್ಮ ಕೊಡುವ ದೇವಸದೃಶ ಮೂಳೆ ತಜ್ಞ , ಡಾ. ಶಾಂತಾರಾಮ್‌ ಶೆಟ್ಟಿ ಅವರು ನನ್ನ ಎಂಆರ್‌ಐಗಳನ್ನು ನೋಡುವ ಮೊದಲೇ, “”ಹಿಮ್ಮಡಿಯ ಮೇಲ್ಭಾಗದ ಟೆಂಡಾನ್‌ ಕಟ್‌ ಆಗಿದೆ. ಸರ್ಜರಿ ಬೇಡ. ಅಲುಗಾಡದೆ ಒಂದೆಡೆ ಕೂತು ಕೆಲದಿನ ನಿಷ್ಕ್ರಿಯಾಯೋಗ ಆಚರಿಸಿದರಾಯಿತು, ನಿಧಾನಕ್ಕೆ ಕೂಡುತ್ತದೆ” ಎಂದು ಬ್ಯಾಂಡೇಜ್‌ ಬಿಗಿದು ವಾಕರ್‌ ಕೊಟ್ಟು ಔಷಧ ನೀಡಿ ಕಳಿಸಿದರು. ಒಂದು ಕಾಲಿಗೆ ಕಡ್ಡಾಯ ರಜೆ ಘೋಷಿಸಿ ವಿಶ್ರಾಂತಿಗೆ ಕಳಿಸಲಾಯಿತು. ಒಂದೇ ಕಾಲಿನ ಮೇಲೆ ಎರಡರ ಪ್ರಭಾರ ಭಾರ. ಔಷಧ ಸೇವನೆಯ ಅಡ್ಡ-ಉದ್ದ ಪರಿಣಾಮಗಳು, ಒಂದೇ, ಎರಡೇ ಕಾಡತೊಡಗಿದವು (ಆಡಿದ ತಪ್ಪಿಗೆ!)

Advertisement

ನನ್ನದೇನೊ ನಿಷ್ಕ್ರಿಯಾ ಯೋಗ. ಆದರೆ, ನನ್ನ ಯೋಗಕ್ಷೇಮದ ಭಾರ ಹೊತ್ತ ಪತಿರಾಯರಿಗೆ (ವೆರಿಗುಡ್‌ ಹೇಳಿದ ತಪ್ಪಿಗೆ), ಸಹಾಯ ಮಾಡಲು ಬಂದುಳಿದ ಮೈದುನನ ಮಗಳಿಗೆ ಕೆಲವು ಅಯಾಚಿತ ಶಿಕ್ಷೆಗಳು ವಿಧಿಸಲ್ಪಟ್ಟು ಕಣ್ಣು ಕಣ್ಣು ಬಿಡುವಂತಾಗುತ್ತಿತ್ತು.

ಊರಿನಿಂದ ಅನೇಕ ಬಗೆಯ ಸೊಪ್ಪುಗಳು, ಎಣ್ಣೆ, ಹಣ್ಣುಗಳು ಕಷಾಯಗಳು ಬರತೊಡಗಿದವು. ಅವುಗಳನ್ನು ಬಳಸುವುದರ ಕುರಿತು ಸಲಹೆಗಳು. ಪಥ್ಯ ತಪ್ಪಿದರೆ ಒದಗುವ ನರಕದ ಭಯ ಬೇರೆ. ಫೋನಿನಲ್ಲಿ ಕಾಲಿನ ಕುರಿತ ವಿಚಾರಣಾ ಕಾಲುಗಳು. ಮಗಳಿಗೆ “ಅಮ್ಮನಿಗೆ ಕಾಲು ಮುರಿದಿದೆ’ ಎಂದು ಕ (ಹ)ಡ್ಡಿ ತುಂಡು ಮಾಡಿದಂತೆ ನೀರಸವಾಗಿ ಹೇಳಿ ಹೇಳಿ ಬೇಸರ ಬಂದು ಈಗೀಗ ಬೇರೆ ಪದ ಪ್ರಯೋಗ ಮಾಡಲು ಶುರುಮಾಡಿದಳು. “ಅಮ್ಮನ ಕಾಲು ಕೈಕೊಟ್ಟಿದೆ ‘ ಎಂದೋ, “ಕಾಲ್ಗುಣ ಚೆನ್ನಾಗಿಲ್ಲ’ ಎಂದೋ, “ಕಾಲವೇ ಸರಿಯಿಲ್ಲ’ ಎಂದೋ ಹೇಳುವುದು ಕೇಳುತ್ತಿತ್ತಾದರೂ ವಾಕ್ಯ ಸರಿಪಡಿಸುವ ಉಮೇದು ಇರಲಿಲ್ಲ. ಕಾಲ ಮಹಿಮೆಯನ್ನು ಕೊಂಡಾಡುತ್ತ ಕಾಲನಾಣತಿಯನ್ನು ಒಪ್ಪಿಕೊಳ್ಳುವುದು ಮಾತ್ರ ಸಾಧ್ಯವಾಗುತ್ತಿತ್ತು. ಕಾಲುಗಳಿಗೆ ಚಕ್ರ ಕಟ್ಟಿಕೊಂಡು ತಿರುಗಾಡು ತ್ತಿದ್ದ ನನಗೆ ಈಗ ಬ್ಯಾಂಡೇಜ್‌ ಕಟ್ಟಿಕೊಂಡು ಒಂದೆಡೆ ಕೂಡುವುದು ಪರಮಶಿಕ್ಷೆಯೆನಿಸತೊಡಗಿತು. ಮಾಡಿದ ತಪ್ಪಿಗೆ ಕ್ಷಮಿಸಿ, ಆಡಿದ ತಪ್ಪಿಗೆ ಅನುಭವಿಸುವ ಶಿಕ್ಷೆ ಎಂದುಕೊಂಡಾಗ ಸ್ವಲ್ಪ ಹತಾಶ ಸಮಾಧಾನ ದೊರಕಿದಂತಾಗುತ್ತಿತ್ತು. (ಆಡಿದ್ದುಣ್ಣೋ ಮಹಾರಾಯ) ಆದರೂ ಮನಸ್ಸು ಕುಂಠಿತವಾದರೂ, ಕುಂಠಿತವಾಗದಂತೆ ಕಾಪಾಡಿಕೊಳ್ಳಬೇಕಾದ ಜವಾಬ್ದಾರಿ ನನ್ನ ಮೇಲೆ ಇತ್ತು. ಮಲಗಿದ್ದಲ್ಲಿಂದಲೇ ಯಾರು ಯಾರು ಯಾವ್ಯಾವ ಅಂಗವಿಹೀನರಿ¨ªಾರೆ, ಹೇಗೆ ಜೀವನ ಸಾಗಿಸುತ್ತಿ¨ªಾರೆ, ಎರಡೂ ಕಾಲಿಲ್ಲದವರ ಸಾಧನೆಗಳೇನು, “ಕಾಲಿಲ್ಲದೊಡೆಂ ಬಾಯಿಲ್ಲವೆ’ ಎಂಬ ಸ್ಫೂರ್ತಿದಾಯಕ ಮಾತು ಇಲ್ವೆ? ನೆರವಿಗೆ ಊರುಗೋಲಿನಂತೆ ಬಂದ ಸಂಗತಿಗಳು ಒಂದೆರಡಲ್ಲ . ಸಂಗಾತಿಯಾದ ವಾಕರ್‌ ಜೊತೆಗೆ ಆಚೀಚೆ ಎರಡು ಹೆಜ್ಜೆ ಹಾಕುವಷ್ಟರಲ್ಲಿ ಕೈ ಕುತ್ತಿಗೆಗಳ ನೋವು ಪ್ರಾರಂಭವಾಗಿ ಮತ್ತೆ ಶವಾಸನ.
ಈಗ ಶುರುವಾಗಿದ್ದು ಸಲಹಾ ಪರ್ವ! ಸಮಾಧಾನಗಳ ಸುರಿಮಳೆ! ಪಾಪ, ಪ್ರೀತಿಯಿಂದ ನೋಡಿ

ಮಾತನಾಡಿಸಲು ಬರುವವರು ಸ್ನೇಹಿತರು, ಬಂಧುಗಳು ಕೆಲವರಾದರೆ, ಸಲಹೆ ನೀಡಲೆಂದೇ ಬರುವ ಪರಿಣಿತರು ಅನೇಕ.
“ಮಕ್ಕಳ ಜೊತೆ ಆಡಲು ಹೋಗಿದ್ದು ಯಾಕೆ ಮಾರಾಯ್ರೆ?’, “ಆಡುವ ವಯಸ್ಸಾ ಇದು?’, “ಈ ವಯಸ್ಸಿಗೆ ಇನ್ನು ಕೂಡೋದು ಕಷ್ಟ ಕಣ್ರೀ’, “ಪಾದ ಅಲ್ವೇ ಇಡೀ ದೇಹದ ಭಾರ ಹೊರಬೇಕು ಕಷ್ಟ ಕಡು ಕಷ್ಟ’ , “ಡಯಾಬಿಟಿಸ್‌ ಇದೆಯೇ? ಮುಗಿತು ಬಿಡಿ’, “ಆಯುರ್ವೇದವೇ ಬೆಸ್ಟು ಕಣ್ರಿ’ , “ಇಂಗ್ಲಿಷ್‌ ಮದ್ದಿನ ಜತೆಗೆ ಆಯುರ್ವೇದಾನು ಮಾಡಿ’, “ಹೋಮಿಯೋಪತಿನೆ ಬೆಸ್ಟ್‌ ಇದಕ್ಕೆ’, “ಕೇರಳಕ್ಕೆ ಹೋಗಿ ಬನ್ನಿ. ಅಲ್ಲಿ ಸರಿ ಮಾಡಿ ಕಳಿಸುತ್ತಾರೆ’, “ಏನೋ ಸರಿಯಾಗಿ ಆರೈಕೆ ಮಾಡ್ಕೊಳ್ಳಿಯಪ್ಪ. ಜೀವನಪೂರ್ತಿ ಕುಂಟುವಂತಾದೀತು’ ಎಂದು ಹೇಳಿ ಅಳಿದುಳಿದ ಜಂಘಾಬಲವನ್ನು ಉಡುಗಿಸಿ ಹೋಗಿ ಬಿಡುತ್ತಿದ್ದರು.

ನನ್ನ ದೇವಸದೃಶ ಡಾಕ್ಟರ್‌ ಶಾಂತಾರಾಮ ಶೆಟ್ಟಿ ಅವರದ್ದು ಮಾತ್ರ ಅದೇ ನಸುನಗೆಯ ಧೈರ್ಯ ತುಂಬುವ ಭಂಗಿ. “ಅಲ್‌ಮೋಸ್ಟ್‌ ಹೀಲ್‌ ಆಗುತ್ತಿದೆ. ಬಿಸಿನೀರಿನಲ್ಲಿ ಉಪ್ಪು ಹಾಕಿ ಕಾಲು ಮುಳುಗಿಸಿ, ಅಲುಗಾಡಿಸಿ. ಯಾವುದೇ ಎಣ್ಣೆ ಹಚ್ಚಬೇಡಿ’. ಮಾಡಿ, ಮಾಡಬೇಡಿ- ಗಳೆರಡನ್ನೂ ಪ್ರೀತಿಯಿಂದ ಹೇಳಿ ಬೆನ್ನುತಟ್ಟಿ ಕಳಿಸುತ್ತಿದ್ದರು. ಅವರನ್ನು ನೋಡಲು ಬರುವ ಜನರನ್ನು ನೋಡುವುದೇ ನನಗೊಂದು ಸಂಭ್ರಮ. ಉತ್ತರಕನ್ನಡ ಜಿಲ್ಲೆಯಿಂದ ವ್ಯಾನುಗಳಲ್ಲಿ ತುಂಬಿಬರುವ ಪೇಷಂಟುಗಳು, ಚೆನ್ನೈ , ಕೇರಳ, ಬೆಂಗಳೂರುಗಳಿಂದ ಮೂರು ತಿಂಗಳ ಕಾಲ ಕಾದು ಈಗ ಬಂದು ಕಾಯುವ ಕಾಲ್‌-ಕೈ ಮುರಿತಕ್ಕೊಳಗಾದ ಅಂಗವಿಹೀನರು, ರಾತ್ರಿ ಹನ್ನೊಂದು-ಹನ್ನೆರಡಾದರೂ ತಾಳ್ಮೆಗೆಡದೆ ರೋಗಿಗಳನ್ನು ನೋಡುವ ಈ ಡಾಕ್ಟರ‌ ದೈವೀ ಕೈಗುಣವನ್ನು ನಂಬಿ ಬರುವವರ ಮುಂದೆ ಇಲ್ಲೇ ಇರುವ ನನ್ನದು ಏನೂ ಅಲ್ಲವೆಂದು ಧೈರ್ಯ ಬರುತ್ತಿತ್ತು. ಈಗೀಗ ಇನ್ನೊಂದು ವಿಚಿತ್ರ ಹವ್ಯಾಸ ನನಗೆ ಅಭ್ಯಾಸವಾಗಿತ್ತು. ಒಂದೇ ಕಾಲಿನಲ್ಲಿ ಕುಂಟುತ್ತ ಹೋಗುವ ನನಗೆ ಅಲ್ಲಿ ಬರುವ ಅನೇಕ ತರಹೇವಾರಿ ಜನರ ಕಾಲುಗಳನ್ನು ನೋಡುವುದೇ ಒಂದು ಅಭ್ಯಾಸವಾಗಿ ಹೋಯಿತು. ಬಣ್ಣ ಬಣ್ಣದ ಚೂಡಿದಾರದವರು, ಮುಂಡ ಉಟ್ಟವರು, ಸೀರೆಯವರು ಕಾಲುಗಳ ಮೇಲೆ ಕಾಳಜಿಯೇ ಇಲ್ಲದೆ ಎಷ್ಟೊಂದು ಜನ ಸರಬರ ಓಡಾಡುತ್ತಿದ್ದಾರೆ ಎನಿಸುತ್ತಿತ್ತು. (ಬೀಳುವ ಮೊದಲು ನಾನೂ ಅಷ್ಟೇ ತಾನೆ?)

ಒಂದು ದಿನ ನನ್ನನ್ನು ನೋಡಲು ಬಂದ ವೈದ್ಯ ಮಿತ್ರರು, “ಸುಮ್ಮನೇ ಕೂತು ಏನು ಮಾಡುತ್ತೀರಿ? ನಿಮ್ಮ ಶಿಷ್ಯೆಯರನೇಕರು ಹೋಮ್‌ಗಾರ್ಡ್ಸ್‌ ಆಗಿದ್ದಾರೆ. ನಾಳೆ ಮಹಿಳಾ ದಿನಾಚರಣೆಯಂದು ನಿಮ್ಮನ್ನು ಎತ್ತಿಕೊಂಡು ಹೋಗಿ ಅವರಿಗೆ ಭಾಷಣ ಮಾಡಿಸುತ್ತಾರೆ. ಇಲ್ಲ ಎನ್ನಬೇಡಿ. ಕುಳಿತೇ ಭಾಷಣ ಮಾಡುವಿರಂತೆ’ ಎಂದರು. (ಕಾಲಿಲ್ಲದೊಡೇಮ್‌ ಬಾಯಿಲ್ಲವೆ?) ಸರಿ ಮಾರ್ಚ್‌ 8ರಂದು ಮಹಿಳಾ ಹೋಮ್‌ ಗಾರ್ಡ್ಸ್‌ ಅವರೆದುರು ಸ್ವಾಮಿಗಳ ಹಾಗೆ ಕುಳಿತು ಪ್ರವಚನ ನೀಡುವ ಅವಕಾಶ ಪ್ರಾಪ್ತವಾಯಿತು! (ಭಾಷಣ ಮುಗಿಯುವ ತನಕವೂ ಕಾಲನ ವಿಷಯ ನೆನಪಾಗಲಿಲ್ಲ ಎಂಬುದು ಸತ್ಯ) ಅಂದು ನನ್ನ ಭಾಷಣದಲ್ಲಿ ನೋವು ನುಂಗಿ ನಗುವುದರ ಮಹತ್ವ ಎಂಬುದನ್ನು ಒತ್ತಿ ಹೇಳಿದೆ. ಈ ಸುದ್ದಿ ತಿಳಿದು ಮಂಗಳೂರು ಲಯನೆಸ್‌ನವರು ಸಹ ಒಂದು ಪ್ರವಚನ ಕೊಡಿಸಿದರು. ವಿಷಯ ಮತ್ತದೇ: ನೋವು ನುಂಗಿ ನಗುವುದರ ಮಹತ್ವ!

ಕಾಲು-ಕೈ ಮುರಿದುಕೊಳ್ಳುವುದರಲ್ಲಿ ತುಂಬಾ ಎಕ್ಸ್‌ಪರ್ಟ್‌ ಆಗಿರುವ ನನ್ನ ಸ್ನೇಹಿತೆ ಗೀತಾ ಒಂದು ದಿನ ಬಂದಿಳಿದಳು. ನಾವಿಬ್ಬರೂ ಒಂದೇ ದಿನ ರಿಟೈರ್‌ ಆದ ಕ್ಲಾಸ್‌ಮೇಟ್‌ಗಳು. ರಿಟೈರ್‌ ಆದ ಬಳಿಕ ಸುತ್ತಬೇಕಾದ ದೇಶಗಳು, ಮಾಡಬೇಕಾದ ಓಡಾಟಗಳು, ಘನಂದಾರಿ ಕೆಲಸಗಳು, ಬಾಕಿ ಉಳಿದ ಉಪದ್ವಾಪಗಳು… ಹೀಗೆ ಬೇರೆ ಬೇರೆ ಕೆಟಗರಿಯ ಜವಾಬ್ದಾರಿಗಳನ್ನು ಇಬ್ಬರೂ ಒಟ್ಟಿಗೆ ಕೂತು ಲಿಸ್ಟ್‌ ಮಾಡಿದ್ದೇನೋ ನಿಜ. ಒಂದೂ ಸಹ ಕಾರ್ಯಗತಗೊಂಡಿರಲಿಲ್ಲ. “ಈಗ ಕಾಲು ಬೇರೆ ಮುರಿದುಕೊಂಡು ಕೂತಿದ್ದಿ ಕೋತಿ’ ಎಂದು ಗಲಾಟೆಯನ್ನೇ ಎಬ್ಬಿಸಿಬಿಟ್ಟಳು. ತನ್ನ ಕುರಿತೇ ಆಪಾದನೆ ಮಾಡುತ್ತಿ¨ªಾರೆ ಎಂಬುದನ್ನು ಅರಿತ ನನ್ನ ಕಾಲು ಆ ದಿನ ಹೆಚ್ಚು ನೋಯುವುದರ ಮೂಲಕ ಪ್ರತಿಭಟನೆ ತೋರಿತ್ತು. ಅಪಾಯ ಅರಿತ ಗೆಳತಿ ಅನುನಯದ ಧಾಟಿ ತೆಗೆದಳು. “ನೋಡು ಕಾಲೆ, ನಿನ್ನ ಒಡತಿ ಮೊದಲಿಂದಲೂ ಅಷ್ಟೇ. ಜವಾಬ್ದಾರಿ ಇಲ್ಲದವಳು. ಈಗ “ಎನ್ನ ಕಾಲೇ ಕಂಬ’ ಎಂದು ಕೂತು ಬಿಟ್ಟಿದ್ದಾಳೆ. ಬೇಗ ಗುಣ ಮಾಡಿಕೊ. ಸಿಂಗಾಪುರಕ್ಕೆ ಕರೆದುಕೊಂಡು ಹೋಗುತ್ತೇನೆ. ಅಲ್ಲೆಲ್ಲ ಸುತ್ತುವಿಯಂತೆ. ಎಷ್ಟು ಒಳ್ಳೊಳ್ಳೆಯ ಪಾರ್ಕುಗಳಿವೆ ಗೊತ್ತೆ?’ ಎಂದು ಆಮಿಷ ಒಡ್ಡಿದಳು. ಕಾಲಿಗೆ ಅದೆಷ್ಟು ಅರ್ಥವಾಯಿತೋ ತಿಳಿಯದು ಸುಮ್ಮನಿತ್ತು. ಆದರೆ, ಒಂದೇ ಕಾಲನ್ನು ಅನುನಯಿಸುವುದನ್ನು ನೋಡಿದ ಈಚೆ ಕಡೆಯ ಸರಿಯಿದ್ದ ಕಾಲು, ಕಾಲು ಕೆರೆದು ಜಗಳಕ್ಕೆ ಬಂದು ಮುಷ್ಕರ ಹೂಡತೊಡಗಿತು. “ನಿನ್ನ ಪಾಲಿನದನ್ನು ನಾನು ಮಾಡಿ ಭಾರ ಹೊರುತ್ತಿದ್ದೇನೆ. ನನ್ನ ಸುದ್ದಿಯೇ ಇಲ್ಲ . (ನೀನನಗಿದ್ದರೆ ನಾ ನಿನಗೆ ನೆನಪಿರಲಿ ನುಡಿ ನಮ್ಮೊಳಗೆ) ನೋಡೋಣ, ನಿನ್ನೊಂದನ್ನೇ ಸಿಂಗಾಪುರಕ್ಕೆ ಅದು ಹೇಗೆ ಕರೆದುಕೊಂಡು ಹೋಗುತ್ತಾರೋ’ ಎಂಬಂತೆ ಮುಷ್ಕರ ಹೂಡಿತ್ತು. “ಕೊಂಯ್‌ ಕೊರ್ರ’ ಎಂದು ನೋಯಲು ಶುರು ಮಾಡಿತ್ತು. (ಸಮಾಧಾನ ನೀಡಲು ಬಂದ ಪರಿಣಿತರು ಇದನ್ನೂ ಗಮನಿಸಿದ್ದರು : ಒಂದೇ ಕಾಲೂರಿ… ಪಾಪ!)

ಇದ್ಯಾವುದರ ಸುಳಿವೇ ಇಲ್ಲದ ನನ್ನ ವೈದ್ಯ ದೇವರು ಮಾತ್ರ “ವೆರಿಗುಡ್‌’ “ವೆರಿಗುಡ್‌’ ಎನ್ನುತ್ತಲೇ ವಾಕರ್‌ನಿಂದ ಪ್ರಮೋಷನ್‌ ಕೊಡಿಸಿ ದೊಡ್ಡ ಬ್ಯಾಂಡೇಜ್‌ ತೆಗೆದು ಸಣ್ಣ ಬ್ಯಾಂಡೇಜ್‌ ಹಾಕಿ ಒಂದು ಕಾಲು, ಒಂದು ಕೋಲು ಮಾಡಿ, ಕೋಲಿನ ಸಹಾಯದಿಂದ ಮೆಲ್ಲನೆ “ಅಡಿ ಇಡಿ’ ಎಂದಿ¨ªಾರೆ. ಹೆಜ್ಜೆ ಇಡತೊಡಗಿದ್ದೇನೆ. ಕಾಲನಾಣತಿಯಂತೆ ಕಾಲಿಗೆ ಬಂದ ಆಪತ್ತು ಕರಗಲು “ಕಾಲವೇ ಮದ್ದು’ ಎಂಬ ದಾರ್ಶನಿಕರ ಮಾತನ್ನು ನೆನಪಿಸಿಕೊಂಡು ಕಾಲ ಕಳೆಯುತ್ತ ಇದ್ದೇನೆ. ಒಂಟಿ ಕಾಲಿನಲ್ಲಿ ಕಾಯುವುದು, ಒಂಟಿ ಕಾಲಿನ ತಪಸ್ಸು ಇತ್ಯಾದಿ ಸನ್ನಿವೇಶಗಳನ್ನು ನಿಭಾಯಿಸಿದ್ದೇನೆ. ಕಾಲಾಯ ತಸ್ಮೈ ನಮಃ.

ಭುವನೇಶ್ವರಿ ಹೆಗಡೆ

Advertisement

Udayavani is now on Telegram. Click here to join our channel and stay updated with the latest news.

Next